ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆನಂದಜ್ಯೋತಿ’ಯಲ್ಲ, ಇದು ಕಸದ ಕಾಲೊನಿ!

ಕೊಳ್ಳೇಗಾಲ: 2ನೇ ವಾರ್ಡ್‌ನಲ್ಲಿ ಅನೈರ್ಮಲ್ಯ ತಾಂಡವ, ಆಗುತ್ತಿಲ್ಲ ತ್ಯಾಜ್ಯ ವಿಲೇವಾರಿ
Last Updated 29 ಜೂನ್ 2022, 22:00 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ನಗರಸಭೆಯ 2ನೇ ವಾರ್ಡ್ ವ್ಯಾಪ್ತಿಗೆ ಬರುವ ಆನಂದಜ್ಯೋತಿ ಕಾಲೊನಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲದೆ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ.

ಈ ವಾರ್ಡ್‌ನಿಂದ ಆಯ್ಕೆಯಾಗಿದ್ದ ನಾಗಮಣಿ ಅವರ ಸದಸ್ಯತ್ವ ಪಕ್ಷದ ವಿಪ್‌ ಉಲ್ಲಂಘನೆ ಪ್ರಕರಣದಿಂದ ಅನರ್ಹಗೊಂಡಿದೆ.

ಬಡಾವಣೆಯಲ್ಲಿ 750ಕ್ಕೂ ಹೆಚ್ಚು ಕುಟುಂಬಗಳಿದ್ದು, 2500 ಕ್ಕೂ ಹೆಚ್ಚು ಜನರಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುವವರ ಸಂಖ್ಯೆಯೇ ಇಲ್ಲಿ ಹೆಚ್ಚಿದೆ. ಬಹುತೇಕ ಮನೆಗಳು ಕಿರಿದಾಗಿದ್ದು, ಹಲವು ಮನೆಗಳಲ್ಲಿ10ಕ್ಕೂ ಹೆಚ್ಚು ಮಂದಿ ಜನರು ವಾಸಿಸುತ್ತಿದ್ದಾರೆ.

ಬಡಾವಣೆಯಲ್ಲಿ ನೀರಿನ ಸೌಲಭ್ಯ ಇದೆ. ರಸ್ತೆಯೂ ತಕ್ಕಮಟ್ಟಿಗೆ ಇದೆ. ಚರಂಡಿ ಸ್ವಚ್ಛವಾಗಿಲ್ಲ. ಚರಂಡಿ ಪೂರ್ತಿ ಬಚ್ಚಲು ಹುಳುಗಳ ಹಾವಳಿ. ಕೆಲ ಚರಂಡಿಗಳಲ್ಲಿ ಕಸಗಳು ಸಿಲುಕಿ ಕೊಳೆತು ಗಬ್ಬು ನಾರುತ್ತಿದೆ.

ಚರಂಡಿಯನ್ನು ಸ್ವಚ್ಛ ಮಾಡುವ ಕೆಲಸ ನಡೆದರೂ, ಚರಂಡಿಯಿಂದ ತೆಗೆದ ಹೂಳು, ತ್ಯಾಜ್ಯವನ್ನು ತೆರವುಗೊಳಿಸುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಕಸದ ರಾಶಿಗಳು: ಬಡಾವಣೆಯಲ್ಲಿ ಎಲ್ಲಿ ನೋಡಿದರೂ ಕಸ ರಾರಾಜಿಸುತ್ತದೆ. ಬಡಾವಣೆಗೆ ಭೇಟಿ ನೀಡುವವರನ್ನು ಕಸದ ರಾಶಿಗಳೇ ಸ್ವಾಗತ ಕೋರುತ್ತವೆ. ಜೋರಾಗಿ ಗಾಳಿ ಬೀಸುವಾಗ ಬೇರೆ ಕಡೆಗೂ ಈ ಕಸ ಹಾರುತ್ತಿದೆ.

‘ಕಸದ ಜೊತೆ ಪ್ಲಾಸ್ಟಿಕ್ ಹಾವಳಿಯೂ ಮೀತಿ ಮೀರಿದೆ. ಪ್ರತಿಯೊಂದು ಮನೆಯ ಮುಂದೆಯೂ ಪ್ಲಾಸ್ಟಿಕ್ ಬಿದ್ದಿರುತ್ತದೆ. ಕಸವನ್ನು ಸಂಗ್ರಹಿಸಲು ನಗರಸಭೆಯವರು ಬರುವುದಿಲ್ಲ’ ಎಂದು ಬಡಾವಣೆಯ ನಿವಾಸಿ ರಂಗಕ್ಕ ದೂರಿದರು.

‘ನಮ್ಮ ಬಡಾವಣೆಯಲ್ಲಿ ಕಸವನ್ನು ಸರಿಯಾಗಿ ತೆಗೆಯುವುದಿಲ್ಲ. ಬೇರೆ ಬಡಾವಣೆಯಲ್ಲಿ ಕಸವನ್ನು ನಿತ್ಯವೂ ಸಂಗ್ರಹಿಸಲಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡುತ್ತಾರೆ’ ಎಂದು ನಿವಾಸಿ ರಾಜು ಆರೋಪಿಸಿದರು.

ಗಬ್ಬು ನಾರುವ ಬಡಾವಣೆ

‘ಈ ವಾರ್ಡ್‌ನಲ್ಲಿ ಪ್ರಾಣಿ ಖಾನೆಗಳಿವೆ. ಇಲ್ಲಿ ಸ್ವಚ್ಛತೆ ಇಲ್ಲ. ಮಾಂಸದ ತ್ಯಾಜ್ಯಗಳನ್ನು ಚರಂಡಿಗೆ ಮತ್ತು ಬಡಾವಣೆಯ ಸಮೀಪದಲ್ಲಿ ಎಸೆಯಲಾಗುತ್ತದೆ. ಈ ಕಾರಣದಿಂದ ಇಡೀ ಬಡಾವಣೆ ಗಬ್ಬು ನಾರುತ್ತಿದೆ. ನಾಯಿಗಳು, ಹದ್ದುಗಳು ಮತ್ತು ಕಾಗೆಗಳು ತ್ಯಾಜ್ಯಗಳನ್ನು ಬಡಾವಣೆಯ ಮುಖ್ಯ ರಸ್ತೆಯಲ್ಲಿ ತಂದು ತಿನ್ನುತ್ತವೆ. ಇದರಿಂದ ಸಾರ್ವಜನಿಕರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ನಿವಾಸಿಗಳು ಆರೋಪಿಸಿದರು.

ಬಡಾವಣೆಗೆ ಭೇಟಿ ನೀಡಿ ಅಲ್ಲಿನ ವಾಸ್ಥವ್ಯವನ್ನು ತಿಳಿದು ಮುಂದಿನ ಕ್ರಮ ಕೈಗೊಳ್ಳುತ್ತೇನೆ. ವಾರ್ಡ್‍ನ ಅಭಿವೃದ್ಧಿಯೇ ನಮ್ಮ ಆದ್ಯತೆ.
ನಂಜುಂಡಸ್ವಾಮಿ, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT