ಸೋಮವಾರ, ಅಕ್ಟೋಬರ್ 26, 2020
24 °C
ಕೋವಿಡ್‌ ನಿಯಂತ್ರಣಕ್ಕೆ ಕಾಂಗ್ರೆಸ್‌ನಿಂದ ‘ಆರೋಗ್ಯ ಹಸ್ತ’ ಕಾರ್ಯಕ್ರಮ

ಚಿಕ್ಕಬಳ್ಳಾಪುರ: ‘ಎಲ್ಲರ ಆರೋಗ್ಯ ತಪಾಸಣೆ ಗುರಿ’; ಆರ್‌.ಧ್ರುವನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಕಾಂಗ್ರೆಸ್‌ ಪಕ್ಷವು ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಕೋವಿಡ್‌ ನಿಟ್ಟಿನಲ್ಲಿ ರಾಜ್ಯದ ಜನರ ಪ್ರಾಥಮಿಕ ಆರೋಗ್ಯ ತಪಾಸಣೆಗೆ ಮುಂದಾಗಿದೆ, ತರಬೇತಿ ಪಡೆದ ಕಾಂಗ್ರೆಸ್‌ ‘ಕೊರೊನಾ ಸೇನಾನಿಗಳು’ (ವಾರಿಯರ್ಸ್‌) ಮನೆಮನೆಗೆ ತೆರಳಿ ತಪಾಸಣೆ ಮಾಡುವರು’ ಎಂದು ಕಾಂಗ್ರೆಸ್‌ನ ಆರೋಗ್ಯ ಹಸ್ತದ ಅಧ್ಯಕ್ಷ ಆರ್‌.ಧ್ರುವನಾರಾಯಣ ಇಲ್ಲಿ ಭಾನುವಾರ ತಿಳಿಸಿದರು.

‘ರಾಜ್ಯದ ಒಟ್ಟು 7,800 ಸ್ಥಳೀಯ ಸಂಸ್ಥೆಗಳ (ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ಪಾಲಿಕೆ…) ವ್ಯಾಪ್ತಿಯಲ್ಲಿ 320 ವೈದ್ಯರು ಸಹಿತ 15 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್‌ ‘ಕೊರೊನಾ ಸೇನಾನಿಗಳು’ ಆರೋಗ್ಯ ಹಸ್ತದಲ್ಲಿ ಕಾರ್ಯ ನಿರ್ವಹಿಸುವರು. ತಪಾಸಣೆ ನಿಟ್ಟಿನಲ್ಲಿ ಸೇನಾನಿಗಳಿಗೆ ತರಬೇತಿ ನೀಡಿ ಸಜ್ಜುಗೊಳಿಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ತಪಾಸಣೆ ನಡೆಯಲಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ‘ಸೇನಾನಿ’ಗಳನ್ನು ಆಯ್ಕೆ ಮಾಡಿದ್ದೇವೆ. ತಪಾಸಣೆಗೆ ಒಟ್ಟು ಎಂಟು ಸಾವಿರ ಮೆಡಿಕಲ್‌ ಕಿಟ್‌ಗಳನ್ನು ನೀಡಿದ್ದೇವೆ. ಒಂದು ಮೆಡಿಕಲ್‌ ಕಿಟ್‌ಗೆ ₹4,500 ದರ ಇದೆ. ಕಿಟ್‌ನಲ್ಲಿ ಮುಖ ಮತ್ತು ಕೈ ಕವಚ, ಫೇಸ್‌ ಶೀಲ್ಡ್, ಡಿಜಿಟಲ್‌ ಥರ್ಮಾಮೀಟರ್‌, ಆಕ್ಸಿ ಮೀಟರ್‌, ಸ್ಯಾನಿಟೈಸರ್‌ ಇರುತ್ತದೆ. ಸೇನಾನಿಗಳಿಗೆ ₹ 1 ಲಕ್ಷದ ಗುಂಪು ವಿಮೆ ಮಾಡಿಸಲಾಗಿದೆ’ ಎಂದರು.

‘ಈ ಕಾರ್ಯಕ್ರಮಕ್ಕೆ ಒಟ್ಟಾರೆ ₹ 5 ಕೋಟಿ ವೆಚ್ಚವಾಗಲಿದೆ. ಕಾಂಗ್ರೆಸ್‌ ಮುಖಂಡರು, ಶಾಸಕರು, ಹಿತೈಷಿಗಳು ನೀಡಿದ ದೇಣಿಗೆಯನ್ನು ಈ ಕಾರ್ಯಕ್ಕೆ ವಿನಿಯೋಗಿಸಲಾಗುತ್ತಿದೆ. ‘ಸೇನಾನಿಗಳು’ ಮನೆಮನೆಗೆ ತೆರಳಿ ದೇಹದ ಉಷ್ಣತೆ, ಆಮ್ಲಜನಕ ಪ್ರಮಾಣ ಸಹಿತ ಪ್ರಾಥಮಿಕ ತಪಾಸಣೆ ಮಾಡುವರು. ಅನಾರೋಗ್ಯ, ಸೋಂಕಿನ ಲಕ್ಷಣಗಳಿದ್ದರೆ ಆರೋಗ್ಯ ಸಿಬ್ಬಂದಿ, ಸ್ಥಳೀಯ ಆಡಳಿತ, ಸಂಬಂಧಪಟ್ಟವರಿಗೆ ಮಾಹಿತಿ ನೀಡುವರು’ ಎಂದರು.

‘ಕೋವಿಡ್‌ ಸೋಂಕಿತರನ್ನು ಪತ್ತೆ ಹಚ್ಚಿ ಇತರರಿಗೆ ಹರಡದಂತೆ ತಪ್ಪಿಸಿ ಕೊರೊನಾ ಸರಪಳಿ ತುಂಡರಿಸುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಕೋವಿಡ್‌ ನಿಯಂತ್ರಣ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ, ಸರ್ಕಾರದ ಕೆಲಸವನ್ನು ಆರೋಗ್ಯ ಹಸ್ತದ ಮೂಲಕ ಕಾಂಗ್ರೆಸ್‌ ಮಾಡುತ್ತಿದೆ’ ಎಂದರು.

ಆರೋಗ್ಯ ಹಸ್ತದ ಸಂಚಾಲಕ ಡಾ.ಮಧುಸೂದನ್‌ ಮಾತನಾಡಿ, ‘ಆರಂಭಿಕ ಹಂತದಲ್ಲೇ ಕಾಯಲೆ ಗುರು ತಿಸಿ, ಉಲ್ಬಣಿಸದಂತೆ ಕ್ರಮ ವಹಿಸುವು ಈ ಕಾರ್ಯಕ್ರಮದ ಉದ್ದೇಶ. ಜನಸ್ಪಂದನೆಯೂ ಚೆನ್ನಾಗಿದೆ’ ಎಂದರು.

ಕಾರ್ಯಕ್ರಮದ ಸಂಚಾಲಕ ಚಂದ್ರಪ್ಪ, ಮುಖಂಡ ಬಿ.ಎಲ್‌.ಶಂಕರ್‌, ಡಾ.ಕೆ.ಪಿ.ಅಂಶುಮಂತ್‌, ಬಿ.ಎಂ.ಸಂದೀಪ್‌, ಪಟೇಲ್‌ಶಿವಣ್ಣ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು