ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಫಲಾನುಭವಿಗಳಿಗೆ ಹಂಚಿಕೆಯಾಗದ ಮನೆ

11,944 ಅರ್ಹರಿಗೆ ಲಭ್ಯವಾಗದ ವಸತಿ-–ನಿವೇಶನ
Last Updated 5 ಏಪ್ರಿಲ್ 2022, 4:21 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳಲ್ಲಿ ಪೈಕಿ 11,944 ವಸತಿ ಹಾಗೂ ನಿವೇಶನ ಅರ್ಹ ಫಲಾನುಭವಿಗಳಿಗೆ ವಿತರಣೆ ಬಾಕಿ ಉಳಿದಿದೆ.

‘ಅರ್ಹ ಫಲಾನುಭವಿಗಳಿಗೆ ವಸತಿ, ನಿವೇಶನ ಹಂಚಿಕೆ ಮಾಡದಿರಲು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳ ಬೇಜಾವ್ದಾರಿತನವೇ ಕಾರಣ’ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.

ತಾಲ್ಲೂಕಿನಲ್ಲಿ ಕಸಬಾ, ಗೂಳೂರು, ಮಿಟ್ಟೇಮರಿ, ಚೇಳೂರು, ಪಾತಪಾಳ್ಯ ಹೋಬಳಿ ಕೇಂದ್ರಗಳ ಪೈಕಿ, 25 ಗ್ರಾಮ ಪಂಚಾಯಿತಿ ಕೇಂದ್ರಗಳು ಇವೆ. 404 ಗ್ರಾಮಗಳು ಇವೆ. ಜಿಲ್ಲೆಯಲ್ಲಿ ಭೌಗೋಳಿಕ ಪ್ರದೇಶದ ವಿಸ್ತೀರ್ಣ ಹೆಚ್ಚಾಗಿರುವ ತಾಲ್ಲೂಕು ಕೇಂದ್ರ ಆಗಿದೆ.

ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿದೆ. ದೇಶದಲ್ಲಿ ದಶಮಾನೋತ್ಸವದ ಸಂಭ್ರಮ ಆಚರಣೆ ಮಾಡುತ್ತಿದ್ದೇವೆ. ಇಂದಿಗೂ ಕೃಷಿ ಕೂಲಿಕಾರ್ಮಿಕರಿಗೆ ಬದುಕಲು ನಿವೇಶನ, ಮನೆಗಳು ಇಲ್ಲ. ಗುಡಿಸಲು ಮನೆಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕೊಳಚೆ, ತಿಪ್ಪೆಗುಂಡಿ, ಚರಂಡಿಗಳ ಮೇಲೆ, ಚನ್ನದಾಸರ್, ಹಕ್ಕಿ-ಪಿಕ್ಕಿ ಸೇರಿದಂತೆ ಅನೇಕ ಸಮುದಾಯದವರು ಇಂದಿಗೂ ಸಹ ಟಾರುಪಾಲು, ಜಮಕಾನ ಹಾಕಿಕೊಂಡು ಗುಡಿಸಲು ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಸಮುದಾಯ ಭವನ, ಶಾಲಾ, ಅಂಗನವಾಡಿ ಕೇಂದ್ರಗಳ ಇತರೆ ಚಪ್ಪರಗಳು ಹಾಕಿಕೊಂಡು ಜೀವನ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ನಿವೇಶನ, ಮನೆರಹಿತರನ್ನು ಗುರುತಿಸಿ ಎಂದು ಗ್ರಾಮ ಪಂಚಾಯಿತಿ, ಕಂದಾಯ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಅನೇಕ ವರ್ಷಗಳಿಂದ ಇದುವರಿಗೂ ನಿವೇಶನ, ಮನೆಗಳನ್ನು ಅಧಿಕಾರಿಗಳು, ಸಿಬ್ಬಂದಿಯವರು ಗುರ್ತಿಸುವ ಕೆಲಸ ಮಾಡಿಲ್ಲ. ನಿವೇಶನ, ಮನೆಗಳನ್ನು ಹಂಚಿಕೆ ಮಾಡಿ ಎಂದು ಗ್ರಾಮಸ್ಥರು ಪಂಚಾಯಿತಿಗಳ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಅನೇಕ ವರ್ಷಗಳು ಕಳೆದರೂ ಮನೆ, ನಿವೇಶನ ಹಂಚಿಕೆ ಕಾರ್ಯ ನಡೆದಿಲ್ಲ. ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗ್ರಾಮಸಭೆಗಳಲ್ಲಿ ಅನುಮೋದನೆ ಪಡೆಯಬೇಕಾಗಿದೆ. ಪಂಚಾಯಿತಿಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ,ಸದಸ್ಯರ ರಾಜಕೀಯ ಒತ್ತಡಗಳಿಗೆ ಮಣಿದು, ಅರ್ಹ ಫಲಾನುಭವಿಗಳಿಗೆ ನಿವೇಶನ, ಮನೆ ಹಂಚಿಕೆ ಮಾಡಿದರೆ, ಪಿಡಿಓಗಳೇ ನೇರ ಹೊಣೆ ಎಂದು ಸ್ವತಃ ಶಾಸಕ ಎಸ್.ಎನ್.ಸುಬ್ಬಾರೆಡ್ಡಿರವರೇ, ಪಿಡಿಓಗಳಿಗೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪಿಡಿಓಗಳ ಸಭೆಯಲ್ಲಿ ಎಚ್ಚರಿಕೆ ನೀಡಿದ್ದರು.

ನಿವೇಶನ, ವಸತಿ ಹಂಚಿಕೆ ಮಾಡಿ

‘ಬಡವರಿಗೆ ಸೂರು ಮೂಲಸೌಲಭ್ಯಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ, ಬಡವರಿಗೆ ಮನೆ, ನಿವೇಶನ ಭಾಗ್ಯ ದೊರೆತಿಲ್ಲ. ರಾಜಕೀಯಗಳಿಂದ ಅರ್ಹ ಫಲಾನುಭವಿಗಳಿಗೆ ಮನೆ, ನಿವೇಶನಗಳು ಸಿಕ್ಕಿಲ್ಲ. ನಿವೇಶನ, ಮನೆ ನೀಡಿ ಎಂದು ಬಡವರು ಅಧಿಕಾರಿಗಳಿಗೆ ಅರ್ಜಿಗಳು ನೀಡಿದರೂ, ಇದುವರೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಬಡವರಿಗೆ ಸೂರು ಕಲ್ಪಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಗಳ ಬಳಿ ಗುರ್ತಿಸಿರುವ ನಿವೇಶನಗಳ ಜಾಗವನ್ನು ಕೆಲ ಕಡೆ ಕೆಲವರು ಒತ್ತುವರಿ ಮಾಡಿದ್ದಾರೆ. ಕೂಡಲೇ ಶಾಸಕರು, ಅಧಿಕಾರಿಗಳು ಮನೆ, ನಿವೇಶನವನ್ನು ಹಂಚಿಕೆ ಮಾಡಬೇಕು’ ಎಂದು ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಒತ್ತಾಯಿಸಿದ್ದಾರೆ.

ಅಧಿಕಾರಿಗಳೇ ನೇರ ಹೊಣೆ

‘ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಪೈಕಿ 11,944 ಮಂದಿ ಅರ್ಹ ಫಲಾನುಭವಿಗಳಿಗೆ ಮನೆ, ವಸತಿ ಹಂಚಿಕೆ ಆಗದಿರಲು ಜನಪ್ರತಿನಿಧಿಗಳು, ಅಧಿಕಾರಿಗಳೇ ನೇರ ಕಾರಣ ಆಗಿದ್ದಾರೆ. ಮನೆಗೆ ಭೇಟಿ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಮನೆ, ವಸತಿಯನ್ನು ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ. ಸರ್ಕಾರಗಳು ಬಡವರಿಗೆ ಸೂರು ಕಲ್ಪಿಸಿದರೂ, ದೇವರು ವರ ಕೊಟ್ಟರೂ... ಪೂಜಾರಿ ವರ ನೀಡಿಲ್ಲ ಎಂಬಂತೆ ಆಗಿದೆ. ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಬಾಕಿ ಇರುವ ನಿವೇಶನ, ವಸತಿರಹಿತ ಅರ್ಹ ಫಲಾನುಭವಿಗಳಿಗೆ ವಸತಿ, ನಿವೇಶನ ಹಂಚಿಕೆ ಮಾಡಬೇಕು’ ಎಂದು ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚನ್ನರಾಯಪ್ಪ ತಿಳಿಸಿದರು.

85 ಫಲಾನುಭವಿಗಳಿಗೆ ಹಂಚಿಕೆಗೆ ಸಿದ್ಧ

‘ತಾಲ್ಲೂಕಿನ ನಲ್ಲಗುಟ್ಲಪಲ್ಲಿ, ತಿಮ್ಮಂಪಲ್ಲಿ ಪಂಚಾಯಿತಿಗಳ ಮಾಹಿತಿ ಅಪ್ ಡೇಟ್ ಆಗಬೇಕಾಗಿದೆ. ಉಳಿದಂತೆ ನಿವೇಶನಗಳನ್ನು ಹಂಚಲು ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದೆ. ತಾಲ್ಲೂಕಿನಲ್ಲಿ 17 ಎಕರೆ 2 ಗುಂಟೆ ಸರ್ಕಾರಿ ಜಾಗವನ್ನುಗುರುತು ಮಾಡಬೇಕಾಗಿದೆ. ಕೆಲವೇ ದಿನಗಳಲ್ಲಿ ಶಾಸಕರು 85 ಅರ್ಹ ಫಲಾನುಭವಿಗಳಿಗೆ ನಿವೇಶನ, ವಸತಿ ಪ್ರಮಾಣಪತ್ರಗಳನ್ನು ವಿತರಣೆ ಮಾಡಲಿದ್ದಾರೆ’ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎನ್.ಮಂಜುನಾಥಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT