ಬಾಗೇಪಲ್ಲಿ: ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಅತಿ ಹಿಂದುಳಿದ ಹಾಗೂ ಬರಗಾಲ ಪೀಡಿತ ಎಂದು ಘೋಷಿತವಾದ ತಾಲ್ಲೂಕಿನಲ್ಲಿ ಶಾಶ್ವತವಾದ ನೀರಾವರಿ ಯೋಜನೆ, ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಈ ಬಜೆಟ್‌ನಲ್ಲಿ ಆದ್ಯತೆ ಸಿಗುವ ನಿರೀಕ್ಷೆಈ ಭಾಗದ ಜನರದ್ದು.
ಈ ವ್ಯಾಪ್ತಿಯಲ್ಲಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕುಗಳು ಇವೆ. ರಾಜಧಾನಿಗೆ ಕೇವಲ 100ಕಿ.ಮೀ ಹಾಗೂ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 75ಕಿ.ಮೀ ಅಂತರದಲ್ಲಿ ಇದೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆ44 ಕನ್ಯಾಕುಮಾರಿ-ಜಮ್ಮುಕಾಶ್ಮೀರಕ್ಕೆ ಸಂಪರ್ಕಿಸುವ ರಸ್ತೆಗೆ ಹೊಂದಿಕೊಂಡಿದೆ.
ತಾಲ್ಲೂಕಿನಲ್ಲಿ ಯಾವುದೇ ನದಿ ನಾಲೆಗಳು ಇಲ್ಲ. ಕೇವಲ ಕೃಷಿ ಆಧಾರಿತವಾಗಿ ರೈತರು ಮಳೆಯನ್ನೇ ನಂಬಿದ್ದಾರೆ. ಚಿತ್ರಾವತಿ, ವಂಡಮಾನ್ ಡ್ಯಾಂಗಳಲ್ಲಿ ನೀರು ಇಲ್ಲ. ಡ್ಯಾಂಗಳಲ್ಲಿ ಹೂಳು ತುಂಬಿರುವುದು ನೀರು ಸಂಗ್ರಹ ಆಗಿಲ್ಲ. ನೀರು ಹರಿದು ಆಂಧ್ರಪ್ರದೇಶಕ್ಕೆ ಹರಿಯುತ್ತಿದೆ. ಅಂತರ್ಜಲ ಮಟ್ಟ ಕುಸಿದಿದೆ. ಕೃಷಿ, ಹೈನುಗಾರಿಕೆ ಮಾಡಿ ಜನರು ಜೀವನ ಸಾಗಿಸುವಂತಾಗಿದೆ.
ಎತ್ತಿನಹೊಳೆಯಿಂದ ಹನಿಯಷ್ಟು ನೀರು ಇನ್ನೂ ಹರಿದಿಲ್ಲ. ಕೃಷ್ಣಾ ನದಿ ’ಬಿ ಸ್ಕೀಂ’ನ ಪ್ರಕಾರ ಕ್ಷೇತ್ರಕ್ಕೆ ನೀರು ಹರಿಸಲು ಹಕ್ಕು ಇದೆ. ಆಂಧ್ರಪ್ರದೇಶದ ಸರ್ಕಾರ ರಾಜ್ಯದ ಗಡಿವರೆಗೂ ನೀರು ಹರಿಸುತ್ತಿದೆ. ಅಲ್ಲಿಂದ 15 ಕಿ.ಲೋಮೀಟರ್ ದೂರದ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕುಗಳಿಗೆ ನೀರು ಹರಿಸಲು ಎರಡು ರಾಜ್ಯಗಳ ಸರ್ಕಾರಗಳು ಮುಂದಾಗಬೇಕಾಗಿದೆ.
ಎಚ್.ಎನ್ ವ್ಯಾಲಿಯಿಂದ ಮೂರನೇ ಹಂತದ ಶುದ್ಧೀಕರಣ ಮಾಡಿ, ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಬೇಕಾಗಿದೆ. ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ಪಕ್ಕದಲ್ಲಿ ಕೈಗಾರಿಕಾ ಪ್ರದೇಶ ಎಂದು ಗುರ್ತಿಸಿ ಅನೇಕ ವರ್ಷಗಳು ಕಳೆದಿದೆ. ಸರ್ಕಾರ ಭೂಮಿ ಹೊರತುಪಡಿಸಿ ಉಳಿದ ರೈತರ ಭೂಮಿ ಸರ್ಕಾರ ಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ನೀಡುವ ಯೋಜನೆಯು 10 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸಣ್ಣ ಹಾಗೂ ಮಧ್ಯಮ ಮಟ್ಟದ ಕೈಗಾರಿಕೆಗಳು ಆರಂಭಿಸಿಲ್ಲ. ಬಹುತೇಕ ಯುವಕ, ಯುವತಿಯರು, ಮಹಿಳೆಯರು ಉದ್ಯೋಗಾವಕಾಶ ಇಲ್ಲದೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೆಲಸಕ್ಕೆ ಹಾಗೂ ಪಕ್ಕದ ಮಹಿಳೆಯರು ಆಂಧ್ರಪ್ರದೇಶದ ಕೊಡೊರು ತೋಪಿನಲ್ಲಿನ ಗಾಮೆಂಟ್ಸ್ ಗಳಿಗೆ ಹೋಗಿ ದುಡಿಯಬೇಕಾಗಿದೆ.
ಘಂಟ್ಲಮಲ್ಲಮ್ಮ ಕಣಿವೆಯಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಪುಟ್ಟಪುರ್ತಿ-ಚಿಕ್ಕಬಳ್ಳಾಪುರ ರೈಲು ಯೋಜನೆ ಅನುಷ್ಠಾನಗೊಳಿಸಬೇಕಿದೆ. ಇದರಿಂದ ರಾಜ್ಯದ ಹಾಗೂ ನೆರೆಯ ಆಂಧ್ರಪ್ರದೇಶದ ರೈತರಿಗೆ, ವ್ಯಾಪಾರಸ್ಥರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪಟ್ಟಣವನ್ನು ಪುರಸಭೆಯಿಂದ ನಗರಸಭೆಗೆ ಮೇಲ್ದೆರ್ಜೆಗೆ ಏರಿಸಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಬೇಕಾಗಿದೆ.
ತಾಲ್ಲೂಕು ಕೇಂದ್ರದಲ್ಲಿ ಮಿನಿವಿಧಾನಸೌಧ, ಡಾ.ಬಿ.ಆರ್.ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಸೇವಾಲಾಲ್, ಕನ್ನಡ, ಸಾಹಿತ್ಯ ಪರಿಷತ್ ಭವನ ಸೇರಿದಂತೆ ಅನೇಕ ಭವನಗಳು ನಿರ್ಮಿಸಬೇಕಾಗಿದೆ. ಮುಖ್ಯವಾಗಿ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯಬೇಕಾಗಿದೆ. ಖಾಲಿ ಇರುವ ಶಿಕ್ಷಕ, ಶಿಕ್ಷಕಿ, ಬೋಧಕೇತರ ಸಿಬ್ಬಂದಿ ಹಾಗೂ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ.
ಬೆಂಗಳೂರು ಆಂಧ್ರಪ್ರದೇಶದ ಕಡೆಯಿಂದ ಸಂಚರಿಸುವ ಸಾರಿಗೆ ಬಸ್‌ಗಳು ಪಟ್ಟಣದ ಬಸ್ ನಿಲ್ದಾಣಕ್ಕೆ ಸಂಚರಿಸುವಂತೆ ಮಾಡಬೇಕು. ಹೈಟೆಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕಾಗಿದೆ.
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಮೂಲ ಸೌಲಭ್ಯ ಕೊರತೆ ಇದೆ. 100ಕ್ಕೂ ಹೆಚ್ಚು ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲ. 45ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪದವಿ ಮಾಡಿದ ಯುವಕ, ಯುವತಿಯರು ಇದ್ದಾರೆ. ತಾಲ್ಲೂಕು ಕೇಂದ್ರದಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಬೇಕಿದೆ. ಕ್ರೀಡಾಂಗಣ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ.
560 ವರ್ಷಗಳ ಕಾಲ ಪಾಳೇಗಾರರು ಆಳ್ವಿಕೆ ಮಾಡಿದ ಗುಮ್ಮನಾಯಕನಪಾಳ್ಯದ ಕೋಟೆ, ಪಟ್ಟಣದ ಅವದೂತ ಹುಸೇನ ದಾಸಯ್ಯ ಸ್ವಾಮಿ ದರ್ಗಾ, ಕಲ್ಲಿಪಲ್ಲಿಆದಿನಾರಾಯಣಸ್ವಾಮಿ ಮಠದ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ.
ಬಾಗೇಪಲ್ಲಿ ಹಾಗೂ ಚಿಂತಾಮಣಿ ಎರಡು ಕಡೆಯಿಂದ 40 ಕಿ.ಮೀ ದೂರದಲ್ಲಿ ಚೇಳೂರು ತಾಲ್ಲೂಕು ಇದೆ. ತಾಲ್ಲೂಕು ಕೇಂದ್ರ ಘೋಷಣೆ ಮಾಡಿ ಅನೇಕ ವರ್ಷ ಕಳೆದರೂ ಇದುವರೆಗೂ ಸರ್ಕಾರಿ ಕಚೇರಿಗಳ ನಿರ್ಮಾಣ ಆಗಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ, ಸಿಬ್ಬಂದಿ ಕೊರತೆ ಇದೆ. ತಾಲ್ಲೂಕಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಐಟಿಐ ಕಾಲೇಜು ನಿರ್ಮಾಣ ಮಾಡಬೇಕಿದೆ.
ಹೆಚ್ಚಿನ ಅನುದಾನಕ್ಕೆ ಮನವಿ ಕ್ಷೇತ್ರದಲ್ಲಿ ಶಾಶ್ವತ ನೀರಾವರಿ ಯೋಜನೆ ಕೈಗಾರಿಕಾ ಸ್ಥಾಪನೆ ರಸ್ತೆ ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗಳ ಅಭಿವೃದ್ಧಿ ಹಾಗೂ ಚೇಳೂರು ನೂತನ ತಾಲ್ಲೂಕಿನ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಈ ಭಾರಿಯ ಬಜೆಟ್‌ನಲ್ಲಿ ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು. ಎಸ್.ಎನ್.ಸುಬ್ಬಾರೆಡ್ಡಿ ಶಾಸಕ ಕೃಷ್ಣಾ ನದಿ ನೀರು ಹರಿಸಿ ’ರಾಜಧಾನಿ ಕೇಂದ್ರಕ್ಕೆ 100ಕಿ.ಮೀ ದೂರದಲ್ಲಿ ಬಾಗೇಪಲ್ಲಿ ಚೇಳೂರು ತಾಲ್ಲೂಕು ಇದ್ದರೂ ನಿರೀಕ್ಷಿಸದಷ್ಟು ಅಭಿವೃದ್ಧಿ ಕಂಡಿಲ್ಲ. ಶಾಶ್ವತ ನೀರಾವರಿ ಇಲ್ಲದೆ ಕೆರೆ ಕುಂಟೆ ಡ್ಯಾಂಗಳು ಒಣಗಿವೆ. ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಜನ-ಜಾನುವಾರುಗೆ ನೀರು ಇಲ್ಲದೇ ಪರದಾಡುವಂತಾಗಿದೆ. ಈ ಬಜೆಟ್ ನಲ್ಲಿ ಪರಮಶಿವಯ್ಯ ವರದಿ ಜಾರಿ ಹಾಗೂ ಆಂಧ್ರಕ್ಕೆ ಹರಿದಿರುವ ನೀರನ್ನು ತಾಲ್ಲೂಕಿಗೆ ಹರಿಸುವಂತೆ ಸರ್ಕಾರದ ಬಜೆಟ್ ನಲ್ಲಿ ಪ್ರಕಟಿಸಬೇಕು. ಪಿ.ಮಂಜುನಾಥರೆಡ್ಡಿ ಪ್ರಗತಿಪರ ರೈತ ಉದ್ಯೋಗ ಅವಕಾಶ ಕಲ್ಪಿಸಿ ಪದವಿ ಪಿಯು ವಿದ್ಯಾಭ್ಯಾಸ ಮಾಡಿದ ಯುವಕ ಯುವತಿಯರ ವಲಸೆ ತಪ್ಪಿಸಲು ಕೈಗಾರಿಕಾ ಹಾಗೂ ಗಾರ್ಮೆಂಟ್ಸ್ ಆರಂಭಿಸಬೇಕು. ಮೀಸಲಿಟ್ಟಿರುವ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಪ್ರದೇಶಗಳನ್ನು ಆರಂಭಿಸಬೇಕು. ತಾಲ್ಲೂಕಿನ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು. ಎ.ಎಂ.ಶ್ವೇತಾ ಗಂಜೂಮ್ ವ್ಯವಸ್ಥಾಪಕಿ ಕಾರ್ಯದರ್ಶಿ ಆರ್ಯವೈಶ್ಯ ವಾಸವಿ ಸಂಘ ಸಾಲಮನ್ನಾ ಮಾಡಲು ಆಗ್ರಹ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸಾರ್ವಜನಿಕ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗುಣಮಟ್ಟದ ಚಿಕಿತ್ಸೆ ಕಲ್ಪಿಸಲು ವೈದ್ಯರು ಸಿಬ್ಬಂದಿ ನೇಮಕ ಆಗಬೇಕು. ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕಾಗಿದೆ. ಎಪಿಎಂಸಿ ಹಾಗೂ ಟೊಮೆಟೊ ಮಾರುಕಟ್ಟೆ ಅಭಿವೃದ್ಧಿಪಡಿಸಬೇಕು. ರೈತರ ಬೆಳೆ ನಷ್ಟ ಪರಿಹಾರ ವಿಮೆ ಹಣ ಕೂಡಲೇ ಪಾವತಿ ಮಾಡಬೇಕು. . ಎಂ.ಪಿ.ಮುನಿವೆಂಕಟಪ್ಪ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಗೇಪಲ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.