ಭಾನುವಾರ, ಜುಲೈ 3, 2022
24 °C
3ಡಿ ವಿ.ಆರ್ ಹೆಡ್‍ಸೆಟ್ ಮೂಲಕ ಕಾಡು ವೀಕ್ಷಣೆ ಅನುಭವ, ಅರಣ್ಯ ಸಚಿವರಿಂದ ಚಾಲನೆ

ಬಿಆರ್‌ಟಿ ಅರಣ್ಯದ ಸೌಂದರ್ಯವನ್ನು 3ಡಿ ತಂತ್ರಜ್ಞಾನದಲ್ಲಿ ಸವಿಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ಒಳಗಡೆ ಪ್ರವಾಸಿಗರು ಸಾರ್ವಜನಿಕರಿಗೆ ಹೋಗುವುದಕ್ಕೆ ಅವಕಾಶ ಇಲ್ಲ. ಇದರಿಂದಾಗಿ ಕಾಡಿನೊಳಗಿರುವ ಬೆಟ್ಟ ಗುಡ್ಡಗಳು, ಹಸಿರ ಸೌಂದರ್ಯವನ್ನು ಸವಿಯುವುದಕ್ಕೆ ಜನರಿಗೆ ಆಗುತ್ತಿಲ್ಲ.

ಅರಣ್ಯ ಕುತೂಹಲಿಗಳಿಗೆ ಕಾಡಿನೊಳಕ್ಕೆ ಹೋಗಲು ಅವಕಾಶ ಕೊಡದೆಯೇ, ಬಿಆರ್‌ಟಿ ಅರಣ್ಯದಲ್ಲಿ ಸುತ್ತಾಡುವ ಅನುಭವ ಕಟ್ಟಿಕೊಡುವುದಕ್ಕಾಗಿ ಅರಣ್ಯ ಇಲಾಖೆ ಹೊಸ ಯೋಜನೆಯೊಂದನ್ನು ರೂಪಿಸಿದೆ. 3ಡಿ ತಂತ್ರಜ್ಞಾನದಲ್ಲಿ ವರ್ಚ್ಯುವಲ್‌ ಆಗಿ ಅರಣ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ. 3ಡಿ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುವ ಹೆಡ್‌ಸೆಟ್‌ ಅನ್ನು ಹಾಕಿಕೊಂಡು ಕುಳಿತಲ್ಲಿಂದಲೇ ಅರಣ್ಯವನ್ನು ಸುತ್ತಾಡಬಹುದು. 

ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಭಾನುವಾರ ನಗರದಲ್ಲಿ 360 ಡಿಗ್ರಿ 3ಡಿ ಕ್ಯಾಮೆರಾ ವೀಕ್ಷಣೆಗೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಂರಕ್ಷಿತಾರಣ್ಯ ಆಗಿರುವುದರಿಂದ ಬಿಆರ್‌ಟಿಯ ಹಲವು ಸುಂದರ ಪ್ರದೇಶಗಳನ್ನು ಜನರಿಗೆ ಹೋಗಿ ನೋಡಲು ಆಗುವುದಿಲ್ಲ. ಪ್ರವಾಸಿಗರು 3ಡಿ ವಿ.ಆರ್. ಹೆಡ್‍ಸೆಟ್ ಮೂಲಕ ವೀಕ್ಷಿಸಿ, ಕಾಡಿನ ರುದ್ರ ರಮಣೀಯ ಸೌಂದರ್ಯವನ್ನು ವೀಕ್ಷಿಸಬಹುದು. ಇದರಿಂದಾಗಿ ಪ್ರವಾಸೋದ್ಯಮ ವೃದ್ಧಿಯಾಗಲಿದ್ದು, ಪ್ರವಾಸಿಗರನ್ನು ಆಕರ್ಷಿಸಬಹುದು’ ಎಂದರು. 

ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ

ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಸಚಿವ ಅರವಿಂದ ಲಿಂಬಾವಳಿ ಅವರು, ‘ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ಇಲಾಖೆಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲಾಗುವುದು. ನಿಯಮಗಳಡಿಯಲ್ಲಿ ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ನೀಡಲಾಗುವುದು’ ಎಂದರು.

‘ಅತಿ ಹೆಚ್ಚು ಆನೆ, ಹುಲಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಇಡೀ ದೇಶದಲ್ಲೇ ಪ್ರಾಣಿ ಮಾನವ ಸಂಘರ್ಷ ಕರ್ನಾಟಕದಲ್ಲಿ ಕಡಿಮೆ ಇದೆ. ಕಳ್ಳಬೇಟೆಗಾರರಿಂದ ಅರಣ್ಯ ಸಂಪತ್ತನ್ನು ರಕ್ಷಿಸಲು ಪೊಲೀಸ್ ಇಲಾಖೆಯ ಸಹಕಾರ ಪಡೆಯಬೇಕು’ ಎಂದರು. 

‘ಪ್ರಾಣಿ, ಮಾನವ ಸಂಘರ್ಷಗಳನ್ನು ತಡೆಯಲು ಆನೆ ಕಂದಕ ಹಾಗೂ ರೈಲ್ವೆಕಂಬಿಗಳನ್ನು ಬಳಸಿ ಅರಣ್ಯದಂಚಿನಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಚಿರತೆಗಳನ್ನು ಸೆರೆಹಿಡಿಯಲು ಅಗತ್ಯವಾಗಿರುವಷ್ಟು ಬೋನುಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಪರಿಸರ ಸಚಿವರು ಹಾಗೂ ರೈಲ್ವೆ ಸಚಿವರನ್ನು ಭೇಟಿ ಮಾಡಿ ಅಗತ್ಯ ಅನುದಾನ ಒದಗಿಸುವಂತೆ ಕೋರಲಾಗುವುದು’ ಎಂದರು. 

ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‍ಕುಮಾರ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್, ಬಿ.ಆರ್.ಟಿ  ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‍ ಕುಮಾರ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು, ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್‌ ರಮೇಶ್ ಇದ್ದರು. 

10 ನಿಮಿಷಗಳ ವಿಡಿಯೊ

ಬಿಆರ್‌ಟಿ ಸಂರಕ್ಷಿತ ಪ್ರದೇಶದ ಆಡಳಿತವು ಸದ್ಯ ಎರಡು ವಿ.ಆರ್‌.ಹೆಡ್‌ ಸೆಟ್‌ಗಳನ್ನು ಖರೀದಿಸಿದ್ದು, ಅವುಗಳನ್ನು ಕೆ.ಗುಡಿಯಲ್ಲಿರುವ ಮಾಹಿತಿ ಕೇಂದ್ರದಲ್ಲಿ ಇರಿಸಲಿದೆ. 

ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ದೊಡ್ಡಸಂಪಿಗೆ, ಹೊನ್ನಮೇಟಿ, ಜೋಡಿಗೆರೆ ಹಾಗೂ ಇತರೆ ಸುಂದರ ಸ್ಥಳಗಳನ್ನು ಇದರ ಮೂಲಕ ವೀಕ್ಷಿಸಬಹುದು. 

‘10 ನಿಮಿಷದ ವಿಡಿಯೊವನ್ನು ಇದರಲ್ಲಿ ತೋರಿಸಲಾಗುತ್ತದೆ. ಕೆ.ಗುಡಿಗೆ ಭೇಟಿ ನೀಡುವ ಪ್ರವಾಸಿಗರು ಹೆಡ್‌ಸೆಟ್‌ ಮೂಲಕ ವೀಕ್ಷಣೆ ಮಾಡಬಹುದು. ವೀಕ್ಷಣೆಗೆ ಶುಲ್ಕ ವಿಧಿಸಲಾಗುವುದು. ಇನ್ನೂ ನಿಗದಿ ಪಡಿಸಿಲ್ಲ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು