ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಲಸಿಕೆಗೆ ಹೆದರಿ ಕಾಡಿಗೆ ಓಡುವ ಬುಡಕಟ್ಟು ಜನ!

ಬಂಡೀಪುರ ಬುಡಕಟ್ಟು ಕಾಲೊನಿಗಳಲ್ಲಿ ಕೋವಿಡ್‌ ಲಸಿಕೆ ಪಡೆಯಲು ಹಿಂದೇಟು
Last Updated 13 ಜೂನ್ 2021, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಕಾಡಂಚಿನ ಭಾಗದಲ್ಲಿ ಇರುವ ಬುಡಕಟ್ಟು ಜನಾಂಗದವರು ಕೋವಿಡ್ ಲಸಿಕೆ ಪಡೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಬುಡಕಟ್ಟು ಜನರ ಕಾಲೊನಿಗಳಿಗೆ ಲಸಿಕೆ ನೀಡಲು ಸಿಬ್ಬಂದಿ ಬರುತ್ತಿದ್ದಾರೆ ಎಂಬ ವಿಷಯ ತಿಳಿದ ಜನರು ಕಾಡಿಗೆ ಹೋಗಿ ಬಚ್ಚಿಟ್ಟುಕೊಳ್ಳುತ್ತಿದ್ದಾರೆ. ಅವರು ವಾಪಸ್‌ ಹೋದ ನಂತರ ಮನೆಗಳಿಗೆ ಮರಳುತ್ತಿದ್ದಾರೆ.

ಅರಿವಿನ ಕೊರತೆಯಿಂದಲೋ, ಮೂಢನಂಬಿಕೆಯಿಂದಲೋ ಜನರು ಲಸಿಕೆ ಹಾಕಿಸಿಕೊಳ್ಳಲು ಭಯ ಪಡುತ್ತಿದ್ದು, ಇದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ಪೇಚಿಗೆ ಸಿಲುಕಿದ್ದಾರೆ.

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನಲ್ಲಿ ಹತ್ತಕ್ಕೂ ಹೆಚ್ಚಿನ ಬುಡುಕಟ್ಟು ಜನರ ಕಾಲೋನಿಗಳಿದ್ದು ಸಾವಿರಕ್ಕೂ ಹೆಚ್ಚಿನ ಜನರಿದ್ದಾರೆ. ಆದರೆ ಇಲ್ಲಿ ಲಸಿಕೆ ಪಡೆದುಕೊಂಡಿರುವವರ ಸಂಖ್ಯೆ ತೀರ ವಿರಳವಾಗಿದೆ.

ಉದಾಹರಣೆಗೆ ಮೇಲುಕಾಮನಹಳ್ಳಿಯ ಬಳಿ ಇರುವ ಕಾಲೊನಿಯಲ್ಲಿ, ಸರ್ಕಾರಿ ನೌಕರಿ ಪಡೆದಿರುವ ಮೂವರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಉಳಿದ ಕಡೆಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

‘ದೇಶಿಪುರ, ಮುಖಹಳ್ಳಿ ಕಾಲೋನಿ, ಉಪಕಾರ ಕಾಲೊನಿ ಸೇರಿದಂತೆ ಮಂಗಲ ಭಾಗದ ಬುಡಕಟ್ಟು ಜನರ ಕಾಲೊನಿಗಳಿಗೆ ಸಿಬ್ಬಂದಿ ತಪಾಸಣೆಗೆ ಬರುತ್ತಾರೆ ಎಂದರೆ ಸಾಕು; ಜನರು ಮನೆಗಳಲ್ಲಿ ಇರುವುದಿಲ್ಲ. ಆದ್ದರಿಂದ ಬೆಳಿಗ್ಗೆಯೇ ಇಂತಹ ಗ್ರಾಮಗಳಿಗೆ ಭೇಟಿ ನೀಡುವಂತೆ ಸಿಬ್ಬಂದಿಗೆ ತಿಳಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಉನ್ನತ ಅಧಿಕಾರಿಗಳಿಂದಲೇ ಜಾಗೃತಿ: ‘ಇಂತಹ ಗ್ರಾಮಗಳಿಗೆ ತಹಶೀಲ್ದಾರ್, ತಾಲ್ಲೂಕು ಆರೋಗ್ಯ ಅಧಿಕಾರಿ, ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ತೊಂದರೆ ಇಲ್ಲ, ಹಾಕಿಸಿಕೊಳ್ಳದಿದ್ದರೆ ಕೋವಿಡ್ ಬಂದರೆ ಅಪಾಯಕಾರಿ ಮಟ್ಟ ತಲುಪಿ ಮೃತರಾಗುವ ಸಂಭವ ಹೆಚ್ಚು’ ಎಂದು ಅರಿವು ಮೂಡಿಸುತ್ತಿದ್ದಾರೆ.

‘ಗಿರಿಜನರಲ್ಲಿ ಅರಿವಿನ ಕೊರತೆ’
‘ಬುಡಕಟ್ಟು ಜನರು ಲಸಿಕೆ ಹಾಕಿಸಿಕೊಳ್ಳದೆ ಇರುವುದಕ್ಕೆ ಮುಖ್ಯ ಕಾರಣ ಮೂಢನಂಬಿಕೆ ಮತ್ತು ಅರಿವಿನ ಕೊರತೆ. ಇಂತಹ ಗ್ರಾಮಗಳಲ್ಲಿ ಜನಪ್ರತಿನಿ‌ಧಿಗಳು, ವಿದ್ಯಾವಂತರು, ಲಸಿಕೆ ಪಡೆದು ಜನರಿಗೆ ಅರಿವು ಮೂಡಿಸಬೇಕು. ಅಂಗನವಾಡಿ ಕಾರ್ಯಕರ್ತರು, ಪಂಚಾಯತಿ ಅಧಿಕಾರಿಗಳು ಮನೆಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಇವರ ಸಹಕಾರ ಇಲ್ಲದ ಕಾರಣ ಕೇವಲ ಆಶಾ ಕಾರ್ಯಕರ್ತೆಯರು ಲಸಿಕೆ ಹಾಕಿಸಿಕೊಳ್ಳುವಂತೆ ಮನೆಮನೆಗೆ ತೆರಳಿ ಹೇಳುತ್ತ ಇದ್ದಾರೆ. ನಮ್ಮ ಮಾತಿಗೆ ಕಿಮ್ಮತ್ತು ಇಲ್ಲದಂತಾಗಿದೆ’ ಎಂದು ಆಶಾ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT