ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2500 ಹೆಕ್ಟೇರ್‌ನಲ್ಲಿ ಕಬ್ಬು ನಾಟಿಗೆ ಸಿದ್ಧತೆ

ತಾಲ್ಲೂಕಿನಲ್ಲಿ ಭರ್ಜರಿ ಆಶ್ಲೇಷ ಮಳೆ: ವಿಸಿಎಫ್ 517 ಕಬ್ಬು ಬಿತ್ತನೆಗೆ ಒಲವು
Published 15 ಆಗಸ್ಟ್ 2024, 8:04 IST
Last Updated 15 ಆಗಸ್ಟ್ 2024, 8:04 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆ ಲಭಿಸುತ್ತಿರುವುದರಿಂದ ಬೆಳೆಗಾರರು ಕಬ್ಬು ಕೃಷಿ ವಿಸ್ತರಿಸುತ್ತಿದ್ದು, ಬಿತ್ತನೆ ಕಬ್ಬಿಗೆ ಬೇಡಿಕೆ ಹೆಚ್ಚಿದೆ. ನಾಟಿಗೆ ಹೊಸ ತಳಿ ಬಿತ್ತನೆ ಕಬ್ಬಿನತ್ತ ಕೃಷಿಕರು ಒಲವು ತೋರಿದ್ದಾರೆ.

ತಾಲ್ಲೂಕಿನ ಕೃಷಿ ಭೂಮಿ 10.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ಕಬ್ಬು ಬಿತ್ತನೆ ಪ್ರದೇಶ 3 ಸಾವಿರ ಹೆಕ್ಟೇರ್‌ ಇದೆ. ಆದರೆ, ಎರೆಡು ವರ್ಷಗಳಿಂದ ಬರ ಮತ್ತು ನೆರೆಯಿಂದ ತತ್ತರಿಸಿದ್ದ ರೈತರು ಕಬ್ಬು ಸಾಗುವಳಿ ಕೈಬಿಟ್ಟಿದ್ದರು.  ಈ ಬಾರಿ  ಮಳೆ ನಿರೀಕ್ಷೆಯೊಂದಿಗೆ ಬಹುಬೇಗ ಕಟಾವಿಗೆ ಬರುವ ಹೈಬ್ರೀಡ್ ತಳಿ ವಿಸಿಎಫ್ 517ನಂಥ ಕಬ್ಬು ಬಿತ್ತನೆಗೆ ಸಜ್ಜಾಗಿದ್ದಾರೆ.

 ಆಶ್ಲೇಷ ಮಳೆ ಬೇಸಾಯಗಾರರಲ್ಲಿ ಭರವಸೆ ಮೂಡಿಸಿದೆ. ಜೊತೆಗೆ ಕಬಿನಿ ಕಾಲುವೆಯಲ್ಲಿ ನಿರೀಕ್ಷೆಗಿಂತ ಮೊದಲೇ ನೀರು ಹರಿದಿದೆ. ಕೊಳವೆ ನೀರಾವರಿ ಮತ್ತು ಕೆರೆ ಅಚ್ಚುಕಟ್ಟು ಪ್ರದೇಶವೂ ಬೆಳೆಗಾರರ ಕೈಹಿಡಿಯಲಿದೆ. ಕಬ್ಬಿನ ಬೆಳೆ ನಿರ್ವಹಣೆಯೂ ಸುಲಭ ಹಾಗೂ ಉತ್ತಮ ಬೆಲೆ ಇದ್ದಾಗ ಕಟಾವು ಮಾಡಬಹುದು. ಹಾಗಾಗಿ, ಬಿತ್ತನೆ ಕಬ್ಬಿಗೆ ರೈತರು ಹುಡುಕಾಟ ಆರಂಭಿಸಿದ್ದಾರೆ ಎಂದು ಗೌಡಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಕೃಷಿಕ ನಂಜದೇವರು ಹೇಳಿದರು.

‘ಕಬ್ಬು ವಾರ್ಷಿಕ ಬೆಳೆ. ಗುಣಮಟ್ಟದ ಕಬ್ಬನ್ನು 9 ರಿಂದ 10 ತಿಂಗಳಿಗೆ ಕೊಯ್ಲು ಮಾಡಬಹುದು. ಕಬ್ಬನ್ನು ಆಲೆಮನೆಗೆ ಸಾಗಿಸಿ ಬೆಲ್ಲ ತಯಾರಿಸಬಹುದು. ಸಕ್ಕರೆ ಕಾರ್ಖಾನೆಗೂ ಪೂರೈಸಬಹುದು. ನಿರ್ವಹಣೆಯೂ ಸುಲಭ’ ಎನ್ನುತ್ತಾರೆ ಮದ್ದೂರು ಗ್ರಾಮದ ರೈತ ರಾಜೇಶ್.

‘ವಿಸಿಎಫ್ 517 ತಳಿಗೆ ಬೇಡಿಕೆ’

ವಿಸಿ ಫಾರಂನ ಕೃಷಿ ವಿಜ್ಞಾನಿ ಸ್ವಾಮಿಗೌಡ ನೇತೃತ್ವದ ತಂಡ ಅಭಿವೃದ್ಧಿ ಪಡಿಸಿರುವ ವಿಸಿಎಫ್ 517 ತಳಿಯ ಕಬ್ಬು ಎಕರೆಗೆ ಶೇ 10 ರಷ್ಟು ಹೆಚ್ಚು ಇಳುವರಿ ನೀಡುತ್ತದೆ. ಕ್ವಿಂಟಲ್‌ಗೆ ಶೇ 10 ಸಕ್ಕರೆ ಉತ್ಪಾದನೆ ಆಗಲಿದೆ. ಈ ತಳಿ ಇಲ್ಲಿನ ಹವಾಮಾನಕ್ಕೆ ಸೂಕ್ತವಾಗಿದ್ದು 12 ಅಡಿಗಿಂತ ಹೆಚ್ಚು ಎತ್ತರ ಬೆಳೆಯುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು ರೈತರು ಈಗಾಗಲೇ ಬೆಳೆದಿರುವ ಕಬ್ಬನ್ನು ನಾಟಿಗೆ ನೀಡುತ್ತಿದ್ದಾರೆ. ಜುಲೈ ಅಂತ್ಯದಲ್ಲಿ 1450 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿತ್ತನೆಯಾಗಿದ್ದು. ಆಗಸ್ಟ್ ಅಂತ್ಯಕ್ಕೆ 2500 ಹೆಕ್ಟೇರ್‌ಗೆ ವಿಸ್ತರಿಸಲಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT