ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಹೂ ಮಾರುಕಟ್ಟೆ ವಿವಾದಕ್ಕೆ ತೆರೆ

ಜಿಲ್ಲಾಡಳಿತದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ಮೊರೆ ಹೋಗಿದ್ದ ವರ್ತಕರು
Last Updated 24 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಯ ವಿವಾದಕ್ಕೆ ತೆರೆ ಬಿದ್ದಿದೆ. ಎಪಿಎಂಸಿಯಲ್ಲಿಯೇ ಹೂ ಮಾರಾಟ ಮುಂದುವರಿಸಬಹುದು ಎಂದು ಎಪಿಎಂಸಿಯು ಹೈಕೋರ್ಟ್‌ಗೆ ಸಲ್ಲಿಸಿದ್ದಜ್ಞಾಪನಾ ಪತ್ರವನ್ನು ನ್ಯಾಯಪೀಠ ಮಾನ್ಯ ಮಾಡಿದೆ.

ಈ ಮೂಲಕ ಹಲವು ತಿಂಗಳಿನಿಂದ ತೀವ್ರ ಜಿದ್ದಾಜಿದ್ದಿ, ಜಟಾಪಟಿಗೆ ಕಾರಣವಾಗಿದ್ದ ಹೂ ಮಾರುಕಟ್ಟೆ ವಿವಾದಕ್ಕೆ ವಿರಾಮ ಬಿದ್ದಿದೆ.ಇದು ಸಚಿವ ಡಾ.ಕೆ.ಸುಧಾಕರ್ ಮತ್ತು ಜಿಲ್ಲಾಡಳಿತಕ್ಕೆ ಹಿನ್ನಡೆ ಎಂದೇ ಹೂ ವ್ಯಾಪಾರಿಗಳು ನುಡಿಯುತ್ತಿದ್ದಾರೆ.

ಹೂ ಮಾರುಕಟ್ಟೆ ವಿವಾದ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ತೀವ್ರ ರಾಜಕೀಯ ಚರ್ಚೆಯ ವಿಷಯವೂ ಆಗಿತ್ತು. ವರ್ತಕರು ಪಕ್ಷಾವಾರು ವಿಭಜನೆಯಾಗಿ ಪರ–ವಿರೋಧದ ಜಟಾಪಟಿ ನಡೆಸಿದ್ದರು.

ಏನಿದು ವಿವಾದ: ನಗರದ ಎಪಿಎಂಸಿ ಆವರಣದಲ್ಲಿಯೇ ಈ ಹಿಂದಿನಿಂದ ಹೂವಿನ ವಹಿವಾಟು ನಡೆಯುತ್ತಿತ್ತು.ಆದರೆ ಕೋವಿಡ್ ಸಮಯದಲ್ಲಿ ಎಪಿಎಂಸಿಯಲ್ಲಿ ಜನರ ದಟ್ಟಣೆ ಹೆಚ್ಚುತ್ತದೆ. ಕೋವಿಡ್ ಹರಡಲು ಕಾರಣ ಆಗುತ್ತದೆ ಎಂದು ಜಿಲ್ಲಾಡಳಿತ ನಗರದ ಹೊರವಲಯದ ಕೆ.ವಿ.ಕ್ಯಾಂಪಸ್‌ ಬಳಿಯ ಖಾಸಗಿ ಜಾಗದಲ್ಲಿ ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳ ನೀಡಿತ್ತು.

ಕೋವಿಡ್ ಪೂರ್ಣವಾದ ತರುವಾಯ ಮತ್ತೆ ಎಪಿಎಂಸಿಯಲ್ಲಿಯೇ ವಹಿವಾಟು ನಡೆಸಬಹುದು ಎನ್ನುವ ಆಸೆಯನ್ನು ವರ್ತಕರು ಮತ್ತು ರೈತರು ಹೊಂದಿದ್ದರು. ಈ ನಡುವೆ ಜಿಲ್ಲಾಡಳಿತವು ಮತ್ತೆ ಎಪಿಎಂಸಿಯಲ್ಲಿ ಹೂ ವಹಿವಾಟಿಗೆ ಅವಕಾಶವಿಲ್ಲ. ಎಪಿಎಂಸಿಯಲ್ಲಿ ಸ್ಥಳಾವಕಾಶ ಕಡಿಮೆ ಇವೆ. ಬೇರೆ ಕಡೆ ಸ್ಥಳ ಗುರುತಿಸಿ ಅಲ್ಲಿ ಹೂ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಪ್ರಕಟಿಸಿತು. ಇದಕ್ಕೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಸಹ ಧ್ವನಿಗೂಡಿಸಿದರು.

ಆದರೆಚಿಕ್ಕಬಳ್ಳಾಪುರ ಎಪಿಎಂಸಿ 29.31 ಎಕರೆ ಇದೆ. ಎಪಿಎಂಸಿಯಲ್ಲಿಯೇ ಹೂ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೂ ವರ್ತಕರು ಮತ್ತು ಹೂ ಬೆಳೆಗಾರರ ಪದೇ ಪದೇ ಆಗ್ರಹಿಸುತ್ತಿದ್ದರು. ಎಪಿಎಂಸಿಯಲ್ಲಿ ವಹಿವಾಟಿಗೆ ಅವಕಾಶ ನೀಡುವಂತೆ ಎರಡು ಬಾರಿ ರೈತರು ಮತ್ತು ವರ್ತಕರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಸಹ ನಡೆಸಿದ್ದರು.

ಈಹೋರಾಟಕ್ಕಾಗಿ ಎಪಿಎಂಸಿ ಕಾರ್ಯದರ್ಶಿ ಹಾಗೂ ಪೊಲೀಸರಿಂದ ವರ್ತಕರು ನೋಟಿಸ್ ಸಹ ಪಡೆದರು.ಹೋರಾಟ ಕಾವು ಪಡೆಯದಂತೆ ತಡೆಯುವ ಉದ್ದೇಶದಿಂದ ನೋಟಿಸ್ ಅಸ್ತ್ರ ಸಹ ಬಳಸಲಾಯಿತು. ಪ್ರತಿಭಟನೆ ಸಂದರ್ಭದಲ್ಲಿ ಬಂಧನವೂ ಆಯಿತು.

ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ಮಾರುಕಟ್ಟೆ ಪ್ರಾಂಗಣದಲ್ಲಿ ಹೂ ವ್ಯಾಪಾರ ನಡೆಸುವ ವರ್ತಕರು, ದಲ್ಲಾಳಿಗಳ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಪರವಾನಗಿ ರದ್ದುಗೊಳಿಸಲು ಕ್ರಮವಹಿಸಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ಎಚ್ಚರಿಕೆ ಸಹ ನೀಡಿದ್ದರು.

ಜಿಲ್ಲಾಡಳಿತದ ಈ ನಿಲುವಿಗೆ ಕೆಲವು ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದರು. ಎಪಿಎಂಸಿಯಲ್ಲಿಯೇ ವಹಿವಾಟು ಅವಕಾಶ ನೀಡಬೇಕು ಎಂದು ಪಟ್ಟುಹಿಡಿದಿದ್ದರು.ಎಪಿಎಂಸಿಯಲ್ಲಿ ವಹಿವಾಟಿಗೆ ಅವಕಾಶಕೋರಿ ಎಸ್.ಕ್ಯಾತಪ್ಪಣ್ಣ, ಶ್ರೀಧರ್, ರಮೇಶ್ ರೆಡ್ಡಿ ಮತ್ತಿತರರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದರು.

***

ಅವಕಾಶವಿಲ್ಲ ಎಂದಿದ್ದ ಸುಧಾಕರ್

2021ರ ನ.13ರಂದು ಹೂ ಬೆಳೆಗಾರರು ಹಾಗೂ ವರ್ತಕರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಖುದ್ದು ಸ್ಥಳಕ್ಕೆ ಬಂದ ಸಚಿವ ಡಾ.ಕೆ.ಸುಧಾಕರ್, ‘ಎ‍ಪಿಎಂಸಿಯಲ್ಲಿ ಹೂ ವಹಿವಾಟು ನಡೆಸಲು ಅವಕಾಶವಿಲ್ಲ. ಅಲ್ಲಿ 70 ಮಳಿಗೆಗಳಿಗೆ 130ಕ್ಕೂ ಹೆಚ್ಚು ವರ್ತಕರು ಇದ್ದಾರೆ. ಜಾಗ ಕಡಿಮೆ ಇದೆ. ಎರಡು ದಿನಗಳಲ್ಲಿ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು. ನಿಮಗೆ ಅನುಕೂಲವಾಗುವ ಜಾಗದಲ್ಲಿ ಹೂ ಮಾರುಕಟ್ಟೆ ನಿರ್ಮಿಸಲಾಗುವುದು’ ಎಂದಿದ್ದರು.

ಸಚಿವರು ಭರವಸೆ ನೀಡಿ ಮೂರು ತಿಂಗಳಾದರೂ ಸಭೆ ನಡೆಸಲೇ ಇಲ್ಲ. ತಿಪ್ಪೇನಹಳ್ಳಿ ಮತ್ತಿತರ ಕಡೆಗಳಲ್ಲಿ ಹೂ ಮಾರುಕಟ್ಟೆಗೆ ಸ್ಥಳ ನಿಗದಿ ಆಗಿದೆಯಂತೆ ಎನ್ನುವ ಗಾಳಿ ಸುದ್ದಿಗಳು ವರ್ತಕರ ನಡುವೆ ಜಟಾಪಟಿಗೆ ಕಾರಣವಾಗಿತ್ತು.

***

ರಾಜಕೀಯಕ್ಕಾಗಿ ಕಿರುಕುಳ

ಜಿಲ್ಲಾಡಳಿತ ಮತ್ತು ಸಚಿವ ಡಾ.ಕೆ.ಸುಧಾಕರ್ ರಾಜಕೀಯ ಉದ್ದೇಶದಿಂದ ವರ್ತಕರಿಗೆ ಕಿರುಕುಳ ನೀಡಲು ಮುಂದಾಗಿದ್ದರು. ಇವರ ದಮನಕಾರಿ ನಡೆಯ ವಿರುದ್ಧ ಹೈಕೋರ್ಟ್‌ನ ತೀರ್ಪು ನೀಡಿದೆ. ಇದು ನ್ಯಾಯಕ್ಕೆ ಸಂದ ಗೆಲುವು ಎಂದು ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಎಂ.ಶಿವಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

***

ಸತ್ಯಕ್ಕೆ ದೊರೆತ ಜಯ

ಹೈಕೋರ್ಟ್ ಆದೇಶ ಸತ್ಯಕ್ಕೆ ಸಂದ ಜಯ. ಎಪಿಎಂಸಿಯಲ್ಲಿಯೇ ವಹಿವಾಟು ನಡೆಸಲು ಅವಕಾಶ ನೀಡಿದರೆ ವರ್ತಕರು ಮತ್ತು ರೈತರಿಗೆ ಅನುಕೂಲವಾಗುತ್ತದೆ. ಆದರೆ ಜಿಲ್ಲಾಡಳಿತ ಎಪಿಎಂಸಿಯಲ್ಲಿ ಅವಕಾಶ ನೀಡಲಿಲ್ಲ. ಅವಕಾಶಕ್ಕೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೆವು. ನ್ಯಾಯಾಲಯದ ಆದೇಶ ಸಂತೋಷ ತಂದಿದೆ ಎಂದುವಿಶ್ವೇಶ್ವರಯ್ಯ ಹೂ ವರ್ತಕರ ಸಂಘದ ಅಧ್ಯಕ್ಷ ಹಾಗೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT