ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಪರಿಚಯ: ಇಟಲಿ ‘ಉಡುಗೊರೆ’ಗೆ ₹14 ಲಕ್ಷ ಕಳೆದುಕೊಂಡರು!

ಮಹಿಳೆಗೆ ವಿವಿಧ ಆಸೆಗಳನ್ನು ತೋರಿಸಿ ಹಣ ವರ್ಗಾಯಿಸಿಕೊಂಡ ವಂಚಕರು
Last Updated 3 ಅಕ್ಟೋಬರ್ 2019, 15:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬನುತೋರಿಸಿದ ಇಟಲಿ ‘ಉಡುಗೊರೆ’ಗಳ ಆಸೆಗೆ ಮರುಳಾದ ಮಹಿಳೆಯೊಬ್ಬರು ಬರೋಬರಿ ₹14 ಲಕ್ಷ ವಂಚನೆಗೆ ಒಳಗಾಗಿದ್ದಾರೆ.

ಚಿಂತಾಮಣಿಯ ನಾರಸಿಂಹ ಪೇಟೆ ನಿವಾಸಿ ಎನ್.ವಿ.ಸವಿತಾ ಅವರು ವಂಚನೆಗೆ ಒಳಗಾದವರು. ಅಪರಿಚಿತ ವ್ಯಕ್ತಿಗಳ ಮೋಸದ ಜಾಲ ಅರಿಯದ ಸವಿತಾ ಅವರು ತಮ್ಮದು ಮಾತ್ರವಲ್ಲದೆ, ಪತಿ, ಮಗನ ಸ್ನೇಹಿತನ ಖಾತೆಯಿಂದ ಕೂಡ ವಂಚಕರು ನೀಡಿದ ಖಾತೆಗಳಿಗೆ ಮೇಲಿಂದ ಮೇಲೆ ಹಣ ಜಮೆ ಮಾಡಿ, ಕೊನೆಗೆ ತಾವು ಮೋಸಕ್ಕೆ ಒಳಗಾದದ್ದು ಅರಿವಾಗಿ ಗುರುವಾರ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

ಹೇಗಾಯ್ತು ವಂಚನೆ?
‘ಕಳೆದ ಮೇ 13 ರಂದು ಫೇಸ್‌ಬುಕ್ ಮೂಲಕ ಪರಿಚಯವಾದ ಶ್ರೀನಿವಾಸಲ ಮೂರ್ತಿ ಉರ್ಫ್ ಕ್ರಿಸ್ಟ್‌ ಕೆರ್ವಿನ್ ಎಂಬಾತ, ತಾಯಂದಿರ ದಿನಾಚರಣೆ ದಿನ ಕರೆ ಮಾಡಿ ಶುಭಾಶಯ ತಿಳಿಸುವ ಜತೆಗೆ, ನನ್ನ ಮಗನಿಗೆ ಕೆಲಸ ಕೊಡಿಸುವುದಾಗಿ ತಿಳಿಸಿದರು. ಬಳಿಕ ನನಗೆ ಉಡುಗೊರೆಯಾಗಿ ವಾಚ್, ಚೈನ್, ಬ್ರಾಸ್ ಲೈಟ್, ಮೊಬೈಲ್‌ ಅನ್ನು ಕೊರಿಯರ್ ಮುಖಾಂತರ ಇಟಲಿಯಿಂದ ಕಳುಹಿಸಿಕೊಡುತ್ತಿದ್ದೇನೆ ಎಂದು ತಿಳಿಸಿದರು’ ಎಂದು ದೂರಿನಲ್ಲಿ ಸವಿತಾ ಉಲ್ಲೇಖಿಸಿದ್ದಾರೆ.

‘ಕೆಲ ದಿನಗಳ ಬಳಿಕ ನನ್ನ ಮೊಬೈಲ್‌ಗೆ ಕರೆ ಮಾಡಿದ ಮಹಿಳೆಯೊಬ್ಬಳು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ನಿಮಗೆ ಕೋರಿಯರ್ ಬಂದಿದೆ. ಅದನ್ನು ಕಳುಹಿಸಲು ₹8,000 ಕಳುಹಿಸಬೇಕು ಎಂದು ತಿಳಿಸಿದಾಗ ಮೊಬೈಲ್ ಆ್ಯಪ್‌ ಮೂಲಕ ಹಣ ವರ್ಗಾವಣೆ ಮಾಡಿದೆ.

ಅದೇ ಮಹಿಳೆ ಪುನಃ ಪೋನ್ ಮಾಡಿ ಕೊರಿಯರ್‌ನಲ್ಲಿ 20,000 ಪೌಂಡ್ಸ್ ಹಣವಿದೆ ಎಂದು ತಿಳಿಸಿ ₹49 ಸಾವಿರ ಸುಂಕ ಕಟ್ಟಬೇಕು ಎಂದಾಗ ಐಡಿಬಿಐ ಬ್ಯಾಂಕಿನ ಖಾತೆಗೆ ಆನ್‌ಲೈನ್‌ ಬ್ಯಾಕಿಂಗ್ ಮೂಲಕ ಜಮೆ ಮಾಡಿದ್ದೆ’ ಎಂದು ತಿಳಿಸಿದ್ದಾರೆ.

ವಂಚಕಿ ಜಿಎಸ್‌ಟಿ ಪಾವತಿಸಬೇಕು ಎಂದಾಗ ಸವಿತಾ ಅವರು ತಮ್ಮ ಎರಡು ಖಾತೆಗಳಲ್ಲಿದ್ದ ₹3.50 ಲಕ್ಷದ ಜತೆಗೆ ಹೊಸಕೋಟೆಯ ಗ್ರಾಮೀಣ ಬ್ಯಾಂಕಿನಲ್ಲಿರುವ ಪತಿಯ ಖಾತೆಯಿಂದ ₹3.85 ಲಕ್ಷವನ್ನು ಆರ್‌ಟಿಜಿಎಸ್‌ ಮೂಲಕ ಜಮೆ ಮಾಡಿದ್ದಾರೆ. ಉಡುಗೊರೆಗಳ ಹಸ್ತಾಂತರಕ್ಕೆ ನ್ಯಾಯಾಲಯದಿಂದ ಅನುಮತಿಯಲು ಶುಲ್ಕ ಕಟ್ಟಬೇಕು ಎಂದಾಗ ಸವಿತಾ ಅವರು ಮಗನ ಸ್ನೇಹಿತನ ಬ್ಯಾಂಕ್ ಖಾತೆಯಿಂದ ವಂಚಕರು ನೀಡಿದ ಖಾತೆಗೆ ₹1.60 ಲಕ್ಷ ವರ್ಗಾಯಿಸಿದ್ದಾರೆ.

ನಂತರ ವಿವಿಧ ಶುಲ್ಕಗಳ ನೆಪದಲ್ಲಿ ವಂಚಕರು ಸವಿತಾ ಅವರಿಂದ ₹2.85 ಲಕ್ಷ ಜಮೆ ಮಾಡಿಸಿಕೊಂಡಿದ್ದಾರೆ. ಬಳಿಕ ಕ್ರಿಸ್ಟ್‌ ಕೆರ್ವಿನ್ ಅವರ ಸ್ನೇಹಿತನೆಂದು ಪರಿಚಯಿಸಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬ ನಿಮ್ಮ ಹಣ ವಾಪಸ್ ಕೊಡಿಸುತ್ತೇನೆ ಎಂದು ನನಗೆ ₹20 ಸಾವಿರ ಕಳುಹಿಸಿ ಎಂದು ಕೇಳಿದ್ದಾನೆ. ಆಗ ಸಂಶಯಗೊಂಡ ಸವಿತಾ ಅವರು ವಂಚಕರ ಪತ್ತೆಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರದ ಎಲೆಕ್ಟ್ರಿಷಿಯನ್ ಒಬ್ಬರನ್ನು ವೈವಾಹಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡ ಮಹಿಳೆಯೊಬ್ಬಳು ಮದುವೆಯಾಗುವೆ, ಬ್ಯಾಂಕ್ ಖಾತೆಗೆ ₹1.50 ಕೋಟಿ ಜಮೆ ಮಾಡುವೆ ಎಂಬ ಆಸೆ ತೋರಿಸಿ ₹33 ಲಕ್ಷ ವಂಚಿಸಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT