ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಹಿನ್ನೋಟ: ವರ್ಷಧಾರೆಯಲ್ಲಿ ಮಿಂದ 2021

ನಾಲ್ಕು ದಶಕಗಳ ನಂತರ ಭಾರಿ ಮಳೆ; ವರ್ಷದ ಆರಂಭದಲ್ಲಿಯೇ ಹಿರೇನಾಗವಲ್ಲಿಯಲ್ಲಿ ಸ್ಫೋಟ
Last Updated 29 ಡಿಸೆಂಬರ್ 2021, 6:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:ಜಿಲ್ಲೆಗೆ ಕಹಿಗಿಂತ ಸಿಹಿಯನ್ನೇ2021ನೇ ಸಾಲು ತಂದಿದೆ. ವರ್ಷದ ಆರಂಭದಲ್ಲಿ ಹಿರೇನಾಗವಲ್ಲಿಯಲ್ಲಿ ಸ್ಫೋಟ, ವರ್ಷಾಂತ್ಯದಲ್ಲಿ ಭೂಕಂಪನ, ನಂದಿಬೆಟ್ಟದಲ್ಲಿ ಭೂಕುಸಿತ, ಚಿಂತಾಮಣಿ ತಾಲ್ಲೂಕಿನ ಮರಿನಾಯಕಹಳ್ಳಿ ಬಳಿ ನಡೆದ ಅಪಘಾತದಲ್ಲಿ 9 ಜನರ ಸಾವು ಸೇರಿದಂತೆ ಸಣ್ಣಪುಟ್ಟ ದುರ್ಘಟನೆಗಳನ್ನು ಹೊರತುಪಡಿಸಿದರೆ ಜಿಲ್ಲೆಯ ಪಾಲಿಗೆ ಈ ವರ್ಷ ಸಂಭ್ರಮವನ್ನೇ ತಂದಿದೆ.

ಹೀಗೆ 2021ರಲ್ಲಿ ಜಿಲ್ಲೆಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳನ್ನು ‘ಪ್ರಜಾವಾಣಿ’ಯ ‘ವರ್ಷದ ಹಿನ್ನೋಟ’ ಮೆಲುಕು ಹಾಕಿದೆ.

2021ನೇ ವರ್ಷ ಜಿಲ್ಲೆಯ ಪಾಲಿಗೆ ಬರಪೂರ ವರ್ಷಧಾರೆಯನ್ನು ಹರಿಸಿದೆ. ಹೇರಳ ಮಳೆಯ ಕಾರಣದಿಂದಲೇ ಜಿಲ್ಲೆಯು ರಾಜ್ಯದಲ್ಲಿ ಸುದ್ದಿ ಆಯಿತು.ನಾಲ್ಕು ದಶಕಗಳ ನಂತರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿದೆ.

ಮಳೆಯ ವಿಚಾರದಲ್ಲಿ ನೋಡುವುದಾದರೆ ಜಿಲ್ಲೆಗೆ 2021 ಸಂಭ್ರಮವನ್ನೇ ತಂದಿತು. ಜಕ್ಕಲಮಡುಗು, ಉತ್ತರ ಪಿನಾಕಿನಿ, ಚಿತ್ರಾವತಿ ಜಲಾಶಯಗಳು ಮೈದುಂಬಿದವರು. ಶೇ 90ರಷ್ಟು ಕೆರೆಗಳು ಕೋಡಿ ಹರಿದವು. ಬರದನಾಡಿನ ಹಣೆಪಟ್ಟಿ ಹೊಂದಿದ್ದ ಚಿಕ್ಕಬಳ್ಳಾಪುರ ಈ ವರ್ಷ ಮಳೆಯ ನಾಡು ಎನಿಸಿತು.ಎರಡು ಮೂರು ದಶಕಗಳಿಂದ ತುಂಬದಿದ್ದ ಕೆರೆಗಳಲ್ಲಿ ಕೋಡಿ ಹರಿಯಿತು.

ಸೆಪ್ಟೆಂಬರ್‌ನಿಂದ ನವೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಸುರಿದಹೇರಳ ಮಳೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟಕ್ಕೂ ಕಾರಣವಾಯಿತು. ನಾಲ್ಕು ಮಂದಿ ನೀರಿನಲ್ಲಿ ಕೊಚ್ಚಿ ಹೋದರು. ಅವಘಡಗಳು, ವಿಪತ್ತುಗಳು ಸಂಭವಿಸಿದರೂ ಅಂತರ್ಜಲಮಟ್ಟವನ್ನು ಉತ್ತಮಗೊಳಿಸಿತು. ನಾಳೆಗಳಿಗೆ ಈ ನೀರು ನೆಮ್ಮದಿ ತಂದಿತು ಎನ್ನುವ ಭಾವನೆಯನ್ನು ಜನರಲ್ಲಿ ಮೂಡಿಸಿತು.

ವರ್ಷಾರಂಭದಲ್ಲಿಯೇ ಸ್ಫೋಟ: ಹಾಗೆ ನೋಡಿದರೆ 2021 ವರ್ಷದ ಆರಂಭ ಜಿಲ್ಲೆಯ ಪಾಲಿಗೆ ಉತ್ತಮವಾಗಿಯೇನೂ ಇರಲಿಲ್ಲ. ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿ ಬಳಿ ಜಿಲೆಟಿನ್ ಸ್ಫೋಟ ಸಂಭವಿಸಿ ಆರು ಜನರು ಮೃತಪಟ್ಟರು.ಈ ದುರ್ಘಟನೆಯ ನಂತರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ಅವ್ಯಾಹತವಾದ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಇಂದಿಗೂ ನಡೆಯುತ್ತಿವೆ.

ಚಿಗುರಿದ ರೋಪ್‌ ವೇ ಕನಸು: ಪ್ರಸಿದ್ಧ ನಂದಿಗಿರಿಧಾಮಕ್ಕೆ ರೋಪ್ ವೇ ಅಳವಡಿಸುವ ಸಂಬಂಧ 1980ರಿಂದಲೂ ಚರ್ಚೆಗಳು ನಡೆದಿವೆ. ಆದರೆ ಮೊದಲ ಹೆಜ್ಜೆ ಸಾಕಾರಗೊಂಡಿದ್ದು 2021ರಲ್ಲಿಯೇ. ನಂದಿಬೆಟ್ಟವನ್ನುಅಂತರರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ತೋಟಗಾರಿಕಾ ಇಲಾಖೆಯ ಸುಪರ್ದಿನಲ್ಲಿದ್ದ ನಂದಿಯನ್ನು ಪ್ರವಾಸೋದ್ಯಮ ಇಲಾಖೆಯ ತೆಕ್ಕೆಗೆ ನೀಡಲಾಯಿತು.

ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್ ನಂದಿಗಿರಿಧಾಮಕ್ಕೆ ಭೇಟಿ ನೀಡಿ ರೋಪ್ ವೇ ಅಳವಡಿಸುವ ಸಂಬಂಧ ಕಂಪನಿಯೊಂದರ ಜತೆ ಮಾತುಕತೆ ನಡೆಸಿದರು. ಮಣ್ಣು ಪರೀಕ್ಷೆ, ಸಮೀಕ್ಷೆ ಸೇರಿದಂತೆ ವಿವಿಧ ಚಟುವಟಿಕೆಗಳು ಸಹ ನಡೆದವು. ಈ ಎಲ್ಲ ಕಾರಣದಿಂದ ನಂದಿಬೆಟ್ಟದಲ್ಲಿ ರೋಪ್ ವೇ ಆಗುತ್ತದೆ ಎನ್ನುವ ಆಸೆಯನ್ನು ಈ ವರ್ಷ ಪ್ರವಾಸಿ ಪ್ರಿಯರು ಹಾಗೂ ಜಿಲ್ಲೆಯಲ್ಲಿ ನಾಗರಿಕರಲ್ಲಿ ಹೆಚ್ಚಿನದಾಗಿಯೇ ಬಿತ್ತಿತು.

ವೈದ್ಯಕೀಯ ಕ್ಷೇತ್ರದಲ್ಲಿ ಆಶಾವಾದ: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರು ಕೆಳಕ್ಕಿಳಿದು ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದರು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರು ಅದೇ ಖಾತೆಯಲ್ಲಿ ಮುಂದುವರಿದರು. ಇದು ಜಿಲ್ಲೆಯ ಮಟ್ಟಿಗೆ ಆಶಾವಾದ.

ಚಿಕ್ಕಬಳ್ಳಾಪುರದಲ್ಲಿ ಜೈನ್ ಆಸ್ಪತ್ರೆ ಮತ್ತು ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಮಕ್ಕಳ ಆಸ್ಪತ್ರೆ ಉದ್ಘಾಟನೆ ಆಯಿತು. ಈ ಎರಡೂ ಆಸ್ಪತ್ರೆಗಳ ಬಗ್ಗೆ ಜಿಲ್ಲೆಯ ಜನರು ಹೆಚ್ಚಿನ ನಿರೀಕ್ಷೆಗಳನ್ನೇ ಹೊಂದಿದ್ದಾರೆ.

ಉತ್ತಮಗಾಳಿ ನಾಲ್ಕನೇ ಸ್ಥಾನ: ಶುದ್ಧಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಈ ವರ್ಷ ಚಿಕ್ಕಬಳ್ಳಾಪುರ ನಾಲ್ಕನೇ ಸ್ಥಾನ ಪಡೆದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವಾಯು ಮಾಲಿನ್ಯ ಅತ್ಯಲ್ಪ ಪ್ರಮಾಣದಲ್ಲಿರುವ ಹಾಗೂ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ರಾಷ್ಟ್ರದಲ್ಲಿಯೇ ಚಿಕ್ಕಬಳ್ಳಾಪುರ ನಗರ ನಾಲ್ಕನೇ ಸ್ಥಾನ ಪಡೆದಿದೆ. ಕಳೆದ ವರ್ಷ 7ನೇ ಸ್ಥಾನದಲ್ಲಿತ್ತು.

ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಮತ್ತು ರಾಜ್ಯ ಮಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಕ್ರೀಡೆಯಲ್ಲಿ ಗುರುತು ಪಡೆಯುವಂತೆ ಚಿಕ್ಕಬಳ್ಳಾಪುರ ‌ತಾಲ್ಲೂಕಿನ ಅರಿಕೆರೆ ಗ್ರಾಮದ ಬಳಿ ಕ್ರೀಡಾಗ್ರಾಮ ನಿರ್ಮಾಣಕ್ಕೆ ಸಿದ್ಧತೆಗಳು 2021ರಲ್ಲಿ ಆರಂಭವಾಗಿವೆ.

ಅಮೃತ ಮಹೋತ್ಸವ:ದೇಶದ 75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ದೇಶದಾದ್ಯಂತ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಸಬರಮತಿ ಆಶ್ರಮದಲ್ಲಿ ಮಾ.12ರಂದು ಚಾಲನೆ ನೀಡಿದರು. ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಹೆಸರಾಗಿರುವ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿದ್ದರು. ಇಲ್ಲಿಂದ ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ದೊಡ್ಡ ಅಪಘಾತ: ಚಿಂತಾಮಣಿ ತಾಲ್ಲೂಕಿನ ಮರಿನಾಯಕಹಳ್ಳಿ ಬಳಿ ಸೆಪ್ಟೆಂಬರ್‌ನಲ್ಲಿ ನಡೆದ ಅಪಘಾತ 9 ಜನರು ಮೃತಪಟ್ಟರು. 2021ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ದೊಡ್ಡ ಪ್ರಮಾಣದ ಅಪಘಾತ ಇದಾಗಿದೆ.ಸಿಮೆಂಟ್ ಲಾರಿ ಮತ್ತು ಜೀಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿ ಎಂಟು ಮಂದಿ ಹಾಗೂ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟರು.

ಜಾಲಪ್ಪ ಸಾವು: ಜಿಲ್ಲೆಯ ರಾಜಕೀಯ ಭೀಷ್ಮ ಎನಿಸಿದ್ದ ಆರ್‌.ಎಲ್.ಜಾಲಪ್ಪ ಮೃತಪಟ್ಟರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಆರು ಬಾರಿ ಸ್ಪರ್ಧಿಸಿದ್ದ ಅವರು ನಾಲ್ಕು ಬಾರಿ ಗೆಲುವು ಕಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT