ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು

Last Updated 12 ಜುಲೈ 2021, 5:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಭಾನುವಾರ ಪ್ರವಾಸಿಗರ ದಂಡೇ ಹರಿದು ಬಂದಿತು. ಬೆಳ್ಳಂಬೆಳಿಗ್ಗೆಯೇ ಸಾವಿರಾರು ಪ್ರವಾಸಿಗರು ಪ್ರವಾಸಿ ತಾಣದತ್ತ ಮುಖ ಮಾಡಿದ್ದರು.

ಈ ಪ್ರವಾಸಿಗರಲ್ಲಿ ಬಹುತೇಕರು ಬೆಂಗಳೂರಿಗರೇ ಆಗಿದ್ದರು. ದೇವನಹಳ್ಳಿಯಿಂದ ನಂದಿ ಬೆಟ್ಟಕ್ಕೆ ಸಾಗುವ ರಾಣಿ ಕ್ರಾಸ್‌ನಲ್ಲಿ ಬೆಳಿಗ್ಗೆಯೇ ಸಂಚಾರ ದಟ್ಟಣೆ ಉಂಟಾಯಿತು. ಒಂದು ಕಿಲೋಮೀಟರ್ ದೂರದಷ್ಟು ಕಾರು, ಬೈಕ್‌ಗಳು ಸಾಲುಗಟ್ಟಿದವು. ಸ್ಥಳಕ್ಕೆ ಬಂದ ಪೊಲೀಸರು ದಟ್ಟಣೆ ತಗ್ಗಿಸಿ ಸಂಚಾರಕ್ಕೆ ಅವಕಾಶ
ಮಾಡಿಕೊಟ್ಟರು.

ಮಾಸ್ಕ್ ಧರಿಸದವರಿಗೆ ಪೊಲೀಸರು ದಂಡ ಸಹ ವಿಧಿಸಿದರು.

ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಿದ ನಂತರ ದೊಡ್ಡ ಸಂಖ್ಯೆಯಲ್ಲಿಯೇ ಪ್ರವಾಸಿಗರು ನಂದಿ ಬೆಟ್ಟದತ್ತ ಬಂದರು. ಕಳೆದ ಶನಿವಾರ ಮತ್ತು ಭಾನುವಾರ ಗರಿಷ್ಠ ಐದು ಸಾವಿರ ಜನರು ಭೇಟಿ ನೀಡಿದ್ದರು. ಆದರೆ ಭಾನುವಾರ ಸಂಖ್ಯೆ ದುಪ್ಪಟ್ಟಾಗಿತ್ತು. ಬೆಟ್ಟದ ಕೆಳಗಿದ್ದ ವಾಹನ ನಿಲುಗಡೆ ಸ್ಥಳದಲ್ಲಿದ್ದ ಕಾರು, ಬೈಕುಗಳ ಸಾಲೇ ಇದಕ್ಕೆ ನಿದರ್ಶನವಾಗಿತ್ತು.

ಹೇರಳವಾಗಿ ಮಂಜು ಮುಸುಕಿದ್ದರಿಂದ ಸ್ಪೆಟ್ಟರ್ ತೊಟ್ಟು ಪ್ರವಾಸಿಗರು ಬಂದಿದ್ದರು. ಹವ್ಯಾಸಿ ಛಾಯಾಗ್ರಹಕರು ಸಹ ಬೆಟ್ಟದಲ್ಲಿನ ಸುಂದರ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು.

‘ಬಹಳ ದಿನಗಳ ನಂತರ ನಂದಿ ಬೆಟ್ಟದ ಪ್ರವಾಸಕ್ಕೆ ಬಂದಿದ್ದೇವೆ. ಲಾಕ್‌ಡೌನ್‌ಗೂ ಮುನ್ನ ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಭೇಟಿ ನೀಡುತ್ತಿದ್ದೆವು. ಲಾಕ್‌ಡೌನ್ ತೆರವಾದ ನಂತರ ಇದೇ ಮೊದಲ ಬಾರಿಗೆ ಬಂದಿದ್ದೇವೆ. ಖುಷಿ ಆಗುತ್ತಿದೆ’ ಎಂದು ಬೆಂಗಳೂರಿನ ಟೆಕ್ಕಿ ಹೇಮಂತ್ ಹೇಳಿದರು.

ಬಹಳ ದಿನಗಳ ನಂತರ ನಂದಿ ಬೆಟ್ಟದ ಪ್ರವಾಸಿಗರ ಕಲರವದಿಂದ ಕೂಡಿತ್ತು. ಬೆಟ್ಟದ ಮೇಲೆ ಬಂದ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮತ್ತು ರಮಣೀಯ ದೃಶ್ಯಗಳ ವೀಕ್ಷಣೆಯಲ್ಲಿ ನಿರತರಾಗಿದ್ದರು. 10 ಗಂಟೆಯ ವೇಳೆಗಾಗಲೇ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸಂಜೆಯವರೆಗೂ ಪ್ರವಾಸಿಗರ ದಂಡೇ ನಂದಿ ಬೆಟ್ಟದಲ್ಲಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT