ಮಂಗಳವಾರ, ಮೇ 18, 2021
22 °C
ಗುಂಡ್ಲುಪೇಟೆ: ಹೆದ್ದಾರಿ ಬದಿಗಳಲ್ಲಿ ಮೈದುಂಬಿ ನಿಂತ ಹೂವುಗಳು

ಸೂರ್ಯಕಾಂತಿಗೆ ಮನಸೋತ ಪ್ರವಾಸಿಗರು

ಮಲ್ಲೇಶ್‌ ಎಂ. Updated:

ಅಕ್ಷರ ಗಾತ್ರ : | |

ಸೂರ್ಯಕಾಂತಿ ತೋಟದಲ್ಲಿ ಫೋಟೋ ತೆಗೆಸಿಕೊಳ್ಳುತ್ತಿರುವ ಪ್ರವಾಸಿಗರು

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಹಾದುಹೋಗಿರುವ ಹೆದ್ದಾರಿಗಳ (67 ಮತ್ತು 766) ಇಕ್ಕೆಲಗಳಲ್ಲಿರುವ ಸೂರ್ಯಕಾಂತಿ ತೋಟಗಳು ಈಗ ಪ್ರವಾಸಿತಾಣಗಳಾಗಿ ಪರಿವರ್ತನೆಯಾಗಿವೆ!

ಗದ್ದೆಗಳಲ್ಲಿ ಅರಳಿ ನಿಂತಿರುವ ಸೂರ್ಯಕಾಂತಿ ಹೂವುಗಳು ವಾಹನಗಳಲ್ಲಿ ಸಂಚ‌ರಿಸಿರುವವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ. ಸೂರ್ಯಕಾಂತಿಗೆ ಮನಸೋತ ಪ್ರವಾಸಿಗರು ಮಳೆಯನ್ನೂ ಲೆಕ್ಕಿಸದೆ ಪೋಟೋಗಳನ್ನು ಕ್ಲಿಕ್ಕಿಸುತ್ತ ಖುಷಿ ಪಟ್ಟರೆ, ಕೆಲ ರೈತರು ಇದನ್ನೇ ಬಂಡವಾಳ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದಾರೆ.

ಒಂದು ತಿಂಗಳಿನಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭೂಪ್ರದೇಶವು ಸದಾ ಮಂಜಿನಿಂದ ಕೂಡಿರುತ್ತದೆ. ಇದೇ ಸಂದರ್ಭದಲ್ಲಿ ಗದ್ದೆಗಳಲ್ಲಿ ಸೂರ್ಯಕಾಂತಿ ಕೂಡ ಅರಳಿ ನಿಂತಿರುವುದರಿಂದ ಪ್ರಕೃತಿ ಸೌಂದರ್ಯ ಇನ್ನಷ್ಟು ಕಳೆಕಟ್ಟಿದೆ. ಈ ಸೌಂದರ್ಯಕ್ಕೆ ಮನಸೋತು ಪೋಟೋ ತೆಗೆದುಕೊಳ್ಳುವುದಕ್ಕಾಗಿ ವಾಹನ ಸವಾರರು ಸೂರ್ಯಕಾಂತಿ ತೋಟಗಳಿಗೆ ಲಗ್ಗೆ ಇಡುತ್ತಿದ್ದಾರೆ.

ಕೆಲವು ಜಮೀನುಗಳ ಮಾಲೀಕರು ಪೋಟೋ ತೆಗೆದುಕೊಳ್ಳಲು ಇಂತಿಷ್ಟು ಹಣ ಎಂದು ನಿಗದಿಪಡಿಸಿದರೆ, ಇನ್ನೂ ಕೆಲವು ರೈತರು ಉಚಿತವಾಗಿ ತೆಗೆದುಕೊಂಡು ಹೋಗಲಿ ಎಂದು ಬಿಡುತ್ತಾರೆ. ಆದರೆ ಬೆಳೆಗಳನ್ನು ಹಾಳುಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಾರೆ.

ಗುಂಡ್ಲುಪೇಟೆ ತಾಲ್ಲೂಕು, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಈ ಎರಡೂ ರಾಜ್ಯಗಳ ಪ್ರವಾಸಿಗರು ಹೆಚ್ಚಾಗಿ ರಾಜ್ಯಕ್ಕೆ ಬರುವುದರಿಂದ ಇಲ್ಲಿನ ಹೆದ್ದಾರಿಗಳಲ್ಲಿ ಅವರ ಓಡಾಟ ಹೆಚ್ಚಿರುತ್ತದೆ. 

ತಾಲ್ಲೂಕಿನ ಮೇಲುಕಾಮನಹಳ್ಳಿಯಿಂದ ಗಡಿಭಾಗವಾದ ಹಿರಿಕಾಟಿಯವರೆಗೆ ಮತ್ತು ಕೇರಳ ಗಡಿ ಪ್ರದೇಶವಾದ ಮದ್ದೂರು ಚೆಕ್‌ಪೋಸ್ಟ್‌ನಿಂದ ಗುಂಡ್ಲುಪೇಟೆ ಪಟ್ಟಣದವರೆಗೆ ಅನೇಕ ರೈತರು ಸೂರ್ಯಕಾಂತಿಯನ್ನು ಬೆಳೆದಿದ್ದಾರೆ. ಸೂರ್ಯಕಾಂತಿ ತೋಟಗಳು ಹೆದ್ದಾರಿಗೆ ತಾಗಿಕೊಂಡಂತೆ ಇರುವುದರಿಂದ ಪ್ರವಾಸಿಗರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ, ಒಂದಷ್ಟು ಹೊತ್ತು ಸೂರ್ಯಕಾಂತಿಯ ಸೌಂದರ್ಯವನ್ನು ಸವಿಯುತ್ತಾರೆ. 

‘ಈ ವಾರಾಂತ್ಯದಲ್ಲಿ ರಾಜ್ಯಕ್ಕೆ ಬಂದ ಪ್ರವಾಸಿಗರು ಈ ಮಾರ್ಗದಲ್ಲಿ ಹಾದುಹೋಗುವಾಗ ಜಮೀನಿಗೆ ಬಂದು ಫೋಟೊ ತೆಗೆದುಕೊಂಡು ಹಣ ನೀಡಿದರು. ಅವರಿಗೆ ತೋಟ ನೋಡಿದ ಖುಷಿಯಾದರೆ, ನಮಗೆ ದಿನನಿತ್ಯ ಖರ್ಚಿಗೆ ಹಣ ಆಗುತ್ತದೆ’ ಎಂದು ಹೇಳುತ್ತಾರೆ ರೈತರಾದ ಬಸಪ್ಪ.

ವ್ಯಾಪಾರ ಜೋರು: ಪೋಟೋಗಳನ್ನು ತೆಗೆದುಕೊಳ್ಳಲು ನಿಲ್ಲುವ ಪ್ರವಾಸಿಗರಿಂದ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುವ ಎಳನೀರು ಮತ್ತು ಕಲ್ಲಂಗಡಿ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವೂ ಆಗುತ್ತಿದೆ. ಇದನ್ನು ಅರಿತ ವ್ಯಾಪಾರಿಗಳು ಹೂಗಳನ್ನು ತೋರಿಸಿ ವಾಹನಗಳನ್ನು ನಿಲ್ಲಿಸಿ, ಪೋಟೋ ತೆಗೆದುಕೊಳ್ಳಲು ಸಲಹೆ ನೀಡುತ್ತಿದ್ದಾರೆ.

‘ಸೂರ್ಯಕಾಂತಿ ತೋಟ ವೀಕ್ಷಣೆಗೆ ಜನರು ಬರುತ್ತಿರುವುದರಿಂದ ನಮಗೆ ಉತ್ತಮ ವ್ಯಾಪಾರ ಆಗುತ್ತಿದೆ. ಕೇರಳ ಮತ್ತು ಇತರೆ ರಾಜ್ಯಗಳಿಂದ ಹೆಚ್ಚಿನ ಜನರು ಬರುತ್ತಿದ್ದಾರೆ’ ಎಂದು ವ್ಯಾಪಾರಿ ಕುಮಾರ್ ಅವರು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು