ಮಂಗಳವಾರ, ಮೇ 18, 2021
28 °C
ಬಟ್ಟೆ ಖರೀದಿ ಜೋರು, ತರಕಾರಿ ಹಣ್ಣುಗಳ ಬೆಲೆಯಲ್ಲಿ ಆಗದ ವ್ಯತ್ಯಾಸ

ಯುಗಾದಿ ಸಂಭ್ರಮ: ಹೂವು ಬಲು ತುಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಎರಡನೇ ಅಲೆ ಭೀತಿಯ ನಡುವೆಯೇ, ಬೇವು ಬೆಲ್ಲದ ಹಬ್ಬ ಯುಗಾದಿ ಹಬ್ಬದ ಆಚರಣೆಗೆ ಜನರು ಸಿದ್ಧತೆ ಮಾಡಿಕೊಂಡಿದ್ದು, ಮಾರುಕಟ್ಟೆಯಲ್ಲಿ ಹೂವಿನ ಧಾರಣೆ ಏರಿಕೆ ಕಂಡಿದೆ.

ಹಬ್ಬಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಬಾರಿ ಹೂವು ಬಿಟ್ಟು ತರಕಾರಿ, ಹಣ್ಣುಗಳ ಧಾರಣೆಯಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ. 

ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹೊಸ ವರ್ಷವಾಗಿರುವುದರಿಂದ ಕರಾವಳಿ ಭಾಗದಲ್ಲಿ ಬಿಟ್ಟು ಉಳಿದ ಎಲ್ಲ ಕಡೆಗಳಲ್ಲಿ ಈ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ (ಇದನ್ನು ವಿಷು ಹಬ್ಬ ಎಂದು ಕರೆಯಲಾಗುತ್ತದೆ). 

ಯುಗಾದಿಯಲ್ಲಿ ಪೂಜೆ ಪುನಸ್ಕಾರಗಳಿಗೆ ಪ್ರಾಮುಖ್ಯ ಇರುವುದರಿಂದ ಹೂವುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ದರದಲ್ಲೂ ಏರಿಕೆ ಕಂಡು ಬರುತ್ತದೆ. 

ಬಿಡಿ ಹೂವುಗಳ ಮಾರುಕಟ್ಟೆಯಲ್ಲಿ ಕಳೆದವಾರದ ಧಾರಣೆಗೆ ಹೋಲಿಸಿದರೆ ಈ ವಾರ ಎಲ್ಲ ಹೂವುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಹಬ್ಬ ಮುಗಿದು ಎರಡು ಮೂರು ದಿನಗಳ ಕಾಲ ಇದೇ ಬೆಲೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ವ್ಯಾಪಾರಿಗಳು. 

ಕಳೆದ ವಾರ ₹400 ಇದ್ದ ಕೆಜಿ ಕನಕಾಂಬರ, ಈ ವಾರ ₹600 ಆಗಿದೆ. ₹240 ಇದ್ದ ಮಲ್ಲಿಗೆ, ಕಾಕಡದ ಬೆಲೆ ₹400 ಆಗಿದೆ. ಸುಗಂಧರಾಜ ಹೂವಿಗೆ ಕೆಜಿಗೆ ₹160ರಿಂದ ₹200ವರೆಗೆ ಇದೆ. ₹100ರಷ್ಟಿದ್ದ ಕೆಜಿ ಸೇವಂತಿಗೆ ₹200ರಿಂದ ₹240 ಆಗಿದೆ. ಚೆಂಡು ಹೂವಿನ ಬೆಲೆ ₹10ರಿಂದ ₹40ಕ್ಕೆ ಏರಿದೆ. 

‘ಹಬ್ಬದ ಸಮಯದಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ. ಹಬ್ಬಕ್ಕೆ ಒಂದೆರಡು ದಿನದ ಮೊದಲು ಹಾಗೂ ಹಬ್ಬ ಕಳೆದ ಒಂದೆರಡು ದಿನಗಳ ವರೆಗೆ ಬೆಲೆ ಹೆಚ್ಚಿರುತ್ತದೆ. ಯುಗಾದಿ ಕಾರಣಕ್ಕೆ ಹೂವನ್ನು ಖರೀದಿಸುವವರು ಹೆಚ್ಚಾಗಿದ್ದಾರೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಬೀನ್ಸ್‌ ತುಟ್ಟಿ: ಹಬ್ಬದ ಕಾರಣದಿಂದಾಗಿ ತರಕಾರಿಗಳ ಪೈಕಿ ಬೀ‌ನ್ಸ್‌ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಹಾಪ್‌ಕಾಮ್ಸ್‌ನಲ್ಲಿ ಕಳೆದವಾರದವರೆಗೂ ಬೀನ್ಸ್‌ ಬೆಲೆ ಕೆಜಿಗೆ ₹40 ಇತ್ತು. ಈ ವಾರ ₹60ಕ್ಕೆ ತಲುಪಿದೆ.  ₹50 ಇದ್ದ ಹಸಿಮೆಣಸಿನಕಾಯಿ ಬೆಲೆ ₹55ಕ್ಕೆ ಏರಿದೆ. ಉಳಿದಂತೆ ಯಾವ ತರಕಾರಿಗಳ ಬೆಲೆಯಲ್ಲೂ ವ್ಯತ್ಯಾಸವಾಗಿಲ್ಲ. 

‘ಟೊಮೆಟೊ, ಕ್ಯಾರೆಟ್‌, ಈರುಳ್ಳಿಯ ದರ ಯಥಾಸ್ಥಿತಿ ಮುಂದುವರಿದಿದೆ. ಹಬ್ಬದ ಸಂದರ್ಭದಲ್ಲಿ ಬೀನ್ಸ್‌ಗೆ ಹೆಚ್ಚು ಬೇಡಿಕೆ ಕಂಡು ಬಂದಿದ್ದು, ಪೂರೈಕೆ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ತಿಳಿಸಿದರು.

ಬಟ್ಟೆ ಖರೀದಿ ಜೋರು

ಯುಗಾದಿ ದಿನ ಮಕ್ಕಳು, ಮಹಿಳೆಯರು ಹೊಸ ಬಟ್ಟೆ ಧರಿಸಿ ಹಬ್ಬ ಆಚರಿಸುವುದು ವಾಡಿಕೆ. ಹೀಗಾಗಿ, ಹಬ್ಬಕ್ಕೂ ಮೊದಲು ಹೊಸ ಬಟ್ಟೆಗಳ ಖರೀದಿ ಭರಾಟೆ ಜೋರಾಗಿರುತ್ತದೆ.

ಈ ಬಾರಿ ಅಂತಹ ಉತ್ಸಾಹ ಕಂಡು ಬಾರದಿದ್ದರೂ, ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಪ್ರಮುಖ ಜವಳಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಪೋಷಕರು ಮಕ್ಕಳಿಗಾಗಿ ಹೊಸ ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದು ಕಂಡು ಬಂತು. 

ಸರಳ ಆಚರಣೆಗೆ ಡಿ.ಸಿ ಮನವಿ

ಕೋವಿಡ್‌ ಪರಿಸ್ಥಿತಿಯ ಕಾರಣಕ್ಕೆ ಯುಗಾದಿ ಹಬ್ಬವನ್ನು ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ. 

‘ಯಾವುದೇ ಕಾರಣಕ್ಕೂ ಅನಗತ್ಯವಾಗಿ ಓಡಾಡಬೇಡಿ ಹಬ್ಬದ ಹೆಸರಿನಲ್ಲಿ ಮೈಮರೆಯುವುದು ಬೇಡ. ಎಲ್ಲರೂ ಮನೆಯಲ್ಲೇ ಇದ್ದು ಕುಟುಂಬದ ಸದಸ್ಯರೊಂದಿಗೆ ಯುಗಾದಿ ಆಚರಿಸಿ’ ಎಂದು ಫೇಸ್‌ಬುಕ್‌ ಪೈವ್‌ನಲ್ಲಿ ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.