ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುವನಿಧಿ: ಜಿಲ್ಲೆಯಲ್ಲಿ 1,016 ನೋಂದಣಿ

2023ರಲ್ಲಿ ತೇರ್ಗಡೆ ಹೊಂದಿದ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಅರ್ಹ
Published 13 ಜನವರಿ 2024, 4:50 IST
Last Updated 13 ಜನವರಿ 2024, 4:50 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಯುವನಿಧಿಗೆ ಶುಕ್ರವಾರ ಶಿವಮೊಗ್ಗದಲ್ಲಿ ಚಾಲನೆ ದೊರೆತಿದ್ದು, ಜಿಲ್ಲೆಯಲ್ಲಿ ಈವರೆಗೆ 1,016 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.   

ಡಿ.26ರಿಂದ ಆನ್‌ಲೈನ್‌ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 427 ಪದವೀಧರರು ನೋಂದಣಿ ಮಾಡಿಕೊಂಡಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 226, ಹನೂರಿನಲ್ಲಿ 138, ಕೊಳ್ಳೇಗಾಲದಲ್ಲಿ 149, ಯಳಂದೂರು ತಾಲ್ಲೂಕಿನಲ್ಲಿ 76 ಪದವೀಧರರು ನೋಂದಣಿಯಾಗಿದ್ದಾರೆ.

2023ರಲ್ಲಿ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್‌ ಪದವಿ ಕೋರ್ಸ್‌ಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಬಹುದು.

‘ಕೋರ್ಸ್‌ ಮುಗಿಸಿ ಆರು ತಿಂಗಳು ಕಳೆದರೂ ಉದ್ಯೋಗ ಸಿಗದೆ ಇರುವವವರಿಗೆ ಸರ್ಕಾರ ನಿರುದ್ಯೋಗ ಭತ್ಯೆ ನೀಡಲಿದೆ. ಪದವೀಧರರಿಗೆ ಮಾಸಿಕ ₹3,000, ಡಿಪ್ಲೊಮಾ ತೇರ್ಗಡೆಯಾದವರಿಗೆ ₹1,500 ಭತ್ಯೆ ಸಿಗಲಿದ್ದು, ಗರಿಷ್ಠ ಎರಡು ವರ್ಷಗಳ ಅವಧಿಗೆ ಸಿಗಲಿದೆ. ಈ ಅವಧಿಯಲ್ಲಿ ಉದ್ಯೋಗ ಸಿಕ್ಕರೆ ಫಲಾನುಭವಿಗಳಿಗೆ ಭತ್ಯೆ ಸ್ಥಗಿತಗೊಳ್ಳಲಿದೆ’ ಎಂದು ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

2,637 ಪದವೀಧರರು: ಜಿಲ್ಲೆಯಲ್ಲಿ 2023ರ ಸಾಲಿನಲ್ಲಿ 2,637 ಮಂದಿ ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಪೈಕಿ 210 ಎಂಜಿನಿಯರಿಂಗ್‌ ಮತ್ತು 226 ಡಿಪ್ಲೊಮಾ ವಿದ್ಯಾರ್ಥಿಗಳು. ಉಳಿದವರೆಲ್ಲರೂ ಪದವಿ ವಿದ್ಯಾರ್ಥಿಗಳು. ಈ ಪೈಕಿ 1,302 ಮಂದಿ ಪುರುಷರು ಮತ್ತು 1,335 ಮಹಿಳೆಯರು.

‘ಇವರಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಯುವನಿಧಿ ವ್ಯಾಪ್ತಿಗೆ ಬರುವುದಿಲ್ಲ. ಸ್ವಂತ ಉದ್ಯೋಗ ಮಾಡುತ್ತಿರುವವರು, ಕೆಲಸಕ್ಕೆ ಸೇರಿದವರಿಗೂ ನೋಂದಣಿಗೆ ಅವಕಾಶ ಇಲ್ಲ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವವರು ತಮ್ಮ ಆಧಾರ್‌, ಅಂಕಪಟ್ಟಿ ಹಾಗೂ ಇನ್ನಿತರ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ರಾಜ್ಯ ಮಟ್ಟದಲ್ಲೇ ಅದರ ಪರಿಶೀಲನೆ ನಡೆಯುತ್ತದೆ. ಎಲ್ಲವೂ ಸರಿ ಇದ್ದರೆ, ತಕ್ಷಣದಿಂದಲೇ ಫಲಾನುಭವಿಗಳ ಖಾತೆಗೆ ನೇರವಾಗಿ ಭತ್ಯೆ ಜಮೆಯಾಗಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

‘ನೋಂದಣಿಗೆ ಗಡುವು ನಿಗದಿ ಪಡಿಸಿಲ್ಲ. ಹಾಗಾಗಿ ಇನ್ನಷ್ಟು ಮಂದಿ ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಬೇರೆ ಜಿಲ್ಲೆಗಳಲ್ಲಿ ನಕಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಿರುವ ಬಗ್ಗೆ ಮಾಹಿತಿ ಇದೆ. ಒಂದು ವೇಳೆ ಆ ರೀತಿ ಮಾಡಿದರೆ ಪ‍ರಿಶೀಲನೆ ವೇಳೆ ಗೊತ್ತಾಗುತ್ತದೆ’ ಎಂದು ಮಲ್ಲೇಶ್‌ ತಿಳಿಸಿದರು. 

ನೋಂದಣಿ ಹೇಗೆ?

ಅಭ್ಯರ್ಥಿಗಳು https://sevasindhugs.karnataka.gov.in ಪೋರ್ಟಲ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಇದಲ್ಲದೇ ಕರ್ನಾಟಕ ಒನ್ ಬೆಂಗಳೂರು ಒನ್ ಗ್ರಾಮ ಒನ್ ಬಾಪೂಜಿ ಸೇವಾ ಕೇಂದ್ರಗಳಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.  ಎಸ್.ಎಸ್.ಎಲ್.ಸಿ ಪಿಯುಸಿ ಪದವಿ ಡಿಪ್ಲೊಮಾ ಪ್ರಮಾಣ ಪತ್ರ ಆಧಾರ್ ಕಾರ್ಡ್ ಪಡಿತರ ಚೀಟಿ ಅಭ್ಯರ್ಥಿಯ ಬ್ಯಾಂಕ್ ಪಾಸ್ ಪುಸ್ತಕ ಇತ್ಯಾದಿ ದಾಖಲೆಗಳು ಅಗತ್ಯ. ಬ್ಯಾಂಕ್‌ ಖಾತೆ ಸಕ್ರಿಯವಾಗಿರಬೇಕು. ಆಧಾರ್‌ ಸಂಖ್ಯೆ ಜೋಡಣೆ ಮೊಬೈಲ್‌ ಸಂಖ್ಯೆ ಜೋಡಣೆ ಎನ್‌ಸಿಪಿಐ ಮ್ಯಾಪಿಂಗ್‌ ಆಗಿರಬೇಕು. ಇಲ್ಲದಿದ್ದರೆ ತಾಂತ್ರಿಕ ತೊಂದರೆಯಿಂದ ಭತ್ಯೆ ಜಮೆಯಾಗದು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT