ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹತ್ಯೆ ಯೋಜಿತ ಸಂಚು: ಬಡಗಲಪುರ

Last Updated 7 ಅಕ್ಟೋಬರ್ 2021, 7:06 IST
ಅಕ್ಷರ ಗಾತ್ರ

ಚಾಮರಾಜನಗರ: ‘ಉತ್ತರ ಪ್ರದೇಶದ ಲಖೀಂ‍ಪುರ್‌ ಖೇರಿ ಜಿಲ್ಲೆಯಲ್ಲಿ ವಾಹನ ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಿರುವುದು ಪೂರ್ವ ಯೋಜಿತ ಸಂಚು’ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಬುಧವಾರ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕುಮ್ಮಕ್ಕು ಇದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಘಟನೆ ನಡೆಯುವ ಮೂರು ದಿನ ಹಿಂದೆಯೇ ಇದರ ಬಗ್ಗೆ ಪ್ರಸ್ತಾಪಿಸಿದ್ದರು.ತಮ್ಮ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರೆ ಸುಮ್ಮನಿರುವುದಿಲ್ಲ ಎಂದಿದ್ದರು’ ಎಂದರು.

‘ರೈತರು ಶಾಂತಿಯುತವಾಗಿ ನಡೆಸುತ್ತಿದ್ದ ಚಳವಳಿಯನ್ನು ಹತ್ತಿಕ್ಕಲು ರೈತರ ಮೇಲೆ ಉದ್ದೇಶ ಪೂರ್ವಕವಾಗಿ ವಾಹನ ಹರಿಸಲಾಗಿದೆ. ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ವಾಮಮಾರ್ಗಗಳನ್ನು ಅನುಸರಿಸುತ್ತಿದೆ’ ಎಂದು ಅವರು ದೂರಿದರು.

ರಾಷ್ಟ್ರಪತಿ ಮೌನ ಮುರಿಯಲಿ: ‘ದೇಶದಲ್ಲಿರುವ ಸ್ಥಿತಿಯನ್ನು ಗಮನಿಸುತ್ತಿ ರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌ ತಮ್ಮ ಮೌನವನ್ನು ಮುರಿದು ದೇಶದ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ರೈತರ ಮೇಲೆ ವಾಹನ ಹರಿಸಿದ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು.ರೈತರ ಮೇಲೆ ಹಲ್ಲೆ ಮಾಡಿ ಎಂದು ಹೇಳಿಕೆ ನೀಡಿದ ಹರಿಯಾಣ ಸರ್ಕಾರವನ್ನು ವಜಾಗೊಳಿಸಬೇಕು. 3 ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು. ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ಗೊಳಿಸಬೇಕು’ ಎಂದು ಮಾಡಿದರು.

‘ಈ ಸಂಬಂಧ ಗುರುವಾರ ಜಿಲ್ಲೆಗೆ ಭೇಟಿ ನೀಡುತ್ತಿರುವ ರಾಷ್ಟ್ರಪತಿ ಅವರಿಗೆ ರಸ್ತೆಯ ಎರಡು ಬದಿಗಳಲ್ಲಿ ರೈತರು ಬ್ಯಾನರ್ ಹಾಗೂ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡುವ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡುತ್ತೇವೆ. ಶಾಂತಿಯುತವಾಗಿ, ರಾಷ್ಟ್ರಪತಿ ಅವರಿಗೆ ಯಾವುದೇ ಅಡಚಣೆಯಾಗದಂತೆ ಪ್ರದರ್ಶನ ಮಾಡಲಾಗುವುದು. ಇದಕ್ಕೆ ಎಲ್ಲ ಸಂಘಟನೆಗಳ ಕಾರ್ಯಕರ್ತರು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್ ಪ್ರಭು, ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಉಪಾಧ್ಯಕ್ಷ ಶಿವಪುರ ಮಹದೇವಪ್ಪ, ಸಂಚಾಲಕ ದೇಮಹಳ್ಳಿ ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT