ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ: ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ

ಮಾರುಕಟ್ಟೆಯಲ್ಲಿ ಹೆಚ್ಚಿದ ಆವಕದಿಂದ ಬೆಲೆ ಕುಸಿತ l ಗುಡಿಬಂಡೆ ತಾಲ್ಲೂಕು ರೈತರ ಕಂಗಾಲು
Last Updated 10 ಮಾರ್ಚ್ 2023, 3:49 IST
ಅಕ್ಷರ ಗಾತ್ರ

ಗುಡಿಬಂಡೆ: ತಾಲ್ಲೂಕಿನ ತೋಟಗಾರಿಕೆ ಬೆಳೆಗಾರರು ಹಿಂಗಾರಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದಾರೆ. ವಾತಾವರಣದ ಏರುಪೇರಿನಿಂದಾಗಿ ಆಲೂಗಡ್ಡೆ ಬೆಳೆಯ ಶೇ 50ರಷ್ಟು ಬೆಳೆಗಳು ನಶಿಸಿ ಹೋಗಿವೆ. ಜತೆಗೆ ಮಾರುಕಟ್ಟೆಯಲ್ಲಿ ಆಲೂಗಡ್ಡೆಯ ಆವಕ ಹೆಚ್ಚಳದಿಂದಾಗಿ ಬೆಲೆ ಕುಸಿತವಾಗಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಇದರಿಂದಾಗಿ ಬೆಳೆ ಬೆಳೆಯಲು ಮಾಡಿದ ಸಾಲವನ್ನು ಹೇಗೆ ಮರುಪಾವತಿ ಮಾಡಲಾಗದ ದುಃಸ್ಥಿತಿಗೆ ರೈತರು ಸಿಲುಕಿದ್ದಾರೆ.

ಗುಡಿಬಂಡೆ ತಾಲ್ಲೂಕಿನಲ್ಲಿ ಸುಮಾರು 400 ಹೆಕ್ಟೇರ್ ಪ್ರದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ ಆಲೂಗಡ್ಡೆ ಬಿತ್ತನೆಯಾಗಿದ್ದು, ಇದಾಗಿ ಒಂದೇ ವಾರದಲ್ಲಿ ಮೂರು ದಿನಗಳ ಕಾಲ ಸುರಿದ ಮಳೆಯಿಂದಾಗಿ ಶೇ 50ರಷ್ಟು ಬಿತ್ತನೆ ಬೀಜ ಕೊಳೆತು ಹೋಗಿತ್ತು. ಈ ವೇಳೆ ರೈತರು ಮತ್ತೆ ಬಿತ್ತನೆ ಮಾಡಿದ್ದರು.

50 ಕೆ.ಜಿಯ ಆಲೂಗಡ್ಡೆ ಬಿತ್ತನೆ ಬೀಜದ ಬೆಲೆ ₹1,200ಕ್ಕೆ ಇಳಿದಿದ್ದರಿಂದಾಗಿ, ಹಿಂಗಾರಿನಲ್ಲಿ ರೈತರು ಆಲೂಗಡ್ಡೆ ಬೆಳೆಗೆ ಮುಂದಾಗಿದ್ದರು. ಆದರೆ, ಇದೀಗ ಮಾರುಕಟ್ಟೆಗೆ ಪಕ್ಕದ ರಾಜ್ಯಗಳಿಂದಲೂ ಹೆಚ್ಚು ಆಲೂಗಡ್ಡೆ ಪೂರೈಕೆಯಾಗುತ್ತಿದೆ. ಇದರಿಂದ ಫೆಬ್ರುವರಿಯ ಮೊದಲ ವಾರದಲ್ಲಿ 50 ಕೆ.ಜಿ ಆಲೂಗಡ್ಡೆಗೆ ₹1,200 ಇದ್ದ ಆಲೂಗಡ್ಡೆ ಬೆಲೆ ಮಾರ್ಚ್ ಮೊದಲ ವಾರದಲ್ಲಿ ₹400ಕ್ಕೆ ಕುಸಿದಿದೆ ಎಂದು ರೈತರು ಅವಲತ್ತುಕೊಂಡರು.

ಕೊಂಡಾವಲಹಳ್ಳಿ ರೈತ ರಾಜಾರೆಡ್ಡಿ ಮಾತನಾಡಿ, ‘ಒಂದು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆ ಹಾಕಲಾಗಿತ್ತು. ವಾತಾವರಣದಿಂದ ಗಿಡದಲ್ಲಿ ಒಂದೇ ಸಮನಾಂತರದಲ್ಲಿ ಗಡ್ಡೆ ಬಂದಿಲ್ಲ. ಬೆಲೆಯಲ್ಲಿ ಏರುಪೇರು ಆಗಿದ್ದು, ಹಾಕಿರುವ ಬಂಡವಾಳ ವಾಪಸ್ಸು ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘1.20 ಎಕರೆಯಲ್ಲಿ ಆಲೂಗಡ್ಡೆ ಬೆಳೆಯಲಾಗಿದ್ದು, ಆಲೂಗಡ್ಡೆಯ ಬೆಲೆ ಕುಸಿತ ನೆನಪಿಸಿಕೊಂಡರೆ ಫಸಲು ತೆಗೆಯುವುದಕ್ಕೆ ಭಯವಾಗುತ್ತದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರದಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಹಳೆ ಗುಡಿಬಂಡೆಯ ಗಂಗಿರೆಡ್ಡಿ ತಿಳಿಸಿದರು.

ಎಕರೆ ಬೆಳೆಗೆ ₹ 1 ಲಕ್ಷ ವೆಚ್ಚ

ಒಂದು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆ ಬೆಳೆಯಲು ದುಬಾರಿ ಕೂಲಿ, ಔಷಧಿ, ಕೊಟ್ಟಿಗೆ ಗೊಬ್ಬರ, ರಸಗೊಬ್ಬರ ಸೇರಿದಂತೆ ಒಟ್ಟಾರೆ ₹1.20 ವೆಚ್ಚವಾಗಿದೆ. ಇಂದಿನ ಬೆಲೆಗೆ ಆಲೂಗಡ್ಡೆ ಮಾರಾಟ ಮಾಡಿದರೆ ಶೇ 50 ರಷ್ಟು ಹಣ ಮಾತ್ರವೇ ಬರುತ್ತದೆ. ಅಸಲಿನ ಹಣದಲ್ಲಿ ಶೇ 50ರಷ್ಟು ನಷ್ಟವಾಗಿದೆ. ಇದರಲ್ಲಿ ಮಾಡಿದ ಸಾಲ ಹೇಗೆ ತೀರಿಸುವುದು ಎಂಬ ತೊಳಲಾಟಕ್ಕೆ ಸಿಲುಕಿದ್ದೇವೆ ಎಂದು ರೈತರು ಸಂಕಷ್ಟ ತೋಡಿಕೊಂಡರು.

ಸರ್ಕಾರ ಬೆಳೆ ಪರಿಹಾರ ನೀಡಲಿ

ಹಳೆ ಗುಡಿಬಂಡೆ ರೈತ ಶ್ರೀರಾಮರೆಡ್ಡಿ ಮಾತನಾಡಿ, ‘2.20 ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬೆಳೆ ಬೆಳೆಯಲಾಗಿತ್ತು. ಗಡ್ಡೆ ಬರುವ ಸಮಯದಲ್ಲಿ ವಾತಾವರಣದಲ್ಲಿ ಏರುಪೇರಾಗಿ ಗಿಡಗಳಿಗೆ ಅಂಗಮಾರಿ ರೋಗ ತಗಲಿದೆ. ಇದರಿಂದ ಬಿತ್ತನೆ ಮಾಡಿದ ಪೈಕಿ ಶೇ 50ರಷ್ಟು ಗಿಡಗಳು ಗಡ್ಡೆ ಬಿಡದೇ ಗಿಡ ಹಾಳಾಗಿವೆ. ಇದರ ಜತೆಗೆ ಫಸಲಿಗೆ ಬೆಲೆ ಕುಸಿತವಾಗಿದೆ. ಬೆಳೆ ಬೆಳೆಯಲು ಮನೆಯಲ್ಲಿದ್ದ ಒಡವೆಗಳನ್ನು ಅಡವಿಟ್ಟು ಪಡೆಯಲಾಗಿದ್ದ ಸಾಲ ತೀರಿಸುವುದು ಹೇಗೆಂಬ ಚಿಂತೆಯಾಗಿದೆ. ಹೀಗಾಗಿ ಸರ್ಕಾರ ಪರಿಹಾರ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT