ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಟಿಕೆಟ್‌ಗಾಗಿ ಹೆಚ್ಚಿದ ಸರ್ಕಸ್

Last Updated 28 ಫೆಬ್ರುವರಿ 2018, 9:13 IST
ಅಕ್ಷರ ಗಾತ್ರ

ಚಾಮರಾಜನಗರ: ಕಳೆದ ಸಾಲಿನಲ್ಲಿ ಎರಡು ಚುನಾವಣೆಗಳನ್ನು ಕಂಡಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ತೀವ್ರವಾಗಿದೆ. ಒಂದು ವರ್ಷದ ಹಿಂದಷ್ಟೇ ಎದುರಿಸಿದ್ದ ಉಪಚುನಾವಣೆಯ ನೆನಪು ಈ ಕ್ಷೇತ್ರದಲ್ಲಿ ಇನ್ನೂ ಹಸಿರಾಗಿದೆ. ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ ಮುಖಂಡರು ನಡೆಸಿದ ಅಬ್ಬರದ ಪ್ರಚಾರದ ಸದ್ದು ಮರೆಯಾಗುವ ಮುನ್ನವೇ ಮತ್ತೊಮ್ಮೆ ಚುನಾವಣೆ ಎದುರಾಗಿದೆ.

ಗುಂಡ್ಲುಪೇಟೆ ಕ್ಷೇತ್ರವನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ನೇರ ಹಣಾಹಣಿಯ ಕ್ಷೇತ್ರ ಎಂದೇ ಪರಿಗಣಿಸಲಾಗಿದೆ. ಎಚ್‌.ಎಸ್‌. ಮಹದೇವಪ್ರಸಾದ್‌ ಅವರು ಜೆಡಿಎಸ್‌ನಲ್ಲಿ ಇದ್ದಾಗ ಕ್ಷೇತ್ರದಲ್ಲಿ ಪಕ್ಷ ಬಲವಾಗಿತ್ತು. 2008ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನಿಂದ ಆಯ್ಕೆ ಯಾಗುವುದರೊಂದಿಗೆ ಜೆಡಿಎಸ್‌ನ ಪ್ರಾಬಲ್ಯ ಕ್ಷೀಣಿಸಿದೆ. ಸ್ಥಳೀಯ ಸಂಸ್ಥೆಗಳಲ್ಲಿಯೂ ಅದು ನೆಲೆಗಳನ್ನು ಕಳೆದುಕೊಂಡಿದೆ. ಅಲ್ಲದೆ, ಬಿಎಸ್‌ಪಿಯೊಂದಿಗಿನ ಮೈತ್ರಿ ಒಪ್ಪಂದದ ಕಾರಣ ಜೆಡಿಎಸ್ ಗುಂಡ್ಲುಪೇಟೆ ಕ್ಷೇತ್ರವನ್ನು ಬಿಟ್ಟುಕೊಡುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ಗುರುಪ್ರಸಾದ್‌ ಮತ್ತು ಬಿಎಸ್‌ಪಿಯಿಂದ ಕಾಂತರಾಜು ಅವರ ಹೆಸರು ಚಾಲ್ತಿಯಲ್ಲಿದೆ.

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು: ಹಾಲಿ ಶಾಸಕರಿಗೆ ಟಿಕೆಟ್‌ ನೀಡಬೇಕು ಎಂಬ ನಿಯಮದಂತೆ ಕಾಂಗ್ರೆಸ್‌, ಸಚಿವೆ ಎಂ.ಸಿ. ಮೋಹನಕುಮಾರಿ ಅವರಿಗೇ ಮನ್ನಣೆ ನೀಡಲಿದೆ ಎನ್ನಲಾಗುತ್ತಿದೆ. 1999 ಮತ್ತು 2004ರ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಎದುರು ಪರಾಭವಗೊಂಡಿದ್ದ ಹಾಲಿ ಕಾಡಾ ಅಧ್ಯಕ್ಷ ಎಚ್‌.ಎಸ್‌. ನಂಜಪ್ಪ ಈ ಬಾರಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. 2008, 2013ರ ಚುನಾವಣೆ ಹಾಗೂ 2017ರ ಉಪಚುನಾವಣೆಗಳಲ್ಲಿ ಅವರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಪಕ್ಷಕ್ಕೆ ನಿರಂತರವಾಗಿ ದುಡಿದಿರುವ ತಮಗೆ ಟಿಕೆಟ್ ನೀಡುವಂತೆ ಪಕ್ಷದ ಮುಖಂಡರ ಮನವೊಲಿಸಲು ಅವರು ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖಂಡ ಕೊಡಸೋಗೆ ಶಿವಬಸಪ್ಪ ಕೂಡ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ನಲಾಗಿದೆ. ಕಳೆದ ಮಾರ್ಚ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಮುಖರು ಬೀಡುಬಿಟ್ಟು ಸತತ ಪ್ರಚಾರ ನಡೆಸಿದ್ದರು. ಅನುಕಂಪದ ಅಲೆಯೂ ಮೋಹನಕುಮಾರಿ ಅವರ ಪರವಾಗಿತ್ತು. ಹೀಗಾಗಿ ಅವರ ಗೆಲುವು ಸಾಧ್ಯವಾಯಿತು. ಈ ಬಾರಿಯ ಚುನಾವಣೆಯಲ್ಲಿ ಮೋಹನಕುಮಾರಿ ಅವರು ಸ್ವಸಾಮರ್ಥ್ಯವನ್ನು ಪಣಕ್ಕಿಡಬೇಕಿದೆ. ಅವರ ಮುಂದೆ ದೊಡ್ಡ ಸವಾಲು ಇರುವುದರಿಂದ ಇನ್ನೂ ಪ್ರಬಲ ಮುಖಂಡರನ್ನು ಕಣಕ್ಕಿಳಿಸುವುದು ಸೂಕ್ತ ಎಂಬ ಸಲಹೆಗಳು ಪಕ್ಷದಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸೋಮಣ್ಣಗೆ ಎಲ್ಲಿ ಜಾಗ?: ತಾಲ್ಲೂಕಿನಲ್ಲಿ ಒಮ್ಮೆಯೂ ಗೆಲುವಿನ ರುಚಿ ಕಾಣದಿರುವ ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆಯ ಗೊಂದಲ ಇನ್ನೂ ಪರಿಹಾರವಾಗಿಲ್ಲ. ನಾಲ್ಕೂ ಕ್ಷೇತ್ರಗಳಲ್ಲಿ ಇದೇ ರೀತಿಯ ಸಮಸ್ಯೆ ಇದ್ದು, ಪಕ್ಷದ ಜಿಲ್ಲಾ ಉಸ್ತುವಾರಿ ಸೋಮಣ್ಣ ವಿಚಾರದಲ್ಲಿ ಉಂಟಾಗಿರುವ ಅಸಮಾಧಾನ ಶಮನವಾಗಿಲ್ಲ. ನಾಯಕರ ನಡುವೆ ತಲೆದೋರಿರುವ ಮನಸ್ತಾಪ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ತೊಡಕು ಉಂಟುಮಾಡುತ್ತಿದೆ ಎಂದು ಬಿಜೆಪಿ ಮೂಲಗಳು ವಿವರಿಸಿವೆ.

ವಿ. ಸೋಮಣ್ಣ ಹೆಸರು ಹನೂರು, ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಕೇಳಿಬಂದಿತ್ತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಮತ್ತು ಸೋಮಣ್ಣ ನಡುವಣ ಭಿನ್ನಮತ ಸ್ಫೋಟಗೊಂಡಿದೆ. ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆಯಿಂದ ಬಿಡುಗಡೆ ನೀಡಿ, ಹಾಸನ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಮಾತ್ರ ಮುಂದುವರಿಸುವಂತೆ ಸೋಮಣ್ಣ ವರಿಷ್ಠರನ್ನು ಕೋರಿದ್ದಾರೆ.

ಹನೂರು ಕ್ಷೇತ್ರದಲ್ಲಿ ತಮ್ಮ ಕುಟುಂಬಕ್ಕೇ ಟಿಕೆಟ್‌ ನೀಡಬೇಕು ಎಂದು ಪರಿಮಳಾ ನಾಗಪ್ಪ ಪಟ್ಟು ಹಿಡಿದಿರುವುದರಿಂದ ಅಲ್ಲಿ ಸೋಮಣ್ಣ ಅವರಿಗೆ ಅವಕಾಶದ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ. ಚಾಮರಾಜನಗರದಲ್ಲಿ ಎಂ. ರಾಮಚಂದ್ರ ಅವರ ಸೇರ್ಪಡೆಯಿಂದ ಮಲ್ಲಿಕಾರ್ಜುನಪ್ಪ ಅವರೇ ಟಿಕೆಟ್‌ ಕೈತಪ್ಪುವ ಸಂಕಟದಲ್ಲಿದ್ದಾರೆ. ಹೀಗಾಗಿ ಸೋಮಣ್ಣ ಅವರ ಕಣ್ಣು ಗುಂಡ್ಲುಪೇಟೆ ಕ್ಷೇತ್ರದ ಮೇಲೆಯೇ ನೆಟ್ಟಿದೆ ಎಂದು ಮೂಲಗಳು ತಿಳಿಸಿವೆ.

ನಿರಂಜನಕುಮಾರ್‌ ಪೈಪೋಟಿ: ಸತತ ಮೂರು ಬಾರಿ ಸ್ಪರ್ಧಿಸಿ ಸೋತಿರುವ ಸಿ.ಎಸ್. ನಿರಂಜನಕುಮಾರ್‌, ಮತ್ತೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸೋಮಣ್ಣ ಅವರಿಗೆ ಸ್ಥಾನ ಬಿಟ್ಟುಕೊಡುವುದು ಬೇಡ ಎಂದು ಅವರ ಬೆಂಬಲಿಗರು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಒತ್ತಾಯಿಸಿದ್ದರು. ಹೊರಗಿನಿಂದ ಬಂದಿರುವವರಿಗೆ ಅವಕಾಶ ನೀಡುವುದು ಬೇಡ. ಸ್ಥಳೀಯರಿಗೇ ಆದ್ಯತೆ ನೀಡಲಿ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನಿರಂಜನಕುಮಾರ್ ಅವರ ತಂದೆ ಸಿ.ಎಂ. ಶಿವಮಲ್ಲಪ್ಪ ಎರಡು ಬಾರಿ ಸೋಲು ಕಂಡಿದ್ದರು. ನಿರಂಜನಕುಮಾರ್‌ ಬಿಜೆಪಿಯಿಂದ ಎರಡು ಸಲ ಮತ್ತು ಕೆಜೆಪಿಯಿಂದ ಒಂದು ಸಲ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಉಪಚುನಾವಣೆಯಲ್ಲಿ ಸುಮಾರು 10,000 ಮತಗಳ ಅಂತರದಲ್ಲಿ ಸೋಲು ಕಂಡಿರುವ ತಮ್ಮ ಪರವಾಗಿ ಈ ಬಾರಿ ಅನುಕಂಪದ ಅಲೆ ಕೆಲಸ ಮಾಡಲಿದೆ ಎಂದು ಮುಖಂಡರ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸುನೀಲ್‌ ಬಿಜೆಪಿಯಿಂದ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ. ಎಂ. ರಾಮಚಂದ್ರ ಅವರ ಪಕ್ಷ ಸೇರ್ಪಡೆಯು ಗುಂಡ್ಲುಪೇಟೆ ಕ್ಷೇತ್ರದ ಮೇಲೆಯೂ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಸೋಮಣ್ಣ ಅವರೊಂದಿಗೆ ಸಂಪರ್ಕದಲ್ಲಿರುವ ಕಾಡಾ ಅಧ್ಯಕ್ಷ ಎಚ್‌.ಎಸ್‌. ನಂಜಪ್ಪ, ಸೋಮಣ್ಣ ಅವರಿಗೆ ಟಿಕೆಟ್‌ ದೊರೆತರೆ ಬಿಜೆಪಿ ಬೆಂಬಲಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಲಿಂಗಾಯತ ಮತಗಳು ಹೆಚ್ಚಿರುವುದರಿಂದ ಇದು ಪಕ್ಷಕ್ಕೆ ಲಾಭ ತರಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಹೀಗಾಗಿ, ಸೋಮಣ್ಣ ಅವರಿಗೇ ಟಿಕೆಟ್‌ ದೊರೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಕ್ಷದ ಮೂಲಗಳು ವಿವರಿಸಿವೆ.

ಗುಂಡ್ಲುಪೇಟೆ ಕ್ಷೇತ್ರ ಪ್ರತಿನಿಧಿಸಿದವರು

1952– ಎಚ್‌.ಕೆ. ಶಿವರುದ್ರಪ‌್ಪ (ಪಕ್ಷೇತರ), ಸಿದ್ದಯ್ಯ ಉ. ಕುನ್ನಯ್ಯ (ಪಕ್ಷೇತರ)– ದ್ವಿಸದಸ್ಯ ಕ್ಷೇತ್ರ, 1957– ಕೆ.ಎಸ್. ನಾಗರತ್ನಮ್ಮ (ಪಕ್ಷೇತರ), 1962– ಕೆ.ಎಸ್. ನಾಗರತ್ನಮ್ಮ(ಪಕ್ಷೇತರ), 1967– ಕೆ.ಎಸ್. ನಾಗರತ್ನಮ್ಮ (ಕಾಂಗ್ರೆಸ್), 1972– ಕೆ.ಎಸ್. ನಾಗರತ್ನಮ್ಮ(ಕಾಂಗ್ರೆಸ್), 1978– ಎಚ್‌.ಕೆ. ಶಿವರುದ್ರಪ್ಪ (ಕಾಂಗ್ರೆಸ್), 1983– ಕೆ.ಎಸ್. ನಾಗರತ್ನಮ್ಮ (ಕಾಂಗ್ರೆಸ್), 1985– ಕೆ.ಎಸ್. ನಾಗರತ್ನಮ್ಮ (ಕಾಂಗ್ರೆಸ್), 1989– ಕೆ.ಎಸ್. ನಾಗರತ್ನಮ್ಮ (ಕಾಂಗ್ರೆಸ್), 1994– ಎಚ್‌.ಎಸ್‌. ಮಹದೇವಪ್ರಸಾದ್‌ (ಜನತಾದಳ), 1999– ಎಚ್‌.ಎಸ್‌. ಮಹದೇವಪ್ರಸಾದ್‌ (ಜೆಡಿಯು), 2004– ಎಚ್‌.ಎಸ್‌. ಮಹದೇವಪ್ರಸಾದ್‌ (ಜೆಡಿಎಸ್), 2008– ಎಚ್‌.ಎಸ್‌. ಮಹದೇವಪ್ರಸಾದ್‌ (ಕಾಂಗ್ರೆಸ್), 2013– ಎಚ್‌.ಎಸ್‌. ಮಹದೇವಪ್ರಸಾದ್‌ (ಕಾಂಗ್ರೆಸ್), 2017–ಉಪಚುನಾವಣೆ– ಎಂ.ಸಿ. ಮೋಹನಕುಮಾರಿ (ಕಾಂಗ್ರೆಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT