ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಮುಚ್ಚುವ ಹಂತದಲ್ಲಿ 50 ಸರ್ಕಾರಿ ಶಾಲೆ

ಪ್ರಸಕ್ತ ವರ್ಷ ಶಿಡ್ಲಘಟ್ಟ ತಾಲ್ಲೂಕಿನ ಬಚ್ಚಹಳ್ಳಿ ಮತ್ತು ಅಮ್ಮಗಾರಹಳ್ಳಿ ಶಾಲೆಗೆ ಬೀಗ
Published 21 ಆಗಸ್ಟ್ 2023, 7:17 IST
Last Updated 21 ಆಗಸ್ಟ್ 2023, 7:17 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‌ತಾಲ್ಲೂಕಿನ ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ ಗಮನಿಸಿದರೆ ಸುಮಾರು ಐವತ್ತು ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಶಿಕ್ಷಣ ಇಲಾಖೆಯ ಮಾಹಿತಿಯ ಪ್ರಕಾರ  ಜುಲೈ 2023ರ ಪಟ್ಟಿಯಲ್ಲಿ 47 ಶಾಲೆಗಳು ಹತ್ತು ಮತ್ತು ಅದಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ ಹೊಂದಿವೆ.

ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನ ಬಚ್ಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಮ್ಮಗಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳು ಇಲ್ಲದೇ ಬೀಗ ಹಾಕಿವೆ. ಕೊಮ್ಮಸಂದ್ರ ಹಾಗೂ ಕುಪ್ಪೇನಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ಒಬ್ಬ ವಿದ್ಯಾರ್ಥಿಗಳಿದ್ದಾರೆ. ಬಿ.ಕೆಂಪನಹಳ್ಳಿ ಮತ್ತು ಎ.ನಕ್ಕಲಹಳ್ಳಿಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ಇಬ್ಬರು ಮಕ್ಕಳು ಕಲಿಯುತ್ತಿದ್ದಾರೆ. ಅಮರಾವತಿ, ಕಾಮನಹಳ್ಳಿ ಮತ್ತು ಎಸ್.ವೆಂಕಟಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ಮೂವರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 

ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ 30ಕ್ಕೂ ಕಡಿಮೆ ಮಕ್ಕಳ ಸಂಖ್ಯೆಯಿರುವ ಶಾಲೆಗಳು 153 ಇವೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಇದ್ದರೆ ಒಬ್ಬ ಶಿಕ್ಷಕರು ಇರುತ್ತಾರೆ. 40 ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮೂವರು ಶಿಕ್ಷಕರಿರುತ್ತಾರೆ. 

ಪೋಷಕರು ಖಾಸಗಿ ಶಾಲೆಗಳೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಎನ್ನುವ ಮಾತು ಸಾಮಾನ್ಯ. ಆದರೆ ವಾಸ್ತವ ಬೇರೆಯೇ ಇದೆ. ಮುಚ್ಚಿರುವ ಬಚ್ಚನಹಳ್ಳಿ ಶಾಲೆ, ತಲಾ ಒಬ್ಬ ವಿದ್ಯಾರ್ಥಿಯುಳ್ಳ ಅಮ್ಮಗಾರಹಳ್ಳಿ, ಕೊಮ್ಮಸಂದ್ರ ಹಾಗೂ ಕುಪ್ಪೇನಹಳ್ಳಿಯ ಶಾಲೆಗಳ ಮಕ್ಕಳ ಪೋಷಕರನ್ನು ಮಾತನಾಡಿಸಿದಾಗ ಅವರು ಶಿಕ್ಷಕರೆಡೆಗೆ ಬೊಟ್ಟು ಮಾಡುವರು. ಈ ಸರ್ಕಾರಿ ಶಾಲೆಗಳ ಮಕ್ಕಳು ಖಾಸಗಿ ಶಾಲೆಗೆ ದಾಖಲಾಗಿಲ್ಲ. ಬೇರೆಡೆಯ ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ. ಮೂಲ ಸೌಲಭ್ಯಗಳಿಲ್ಲ. ಕಟ್ಟಡ, ಆಟದ ಮೈದಾನವಿಲ್ಲ. ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲ. ಆಂಗ್ಲಮಾಧ್ಯಮ ಇಲ್ಲ ಎನ್ನುವ ಕಾರಣಕ್ಕೆ ಪೋಷಕರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈ ಸಂಗತಿ  ಸೂಕ್ಷ್ಮವಾಗಿ ಗಮನಿಸಿದಾಗ ಶಿಕ್ಷಕರ ಲೋಪಗಳು ಎದ್ದು ಕಾಣುತ್ತವೆ.

ಕಳೆದ ಐದು ವರ್ಷಗಳಲ್ಲಿ ಉತ್ತಮವಾಗಿದ್ದ ಮಕ್ಕಳ ಸಂಖ್ಯೆ ಈಚಿನ ವರ್ಷಗಳಲ್ಲಿ ಕುಸಿದಿರುವುದು ಈ ಅಂಕಿ ಅಂಶಗಳಲ್ಲಿ ಕಂಡುಬರುತ್ತಿದೆ. ದಿಢೀರನೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣಗಳೇನು ಎಂಬುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಶೀಲಿಸಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹ.

ಮಕ್ಕಳು ತಮ್ಮ ಹಳ್ಳಿಯ ಸರ್ಕಾರಿ ಶಾಲೆಗೆ ಹೋಗದೇ ಕೆಲವು ಕಿ.ಮೀ ದೂರದ ಇನ್ನೊಂದು ಸರ್ಕಾರಿ ಶಾಲೆಗೆ ದಾಖಲಾಗುತ್ತಿದ್ದಾರೆ. ಇದು ಸರ್ಕಾರಿ ಶಾಲೆಗಳ ಶಿಕ್ಷಕರತ್ತ ಲೋಪಗಳತ್ತ ಬೊಟ್ಟು ಮಾಡಲಾಗುತ್ತಿದೆ. 

ಬದಲಾಗಬೇಕು ಮನಸ್ಥಿತಿ

ಈಗ ಮಕ್ಕಳಿಲ್ಲದೆ ಮುಚ್ಚಿದ ಶಾಲೆಗಳಲ್ಲಿದ್ದ ಶಿಕ್ಷಕರು ಬೇರೆಡೆ ಹೋಗಿದ್ದಾರೆ. ಪೋಷಕರು ಒಲವು ತೋರಿದಲ್ಲಿ ಮತ್ತೊಮ್ಮೆ ಶಾಲೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಮತ್ತೆ ಆರಂಭಿಸಲಾಗುವುದು. ಮಕ್ಕಳು ಬೇರೆ ಶಾಲೆಗಳಿಗೆ ಹೋಗಿ ಸೇರುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. ಹಾಗೆಯೇ ಶಿಕ್ಷಕರನ್ನು ವರ್ಗಾವಣೆ ಮಾಡುವ ಅಧಿಕಾರವೂ ನನಗಿಲ್ಲ. ಆದರೂ ಶಿಕ್ಷಕರ ಮನಸ್ಥಿತಿಯನ್ನು ಬದಲಾವಣೆ ಮಾಡಲು ಪ್ರಯತ್ನಿಸುತ್ತೇನೆ. -ನರೇಂದ್ರಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ

***

ಶಿಕ್ಷಕರ ವರ್ತನೆ; ಬೇರೆ ಶಾಲೆಗೆ ದಾಖಲು

ಐದು ವರ್ಷಗಳ ಹಿಂದೆ ಬಚ್ಚನಹಳ್ಳಿ ಶಾಲೆ ಉತ್ತಮವಾಗಿತ್ತು. ಶಿಕ್ಷಕ ಮತ್ತು ಪೋಷಕರ ಮಧ್ಯೆ ಉತ್ತಮ ಬಾಂಧವ್ಯ ಇತ್ತು. ನಮ್ಮ ಕುಟುಂಬದ ಎಂಟು ಮಕ್ಕಳು ಇದೇ ಶಾಲೆಯಲ್ಲಿ ಓದಿದ್ದರು. ಆದರೆ ಆ ಬಳಿಕ ಬಂದ ಶಿಕ್ಷಕರ ಕೆಟ್ಟ ವರ್ತನೆಯಿಂದ ಬೇಸರವಾಯಿತು. ಮಕ್ಕಳನ್ನು ಬೇರೆ ಸರ್ಕಾರಿ ಶಾಲೆಗೆ ಸೇರಿಸಿದೆವು. ಇದರಿಂದಾಗಿ ಶಾಲೆ ಮುಚ್ಚುವಂತಾಗಿದೆ. ಈಗಲೂ ಶಾಲೆ ಆರಂಭವಾದರೆ ನಮ್ಮ ಮಕ್ಕಳನ್ನು ಇದೇ ಶಾಲೆಗೆ ಸೇರಿಸುತ್ತೇವೆ.

- ಸೋಮಶೇಖರ್, ಬಚ್ಚನಹಳ್ಳಿ

***

ಕೆಲವು ಶಿಕ್ಷಕರಿಂದ ಶಾಲೆ ಮುಚ್ಚುವ ಸ್ಥಿತಿ ಹಳೇ ವಿದ್ಯಾರ್ಥಿ ಸಂಘ ಕಟ್ಟುವುದು ದಾನಿಗಳನ್ನು ಸಂಪರ್ಕಿಸುವುದು ಅಂಗನವಾಡಿಯನ್ನು ಶಾಲೆಯೊಂದಿಗೆ ಸಂಯೋಜಿಸುವುದು ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು ಮುಂತಾದ ಚಟುವಟಿಕೆಗಳನ್ನು ಮಾಡುವ ಮೂಲಕ ಹಲವು ಮಂದಿ ಶಿಕ್ಷಕರು ಸರ್ಕಾರಿ ಶಾಲೆಗಳನ್ನು ಮಾದರಿ ಆಗಿಸಿದ್ದಾರೆ. ಆದರೆ ಕೆಲವು ಶಿಕ್ಷಕರು ಶಾಲೆ ಮುಚ್ಚುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕು

-ಮಂಜುನಾಥ್, ಕೊಮ್ಮಸಂದ್ರ

***

ಕೇಂದ್ರ ಶಾಲೆ ರೂಪಿಸಿದರೆ ಅನುಕೂಲ ಗ್ರಾಮ ಪಂಚಾಯಿತಿಗೆ ಒಂದು ಕೇಂದ್ರ ಶಾಲೆ ಮಾಡಿ ಕಡಿಮೆ ಮಕ್ಕಳಿರುವ ಶಾಲೆಗಳ ಮಕ್ಕಳನ್ನೆಲ್ಲಾ ಒಂದು ಕಡೆ ಸೇರಿಸಿದರೆ ಅನುಕೂಲ ಆಗುತ್ತದೆ. ಪ್ರತಿ ಕ್ಲಸ್ಟರ್‌ನಲ್ಲಿ 30ರಿಂದ 40 ಶಿಕ್ಷಕರು ಇರುತ್ತಾರೆ. ಒಂದು ಕೇಂದ್ರದಲ್ಲಿ 500ರಿಂದ 600 ಮಕ್ಕಳನ್ನು ಸೇರಿಸಿದರೆ ತರಗತಿಗೆ ಒಬ್ಬ ಶಿಕ್ಷಕರು ಸಿಗುತ್ತಾರೆ. ಒಬ್ಬೊಬ್ಬ ಶಿಕ್ಷಕರು ಇರುವ  ಕಡೆ ತಿಂಗಳಿಗೆ ಐದರಿಂದ ಹತ್ತು ದಿನ ಅವರು ಇಲಾಖೆಗೆ ಮಾಹಿತಿ ಕೊಡುವುದರಲ್ಲಿ ಕಳೆದುಹೋಗುತ್ತಿದೆ. ಕೇಂದ್ರ ಶಾಲೆ ಪರಿಕಲ್ಪನೆಯಲ್ಲಿ ಹೆಚ್ಚು ಶಿಕ್ಷಕರು ಬೇಕಾಗುವುದಿಲ್ಲ. ಇದರಿಂದ ಉಳಿತಾಯ ಆಗುವ ಹಣದಲ್ಲಿ ಖಾಸಗಿಗಿಂತ ಉತ್ತಮವಾಗಿ ಬಸ್ ವ್ಯವಸ್ಥೆ ಮಾಡಬಹುದು.

-ಎ.ಎಂ.ತ್ಯಾಗರಾಜ್ ಅಪ್ಪೇಗೌಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT