ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಐದು ದಿನಕ್ಕೊಮ್ಮೆ ನೀರು, ನೀರಿಗಾಗಿ ಹಾಹಾಕಾರ!

ಹನೂರು ತಾಲ್ಲೂಕು ಮಾರ್ಟಳ್ಳಿ ಗ್ರಾಮ ಪಂಚಾಯಿತಿ ದುಸ್ಥಿತಿ
Last Updated 27 ಜೂನ್ 2021, 19:30 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಒಡ್ಡರದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರರಕ್ಕೇರಿದ್ದು ಸ್ಥಳೀಯ ನಿವಾಸಿಗಳು ನೀರಿಗಾಗಿ ರಸ್ತೆ ಬದಿ ಒಂದೆರಡು ಕೊಳಾಯಿಗಳನ್ನೇ ಆಶ್ರಯಿಸುವಂತಾಗಿದೆ.

ಗ್ರಾಮದಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಈ ಬಗ್ಗೆ ಸ್ಥಳೀಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಪ್ರಾರಂಭದಲ್ಲಿ ಟ್ಯಾಂಕರ್‌‌ನಲ್ಲಿ ನೀರು ಪೂರೈಸಿರುವುದು ಬಿಟ್ಟರೆ ಮೂರು ತಿಂಗಳಾದರೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಕುಡಿಯುವ ನೀರಿಗಾಗಿ ಮಹಿಳೆಯರು, ಮಕ್ಕಳು ಪಡುವ ಪಾಡು ಹೇಳತೀರದು. ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ ಎಂದು ಆರೋಪಿಸುತ್ತಾರೆ ಸ್ಥಳೀಯರು.

ಐದು ದಿವಸಕ್ಕೊಮ್ಮೆ ನೀರು: ಕುಡಿಯುವ ನೀರು ಪೂರೈಸುವ ಸಲುವಾಗಿ ಬಡಾವಣೆಯಲ್ಲಿ ಅಳವಡಿಸಿರುವ ಕೊಳಾಯಿಗಳಲ್ಲಿ ಐದು ದಿನಕ್ಕೊಮ್ಮ ಬರುವ ನೀರಿಗಾಗಿ ನಿವಾಸಿಗಳು ಮುಗಿಬೀಳುವಂತಾಗಿದೆ. ಐದು ಅಥವಾ ಆರು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಇದಕ್ಕಾಗಿ ದಿನವಿಡೀ ನಾವು ಕೊಳಾಯಿ ಮುಂದೆ ಕಾದು ನಿಲ್ಲಬೇಕಿದೆ. ನಮ್ಮಿಂದ ಮತ ಪಡೆದು ಗೆದ್ದ ಜನಪ್ರತಿನಿಧಿಗಳಿಗೂ ನಮಗೆ ನೀರು ಕೊಡಬೇಕು ಎಂಬ ಕನಿಷ್ಠ ಮಾನವೀಯತೆಯೂ ಇಲ್ಲ. ಇನ್ನು ಅಧಿಕಾರಿಗಳಂತೂ ಇತ್ತ ತಿರುಗಿಯೂ ನೋಡುವುದಿಲ್ಲ, ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳುವುದು ಎಂದು ಗ್ರಾಮದ ಕೊಳಂದೈಯಮ್ಮ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ.

ಅನುಕೂಲ ಇರುವವರು ₹500, ₹600 ಹಣ ಕೊಟ್ಟು ಟ್ಯಾಂಕರ್‌‌ಗಳಲ್ಲಿ ನೀರು ತುಂಬಿಸಿಕೊಳ್ಳುತ್ತಾರೆ. ಆದರೆ ನಾವು ಕುಡಿಯುವ ನೀರಿಗೂ ದುಡ್ಡು ಕೊಡಲು ಆಗುತ್ತದೆಯೇ. ಅಲ್ಲಲ್ಲಿ ಕೊಳಾಯಿಗಳಲ್ಲಿ ಬರುವ ನೀರನ್ನು ದಿನವಿಡೀ ಕಾದು ತರಬೇಕಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕುಡಿಯಲು ನೀರು ಕೊಡಿ: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಸಲ್ಲಿಸಿದ್ದೇವೆ. ಆದರೆ, ಅಧಿಕಾರಿಗಳು ಮಾತ್ರ ತಮಗೆ ಇದು ಸಂಬಂಧಿಸಿದ್ದೇ ಅಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಮನವಿ ಸಲ್ಲಿಸಿದರೂ ಗ್ರಾಮಕ್ಕೆ ಬಂದು ಸಮಸ್ಯೆ ಬಗ್ಗೆ ಸ್ಥಳೀಯರಿಂದ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ. ಕೃಷಿ ಮಾಡಲು ನೀರು ಕೇಳುತ್ತಿಲ್ಲ, ಕುಡಿಯುವುದಕ್ಕಾಗಿ ನೀರು ಕೇಳುತ್ತಿದ್ದೇವೆ. ಹಿರಿಯ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಒಡ್ಡರದೊಡ್ಡಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥರು.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಾಧರ್ ಅವರಿಗೆ ಕರೆ ಮಾಡಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.

15ನೇ ಹಣಕಾಸು ದುರ್ಬಳಕೆ
15ನೇ ಹಣಕಾಸು ಯೋಜನೆ ಹಣದಲ್ಲಿ ಅರ್ಧ ಭಾಗದಷ್ಟು ಅನುದಾನವನ್ನು ಕುಡಿಯುವ ನೀರಿನ ಪೂರೈಕೆಗಾಗಿ ಬಳಸಿಕೊಳ್ಳಲು ಅವಕಾಶವಿದೆ. ಆದರೆ, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳದ ಪರಿಣಾಮ ನೀರಿನ ಸಮಸ್ಯೆ ಉದ್ಭವಿಸಿದೆ. ಈ ಸಂಬಂಧ ನಾಳೆಯೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. 15ನೇ ಹಣಕಾಸನ್ನು ಅನ್ಯ ಕಾಮಗಾರಿಗಳಿಗೆ ಬಳಸಿಕೊಂಡಿದ್ದರೆ ಅಲ್ಲಿನ ಪಿಡಿಒಗೆ ನೋಟಿಸ್ ಜಾರಿಗೊಳಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT