ಶುಕ್ರವಾರ, ಅಕ್ಟೋಬರ್ 30, 2020
19 °C
ನದಿ ದಂಡೆಯಲ್ಲಿ ತ್ಯಾಜ್ಯದ ರಾಶಿ, ನೀರು ಮಲಿನವಾಗದಂತೆ ತಡೆಯಲು ಒತ್ತಾಯ

ಅನ್‌ಲಾಕ್‌: ಕಾವೇರಿ ನದಿ ದಡದಲ್ಲಿ ಹೆಚ್ಚಿದ ಚಟುವಟಿಕೆ

ಅವಿನ್ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಕೋವಿಡ್‌ ಹಾವಳಿಯಿಂದ ಹೇರಲಾಗಿದ್ದ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಿದ ನಂತರ ತಾಲ್ಲೂಕಿನ ಕಾವೇರಿ ನದಿ ತೀರಗಳಲ್ಲಿ ಸ್ಥಳೀಯರು ಹಾಗೂ ಹೊರಗಿನವರ ಓಡಾಟ ಹೆಚ್ಚಾಗಿದ್ದು, ಪ್ಲಾಸ್ಟಿಕ್‌ ಸೇರಿದಂತೆ ಇತರೆ ತ್ಯಾಜ್ಯಗಳು ನಡಿ ದಂಡೆಯಲ್ಲಿ ರಾಶಿ ಬೀಳಲು ಆರಂಭಿಸಿವೆ.  

ಲಾಕ್‌ಡೌನ್‌ ಅವಧಿಯಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಇತ್ತು. ಸ್ಥಳೀಯರು ಅಗತ್ಯಕ್ಕೆ ಮಾತ್ರ ನದಿಗೆ ತೆರಳುತ್ತಿದ್ದರು. ಆಗ ನದಿ ನೀರು ಶುಭ್ರವಾಗಿತ್ತು. ಅನ್‌ಲಾಕ್‌ ಆರಂಭವಾದ ನಂತರ ಜನರ ಚಟುವಟಿಕೆಗಳು ಹೆಚ್ಚಾಗಿವೆ. ನದಿ ದಂಡೆಯಲ್ಲಿ ಪ್ಲಾಸ್ಟಿಕ್‌, ಹಳೆಯ ಬಟ್ಟೆ, ಮದ್ಯದ ಬಾಟಲಿಗಳು ಕಾಣಸಿಗುತ್ತಿವೆ. ತ್ಯಾಜ್ಯಗಳು ನದಿ  ಒಡಲು ಸೇರುತ್ತಿವೆ.

ಕಾವೇರಿ ನದಿಯಿಂದ ನೂರಾರು ಗ್ರಾಮಗಳು ಹಾಗೂ ನಗರ ಪ್ರದೇಶಗಳಿಗೆ ಪ್ರತಿನಿತ್ಯ ನೀರು ಪೂರೈಕೆ ಆಗುತ್ತದೆ. ಲಕ್ಷಾಂತರ ಮಂದಿ ಕೃಷಿಗಾಗಿ ನದಿ ನೀರನ್ನೇ ಅವಲಂಬಿಸಿದ್ದಾರೆ. 

‘ಲಾಕ್‌ಡೌನ್‌ ಸಂದರ್ಭದಲ್ಲಿ ನದಿ, ಜಲಪಾತಗಳು ಸೇರಿದಂತೆ ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧ ಇತ್ತು. ನದಿ ತೀರಕ್ಕೆ ಯಾರೂ ಹೋಗುತ್ತಿರಲಿಲ್ಲ. ಈಗ ಯಾವುದಕ್ಕೂ ನಿಯಂತ್ರಣ ಇಲ್ಲದಿರುವುದರಿಂದ ನೀರನ್ನು ಮಲಿನ ಮಾಡುವ ಎಲ್ಲ ಚಟುವಟಿಕೆಗಳು ನಡೆಯುತ್ತಿವೆ’ ಎಂದು ಪರಿಸರ ಪ್ರೇಮಿ ಮಹೇಶ್‌ ಪಟೇಲ್‌ ಅವರು ಹೇಳಿದರು. 

ನದಿ ದಂಡೆಯ ಗ್ರಾಮದ ಜನರು ನದಿ ನೀರಲ್ಲೇ ಜಾನುವಾರು, ಬಟ್ಟೆ ತೊಳೆಯುತ್ತಾರೆ. ಇದನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಇದಲ್ಲದೇ, ಅನೇಕರು ನದಿ ತೀರದಲ್ಲಿ ಶುಭ ಸಮಾರಂಭಗಳನ್ನು ಏರ್ಪಡಿಸಿ ಅಲ್ಲಿಯೇ ಅಡುಗೆ ಸಿದ್ಧಪಡಿಸುತ್ತಾರೆ. ಮಾಂಸ ಸೇರಿದಂತೆ ಅಡುಗೆಗೆ ಬೇಕಾದ ವಸ್ತುಗಳನ್ನು ನದಿ ನೀರಿನಲ್ಲೇ ತೊಳೆದು ಸ್ವಚ್ಛಗೊಳಿಸುತ್ತಾರೆ. ಊಟದ ನಂತರ ಉಳಿಕೆ ಆಹಾರ, ಬಾಲೆ ಎಳೆಗಳನ್ನೂ ನದಿಗೇ ಎಸೆಯುತ್ತಾರೆ. ಕೆಲವು ಸಂದರ್ಭದಲ್ಲಿ ಜನರಿಗೆ ಬಾಡೂಟದ ಜೊತೆಗೆ ಮದ್ಯವನ್ನೂ ಪೂರೈಸಲಾಗುತ್ತದೆ.

‘ಊಟ ಮಾಡಿದ ನಂತರ, ಮದ್ಯ ಸೇವಿಸಿದ ನಂತರ ಬಾಟಲಿಯನ್ನು ಅಲ್ಲೇ ಒಡೆಯಲಾಗುತ್ತಿದೆ. ವಾಮಾಚಾರದ ಚಟುವಟಿಕೆಗಳೂ ನಡೆಯುತ್ತವೆ. ತಾಲ್ಲೂಕು ಆಡಳಿತ ಇಂತಹದ್ದಕ್ಕೆಲ್ಲ ಕಡಿವಾಣ ಹಾಕಬೇಕು’ ಎಂದು ಹರಳೆ ಗ್ರಾಮದ ನಿವಾಸಿ ಗಣೇಶ್‌ ಅವರು ಒತ್ತಾಯಿಸಿದರು. 

‘ಜನರು ಕಾವೇರಿ ನದಿಯನ್ನು ಕಲುಷಿತ ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶುದ್ಧ ನೀರಿಗಾಗಿ ಪರದಾಡಬೇಕಾದ ಸ್ಥಿತಿ ಬರಲಿದೆ’ ಎಂದು ಕರ್ನಾಟಕ ವೈಲ್ಡ್ ಲೈಫ್ ಟ್ರಸ್ಟ್ ಕಾರ್ಯದರ್ಶಿ ಮನೋಜ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು