ಸೋಮವಾರ, ಜನವರಿ 18, 2021
25 °C
ಕಾರ್ಯಕರ್ತರ ನಡುವೆ ತಿಕ್ಕಾಟ, ಗೊಂದಲ ಬೇಡ–ಪರಿಮಳ ನಾಗಪ್ಪ

ಹನೂರು: ತಾಲ್ಲೂಕು ಬಿಜೆಪಿಗೆ ನಾಯಕರಾರು?

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿರುವ ಬೆನ್ನಲ್ಲೇ, ಪಕ್ಷದ ಕಾರ್ಯಕರ್ತರಲ್ಲಿ ಎರಡು ಗುಂಪುಗಳ ನಡುವೆ ತಿಕ್ಕಾಟಕ್ಕೆ ಆರಂಭವಾಗಿದೆ. 

ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಾರಣ ಯಾರು ಹಾಗೂ ಹನೂರು ತಾಲ್ಲೂಕಿನಲ್ಲಿ ಪಕ್ಷದ ನಾಯಕ ಯಾರು ಎಂಬ ಪ್ರಶ್ನೆಗಳು ಕಾರ್ಯಕರ್ತರಲ್ಲಿ ಉದ್ಭವವಾಗಿವೆ.

ಪರಿಮಳಾ ನಾಗಪ್ಪ ಹಾಗೂ ಅವರ ಮಗ ಡಾ.ಪ್ರೀತನ್ ‌ನಾಗಪ್ಪ ಅವರು ಕ್ಷೇತ್ರದಲ್ಲಿ ಬಿಜೆಪಿ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಡಾ.ಪ್ರೀತನ್ ನಾಗಪ್ಪ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಗ್ರಾಮಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಗ್ರಾಮಗಳಿಗೆ ತೆರಳಿ ತಮ್ಮ ಬೆಂಬಲಿಗರ ಪರ ಮತಯಾಚನೆಯನ್ನೂ ಮಾಡಿದ್ದಾರೆ. ಪರಿಮಳಾ ನಾಗಪ್ಪ ಅವರು ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. 

ಇದರ ನಡುವೆ, ಜನಾಶ್ರಯ ಟ್ರಸ್ಟ್‌ನ ವೆಂಕಟೇಶ್‌ ಅವರು ಕೂಡ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮಹದೇಶ್ವರ ಬೆಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ಗೆದ್ದಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಬುಧವಾರ ಅವರು ಸನ್ಮಾನವನ್ನೂ ಮಾಡಿದ್ದಾರೆ. 

ಈ ಬಾರಿ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲು ವೆಂಕಟೇಶ್ ಕಾರಣ ಎಂದು ಅವರ ಹಿಂಬಾಲಕರು ವಾದಿಸಿದರೆ, ಪರಿಮಳಾ ನಾಗಪ್ಪ ಹಾಗೂ ಡಾ.ಪ್ರೀತನ್ ನಾಗಪ್ಪ ಅವರ ವರ್ಚಸ್ಸು ಕಾರಣ ಎಂದು ಇನ್ನೊಂದು ಬಣ ವಾದಿಸುತ್ತಿದೆ. 

ಹೊಸದೇನಲ್ಲ: 2018ರ ವಿಧಾನಸಭೆ ಚುನಾವಣೆಗೂ ಮುನ್ನ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹರಿದು ಹಂಚಿ ಹೋಗಿದ್ದರು. ಮೇಲಿಂದ ಮೇಲೆ, ತಾನು ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಹನೂರು ಕ್ಷೇತ್ರಕ್ಕೆ ಹಲವರು ಬಂದಿದ್ದರು. ನಾಲ್ಕೈದು ವರ್ಷಗಳಿಂದೀಚೆಗೆ ನಾಲ್ಕು ಜನರು ‘ನಾನೇ ಮುಂದಿನ ಬಿಜೆಪಿ ಅಭ್ಯರ್ಥಿ’ ಎಂದು ಘೋಷಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. 

ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಮೂರು ವರ್ಷಗಳ ಹಿಂದೆ ರಾಜೇಂದ್ರಕುಮಾರ್ ಎಂಬುವವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಾನೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದರು. ಇದರ ಮಧ್ಯೆ ಈಗಿನ ಜೆಡಿಎಸ್ ಮುಖಂಡ ಮಂಜುನಾಥ್ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆ ಬಳಿಕ ಅವರು ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದರು. ನಂತರ ಮುನಿರಾಜು ಎಂಬುವವರು ಮುಂದಿನ ಬಿಜೆಪಿ ಅಭ್ಯರ್ಥಿ ಎನ್ನುವಷ್ಟರ ಮಟ್ಟಿಗೆ ಕೆಲವು ದಿನಗಳ ಕಾಲ ಕ್ಷೇತ್ರದಾದ್ಯಂತ ಸುತ್ತಾಡಿದ್ದರು.

ಈಗ ವೆಂಕಟೇಶ್ ಅವರು ಮುನ್ನಲೆಗೆ ಬಂದಿದ್ದಾರೆ. ಅವರು ಜನಾಶ್ರಯ ಟ್ರಸ್ಟ್‌ ಮೂಲಕ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. 

‘ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ನನ್ನನ್ನು ಇಲ್ಲಿನ ಜನರು ಅಪ್ಪಿಕೊಂಡಿದ್ದಾರೆ. ಹನೂರಿನಲ್ಲಿ ಬಿಜೆಪಿಗೆ ನಾಯಕರ ಅವಶ್ಯಕತೆ ಇದೆ. ಆ ಕಾರಣಕ್ಕೆ ಹನೂರು ಕ್ಷೇತ್ರದ ಜನರು ನನ್ನನ್ನು ಒಪ್ಪಿಕೊಂಡಿದ್ದಾರೆ’ ಎಂದು ವೆಂಕಟೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.  

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕಿ ಪರಿಮಳಾ ನಾಗಪ್ಪ ಅವರು, ‘ಇದುವರೆಗೆ ಹನೂರು ಕ್ಷೇತ್ರದಲ್ಲಿ ‘ನಾನೇ ಮುಂದಿನ ಬಿಜೆಪಿ ಅಭ್ಯರ್ಥಿ’ ಎಂದು ಮೂವರು ಪ್ರಚಾರ ಮಾಡಿ ಹೋಗಿದ್ದಾರೆ. ಈಗ ನಾಲ್ಕನೆಯವರು ಮಾಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರು ಯಾರು ಗೊಂದಲಕ್ಕೀಡಾಗಬೇಕಿಲ್ಲ. ವರಿಷ್ಠರು ನೀಡಿದ ಜವಾಬ್ದಾರಿಯನ್ನು ನಾನು ನಿಷ್ಠೆಯಿಂದ ಮಾಡಿದ್ದೇನೆ. ‘ನಾನೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದೆ’ ಎಂದು ಹೇಳಿಕೊಂಡು ಅವರು ತಿರುಗಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ದೊರೆಯಲಿದೆ’ ಎಂದರು.

ವೆಂಕಟೇಶ್‌ಗೂ ಪಕ್ಷಕ್ಕೂ ಸಂಬಂಧವಿಲ್ಲ: ಆರ್‌.ಸುಂದರ್‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಅವರು, ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹನೂರು ಭಾಗದಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ಪರಿಮಳಾ ನಾಗಪ್ಪ ಹಾಗೂ ದತ್ತೇಶ್‌ ಕುಮಾರ್‌ ಅವರಿಗೆ ನೀಡಲಾಗಿತ್ತು. ಅವರು ಚೆನ್ನಾಗಿ ಕೆಲಸ ಮಾಡಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಂತೆ ಮಾಡಿದ್ದಾರೆ. ವೆಂಕಟೇಶ್‌ ಯಾರು ಎಂದು ಗೊತ್ತಿಲ್ಲ. ಪಕ್ಷ ಅವರಿಗೆ ಯಾವುದೇ ಜವಾಬ್ದಾರಿ ನೀಡಿಲ್ಲ. ಪಕ್ಷದ ಕಾರ್ಯಕರ್ತರು ಅವರೊಂದಿಗೆ ಇದ್ದಾರೆ ಎಂದ ಮಾತ್ರಕ್ಕೆ ಅವರು ನಾಯಕರಾಗುವುದಿಲ್ಲ. ಟ್ರಸ್ಟ್‌ ಅಡಿಯಲ್ಲಿ ಅವರು ಜನ ಸೇವೆ ಮಾಡಿದರೆ ಅದಕ್ಕೆ ಬೇಡ ಎನ್ನಲು ನಾವು ಯಾರು? ಪಕ್ಷಕ್ಕೂ ಅವರಿಗೂ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು