ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಬಜ್ಜಿ ಮೆಣಸಿನಕಾಯಿ ಭರ್ಜರಿ ಫಸಲು

ಕಳೆ ಬೆಳೆಯದಂತೆ ‘ಮಲ್ಚಿಂಗ್’ ಪೇಪರ್ ಹೊದಿಕೆ: ಜೀವಾಮೃತ ಬಳಕೆ
Last Updated 4 ಮಾರ್ಚ್ 2020, 8:29 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನೀರಿನ ಕೊರತೆಯಿದ್ದರೂ ತಾಲ್ಲೂಕಿನ ಬೂದಾಳ ಗ್ರಾಮದ ಬಿಂದು ಮತ್ತು ಮುರಳಿ ದಂಪತಿ ಟ್ಯಾಂಕರ್‌ನಿಂದ ನೀರು ಹೊಡೆಸಿ, ಅರ್ಧ ಎಕರೆ ಜಮೀನಿನಲ್ಲಿ ಬಜ್ಜಿ ಮೆಣಸಿನಕಾಯಿಯ ಉತ್ತಮ ಫಸಲು ತೆಗೆದಿದ್ದಾರೆ.

ಅರ್ಧ ಅಡಿಗೂ ಹೆಚ್ಚು ಉದ್ದ ಬೆಳೆದಿರುವ ಈ ಬಜ್ಜಿ ಮೆಣಸಿನಕಾಯಿ ಉತ್ತಮ ಗುಣಮಟ್ಟದಿಂದ ಕೂಡಿವೆ. ಬೆಲೆಯ ಏರುಪೇರಿನ ನಡುವೆಯೂ ಈಗಾಗಲೇ ಒಂದೂವರೆ ಟನ್ ಬಜ್ಜಿ ಮೆಣಸಿನಕಾಯಿ ಫಸಲನ್ನು ಕಿತ್ತು ಮಾರಾಟ ಮಾಡಿದ್ದು, ಇನ್ನೂ ನಾಲ್ಕರಿಂದ ಐದು ಟನ್ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ಸಮಗ್ರ ಕೃಷಿಗೆ ಒತ್ತುಕೊಟ್ಟಿರುವ ಈ ರೈತ ದಂಪತಿ, 30 ಗುಂಟೆಯಲ್ಲಿ ಹಸಿರು ಮನೆ (ಗ್ರೀನ್ ಹೌಸ್), ರೇಷ್ಮೆ ಕೃಷಿ, ಕೋಳಿ ಸಾಕಣೆ, ಹಸು ಹಾಗೂ ಕುರಿ ಸಾಕಾಣಿಕೆಗೂ ಪ್ರಾಶಸ್ತ್ಯ ನೀಡಿದ್ದಾರೆ.

‘ಎರಡುವರೆ ತಿಂಗಳ ಹಿಂದೆ ಭೂಮಿಯನ್ನು ಹದಗೊಳಿಸಿ ಕೊಟ್ಟಿಗೆ ಗೊಬ್ಬರ ಹಾಕಿದ್ದೆವು. ಕಳೆ ಬೆಳೆಯದಂತೆ ‘ಮಲ್ಚಿಂಗ್’ ಪೇಪರ್ ಹೊದಿಸಿ, ನಂತರ ಬಜ್ಜಿ ಮೆಣಸಿನಕಾಯಿಯ ಸುಮಾರು ಎರಡೂವರೆ ಸಾವಿರ ನಾರುಗಳನ್ನು ತಂದು ನಾಟಿ ಮಾಡಿದ್ದೆವು. ಕೊಳವೆ ಬಾವಿಯಲ್ಲಿರುವ 300 ಗ್ಯಾಲನ್ ನೀರು ಸಾಕಾಗುತ್ತಿರಲಿಲ್ಲ. ಹಾಗಾಗಿ ನಿತ್ಯ ಟ್ಯಾಂಕರ್‌ನಿಂದ ನೀರು ಹೊಡೆಸುತ್ತಿದ್ದೆವು. ಸಗಣಿ ಮತ್ತು ಗಂಜಳ ಬಳಸಿ ನಮ್ಮಲ್ಲೇ ತಯಾರಿಸಿದ ಜೀವಾಮೃತವನ್ನು ನಾಲ್ಕು ಬಾರಿ ಹಾಕಿದ್ದೇವೆ. ರೋಗಗಳ ತಡೆಗೆ ಹಾಗೂ ಪೋಷಣೆಗಾಗಿ ಗ್ರೀನ್ ಪ್ಲಾನೆಟ್ ಅವರ ಸಾವಯವ ಪೋಷಕಾಂಶ ಹಾಗೂ ಜೀವಾಣು ಗೊಬ್ಬರ ಬಳಸಿದ್ದೇವೆ’ ಎಂದು ರೈತ ದಂಪತಿ ಬಿಂದು ಮತ್ತು ಮುರಳಿ ವಿವರಿಸಿದರು.

ಮೊದಲು ಒಂದು ಟನ್ ಫಸಲ ಬಂದಾಗ ಎಪಿಎಂಸಿ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯಿತ್ತು. ನಂತರ ಕುಸಿಯುತ್ತಾ ಸಾಗಿದೆ. ಹೀಗಾಗಿ ಅತ್ತ ಲಾಭವ ಬರದ, ಇತ್ತ ನಷ್ಟವೂ ಆಗದ ಸ್ಥಿತಿಯಲ್ಲಿದ್ದೇವೆ ಎಂದು ಅವರು ತಿಳಿಸಿದರು.

*
ರಾಸಾಯನಿಕಗಳನ್ನು ಬಳಸದೆ ಸಾವಯವ ಪದ್ಧತಿಯಲ್ಲಿ ಬೆಳೆಯುವ ಬೆಳೆಗಳಿಗೆ ಮಧ್ಯವರ್ತಿಗಳಿಲ್ಲದೆ, ನೇರವಾದ ಮಾರುಕಟ್ಟೆ ವ್ಯವಸ್ಥೆ ಬೇಕು. ಸಂತೆಗಳಲ್ಲಿ ಮತ್ತು ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಮಳಿಗೆಗಳಿರಬೇಕು.
-ಬೂದಾಳ ರಾಮಾಂಜಿ, ಸಾವಯವ ಕೃಷಿ ಪರಿವಾರದ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT