ಶನಿವಾರ, ಮಾರ್ಚ್ 25, 2023
23 °C
ನಿಯಂತ್ರಣ ‌ಮಾಡಲು ಸ್ಥಳೀಯರಿಗೆ ಜಾಗೃತಿ ‌

ಗೌರಿಬಿದನೂರು: ಆಕಸ್ಮಿಕ ಬೆಂಕಿ: ಅರಣ್ಯ ಸಂಪತ್ತು ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಬಿಸಿಲಿನ ಬೇಗೆ ಹೆಚ್ಚಾಗುತ್ತಿರುವ ಕಾರಣ ಸರ್ಕಾರಿ ಭೂಮಿ ಹಾಗೂ ಅರಣ್ಯ ಪ್ರದೇಶದಲ್ಲಿ ಬೆಂಕಿಯ‌ ಅವಘಡಗಳು ಹೆಚ್ಚಾಗುತ್ತಿದ್ದು, ಇವುಗಳನ್ನು ನಿಯಂತ್ರಣ ಮಾಡುವುದು ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಸವಾಲಾಗಿದೆ.

ಮುಂಗಾರು ಆರಂಭದಲ್ಲಿ ಸರ್ಕಾರಿ ಭೂಮಿ, ಕರಾಬು ಭೂಮಿ, ಮೀಸಲು ಅರಣ್ಯ ಪ್ರದೇಶ, ಗುಂಡು ತೋಪು ಸೇರಿದಂತೆ ಇತರೆಡೆಗಳಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಾವಿರಾರು‌ ಗಿಡಗಳನ್ನು ‌ನೆಟ್ಟು ಪೋಷಿಸಲಾಗುತ್ತಿದೆ. ಆದರೆ ಫೆಬ್ರುವರಿ ‌ತಿಂಗಳ ನಂತರ ಎಲ್ಲೆಡೆ ಬಿಸಿಲಿನ ತಾಪ ಹೆಚ್ಚಾಗಿ ಆಕಸ್ಮಿಕ ‌ಬೆಂಕಿ ಅವಘಡ ಸಂಭವಿಸುತ್ತಿದೆ. ಇದರಿಂದಾಗಿ ನೈಸರ್ಗಿಕ ಸಂಪತ್ತಿಗೆ ಆಪತ್ತು ಬಂದೊದಗಿದೆ.

ಪ್ರಸ್ತುತ ಸಾಮಾಜಿಕ ಮತ್ತು ಮೀಸಲು ಅರಣ್ಯ ಇಲಾಖೆ ಪ್ರತ್ಯೇಕವಾಗಿ ಸಾವಿರಾರು ಎಕರೆ ಭೂಮಿಯಲ್ಲಿ ದಶಕಗಳಿಂದಲೂ ಗಿಡಗಳನ್ನು ‌ನಾಟಿ ಮಾಡಿ ಪೋಷಿಸುವ ಜವಾಬ್ದಾರಿ ಹೊತ್ತಿದೆ. ಆದರೆ ಬೇಸಿಗೆಯಲ್ಲಿ ಸಂಭವಿಸುವ ಅಹಿತಕರ ಘಟನೆಗಳಿಂದ ಅವರ ಶ್ರಮವೆಲ್ಲಾ ನೀರು ಪಾಲಾದಂತಿರುತ್ತದೆ. ಬೇಸಿಗೆ ಸಮಯಕ್ಕೂ ಮುನ್ನ ಅರಣ್ಯ ಅಧಿಕಾರಿಗಳು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಂತಹ ಕಡೆಗಳಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಅಥವಾ ನೀರಿನ ವ್ಯವಸ್ಥೆ ಮಾಡಿ ಬೆಂಕಿ ಅವಘಡಗಳಿಂದ ಗಿಡಗಳನ್ನು ಕಾಪಾಡುವ ಪ್ರಯತ್ನ ಮಾಡಬಹುದಾಗಿದೆ.

ಪ್ರತೀ ವರ್ಷ ಫೆಬ್ರುವರಿ ‌ಮತ್ತು ಮಾರ್ಚ್‌ ತಿಂಗಳಲ್ಲಿ ಬೆಂಕಿ ಅವಘಡಗಳು ಸಂಭವಿಸುವುದು ಸಾಮಾನ್ಯ. ಇದರಿಂದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ‌ತಮ್ಮ ಸಿಬ್ಬಂದಿಯ ಸಹಕಾರದೊಂದಿಗೆ ಅಗತ್ಯ ಕ್ರಮಗಳನ್ನು ಪಾಲಿಸಬೇಕಾಗಿದೆ. ಇಚ್ಛಾಶಕ್ತಿ ‌ಮತ್ತು‌ ಬದ್ಧತೆಯಿಂದ ಕಾರ್ಯನಿರ್ವಹಿಸಿ ಜನರಲ್ಲಿ ಜಾಗೃತಿ ಮೂಡಿಸಿ ಅವಘಡ ನಡೆಯದಂತೆ ಕ್ರಮ ವಹಿಸಬೇಕಿದೆ ಎನ್ನುತ್ತಾರೆ ‌ಸ್ಥಳೀಯ ನಾಗರಿಕ ಮಂಜುನಾಥ್.

ತಾಲ್ಲೂಕಿನ ಯಾವುದೇ ಭಾಗದಲ್ಲಿ ಅಗ್ನಿ‌ ಅವಘಡ ಸಂಭವಿಸಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ಸಿಬ್ಬಂದಿ ಹಾಗೂ ಎಲ್ಲಾ ಅಧಿಕಾರಿ ವರ್ಗದವರು ಕಾರ್ಯಪ್ರವೃತ್ತಗೊಳ್ಳುತ್ತಾರೆ. ಸಿಬ್ಬಂದಿ ಹಗಲು ರಾತ್ರಿ ಎರಡೂ ಪಾಳಯದಲ್ಲಿ ಶ್ರಮಿಸುತ್ತಿದ್ದಾರೆ ಎನ್ನುತ್ತಾರೆ ಅಗ್ನಿ ಶಾಮಕ ದಳದ ಅಧಿಕಾರಿ ಸಂತೋಷ್.

ತಾಲ್ಲೂಕಿನಲ್ಲಿ ಎಮ್ಮೆಗುಡ್ಡ, ಗೆದರೆ ಬೆಟ್ಟ, ಕುರೂಡಿ, ವಲಸೆ ಬೆಟ್ಟ ಸೇರಿದಂತೆ ನಾಲ್ಕು ವಲಯದಲ್ಲಿ ಮಾತ್ರ ಅರಣ್ಯ ಇಲಾಖೆಗೆ ಸೇರಿದ ಅರಣ್ಯ ಸಂಪತ್ತಿದ್ದು, ಅದನ್ನು ಸಂರಕ್ಷಣೆ ಮಾಡಲು ನಮ್ಮ ಸಿಬ್ಬಂದಿಯನ್ನು ನಿಯೋಜನೆ ‌ಮಾಡಲಾಗಿದೆ. ಆದರೆ ಅವುಗಳನ್ನು ಹೊರತು ಪಡಿಸಿ ಉಳಿದ ಪ್ರದೇಶಗಳಲ್ಲಿ ಸ್ಥಳೀಯರ ಸಹಕಾರ ಅಗತ್ಯವಾಗಿದೆ. ಅರಣ್ಯ ಪ್ರದೇಶಗಳಿಗೆ ಬೆಂಕಿ ಅವಘಡ ಸಂಭವಿಸುವ ಮುನ್ನವೇ ಸ್ಯಾಟಲೈಟ್ ಮೂಲಕ ನಮಗೆ ಮಾಹಿತಿ ಲಭ್ಯವಾಗುತ್ತದೆ. ಇದರ ಮೇರೆಗೆ ಬೆಂಕಿ ‌ನಂದಿಸಲು ಸಾಧ್ಯವಾಗುತ್ತದೆ. ಬೇಸಿಗೆ ಕಾಲದಲ್ಲಿ ಆಕಸ್ಮಿಕವಾಗಿ ನಡೆಯುವ ಬೆಂಕಿ ಅವಘಡಗಳನ್ನು ನಿಯಂತ್ರಣ ‌ಮಾಡಲು ಸ್ಥಳೀಯರಲ್ಲಿ ಜಾಗೃತಿ ‌ಮೂಡಿಸಲಾಗುತ್ತಿದೆ ಎನ್ನುತ್ತಾರೆ ವಲಯ ಅರಣ್ಯ‌ ಅಧಿಕಾರಿ ವೈ.ಚೇತನ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು