ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಡುವೆ ಜಿಲ್ಲೆಯಲ್ಲಿ 500 ಮದುವೆಗಳು; ಆರ್ಥಿಕ ಹೊರೆ ತಗ್ಗಿಸಿದ ಸರಳ ವಿವಾಹ

Last Updated 4 ಜೂನ್ 2021, 9:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋವಿಡ್ ಕಾರಣದಿಂದ ವಿವಾಹಗಳು ಸರಳವಾಗಿ ನಡೆಯುತ್ತಿವೆ. ಈ ಸರಳ ವಿವಾಹಗಳಿಂದ ವಿವಿಧ ವರ್ಗಗಳ ವಹಿವಾಟಿಗೆ ಪೆಟ್ಟು ಬಿದ್ದಿದೆ, ನಿಜ. ಆದರೆ ವಿವಾಹಗಳು ವಧು, ವರನ ಕುಟುಂಬಗಳ ಆರ್ಥಿಕ ವೆಚ್ಚವನ್ನು ಗಣನೀಯವಾಗಿ ತಗ್ಗಿಸಿದೆ.

ಕೋವಿಡ್ ಮಾರ್ಗಸೂಚಿಯ ಪ್ರಕಾರ ಲಾಕ್‌ಡೌನ್‌ನ ಈ ಸಂದರ್ಭದಲ್ಲಿ 20 ಜನರಷ್ಟೇ ವಿವಾಹ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ವಿವಾಹಗಳನ್ನು ನಡೆಸಲು ತಹಶೀಲ್ದಾರರಿಂದ ಕಡ್ಡಾಯವಾಗಿ ಅನುಮತಿ ಸಹ ಪಡೆಯಬೇಕು. ಹೀಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ 499 ವಿವಾಹಗಳು ತಹಶೀಲ್ದಾರರಿಂದ ಅನುಮತಿ ಪಡೆದು ನಡೆದಿವೆ. ಈ ಹಿಂದೆಯೇ ನಿಗದಿಯಾಗಿದ್ದ ಅಥವಾ ಮದುವೆ ಮಾಡಲೇಬೇಕು ಎನ್ನುವ ತುರ್ತು ಇದ್ದವರು ಅನುಮತಿಗಾಗಿ ತಹಶೀಲ್ದಾರರ ಕಚೇರಿ ಎಡತಾಕುತ್ತಿದ್ದಾರೆ.

ಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ ವಿವಾಹಗಳಿಗೆ ಅನುಮತಿ ನೀಡಿದ್ದರೆ ಗ್ರಾಮ ಲೆಕ್ಕಿಗರು, ಪಿಡಿಒ ಮದುವೆ ಕಾರ್ಯಕ್ರಮದ ವಿಡಿಯೊ ಮಾಡಿ ಕೋವಿಡ್ ಮಾರ್ಗಸೂಚಿಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಸಹ ಸೂಚಿಸಿದೆ. ಪೂರ್ಣ ಲಾಕ್‌ಡೌನ್ ಹೊರತುಪಡಿಸಿದ ದಿನಗಳಲ್ಲಿಯೂ ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿಯಮಗಳು ಉಲ್ಲಂಘನೆ ಆಗಿದೆಯೇ ಇಲ್ಲವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವರು.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಏಪ್ರಿಲ್‌ನಲ್ಲಿ 47, ಮೇ ನಲ್ಲಿ 122 ಮತ್ತು ಜೂನ್‌ನ ಈ ಮೂರು ದಿನಗಳಲ್ಲಿ ಮೂರು ವಿವಾಹಗಳು ಜರುಗಿವೆ. ತಾಲ್ಲೂಕಿನಲ್ಲಿ ಒಟ್ಟು 172 ವಿವಾಹಗಳು ನಡೆದಿವೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿವಾಹಗಳು ಜರುಗಿದ ತಾಲ್ಲೂಕು ಎನಿಸಿದೆ. ಏಪ್ರಿಲ್‌ನಲ್ಲಿ 4 ಮತ್ತು ಮೇನಲ್ಲಿ 13 ವಿವಾಹಗಳು ಗುಡಿಬಂಡೆ ತಾಲ್ಲೂಕಿನಲ್ಲಿ ನಡೆದಿವೆ. ಕಡಿಮೆ ವಿವಾಹಗಳು ಜರುಗಿದ ತಾಲ್ಲೂಕು ಇದಾಗಿದೆ.

ತಗ್ಗಿದ ವೆಚ್ಚ: ವಿವಾಹಗಳು ಪೋಷಕರಿಗೆ ಆರ್ಥಿಕ ಹೊರೆ ಸಹ ಹೇರುತ್ತಿದ್ದವು. ಅದರಲ್ಲಿಯೂ ಮಧ್ಯಮ ವರ್ಗದ ಕುಟುಂಬಗಳು ಸಾಲ ಮಾಡಿ ವಿವಾಹಗಳನ್ನು ನಡೆಸುತ್ತಿದ್ದವು. ಆದರೆ ಲಾಕ್‌ಡೌನ್‌ನಲ್ಲಿ ಅದ್ಧೂರಿಗೆ ಅವಕಾಶವಿಲ್ಲದ ಕಾರಣ ಅವರ ಆರ್ಥಿಕತೆಯೂ ಪೆಟ್ಟು ಬೀಳುತ್ತಿಲ್ಲ. ತೀರಾ ಆಪ್ತರಾದ ಬಂಧುಬಳಗದವರಷ್ಟೇ ವಿವಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ

ಮನೆಗಳಲ್ಲಿಯೇ ಈ ಸರಳ ವಿವಾಹಗಳು ನಡೆಯುತ್ತಿರುವುದು, ಆಡಂಬರಕ್ಕೆ ಅವಕಾಶವಿಲ್ಲದ್ದು ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ.

ತಾಲ್ಲೂಕು ವಿವಾಹ
ಚಿಕ್ಕಬಳ್ಳಾಪುರ 172
ಶಿಡ್ಲಘಟ್ಟ 73
ಗುಡಿಬಂಡೆ 17
ಬಾಗೇಪಲ್ಲಿ 63
ಚಿಂತಾಮಣಿ 88
ಗೌರಿಬಿದನೂರು 86
ಒಟ್ಟು 499

ನಿಯಮ ಉಲ್ಲಂಘಿಸಿದರೆ ಪ‍್ರಕರಣ
ವಿವಾಹಗಳಲ್ಲಿ 20 ಜನರು ಪಾಲ್ಗೊಳ್ಳಲು ಮಾತ್ರ ಅವಕಾಶವಿದೆ. ಒಂದು ವೇಳೆ ಈ ನಿಯಮಗಳಲ್ಲಿ ಉಲ್ಲಂಘಿಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ, ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಉವಿಭಾಗಾಧಿಕಾರಿ ಎ.ಎನ್.ರಘುನಂದನ್ ‘‍ಪ್ರಜಾವಾಣಿ’ಗೆ ತಿಳಿಸಿದರು.

ಎ.ಎನ್.ರಘುನಂದನ್
ಎ.ಎನ್.ರಘುನಂದನ್

ತಹಶೀಲ್ದಾರರಿಂದ ವಿವಾಹಕ್ಕೆ ಅನುಮತಿ ಪಡೆಯುವುದು ಕಡ್ಡಾಯ. ವಿವಾಹದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನವಿಡುವಂತೆ ಸೂಚಿಸಲಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಈಗ ವಿವಾಹಗಳು ಕಡಿಮೆ. ಜನರನ್ನೂ ಕೋವಿಡ್ ಭಯ ಆವರಿಸಿದೆ. ಈ ಹಿಂದೆ ಮದುವೆಗಳಿಗೆ ಹೆಚ್ಚಿನ ಜನರು ಸೇರುತ್ತಿದ್ದರು. ಆದರೆ ಈಗ ಹತ್ತಿರದ ರಕ್ತ ಸಂಬಂಧಿಕರೇ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಹೇಳಿದರು.

ಇದ್ದಲ್ಲಿಯೇ ಶುಭಾಶಯ ಕೋರಿಕೆ
ಸ್ನೇಹಿತರು, ಬಂಧು ಬಳಗದವರ ಮನೆಗಳಲ್ಲಿ ನಡೆಯುವ ಮದುವೆ, ನಾಮಕರಣ ಇತ್ಯಾದಿ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಕೋವಿಡ್ ಕಾರಣದಿಂದ ಆತಂಕವಾಗುತ್ತಿದೆ. ತೀರಾ ಹತ್ತಿರದವರು ವಿವಾಹ ಕಾರ್ಯಗಳಿಗೆ ಕರೆಯುವರು. ಆದರೆ ಈ ಸಮಯದಲ್ಲಿ ಹೋಗಲು ಕಷ್ಟ. ನಾವು ಇದ್ದಲ್ಲಿಂದಲೇ ಅವರಿಗೆ ಶುಭ ಕೋರುತ್ತೇವೆ. ಕೋವಿಡ್ ಮುಗಿದ ನಂತರ ಅವರ ಮನೆಗಳಿಗೆ ಭೇಟಿ ನೀಡಿ ದಂಪತಿಗೆ ಶುಭ ಕೋರಲಾಗುವುದು ಎಂದು ಕೆಳಗಿನ ತೋಟಗಳ ನಿವಾಸಿ ರಾಮಮೂರ್ತಿ ಅವರು ತಿಳಿಸುವರು.

ರಾಮಮೂರ್ತಿ
ರಾಮಮೂರ್ತಿ

***

ಎರಡು ದಿನಗಳ ಹಿಂದೆ ನಮ್ಮ ಅಣ್ಣನ ವಿವಾಹವಾಯಿತು. ವಿವಾಹವನ್ನು ಅದ್ಧೂರಿಯಾಗಿ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ ಕೋವಿಡ್ ನಿಯಮಗಳನ್ನು ಪಾಲಿಸಲೇಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ನ ಈ ಸಂದರ್ಭದಲ್ಲಿ ಮದುವೆಗಳಿಗೆ ಸಾಲ ಸಹ ದೊರೆಯುವುದಿಲ್ಲ. ಈ ಎಲ್ಲ ದೃಷ್ಟಿಯಿಂದ ಸರಳ ವಿವಾಹವು ಅನುಕೂಲವಾಗಿದೆ. ನಮಗೂ ಆರ್ಥಿಕ ಹೊರೆ ಆಗಲಿಲ್ಲ ಎನ್ನುವರು ಬಾಗೇಪಲ್ಲಿ ತಾಲ್ಲೂಕು ದೇವಿಕುಂಟೆಯ ಪವನ್ ಕಲ್ಯಾಣ್.

ಪವನ್ ಕಲ್ಯಾಣ್
ಪವನ್ ಕಲ್ಯಾಣ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT