ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕಟ್ಟಿಕೊಳ್ಳುವ ಚರಂಡಿ; ನಿವಾಸಿಗಳಿಗೆ ಕಿರಿ ಕಿರಿ

ಚಾಮರಾಜನಗರ 17ನೇ ವಾರ್ಡ್‌‌: ಕಾವೇರಿ ನೀರು ಶುದ್ಧವಾಗಿಲ್ಲ, ಕಸ ವಿಲೇವಾರಿ ಸಮರ್ಪಕವಾಗಿಲ್ಲ
Last Updated 8 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಸಂತೇಮರಹಳ್ಳಿ ಕಡೆಯಿಂದ ನಗರ ಪ್ರವೇಶಿಸುವಾಗ ಸಿಗುವುದು 17ನೇ ವಾರ್ಡ್‌. ನಗರ ಪ್ರವೇಶಿಸುವವರನ್ನು ಸ್ವಾಗತಿಸುವ ಜಾಗ ಹೇಗಿರಬೇಕು? ಒಪ್ಪ ಓರಣವಾಗಿ ಇರಬೇಕು. ಆದರೆ ಇಲ್ಲಿ ಅದಕ್ಕೆ ತದ್ವಿರುದ್ಧ.

ಇದೇ 12ರಂದು ನಗರಕ್ಕೆ ಮುಖ್ಯಮಂತ್ರಿ ಬರುವ ಕಾರಣಕ್ಕೆ ಈಗ ತರಾತುರಿಯ ಸ್ವಚ್ಛತೆ ನಡೆಯುತ್ತಿದೆ. ಮುಖ್ಯ ರಸ್ತೆಗೆ ತೇಪೆ ಹಾಕಲಾಗುತ್ತಿದೆ.ಅದು ಎಷ್ಟು ದಿನ ಉಳಿಯುತ್ತದೋ ಗೊತ್ತಿಲ್ಲ. ಸಾಮಾನ್ಯ ದಿನಗಳಲ್ಲಿ ಈ ವಾರ್ಡನ್ನು ಅನೈರ್ಮಲ್ಯ ಕಾಡುತ್ತದೆ. ವಾರ್ಡ್‌ನಲ್ಲಿರುವ ಪ್ರಮುಖ ಚರಂಡಿಯೇ ಯಾವಾಗಲೂ ಕಟ್ಟಿಕೊಂಡಿರುತ್ತದೆ. ಮಳೆಗಾಲದಲ್ಲಿ ವಾರ್ಡ್ ನಿವಾಸಿಗಳು ಕಿರಿಕಿರಿ ಅನುಭವಿಸುತ್ತಿರುತ್ತಾರೆ.

ಉಪ್ಪಾರ ಸಮುದಾಯದವರೇ ಹೆಚ್ಚಾಗಿರುವ 17ನೇ ವಾರ್ಡ್‌ನಲ್ಲಿ 500 ಮನೆಗಳಿವೆ. ಇಲ್ಲಿನ ಮತದಾರರ ಸಂಖ್ಯೆ 1,600. ಬೆರಳೆಣಿಕೆಯ ಮೇದಾರ ಕುಟುಂಬಗಳಿವೆ. ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಕ್ಕಟ್ಟಾದ ಪುಟ್ಟ ಮನೆಗಳಲ್ಲಿ ಬಹುತೇಕರ ವಾಸ.

ವಾರ್ಡ್‌ನ ರಸ್ತೆಗಳು ಕಿರಿದಾಗಿವೆ. ಕಾಂಕ್ರೀಟ್‌ ಹಾಕಲಾಗಿದೆ. ಬೀದಿ ದೀಪಗಳಿವೆ. ನೀರು ಪೂರೈಕೆ ಆಗುತ್ತಿದೆ. ಕಾವೇರಿ ನೀರು ಬರುತ್ತದೆ. ಕೊಳವೆ ಬಾವಿ ಮೂಲಕ ಕಿರು ನೀರು ಸರ‌ಬರಾಜು ಘಟಕಕ್ಕೆ (ತೊಂಬೆ) ತುಂಬಿಸುವ ವ್ಯವಸ್ಥೆ ಇದೆ. ಕಾವೇರಿ ನೀರು ಬಾರದ ಸಂದರ್ಭದಲ್ಲಿ ನಿವಾಸಿಗಳು ತೊಂಬೆ ನೀರನ್ನು ಬಳಸುತ್ತಾರೆ.

ನೀರು ಶುದ್ಧವಾಗಿಲ್ಲ: ಕಾವೇರಿ ನೀರು ಶುದ್ಧವಾಗಿಲ್ಲ ಎಂಬುದು ನಿವಾಸಿಗಳ ಆರೋಪ. ‘ಕುಡಿಯುವುದಕ್ಕೆ ಹಾಗೂ ಅಡುಗೆಗೆ ಕಾವೇರಿ ನೀರನ್ನು ಬಳಸಲು ಆಗುವುದಿಲ್ಲ. ನಾವು ತೊಂಬೆ ನೀರನ್ನೇ ಅವಲಂಬಿಸಿದ್ದೇವೆ’ ಎಂದು ಹೇಳುತ್ತಾರೆ ನಿವಾಸಿಗಳು.

‘ವಾರ್ಡ್‌ನಲ್ಲಿ ನೀರಿಗೆ ಸಮಸ್ಯೆ ಇಲ್ಲ. ಶುದ್ಧ ನೀರು ಪೂರೈಕೆಯಾಗದಿರುವುದೇ ನಮಗೆ ಸಮಸ್ಯೆ. ತಿ.ನರಸೀಪುರದಿಂದ ಬರುವ ನೀರನ್ನು ಮಂಗಲದಲ್ಲಿ ಶುದ್ಧೀಕರಿಸಲಾಗುತ್ತಿದೆ. ಹಾಗಿದ್ದರೂ, ನೀರು ಕುಡಿಯುವುದಕ್ಕೆ ಹಾಗೂ ಅಡುಗೆಗೆ ಯೋಗ್ಯವಾಗಿಲ್ಲ. ಅದನ್ನು ಕುಡಿದರೆ ಕಾಯಿಲೆ ಖಚಿತ’ ಎಂದು ನಿವಾಸಿ ಪಿ.ನಾಗೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಡುವ ಚರಂಡಿ: ವಾರ್ಡ್‌ನಲ್ಲಿ ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಹೆದ್ದಾರಿ ಬದಿಯಲ್ಲಿರುವ ಮುಖ್ಯ ಚರಂಡಿಯೇ ಕಟ್ಟಿಕೊಂಡಿರುತ್ತದೆ. ಬಡಾವಣೆ ಒಳಗಿರುವ ಚರಂಡಿಗಳ ಸ್ಥಿತಿ ಭಿನ್ನವಾಗಿಲ್ಲ. ಕಸ ವಿಲೇವಾರಿಯೂ ಸಮರ್ಪಕವಾಗಿ ಆಗುತ್ತಿಲ್ಲ.

‘ನಮ್ಮ ವಾರ್ಡ್‌ ತಗ್ಗಿನಲ್ಲಿದೆ. ನಗರದ ಎತ್ತರ ಪ್ರದೇಶದ ನೀರು ಇಲ್ಲಿನ ಮುಖ್ಯ ಚರಂಡಿಯ ಮೂಲಕ ಹರಿಯುತ್ತದೆ. ಮಳೆಗಾಲದಲ್ಲಿ ಸರಾಗವಾಗಿ ಹರಿಯುವುದಿಲ್ಲ. ಚರಂಡಿ ಕಟ್ಟಿಕೊಂಡು ಉಕ್ಕೇರುತ್ತದೆ. ಬಡಾವಣೆಯಲ್ಲಿರುವ ಚರಂಡಿಯ ಪರಿಸ್ಥಿತಿಯೂ ಇದೇ ರೀತಿ ಇದೆ. ಮಳೆಬಂದರೆ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಮಳೆ ಬರುವುದೇ ಬೇಡ ಎಂದೇ ಎಲ್ಲರೂ ಬಯಸುತ್ತಾರೆ. ಕಟ್ಟಿಕೊಂಡ ಚರಂಡಿಯಿಂದ ಕೆಟ್ಟ ವಾಸನೆ ಬರುವುದರ ಜೊತೆಗೆ ಬಸವನಹುಳು ಸೇರಿದಂತೆ ಇತರೆ ಕ್ರಿಮಿ ಕೀಟಗಳು ಸ್ಥಳೀಯರನ್ನು ಕಾಡುತ್ತವೆ’ ಎಂದು ಮತ್ತೊಬ್ಬ ನಿವಾಸಿ ಆರ್‌.ನಾಗೇಶ್‌ ಅವರು ಸಮಸ್ಯೆಯನ್ನು ಬಿಚ್ಚಿಟ್ಟರು.

ಬಯಲೇ ಗತಿ: ವಾರ್ಡ್‌ನಲ್ಲಿ ಒಳ ಚರಂಡಿ ವ್ಯವಸ್ಥೆಯೂ ಸರಿ ಇಲ್ಲ. ಇನ್ನೂ ಹಲವು ಮನೆಗಳು ಶೌಚಾಲಯವನ್ನು ಒಳ ಚರಂಡಿಗೆ ಸಂಪರ್ಕ ಕಲ್ಪಿಸಿಲ್ಲ. ಕೆಲವು ಮನೆಗಳಲ್ಲಿ ಶೌಚಾಲಯಗಳಿಲ್ಲ. ಒಂದು ಸಾರ್ವಜನಿಕ ಹಾಗೂ ಇನ್ನೊಂದು ಸಮುದಾಯದ ಶೌಚಾಲಯವಿದೆ. ಸಾರ್ವಜನಿಕ ಶೌಚಾಲಯ ಸ್ವಚ್ಛವಾಗಿಲ್ಲ. ಹಲವರುಬಹಿರ್ದೆಸೆಗಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಕೆಲವು ತಿಂಗಳ ಹಿಂದಿನವರೆಗೂ ಪುಟ್ಟಮ್ಮಣ್ಣಿ ಉದ್ಯಾನದ ಎದುರಿನಲ್ಲಿರುವ ಪಾದಚಾರಿ ಮಾರ್ಗದಲ್ಲೇ ಮಲ ವಿಸರ್ಜನೆ ಮಾಡುತ್ತಿದ್ದರು. ಈಗ ಅದು ಕಡಿಮೆಯಾಗಿದೆ. ಆದರೆ, ಇನ್ನೂ ಹಲವರು ಬಯಲಿಗೆ ಹೋಗುವವರಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾರ್ಡ್ ಸದಸ್ಯ, ‘ವಾರ್ಡ್‌ನಲ್ಲಿ ಸ್ವಚ್ಛತೆಗೆ ಗಮನಹರಿಸಲಾಗುತ್ತಿದೆ. ದೂರು ಬಂದ ತಕ್ಷಣ ಸ್ಪಂದಿಸುತ್ತಿದ್ದೇನೆ. ಶೌಚಾಲಯಗಳನ್ನು ಒಳ ಚರಂಡಿಗೆ ಸಂಪರ್ಕಿಸಲು ಪ್ರೇರೇಪಿಸಲಾಗುತ್ತಿದೆ. ನಗರೋತ್ಥಾನ ಯೋಜನೆ ಅಡಿಯಲ್ಲೂ ಕೆಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.

ಪಾಳು ಬಿದ್ದ ಪುಟ್ಟಮ್ಮಣ್ಣಿ ಪಾರ್ಕ್‌
ಇದೇ ವಾರ್ಡ್‌ನಲ್ಲಿ ಪುಟ್ಟಮ್ಮಣ್ಣಿ ಉದ್ಯಾನವಿದೆ. ಆದರೆ, ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ಮುಖ್ಯಮಂತ್ರಿ ಭೇಟಿ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಈಗ ನಗರಸಭೆ ಸಿಬ್ಬಂದಿ ಕಳೆ ತೆಗೆಯುತ್ತಿದ್ದಾರೆ.

ನಗರಕ್ಕೆ ಮಾದರಿ ಉದ್ಯಾನ ಆಗಬಲ್ಲ ಎಲ್ಲ ಸಾಮರ್ಥ್ಯ ಈ ಉದ್ಯಾನಕ್ಕಿದೆ. ಆದರೆ, ನಗರಸಭೆ ಆಡಳಿತದ ಇಚ್ಛಾಶಕ್ತಿ ಕೊರತೆಯಿಂದ ಉದ್ಯಾನ ಹದಗೆಟ್ಟು ಹೋಗಿದೆ. ಉದ್ಯಾನವನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ವಾರ್ಡ್‌ ನಿವಾಸಿಗಳ ಒತ್ತಾಯ.

₹10 ಲಕ್ಷ: ಉದ್ಯಾನ ಅಭಿವೃದ್ಧಿಗೆ ₹10 ಲಕ್ಷ ಬಿಡುಗಡೆಯಾಗಿದ್ದು, ಟೆಂಡರ್‌ ಕೂಡ ಆಗಿದೆ. ಕೆಲಸ ಶೀಘ್ರದಲ್ಲಿ ಆರಂಭವಾಗಲಿದೆ’ ಎಂದು ವಾರ್ಡ್‌ ಸದಸ್ಯ ಸಿ.ಎಂ.ಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

**

ಚರಂಡಿ ಸಮಸ್ಯೆ ಇರುವುದು ನಿಜ. ಎರಡು ವರ್ಷಗಳ ಹಿಂದೆ ಚರಂಡಿ ಅಭಿವೃದ್ಧಿಗಾಗಿ ₹76 ಲಕ್ಷ ಬಿಡುಗಡೆಯಾಗಿತ್ತು. ಅದನ್ನು ಬೇರೆ ವಾರ್ಡ್‌ಗೆ ಹಂಚಿಕೆ ಮಾಡಲಾಗಿದೆ.
-ಸಿ.ಎಂ.ಬಸವಣ್ಣ, ವಾರ್ಡ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT