ಗುರುವಾರ , ಜನವರಿ 27, 2022
27 °C
ಎಲ್ಲರೂ ಹಾಕಿಸಿಕೊಳ್ಳಲು ಶಾಸಕ ಪುಟ್ಟರಂಗಶೆಟ್ಟಿ ಸಲಹೆ

ಚಾಮರಾಜನಗರ: ಮಕ್ಕಳಿಗೆ ಲಸಿಕೆ; ಮೊದಲ ದಿನ ಶೇ 34 ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಹರಡುವಿಕೆ ತಡೆಯುವ ಪ್ರಯತ್ನವಾಗಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನಕ್ಕೆ ಜಿಲ್ಲೆಯಲ್ಲೂ ಸೋಮವಾರ ಚಾಲನೆ ನೀಡಲಾಯಿತು. 

ಜಿಲ್ಲೆಯಲ್ಲಿ ಗುರುತಿಸಲಾಗಿರುವ 45,474 ಮಕ್ಕಳ ಪೈಕಿ ಮೊದಲ ದಿನವೇ 15,211 ಮಂದಿಗೆ ಲಸಿಕೆ ಹಾಕಲಾಗಿದ್ದು, ಶೇ 34ರಷ್ಟು ಸಾಧನೆಯಾಗಿದೆ. 

ತಾಲ್ಲೂಕುಗಳ ಪೈಕಿ ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚು ಅಂದರೆ ಶೇ 46ರಷ್ಟು, ಹನೂರಿನಲ್ಲಿ ಶೇ 43ರಷ್ಟು ಸಾಧನೆಯಾಗಿದೆ.  ಚಾಮರಾಜನಗರ ತಾಲ್ಲೂಕಿನಲ್ಲಿ ಅತಿ ಕಡಿಮೆ ಅಂದರೆ ಶೇ 25ರಷ್ಟು ಮಕ್ಕಳಿಗೆ ಮೊದಲ ದಿನ ಲಸಿಕೆ ಹಾಕಲಾಗಿದೆ. ಕೊಳ್ಳೇಗಾಲ ಮತ್ತು ಯಳಂದೂರಿನಲ್ಲಿ ತಲಾ ಶೇ 27ರಷ್ಟು ಸಾಧನೆಯಾಗಿದೆ. 

ಚಾಲನೆ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಯಾನಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ವೈರಾಣು ಹರಡದಂತೆ ಮುನ್ನೆಚ್ಚರಿಕೆಯಾಗಿ ರಾಜ್ಯದಾದ್ಯಂತ 15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಕೋವಿಡ್ 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ ನಡೆದ ಘಟನೆ ಇನ್ನೂ ಹಸಿರಾಗಿದೆ. ಮುಂದಿನ ದಿನಗಳಲ್ಲಿ 3ನೇ ಅಲೆ ಬರುವ ಸಂಭವವನ್ನು ಪ್ರಾಥಮಿಕ ಹಂತದಲ್ಲಿಯೇ ತಡೆಯುವ ಸಲುವಾಗಿ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದರು.

ನಿಗದಿತ ಗುರಿ ತಲುಪಿ: ‘ಕೋವಿಡ್ ನೆಪ ಹೇಳಿ ಜಿಲ್ಲೆಯ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳಲ್ಲಿ ನಿರ್ಲಕ್ಷ್ಯ ತೋರದೆ ಇಲಾಖೆ ಕೆಲಸಗಳ ಜೊತೆಗೆ ಕೋವಿಡ್ ಲಸಿಕಾಕರಣ ಕಾರ್ಯದಲ್ಲಿ ಎಲ್ಲ ಅಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ನಿಗದಿತ ಗುರಿ ಸಾಧಿಸಬೇಕು. ಎಲ್ಲರೂ ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಮೂಲಕ ಜೀವರಕ್ಷಣೆ ಮಾಡಿಕೊಳ್ಳಬೇಕು’ ಎಂದು ಶಾಸಕರು ಸಲಹೆ ನೀಡಿದರು. 

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ ಮಾತನಾಡಿ ‘ಮನುಕುಲವೇ ಕೋವಿಡ್‌ನಿಂದ ತೊಂದರೆಗೀಡಾಗಿದೆ. 2ನೇ ಅಲೆಯಲ್ಲಿ ನಮ್ಮ ಕಣ್ಣೆದುರು ಇದ್ದ ಅನೇಕರನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ನಮ್ಮಲ್ಲಿನ ಅಜಾಗರೂಕತೆಯೇ ಕಾರಣ. ಲಸಿಕೆಯಿಂದ ಮಾನಸಿಕ ದೃಢತೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದರು.

ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗಮಲ್ಲೇಶ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪ್ರೇಮ್‌ಕುಮಾರ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮರಿಸ್ವಾಮಿ, ಉಪ ಪ್ರಾಂಶುಪಾಲ ನಂಜುಂಡಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಇದ್ದರು.

316 ಶಾಲೆಗಳು, 45,474 ಮಕ್ಕಳು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ 45,474 ಮಕ್ಕಳನ್ನು ಗುರುತಿಸಲಾಗಿದೆ. 41,752 ಮಕ್ಕಳು ಶಾಲಾ–ಕಾಲೇಜುಗಳಲ್ಲಿದ್ದರೆ, ಉಳಿದ 3,722 ಮಂದಿ ಹೊರಗಿನವರು’ ಎಂದರು. 

‘316 ಕೇಂದ್ರಗಳನ್ನು (ಶಾಲಾ–ಕಾಲೇಜು) ಗುರುತಿಸಲಾಗಿದೆ. 306 ತಂಡ ನಿಯೋಜಿಸಲಾಗಿದೆ. ಶಾಲಾ ಮಕ್ಕಳ ಪೈಕಿ, 230 ಪ್ರೌಢಶಾಲೆಗಳ 25,843, 60 ಪಿಯು ಕಾಲೇಜುಗಳ 15,166 ವಿದ್ಯಾರ್ಥಿಗಳು, 19 ಐಟಿಐಗಳ 685 ವಿದ್ಯಾರ್ಥಿಗಳು, ಏಳು ನರ್ಸಿಂಗ್‌ ಕಾಲೇಜುಗಳ 58 ವಿದ್ಯಾರ್ಥಿಗಳು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಎಲ್ಲರಿಗೂ ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು