ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತ ಕಾರ್ಮಿಕರ ರಕ್ಷಣೆಗೆ ಮಸೂದೆ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿಕೆ

Last Updated 6 ಜುಲೈ 2020, 16:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೋವಿಡ್‌, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಅಸಂಘಟಿತ ವಲಯದ ಕಾರ್ವಿುಕರ ಹಿತರಕ್ಷಣೆಗಾಗಿ ಮುಂಬರುವ ಅಧಿವೇಶನದಲ್ಲಿ ಎರಡ್ಮೂರು ಮಸೂದೆಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇರಳ ಮತ್ತು ತಮಿಳುನಾಡಿನಲ್ಲಿ ಕಸುಬು ಆಧಾರಿತ ವಿವಿಧ ಕಾರ್ಮಿಕ ಮಂಡಳಿಗಳಿವೆ. ಹೀಗಾಗಿ, ಅಲ್ಲಿ ಕಾರ್ವಿುಕರಿಗೆ ಹೆಚ್ಚಿನ ರಕ್ಷಣೆ ಕೊಡಲು ಸಾಧ್ಯವಾಗಿದೆ. ಅದೇ ಮಾದರಿಯಲ್ಲಿ ನಾವು ಕೂಡ ಅಸಂಘಟಿತ ವಲಯದ ಕಾರ್ಮಿಕರ ಹಿತ ಕಾಯುವ ಉದ್ದೇಶದಿಂದ ಮಸೂದೆಗಳನ್ನು ಸಿದ್ಧಪಡಿಸುತ್ತಿದ್ದೆವೆ’ ಎಂದು ತಿಳಿಸಿದರು.

‘ಅಸಂಘಟಿತ ವಲಯದ ಕಾರ್ಮಿಕರು ಹೆಚ್ಚೆಚ್ಚು ಸಂಘಟಿತ ವಲಯಕ್ಕೆ ಸೇರಿದಾಗ ಅವರ ಕುಟುಂಬಗಳಿಗೆ ಭದ್ರತೆ ಸಿಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ವಿಶೇಷ ಪ್ರಯತ್ನ ಮಾಡುತ್ತದೆ. ಈಗಾಗಲೇ ಅಧಿಕಾರಿಗಳು ಮಸೂದೆ ಸಿದ್ಧತೆಯಲ್ಲಿ ತೊಡಗಿದ್ದಾರೆ’ ಎಂದರು.

‘ಲಾಕ್‌ಡೌನ್‌ ಬಳಿಕ ಸಂಬಳ ಪಾವತಿಯಾಗದಿರುವ ಬಗ್ಗೆ ಕಾರ್ಮಿಕರಿಂದ ಇಲಾಖೆಗೆ ದೊಡ್ಡ ಪ್ರಮಾಣದಲ್ಲಿ ದೂರುಗಳು ಬಂದಿವೆ. ಇವತ್ತು ಕಾರ್ಮಿಕರು ಮತ್ತು ಮಾಲೀಕರು ಇಬ್ಬರೂ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ, ಅವರನ್ನು ಜತೆಯಾಗಿ ಕರೆದುಕೊಂಡು ಹೋಗಬೇಕಾದ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.

‘ಕಾನೂನು ಕ್ರಮ ಜರುಗಿಸಿ ಕಾರ್ಖಾನೆಗಳನ್ನು ಬಂದ್‌ ಮಾಡುವುದು ದೊಡ್ಡ ವಿಷಯವಲ್ಲ. ಅದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ನಷ್ಟ, ಕಷ್ಟ ಇಬ್ಬರಿಗೂ ಆಗಿದೆ. ತುಂಬಾ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇದ್ದೇವೆ. ಮಾಲೀಕರು ಮತ್ತು ಕಾರ್ಮಿಕರ ನಡುವೆ ಸಮನ್ವಯತೆ ಕಾಯ್ದುಕೊಳ್ಳಬೇಕಾದ ದೊಡ್ಡ ಜವಾಬ್ದಾರಿ ಇದೆ’ ಎಂದರು.

‘ಕೋವಿಡ್-19 ನಮಗೆ ದೊಡ್ಡ ಪಾಠ ಕಲಿಸಿದೆ. ಕಟ್ಟ ಕಡೆಯ ಕಾರ್ವಿುಕನಿಗೂ ಬದುಕನ್ನು ಕಟ್ಟಿಕೊಡಲು ದಾರಿ ತೋರಿದೆ. ಇಂಥ ಸಂಕಷ್ಟ ಸಂದರ್ಭದಲ್ಲಿ ಅಸಂಘಟಿತ ಕಾರ್ವಿುಕರನ್ನು ಸಂಘಟಿತ ವಲಯಕ್ಕೆ ತರುವ ಪ್ರಯತ್ನ ಮಾಡಬೇಕಿದೆ. ಅದಕ್ಕಾಗಿ ಮಸೂದೆಗಳನ್ನು ರೂಪಿಸಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೋವಿಡ್‌ ವಿಚಾರದಲ್ಲಿ ಟಿ.ವಿ ಚಾನೆಲ್‌ಗಳನ್ನು ನೋಡಿ ಜನ ಭಯಭೀತರಾಗುತ್ತಿದ್ದಾರೆ. ‌ಎಚ್ಚರಿಸಿ, ಭಯಪಡಿಸಬೇಡಿ. ಹಳ್ಳಿಯ ಜನರು ಆತಂಕದಲ್ಲಿದ್ದಾರೆ. ಚಾನೆಲ್‌ಗಳು ಅಷ್ಟೊಂದು ಭಯ ಮೂಡಿಸಿದಾಗಲೂ ಎಸ್ಸೆಸ್ಸೆಲ್ಸಿ ಮಕ್ಕಳು ಸಂತಸದಿಂದ ಪರೀಕ್ಷೆ ಬರೆದು ಯಶಸ್ವಿಯಾಗಿದ್ದಾರೆ. ಅದಕ್ಕೆ ಕಾರಣರಾದವರನ್ನೆಲ್ಲ ಅಭಿನಂದಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT