ಬುಧವಾರ, ಜುಲೈ 28, 2021
23 °C
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ ಪದಾಧಿಕಾರಿಗಳ ಆರೋಪ

ಚಿಕ್ಕಬಳ್ಳಾಪುರ: ನರೇಗಾ ಕಾಮಗಾರಿಯಲ್ಲಿ ಅಕ್ರಮದ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾತಹಳ್ಳಿಯ ಗ್ರಾಮದ ಸರ್ವೇ ನಂಬರ್ 91ರ ಸುಮಾರು 100 ಎಕರೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಕೈಗೊಂಡಿರುವ ಅರಣ್ಯ ಅಭಿವೃದ್ಧಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ (ಎನ್‌ಎಸಿಎಫ್‌) ರಾಜ್ಯ ಘಟಕದ ಅಧ್ಯಕ್ಷ ಎ.ಟಿ.ಶಂಕರ್ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನರೇಗಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಲಾಗುತ್ತಿದೆ. ಕೆಲಸಕ್ಕೆ ಕಾರ್ಮಿಕರನ್ನು ಬಳಸುವ ಬದಲು ಜೆಸಿಬಿ ಬಳಸಿ ಕಾಮಗಾರಿ ನಡೆಸಲಾಗಿದೆ. ಲಾಕ್‌ಡೌನ್‌ ಕಾರಣಕ್ಕೆ ನಗರದಿಂದ ಹಳ್ಳಿಗಳಿಗೆ ಹಿಂದಿರುಗಿದ ಬಡ ಕಾರ್ಮಿಕರಿಗೆ ಕೆಲಸ ನೀಡುವ ಬದಲು ಗುತ್ತಿಗೆದಾರರ ಮೂಲಕ ಕೆಲಸ ಮಾಡಲಾಗಿದೆ’ ಎಂದು ಆಪಾದಿಸಿದರು.

‘ಕಾಮಗಾರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ ವೇಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರನ್ನು ಬಿಟ್ಟು ಪರಸ್ಥಳದ ಕೆಲವೇ ಜನರಿಗೆ ಕೆಲಸ ನೀಡಿದ್ದು ಕಂಡುಬಂದಿದೆ. ನಗದು ರೂಪದಲ್ಲಿ ಹಣ ಪಡೆದು ಎರಡು ದಿನ ಗಿಡ ನೆಡುವ ಕೆಲಸ ಮಾಡುತ್ತಿರುವುದಾಗಿ ಅಲ್ಲಿದ್ದ ಕಾರ್ಮಿಕರು ತಿಳಿಸಿದ್ದರು’ ಎಂದು ಹೇಳಿದರು.

‘ಕಾಮಗಾರಿ ಪ್ರದೇಶದಲ್ಲಿ ನೆಟ್ಟಿರುವ ಮಾಹಿತಿ ಫಲಕದಲ್ಲಿ ಕಾಮಗಾರಿ ಆರಂಭಿಸಿದ ಮತ್ತು ಮುಕ್ತಾಯವಾಗುವ ದಿನಾಂಕಗಳನ್ನು ನಮೂದಿಸಿಲ್ಲ. 100 ಎಕರೆಯ ಕಾಮಗಾರಿಯನ್ನು ಕೆಲವೇ ದಿನಗಳಲ್ಲಿ ಮುಗಿಸಿರುವುದು ಭ್ರಷ್ಟಾಚಾರ ನಡೆದಿರುವ ಶಂಕೆ ಹುಟ್ಟು ಹಾಕಿದೆ’ ಎಂದು ತಿಳಿಸಿದರು.

‘ಜೂನ್ 5 ರಂದು ತಾತಹಳ್ಳಿಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ದೂರು ನೀಡಲು ಹೋದರೆ ಅಧಿಕಾರಿಗಳು ಅಂತರ ಕಾಪಾಡುವ ನಿಟ್ಟಿನಲ್ಲಿ ಸಚಿವರ ಭೇಟಿಗೆ ಅವಕಾಶ ನೀಡಲಿಲ್ಲ’ ಎಂದರು.

‘ಈ ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವರಿಗೆ ಮತ್ತು ಸಂಬಂಧಿಸಿದ ಪ್ರಾಧಿಕಾರಕ್ಕೆ ದೂರು ನೀಡಲಾಗಿದೆ. ಕೂಡಲೇ ಅಲ್ಲಿ ನಡೆಯುತ್ತಿರುವ ಕೆಲಸಕ್ಕೆ ತಡೆ ನೀಡಬೇಕು. ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಎನ್‌ಎಸಿಎಫ್‌ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಎಂ.ಮೂಸ, ಕಾರ್ಯದರ್ಶಿ ಮಧುಕುಮಾರ್, ಸದಸ್ಯ ಲಕ್ಷ್ಮಣ್ ರಾಜು, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್, ನಗರ ಘಟಕದ ಅಧ್ಯಕ್ಷ ಸುಧಾಕರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು