ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮ್ಮತ್ತೂರು ಕೆರೆಗೆ ನೀರು: ಸುದೀರ್ಘ ಹೋರಾಟ ಫಲ

ಪ್ರಾಯೋಗಿಕ ಚಾಲನೆಗೆ ತಾಂತ್ರಿಕ ಸಮಸ್ಯೆ, ಅರ್ಧದವರೆಗೆ ಹರಿದ ನೀರು, ಕಾಯುತ್ತಿರುವ ಗ್ರಾಮಸ್ಥರು
Last Updated 1 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಉಮ್ಮತ್ತೂರು ದೊಡ್ಡಕೆರೆಗೆ ಕಪಿಲಾ ನೀರು ಹರಿಯುವ ಕಾಲ ಸನ್ನಿಹಿತವಾಗಿದ್ದು, ದಶಕದ ಸುದೀರ್ಘ ಹೋರಾಟ ಈಗ ಅಂತಿಮ ಹಂತಕ್ಕೆ ಬಂದಿದೆ.

ಸುತ್ತೂರು ಏತ ನೀರಾವರಿ ಯೋಜನೆ ಅಡಿಯಲ್ಲಿ ತುಂಬಿಸಲು ಉದ್ದೇಶಿಸಿರುವ 24 ಕೆರೆಗಳಲ್ಲಿ ಉಮ್ಮತ್ತೂರಿನ ದೊಡ್ಡ ಕೆರೆಯೂ ಒಂದು.

2017ರ ಜುಲೈನಲ್ಲಿ ಆರಂಭವಾಗಿದ್ದ ಯೋಜನೆಯ ಮೊದಲ ಹಂತದ ಕಾಮಗಾರಿ 18 ತಿಂಗಳಲ್ಲಿ ಮುಗಿಯಬೇಕಾಗಿತ್ತಾದರೂ, ವಿಳಂಬದಿಂದಾಗಿ ನಾಲ್ಕು ವರ್ಷಗಳಾದರೂ ಆಗಿರಲಿಲ್ಲ. ಉಮ್ಮತ್ತೂರು ಗ್ರಾಮಸ್ಥರು, ರೈತ ಸಂಘಗಳ ನಿರಂತರ ಹೋರಾಟದ ಫಲದಿಂದಾಗಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಮಂಗಳವಾರ ಪ್ರಾಯೋಗಿಕ ಚಾಲನೆ ನೀಡಲಾಗಿದೆ. ಆದರೆ, ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದ ತಾಂತ್ರಿಕ ಕಾರಣಗಳಿಂದ ಬುಧವಾರ ಸಂಜೆಯವರೆಗೂ ಕೆರೆಗೆ ನೀರು ಬಂದಿಲ್ಲ. ಗ್ರಾಮಸ್ಥರು ನೀರಿಗಾಗಿ ಕಾಯುತ್ತಿದ್ದಾರೆ.

₹223 ಕೋಟಿ ವೆಚ್ಚದ ಯೋಜನೆ: ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದ ಆಲಂಬೂರು ಏತ ನೀರಾವರಿ ಯೋಜನೆಯ ಯಶಸ್ಸಿನಿಂದ ಪ್ರೇರಣೆಗೊಂಡು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಸುತ್ತೂರು ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಸುತ್ತೂರು ಬಳಿ ಕಪಿಲಾ ನದಿಯಿಂದ ನೀರನ್ನು ಮೇಲಕ್ಕೆತ್ತಿ ನಂಜನಗೂಡು ತಾಲ್ಲೂಕಿನ ಎರಡು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕುಗಳ 22 ಕೆರೆ ಸೇರಿದಂತೆ ಒಟ್ಟು 24 ಕೆರೆಗಳನ್ನು ತುಂಬಿಸುವುದು ಈ ಯೋಜನೆಯ ಉದ್ದೇಶ.2017ರ ಜುಲೈನಲ್ಲಿ ₹223 ಕೋಟಿ ವೆಚ್ಚದ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು.

ದಶಕದ ಹೋರಾಟ: ಒಂದು ಕಾಲದಲ್ಲಿ ಉಮ್ಮತ್ತೂರು ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿಗೆ ನೀರು ಉಣಿಸುತ್ತಿದ್ದ ಉಮ್ಮತ್ತೂರು ದೊಡ್ಡಕೆರೆ 258 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.

ನಂಜನಗೂಡು, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ 20 ಕೆರೆಗಳಿಗೆ ನಂಜನಗೂಡು ತಾಲ್ಲೂಕಿನ ಆಲಂಬೂರಿನಿಂದ ಕಬಿನಿ ನದಿಯಿಂದ ನೀರು ತುಂಬಿಸುವ ಯೋಜನೆಗೆ 2012ರಲ್ಲಿ ಚಾಲನೆ ನೀಡಿದ್ದ ಸಂದರ್ಭದಲ್ಲಿಉಮ್ಮತ್ತೂರಿನಲ್ಲೂ ಕೆರೆ ತುಂಬಿಸುವ ಹೋರಾಟ ಚಿಗುರೊಡೆದಿತ್ತು.2014ರ ಆಗಸ್ಟ್‌ ತಿಂಗಳಲ್ಲಿ ಕೆರೆಗಳಿಗೆ ನೀರು ಹರಿಯಲು ಆರಂಭವಾದ ನಂತರ ಹೋರಾಟ ಕಾವು ಪಡೆದಿತ್ತು.

ಯೋಜನೆ ಘೋಷಿಸಿ, ಕಾಮಗಾರಿಗೆ ಆರಂಭಕ್ಕೆ ವಿಳಂಬವಾಗುತ್ತಿದ್ದಂತೆಯೇ ಚಳವಳಿ ತೀವ್ರ ಸ್ವರೂಪ ಪಡೆದಿತ್ತು. ಗ್ರಾಮಸ್ಥರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಕೆರೆಯ ಮಗ್ಗುಲಲ್ಲಿರುವ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಮುಂಭಾಗ ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ಆರಂಭಿಸಿದ್ದರು. ಈಗಿನ ಶಾಸಕ ಎನ್.ಮಹೇಶ್ ಅವರು ಆಗ ಬಿಎಸ್‌ಪಿಯಲ್ಲಿದ್ದರು. ತಮ್ಮ ಕಾರ್ಯಕರ್ತರೊಂದಿಗೆ ಸಂತೇಮರಹಳ್ಳಿಯಿಂದ ಪಾದಯಾತ್ರೆ ಆರಂಭಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

ಅಂದಿನ ಶಾಸಕ ಎಸ್.ಜಯಣ್ಣ, ಸಂಸದರಾಗಿದ್ದ ಆರ್.ಧ್ರುವನಾರಾಯಣ ಮತ್ತು ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬಂದು ಮನವೊಲಿಸಲು ಯತ್ನಿಸಿದ್ದರೂ ಗ್ರಾಮಸ್ಥರು ಹಾಗೂ ರೈತ ಮುಖಂಡರು ಪಟ್ಟು ಸಡಿಲಿಸಿರಲಿಲ್ಲ. ತಮ್ಮ ಸರ್ಕಾರದ ಅವಧಿ ಮುಗಿಯುವ ಹೊತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮಕ್ಕೆ ಆಗಮಿಸಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದರು.

ಕಾಮಗಾರಿ ವಿಳಂಬದಿಂದ ಬೇಸತ್ತ ಗ್ರಾಮಸ್ಥರು, ಈ ವರ್ಷಾರಂಭದಲ್ಲಿ ಮತ್ತೆ ಹೋರಾಟ ಆರಂಭಿಸಿದರು ಫೆ.15ರಂದು ಗ್ರಾಮಸ್ಥರು ಹಾಗೂ ರೈತ ಮುಖಂಡರು ಬೃಹತ್‌ ರ‍್ಯಾಲಿ ನಡೆಸಿ ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಿದ್ದರು. ಈ ಸಂದರ್ಭದಲ್ಲಿ ಏಪ್ರಿಲ್‌ ಒಳಗಾಗಿ ಕೆರೆಗೆ ನೀರು ಹರಿಸುವ ಭರವಸೆಯನ್ನು ಸಚಿವರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನೀಡಿದ್ದರು. ಆದರೆ, ಹೇಳಿದ ಸಮಯಕ್ಕೆ ನೀರು ಹರಿದಿರಲಿಲ್ಲ. ಜೂನ್‌ ತಿಂಗಳಲ್ಲಿ ಸಭೆ ಸೇರಿದ ಗ್ರಾಮಸ್ಥರು ಒಂದು ತಿಂಗಳ ಗಡುವು ನೀಡಿದ್ದರು. ಅದೂ ನಡೆಯದಿದ್ದಾಗ ಮತ್ತು ಹೋರಾಟಕ್ಕೆ ಮುಂದಾಗಿದ್ದರು. ಅಷ್ಟರಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಆಗಸ್ಟ್‌ 31ರೊಳಗೆ ನೀರು ಹರಿಸುವ ಭರವಸೆ ನೀಡಿತ್ತು.

ಗಂಗಾ ಪೂಜೆ ಇಂದು, ನೀರು ಬಾರದಿದ್ದರೆ ಹೋರಾಟದ ಎಚ್ಚರಿಕೆ

ಈ ಮಧ್ಯೆ, ಕಾವೇರಿ‌ ನೀರಾವರಿ ನಿಗಮದ ಅಧಿಕಾರಿಗಳು ಮಂಗಳವಾರ ಪ್ರಾಯೋಗಿಕವಾಗಿ ನೀರು ಹರಿಸಲು ಚಾಲನೆ ನೀಡಿದ್ದಾರೆ.‌ ತಾಂತ್ರಿಕ ಕಾರಣದಿಂದ ಬುಧವಾರ ಸಂಜೆಯವರೆಗೂ ನೀರು‌ಕೆರೆಗೆ ತಲುಪಿಲ್ಲ.

ಗುರುವಾರ ಬೆಳಿಗ್ಗೆ ಗಂಗಾಪೂಜೆ ನೆರವೇರಿಸೋಣ ಎಂದು ಶಾಸಕ ಎನ್.ಮಹೇಶ್ ಹೇಳಿದ್ದು. ಗ್ರಾಮಸ್ಥರು ಅದಕ್ಕೆ ಸಿದ್ಧತೆ ನಡೆಸಿದ್ದಾರೆ.

'ಗುರುವಾರ 10 ಗಂಟೆಗೆ ಗಂಗಾ ಪೂಜೆ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಅದರಿಂದ ಮೊದಲು ನೀರು ಹರಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಒಂದು ವೇಳೆ ನೀರು ಬಾರದಿದ್ದರೆ ಶಾಸಕರ ನೇತೃತ್ವದಲ್ಲೇ ಚಳವಳಿ ನಡೆಸಲಾಗುವುದು’ ಎಂದು ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಧಿಕಾರಿಗಳು ಮೊದಲೇ ಪ್ರಾಯೋಗಿಕವಾಗಿ ನೀರು ಹರಿಸಬೇಕಿತ್ತು. ಈಗ ನಮ್ಮ ಹೋರಾಟಕ್ಕೆ ಮಣಿದು ತರಾತುರಿಯಲ್ಲಿ ಮಾಡುತ್ತಿದ್ದಾರೆ. ಹಾಗಾಗಿ, ಸಮಸ್ಯೆಯಾಗಿದೆ. ನೀರು ಹರಿಸದಿದ್ದರೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಅವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT