ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಹಳ್ಳಕ್ಕೆ ಇಲ್ಲ ಸೇತುವೆ, ಮಳೆಗಾಲದಲ್ಲಿ ಸಂಚಾರ ಸಂಕಷ್ಟ

ಹೆಬ್ಬಸೂರು- ಹರದನಹಳ್ಳಿ ರಸ್ತೆಯಲ್ಲಿ ದೊಳ್ಳೀಪುರ ಬಳಿಯಲ್ಲಿರುವ ಹಳ್ಳ, ಸೇತುವೆ ನಿರ್ಮಾಣಕ್ಕೆ ಒತ್ತಾಯ
Last Updated 6 ನವೆಂಬರ್ 2020, 13:01 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಹೆಬ್ಬಸೂರಿನಿಂದ ಬ್ಯಾಡಮೂಡ್ಲು, ಹರದನಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ದೊಳ್ಳೀಪುರದ ಬಳಿ ಇರುವ ಹಳ್ಳಕ್ಕೆ ಸೇತುವೆ ಇಲ್ಲದೇ ಇರುವುದರಿಂದ ಮಳೆಗಾಲದಲ್ಲಿ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ.

ಹಳ್ಳದಲ್ಲಿ ಜಾಸ್ತಿ ನೀರು ಇದ್ದಾಗ ದಾಟುವುದು ಅಪಾಯಕಾರಿ. ಕೆಲವರು ಅನಿವಾರ್ಯವಾಗಿ ಜೀವ ಕೈಯಲ್ಲಿ ಹಿಡಿದು ವಾಹನಗಳ ಮೂಲಕ ದಾಟಿದರೆ, ಇನ್ನು ಕೆಲವರು ಆ ರಸ್ತೆಯಲ್ಲಿ ಸಂಚರಿಸದೆ, ತಾವು ಹೋಗಬೇಕಾದ ಜಾಗಕ್ಕೆ ಸುತ್ತಿ ಬಳಸಿ ತೆರಳುತ್ತಾರೆ. ಬೇಸಿಗೆಯಲ್ಲಿ ಹಳ್ಳ ಬತ್ತುವುದರಿಂದ ಸಂಚಾರಕ್ಕೆ ತೊಡಕಾಗುವುದಿಲ್ಲ. ಸೇತುವೆ ನಿರ್ಮಾಣವಾದರೆ ವರ್ಷಪೂರ್ತಿ ಯಾವುದೇ ತೊಂದರೆ ಇಲ್ಲದೆ ಸಂಚರಿಸಬಹುದು ಎಂಬುದು ಗ್ರಾಮಸ್ಥರ ಆಶಯ.

ರೈತರು ಬಳಸುವ ರಸ್ತೆ: ಹೆಬ್ಬಸೂರಿನಿಂದ ಬ್ಯಾಡಮೂಡ್ಲು, ಹರದನಹಳ್ಳಿ, ಬಸವಾಪುರಗಳನ್ನು ಈ ರಸ್ತೆ ಸಂಪರ್ಕಿಸುತ್ತದೆ. ಹರದನಹಳ್ಳಿಯಿಂದ ಚಂದಕವಾಡಿ, ನಾಗವಳ್ಳಿ, ಯಳಂದೂರು ಸೇರಿದಂತೆ ಇತರ ಕಡೆಗಳಿಗೆ ಹೋಗುವ ಜನರು ಚಾಮರಾಜನಗರದತ್ತ ಬರದೆ, ಬ್ಯಾಡಮೂಡ್ಲು ಮೂಲಕ ಈ ರಸ್ತೆಯಲ್ಲಿ ಬಂದು ಹೆಬ್ಬಸೂರು ಮಾರ್ಗದಲ್ಲಿ ಸಾಗಿ ಬಿಳಿಗಿರಿ ರಂಗನಬೆಟ್ಟ ರಸ್ತೆಗೆ ಸೇರುತ್ತಾರೆ.

ರೈತರು ತಮ್ಮ ತರಕಾರಿ, ತೆಂಗಿನಕಾಯಿ, ಎಳನೀರು, ಅಡಿಕೆ ಸೇರಿದಂತೆ ಇತರ ಉತ್ಪನ್ನಗಳನ್ನು ಇದೇ ಮಾರ್ಗದಲ್ಲಿ ಸಾಗಿಸುತ್ತಾರೆ. ಈ ಮಾರ್ಗದಲ್ಲಿ ಮೂರು ಕಿ.ಮೀನಷ್ಟು ದೂರ ಕಚ್ಚಾ ರಸ್ತೆ ಇದೆ. ಅದೇ ಭಾಗದಲ್ಲಿ ಈ ಹಳ್ಳ ಬರುತ್ತದೆ.

‘ಈ ರಸ್ತೆಯಲ್ಲಿ ನೂರಾರು ಮಂದಿ ಪ್ರತಿ ದಿನ ಸಂಚರಿಸುತ್ತಾರೆ. ಬಳಸುವವರಲ್ಲಿ ಹೆಚ್ಚಿನವರು ರೈತರು. ತಮ್ಮ ಉತ್ಪನ್ನಗಳನ್ನು ದ್ವಿಚಕ್ರ ವಾಹನಗಳು ಹಾಗೂ ಇತರೆ ವಾಹನಗಳಲ್ಲಿ ಕೊಂಡೊಯ್ಯುತ್ತಾರೆ. ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ಹರಿಯುವುದರಿಂದ ಸಂಚಾರಕ್ಕೆ ಕಷ್ಟವಾಗುತ್ತಿದೆ. ಸ್ವಲ್ಪ ನೀರಿದ್ದರೆ ಹೇಗೋ ದಾಟುತ್ತೇವೆ. ನೀರು ಜಾಸ್ತಿ ಇದ್ದರೆ ದಾಟಲು ಆಗುವುದಿಲ್ಲ’ ಎಂದು ಹೆಬ್ಬಸೂರಿನ ಶೇಷಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸೇತುವೆಗೆ ಬೇಡಿಕೆ:‘ಹಳ್ಳಕ್ಕೆ ಸೇತುವೆಯೊಂದನ್ನು ನಿರ್ಮಿಸಿದರೆ ಸುತ್ತಮುತ್ತಲಿನ ಗ್ರಾಮದವರು ಹಾಗೂ ವಾಹನ ಸವಾರರಿಗೆ ಅನುಕೂಲವಾಗುತ್ತದೆ. ಹಲವು ವರ್ಷಗಳಿಂದ ಶಾಸಕರ ಮುಂದೆ ಈ ಬಗ್ಗೆ ಪ್ರಸ್ತಾಪಿಸುತ್ತಲೇ ಬಂದಿದ್ದೇವೆ. ಹಲವು ಬಾರಿ ಮನವಿಯನ್ನೂ ಮಾಡಿದ್ದೇವೆ. ಅನುದಾನ ಲಭ್ಯವಾದಾಗ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದಾರೆ’ ಎಂದು ಅವರು ಹೇಳಿದರು.

‘ಈ ಮಾರ್ಗದಲ್ಲಿ ಅಂದಾಜು ಮೂರು ಕಿ.ಮೀಗಳಷ್ಟು ದೂರ ಕಚ್ಚಾ ರಸ್ತೆ ಇದೆ. ಡಾಂಬರು ಹಾಕದಿದ್ದರೂ ಪರವಾಗಿಲ್ಲ. ಕನಿಷ್ಠ ಜಲ್ಲಿ ಹಾಕಿ ಕೊಟ್ಟರೂ ಸಾಕು. ಇದರೊಂದಿಗೆ ಸೇತುವೆ ನಿರ್ಮಾಣವಾದರೆ ವಾಹನಗಳ ಸಂಚಾರ ಸುಗಮವಾಗುತ್ತದೆ’ ಎಂದು ಶೇಷಪ್ಪ ಅವರು ಹೇಳಿದರು.

ಈ ಬಗ್ಗೆ, ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘ಸೇತುವೆ ನಿರ್ಮಾಣಕ್ಕಾಗಿ ಗ್ರಾಮಸ್ಥರು ಪ್ರಸ್ತಾವ ನೀಡಿರುವುದು ನಿಜ. ಕೋಡಿಮೋಳೆ, ಬ್ಯಾಡಮೂಡ್ಲು, ಬಂಡೀಗೆರೆ ಮಾರ್ಗದಲ್ಲಿ ₹4.20 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಟೆಂಡರ್ ಆಗಿತ್ತು. ಈಗ ಯೋಜನಾ ವೆಚ್ಚವನ್ನು ಪರಿಷ್ಕರಿಸಲಾಗುತ್ತಿದೆ. ಇದು ಮುಗಿದ ಬಳಿಕ ದೊಳ್ಳೀಪುರದ ಬಳಿಯ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಸದ್ಯ ಸರ್ಕಾರದಿಂದ ಅನುದಾನವೂ ಬರುತ್ತಿಲ್ಲ. ವಿಶೇಷ ಮನವಿ ಮಾಡಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT