ಯಳಂದೂರು: ತಾಲ್ಲೂಕಿನಲ್ಲಿ ಮೂವತ್ತಕ್ಕೂ ಹೆಚ್ಚು ಕೆರೆ-ಕಟ್ಟೆ, ಸಣ್ಣ ಪುಟ್ಟ ಅಣೆಕಟ್ಟು ಕಟ್ಟಿ, ನೀರಿನ ಅಗತ್ಯತೆ ಅರಿತು ಯೋಜನೆ ರೂಪಿಸಿದವರು ದಿವಾನರು. ಜಲ ಪರಂಪರೆಗೆ ಮುನ್ನಡಿ ಬರೆದ ಪೂರ್ಣಯ್ಯ ಅವರ ದೂರದೃಷ್ಟಿಯೇ ಜಲ ಮೂಲಗಳು ಉಳಿಯಲು ಕಾರಣ. ಆದರೆ, ಇಂದು ಜಲಾವರಗಳು ಹೂಳು, ಕಳೆ ಗಿಡಗಳಿಂದ ತುಂಬಿವೆ. ನೀರನ್ನು ಹಿಡಿದಿಡುವ ಪ್ರಯತ್ನ ಇನ್ನೂ ಸಾಧ್ಯವಾಗಿಲ್ಲ.
ದೇಶದಲ್ಲಿ ಶುದ್ಧ ನೀರಿಗೆ ಮಣ್ಣಿಗಿಂತ ಶ್ರೇಷ್ಠ ಸ್ಥಾನ ನೀಡಲಾಗಿದೆ. ಇಲ್ಲಿನವರ ಕೃಷಿ ಮಳೆಯೊಡನೆ ಆಡುವ ಜೂಜಾಟ ಎಂಬುದು ಕೃಷಿ ಪಂಡಿತರ ಲೆಕ್ಕಾಚಾರ. ಆದರೆ, ಕಾಲುವೆ, ಕೆರೆ-ಕಟ್ಟೆ ಇದ್ದರೂ ಮುಂಗಾರು ಮಳೆಯತ್ತ ಮುಖ ಮಾಡುವುದು ಹಿಡುವಳಿದಾರರಿಗೆ ತಪ್ಪಿಲ್ಲ. ನೀರಿನ ಹರಿವನ್ನು ಜತನದಿಂದ ನಿಲ್ಲಿಸಿ, ಇಂಗಿಸಿ, ಅಂತರ್ಜಲ ಹೆಚ್ಚಿಸುವ ಬಗ್ಗೆ ಜನ ಸಮುದಾಯ ಇನ್ನೂ ಮನಸ್ಸು ಮಾಡಿಲ್ಲ. ಕಳೆದ ವರ್ಷದ ಅತಿವೃಷ್ಟಿಗೆ ನಲುಗಿದ ಪ್ರದೇಶದಲ್ಲೂ ಬೇಸಿಗೆಯಲ್ಲಿ ಮಳೆರಾಯನ ಆಗಮನಕ್ಕೆ ಮುಗಿಲು ನೋಡಬೇಕಿದೆ.
‘ಈ ಬಾರಿ ವರ್ಷಪೂರ್ತಿ ಸುವರ್ಣಾವತಿ ನದಿಯಲ್ಲಿ ನೀರು ಹರಿದಿದೆ. ಕಾಡು ಪ್ರದೇಶದಲ್ಲಿ ನೀರು ಭೋರ್ಗರೆದಿದೆ. ಕಾಲುವೆ, ಕೊಳವೆಗಳಲ್ಲಿ ನೀರಿನ ಸೆಲೆ ವೃದ್ಧಿಸಿದೆ. ಆದರೆ, ಕಳೆದ ವರ್ಷ ಅತಿಯಾದ ನೆರೆಗೆ ಜನಜೀವನ ತಲ್ಲಣಿಸಿತು. ಫಸಲು ಕೈಸೇರದಾಯಿತು. ಅಸಮರ್ಪಕ ನೀರಿನ ನಿರ್ವಹಣೆಯಿಂದ ಮಳೆ, ಪ್ರವಾಹದ ನೀರು ಸಮುದ್ರ ಸೇರಿತು. ಹೆಚ್ಚಾದ ನೀರನ್ನು ಧರೆಗೆ ಇಳಿಸುವ, ಕೆರೆಯಲ್ಲಿ ಸಂಗ್ರಹಿಸುವ ಅವಕಾಶ ಕೈತಪ್ಪಿತು’ ಎಂದು ಕೃಷಿಕ ಅಂಬಳೆ ಶಿವಶಂಕರಮೂರ್ತಿ ಹೇಳಿದರು.
‘ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಇನ್ನೂ ನೀರಿನ ಪೋಲು ತಪ್ಪಿಸಲಾಗಿಲ್ಲ. ನೀರಿನ ನಳಗಳ ನಿರ್ವಹಣೆಗೆ ಒತ್ತು ನೀಡುತ್ತಿಲ್ಲ. ತೊಂಬೆ ಇಲ್ಲವೇ ಟ್ಯಾಂಕರ್‌ಗಳಲ್ಲಿ ನೀರು ತುಂಬಿ ಸುರಿಯುತ್ತಿದೆ. ಹಾಗಾಗಿ, ಜೀವಜಲ ಉಳಿಸುವತ್ತ ಎಲ್ಲರೂ ಚಿಂತಿಸಬೇಕು’ ಎನ್ನುತ್ತಾರೆ ಮಾಂಬಳ್ಳಿಯ ಶಕೀಲ್ ಅಹಮದ್.
ಮನೆಮನೆಗೆ ಗಂಗೆ: ಎಲ್ಲ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಜಾರಿಗೊಳಿಸಿದೆ. 2024ರ ವೇಳೆಗೆ ಶುದ್ಧ ನೀರು ಪೂರೈಸುವ ಗುರಿ ಹೊಂದಲಾಗಿದೆ. ತಾಲ್ಲೂಕಿನ 28ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳಿಗೆ ನೀರೊದಗಿಸುವ ಕಾಯಕ ಪ್ರಗತಿಯಲ್ಲಿ ಇದೆ. ಕೆಲವು ಊರುಗಳಲ್ಲಿ ನೀರು ಉಕ್ಕಿದ್ದು, ಜನ ಸಮುದಾಯ ಪೂಜೆ ನೆರವೇರಿಸಿ ಸಂಭ್ರಮಿಸಿದ್ದಾರೆ.
‘ಗ್ರಾಮಗಳಲ್ಲಿ ಇನ್ನೂ ನೈರ್ಮಲ್ಯ ಕೊರತೆ ಹಾಗೂ ಅಸುರಕ್ಷಿತ ನೀರಿನ ಸೇವನೆ ಮುಂದುವರಿದಿದ್ದು, ನೀರಿನ ಮಿತ ಬಳಕೆ ಬಗ್ಗೆ ಅರಿವು ಮೂಡಿಸಬೇಕಾದ ತುರ್ತು ಎದುರಾಗಿದೆ’ ಎಂದು ಮಲ್ಲಿಗೆಹಳ್ಳಿ ಮಹೇಶ್ ಹೇಳಿದರು.
ಜೀವಜಲ ಉಳಿಸಲು ಸಕಾಲ
ನೀರಿನ ನಿರ್ಣಾಯಕ ಪ್ರಾಮುಖ್ಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಜಲ ದಿನ ಆಚರಿಸಲಾಗುತ್ತದೆ.
ನೀರಿನ ಮಿತ ಬಳಕೆ. ಸಮರ್ಥ ಸರಬರಾಜಿನ ಬಗ್ಗೆ ಶಿಕ್ಷಣವನ್ನು ಹರಡುವ ಸಮಯ ಇದಾಗಿದೆ. ಜಾಗತಿಕ ನೀರಿನ ಸಮಸ್ಯೆಗಳನ್ನು ಅರಿತು, ವಿಶ್ವಾಸಾರ್ಹ ನೀರಿನ ಬಳಕೆ ಆಗಬೇಕಿದೆ. ‘ನೀರು ಮತ್ತು ಅನೈರ್ಮಲ್ಯದ ಬಿಕ್ಕಟ್ಟನ್ನು ಬಗೆಹರಿಸಲು ಬದಲಾವಣೆಗಳನ್ನು ವೇಗಗೊಳಿಸಿ’ ಎಂಬುದು ಈ ಬಾರಿಯ ಜಲದಿನದ ಧ್ಯೇಯವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.