ಭಾನುವಾರ, ಏಪ್ರಿಲ್ 2, 2023
31 °C
ಎರಡು ವರ್ಷವಾದರೂ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೇಮಕವಾಗದ ಅಧ್ಯಕ್ಷ

ತಿಕ್ಕಾಟದಿಂದ ನನೆಗುದಿಗೆ ಬಿದ್ದಿತೆ ಅಧ್ಯಕ್ಷರ ನೇಮಕ?

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದೆ. ಸರ್ಕಾರದ ಅವಧಿ ಇನ್ನೂ ಎರಡು ವರ್ಷಗಳು ಮಾತ್ರ ಇದೆ. ಹೀಗಿದ್ದರೂ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ‍್ರಾಧಿಕಾರದ ಅಧ್ಯಕ್ಷ ಸ್ಥಾನ ಭರ್ತಿಯಾಗಿಲ್ಲ.

ಈಗ ಅಧಿಕಾರ ನೀಡಿದರೂ ಎರಡು ವರ್ಷಗಳ ಕಾಲ ಮಾತ್ರ ಅನುಭವಿಸಬಹುದು. ಅಧ್ಯಕ್ಷ ಸ್ಥಾನದ ಆಸೆ ಹೊತ್ತ ಮುಖಂಡರು ಬಹಿರಂಗವಾಗಿ ಹೇಳಿಕೊಳ್ಳುವಂತಿಲ್ಲ ಎನ್ನುವ ಸ್ಥಿತಿಯಲ್ಲಿ ಇದ್ದಾರೆ. ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರು ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದಾಗ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ.ಜಿ.ವಿ. ಮಂಜುನಾಥ್ ಅವರ ಹೆಸರನ್ನೂ ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಪ್ರಸ್ತಾಪಿಸಿದ್ದಾರೆ. ಆರ್‌ಎಸ್‌ಎಸ್ ಹಿನ್ನೆಲೆಯ ಮಂಜುನಾಥ್ ಅವರ ಹೆಸರು ಹೇಳಿದ್ದು ಅಧ್ಯಕ್ಷ ಸ್ಥಾನದ ವಿಚಾರವನ್ನು ಮತ್ತಷ್ಟು ರಂಗೇರಿಸಿದೆ.

ಮೂಲ ಮತ್ತು ವಲಸಿಗ ಬಿಜೆಪಿ ಎನ್ನುವ ತಿಕ್ಕಾಟದ ಕಾರಣದಿಂದಲೇ ಅಧ್ಯಕ್ಷ ಸ್ಥಾನಕ್ಕೆ ನೇಮಕ ನನೆಗುದಿಗೆ ಬಿದ್ದಿತ್ತೇ ಎನ್ನುವ ಚರ್ಚೆಯೂ ಇದೆ. ಜಿಲ್ಲೆಯಲ್ಲಿ ಬಿಜೆಪಿ ಹೈಕಮಾಂಡ್ ಎನಿಸಿರುವ ಸಚಿವ ಡಾ.ಕೆ. ಸುಧಾಕರ್ ಅವರು ಅಧ್ಯಕ್ಷರ ನೇಮಕ ವಿಚಾರದಲ್ಲಿ ಇಂದಿಗೂ ಸ್ಪಷ್ಟ ನಿರ್ಧಾರ ಕೈಗೊಳ್ಳದಿರುವುದು ಇದಕ್ಕೆ ಪುಷ್ಟಿ ನೀಡಿದೆ.

ನಗರ ಸ್ಥಳೀಯ ಸಂಸ್ಥೆಗಳು, ನಿಗಮ ಮಂಡಳಿಗಳು, ವಿವಿಧ ಪ್ರಾಧಿಕಾರಗಳಿಗೆ, ಮಂಡಳಿಗಳ ಅಧ್ಯಕ್ಷ ಮತ್ತು ಸದಸ್ಯರ ಸ್ಥಾನಗಳ ಭರ್ತಿ ವಿಚಾರದಲ್ಲಿ ಆರ್‌ಎಸ್ಎಸ್ ತೀರ್ಮಾನವೂ ಪ್ರಮುಖವಾಗುತ್ತದೆ. ಇದು ಬಹಿರಂಗ ಸತ್ಯ. ಕೆಲವು ಆಕಾಂಕ್ಷಿ ಗಳು ಆರ್‌ಎಸ್‌ಎಸ್ ನಾಯಕರ ಸಂಪರ್ಕ ದಲ್ಲಿಯೂ ಇದ್ದಾರೆ ಎನ್ನಲಾಗುತ್ತಿದೆ.

ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಪ್ಪಾಲು ಮಂಜುನಾಥ್, ಎಸ್‌.ಆರ್‌. ರಾಮು ಹೆಸರು ಪ್ರಮುಖವಾಗಿವೆ. ಇವರ ಜತೆ ಮತ್ತಷ್ಟು ಹೆಸರುಗಳು ಪಕ್ಷದ ಆಂತರಿಕ ವಲಯದಲ್ಲಿವೆ. ಬಿಜೆಪಿಯ ಮೂಲ ಕಾರ್ಯಕರ್ತರು ಮತ್ತು ಹಲವು ವರ್ಷಗಳಿಂದ ಪಕ್ಷಕ್ಕೆ ದುಡಿಯುತ್ತಿರುವ ಮುಖಂಡರಿಗೆ ಅಧ್ಯಕ್ಷ ಸ್ಥಾನ ದೊರೆಯುತ್ತದೆಯೇ ಅಥವಾ ಸುಧಾಕರ್ ಅವರ ಬೆಂಬಲಿಗರಿಗೆ ಸ್ಥಾನ ದೊರೆಯುತ್ತದೆಯೇ ಎನ್ನುವುದು ಚರ್ಚೆಯ ವಿಷಯವಾಗಿದೆ.

ನಿಗಮ, ಮಂಡಳಿಯಿಂದ ನಗರಾಭಿವೃದ್ಧಿಯತ್ತ: ಬಿಜೆಪಿ ಹಿರಿಯ ಮುಖಂಡ ಡಾ.ಜಿ.ವಿ. ಮಂಜುನಾಥ್ ಅವರಿಗೆ ಯಾವುದಾದರೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ದೊರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೇರಿದಂತೆ ಹಲವರು ಈ ದಿಕ್ಕಿನಲ್ಲಿ ಪ್ರಯತ್ನಿಸಿದ್ದರು ಎನ್ನುತ್ತವೆ ಬಿಜೆಪಿ ಮೂಲಗಳು. ಆದರೆ, ಆ ನಿರೀಕ್ಷೆ ಈಗ ತಣಿದಿದೆ.

ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ‘ಡಾ.ಮಂಜುನಾಥ್ ಬಿಜೆಪಿಗಾಗಿ ಕೆಲಸ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಿದ್ದರು. ಜಿಲ್ಲಾಧ್ಯಕ್ಷರಾಗಿದ್ದರು. ಅವರಿಗೂ ಅಧ್ಯಕ್ಷ ಸ್ಥಾನ ನೀಡಬೇಕು’ ಎಂದು ಹೇಳಿದ್ದರು. 

ಶಿಡ್ಲಘಟ್ಟ ಹೊರತುಪಡಿಸಿ ಜಿಲ್ಲೆಯ ಯಾವ ನಗರ, ಪಟ್ಟಣ ಅಭಿವೃದ್ಧಿ ಯೋಜನಾ ಪ್ರಾಧಿಕಾರಗಳಿಗೂ ಅಧ್ಯಕ್ಷರು ನೇಮಕವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು