ಬಾಗೇಪಲ್ಲಿ: ಪುರಸಭೆ ಅಧಿಕಾರಿಗಳ ಹಾಗೂ ನೀರು ಸರಬರಾಜು ಮಾಡುವವರ ನಿರ್ಲಕ್ಷ್ಯದಿಂದ ಪಟ್ಟಣದ ಬಾಲಕಿಯರ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಬುಧವಾರ ಬೆಳಗ್ಗೆ ನೀರಿನ ಟ್ಯಾಂಕ್ ತುಂಬಿ ಅಪಾರ ಪ್ರಮಾಣದ ನೀರು ರಸ್ತೆ, ಚರಂಡಿ ಪಾಲಾಗಿದೆ.
ಪಟ್ಟಣದಲ್ಲಿ 23 ವಾರ್ಡ್‍ಗಳು ಇವೆ. ಈ ಪೈಕಿ ಕೆಲ ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಇದೆ. ವಾರಕ್ಕೊಮ್ಮೆ, 15 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಪಟ್ಟಣದ ಜನರಿಗೆ ಕುಡಿಯುವ ನೀರಿನ ಜೊತೆಗೆ ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಸ್ನಾನಮಾಡಲು ನೀರು ಸಿಗದೇ ಪರದಾಡುತ್ತಿದ್ದಾರೆ.
‘ಪಟ್ಟಣದ ನೀರಿನ ಟ್ಯಾಂಕ್‌ನಲ್ಲಿ ಹಾಗೂ ಪೈಪುಗಳು ಪಡೆದು ನೀರು ವ್ಯರ್ಥ ಆಗುತ್ತಿದೆ ಎಂದು ಮುಖ್ಯಾಧಿಕಾರಿಗೆ ತಿಳಿಸಿದ್ದೇನೆ. ವ್ಯರ್ಥವಾದ ನೀರು 3 ವಾರ್ಡ್‍ಗಳಿಗೆ ಸರಬರಾಜು ಮಾಡಬಹುದಿತ್ತು. ಪಟ್ಟಣದಲ್ಲಿ ನೀರಿಗೆ ಹಾಹಾಕಾರ ಇದೆ. ನೀರು ಸಂರಕ್ಷಣೆ ಮಾಡಬೇಕಾದ ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಸ್ಥಳೀಯ ಉಪನ್ಯಾಸಕ ವೆಂಕಟೇಶ್ ಹೇಳಿದರು.
‘ಸಿಬ್ಬಂದಿ ನೇಮಕಕ್ಕೆ ಹೊಸ ಟೆಂಡರ್ ಕರೆಯಲಾಗಿದೆ. ನೀರು ಪೋಲಾಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಪುರಸಭಾ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.