ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಬೆಳೆಗಾರರಿಗೆ ಬಂಪರ್ ಬೆಲೆ

ಆವಕ ಕೊರತೆ; ಹಿಪ್ಪುನೇರಳೆ ಸೊಪ್ಪಿನ ಕೊರತೆ; ಚೀನಾ ರೇಷ್ಮೆ ಆಮದು ಕುಸಿತ
Last Updated 17 ಫೆಬ್ರುವರಿ 2022, 7:20 IST
ಅಕ್ಷರ ಗಾತ್ರ

ಚಿಂತಾಮಣಿ: ರೇಷ್ಮೆ ಗೂಡಿನ ಬೆಲೆ ಕುಸಿತದಿಂತ ಸಂಕಷ್ಟಕ್ಕೀಡಾಗಿದ್ದ ರೈತರ ಪಾಲಿಗೆ ಈ ಬಾರಿ ಗೂಡಿನ ಧಾರಣೆ ಏರಿಕೆಯಾಗುತ್ತಿರುವುದು ವರದಾನವಾಗಿದೆ. ಬುಧವಾರ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ದಾಖಲೆ ಬೆಲೆಯಲ್ಲಿ ಮಾರಾಟವಾಗಿದೆ. 1 ಕೆ.ಜಿ. ಗೂಡು ₹940 ಗರಿಷ್ಠ ಹಾಗೂ ₹700 ಕನಿಷ್ಠ ಬೆಲೆಗೆ ಹರಾಜಾಗಿದೆ.

‘ರೇಷ್ಮೆ ಬೆಲೆ ಏರಿಕೆಯಾಗಿರುವ ಲಾಭ ಕೆಲವೇ ಕೆಲವು ರೈತರಿಗೆ ಮಾತ್ರ ದೊರೆಯುತ್ತಿದೆ. ಕಾರಣ ರೇಷ್ಮೆ ಬೆಳೆಯೇ ಇಲ್ಲ. ಅಕ್ಟೋಬರ್, ನವೆಂಬರ್‌ನಲ್ಲಿ ಸುರಿದ ಅತಿಯಾದ ಮಳೆಯಿಂದ ಮಣ್ಣು ಫಲವತ್ತತೆ ಕಳೆದುಕೊಂಡು ಹಿಪ್ಪುನೇರಳೆ ಸೊಪ್ಪು ಬೆಳೆಯುತ್ತಿಲ್ಲ. ಜತೆಗೆ ಚಳಿಗಾಲದಲ್ಲಿ ಹಿಪ್ಪುನೇರಳೆ ಸೊಪ್ಪಿನ ಬೆಳೆ ಅತ್ಯಂತ ಕಡಿಮೆ ಇರುತ್ತದೆ. ಹೀಗಾಗಿ ಬಹುತೇಕ ರೈತರ ಹಿಪ್ಪುನೇರಳೆ ತೋಟಗಳಲ್ಲಿ ಸೊಪ್ಪಿನ ಬೆಳೆಯೇ ಇಲ್ಲ’ ಎನ್ನುತ್ತಾರೆ ರೈತರು.

‘ಚಿಂತಾಮಣಿಯ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬುಧವಾರ ಕೇವಲ 6 ಲಾಟ್ ಗೂಡು ಆವಕವಾಗಿತ್ತು. ಶ್ರೀನಿವಾಸಪುರ ತಾಲ್ಲೂಕಿನ ಕೋಡಿಹಳ್ಳಿಯ ಸತೀಶ್ ತಂದಿದ್ದ ರೇಷ್ಮೆ ಗೂಡಿನ ಬೆಲೆ ₹940ಕ್ಕೆ ಹರಾಜಾಗಿದೆ. ಕೆ.ಜಿ 1ಕ್ಕೆ ₹700 ಕನಿಷ್ಠ ಬೆಲೆಯಾಗಿದೆ’ ಎಂದು ಮಾರುಕಟ್ಟೆಯ ಉಪನಿರ್ದೇಶಕ ಅಶ್ವತ್ಥನಾರಾಯಣ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚೀನಾದಿಂದ ಆಮದಾಗುವ ರೇಷ್ಮೆಯ ಸುಂಕವನ್ನು ಶೇ 28ಕ್ಕೆ ಏರಿಕೆ ಮಾಡಿರುವುದರಿಂದ ಆಮದು ಕಡಿಮೆಯಾಗಿದೆ. ಬೆಳೆಯು ಇಲ್ಲದೆ ಗೂಡಿನ ಉತ್ಪಾದನೆ ಕಡಿಮೆಯಾಗಿರುವ ಕಾರಣ ರೇಷ್ಮೆ ಗೂಡಿನ ಬೆಲೆ ಏರಿಕೆಯಾಗಿದೆ. ವಾಡಿಕೆಯಂತೆ ಜನವರಿ, ಫೆಬ್ರುವರಿಯಲ್ಲಿ 230 ಟನ್ ಆಮದು ಆಗಬೇಕಿತ್ತು. ಈ ಬಾರಿ 150 ಟನ್‌ಗೆ ಕುಸಿದಿದೆ. 80ರಿಂದ 90 ಟನ್ ಆಮದು ಕಡಿಮೆಯಾಗಿರುವ ಕಾರಣ ಮಾರುಕಟ್ಟೆಗಳಲ್ಲಿ ಗೂಡಿನ ಬೆಲೆ ಏರಿಕೆಯಾಗುತ್ತಿದೆ ಎಂದು ರೇಷ್ಮೆ ಇಲಾಖೆಯ ಮೂಲಗಳು ತಿಳಿಸಿವೆ.

ಇದರ ಜತೆಗೆ ರೀಲರುಗಳು ಖಾಸಗಿಯಾಗಿ ಮಂಡಿಗಳನ್ನು ತೆರೆಯುತ್ತಿರುವ ಪರಿಣಾಮ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಗುವ ದರಕ್ಕಿಂತಲೂ ಹೆಚ್ಚಿನ ದರ ನೀಡುವ ಆಮಿಷವೊಡ್ಡಿ ರೈತರಿಂದ ಗೂಡು ಖರೀದಿ ಮಾಡಲಾಗುತ್ತಿದೆ. ಈ ಕಾರಣದಿಂದಲೂ ಮಾರುಕಟ್ಟೆಗೆ ಗೂಡಿನ ಆವಕದ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಕಳೆದ ಫೆಬ್ರುವರಿಯಲ್ಲಿ 50-60 ಲಾಟುಗಳಿಂದ 2 ಟನ್‌ವರೆಗೂ ಗೂಡು ಬರುತ್ತಿತ್ತು. ಈ ವರ್ಷ 5 -20 ಲಾಟ್ ಗಳಿಂದ 0.5 ಟನ್ ಒಳಗಡೆ ಗೂಡು ಬರುತ್ತಿದೆ ಎನ್ನಲಾಗಿದೆ.

‘ರೇಷ್ಮೆ ಮಾರುಕಟ್ಟೆಯ ಆದಾಯವೂ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ರೇಷ್ಮೆ ಮಾರುಕಟ್ಟೆ ಮುಚ್ಚಬೇಕಾಗುತ್ತದೆ. ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಪರಿಣಾಮ ಮಾರುಕಟ್ಟೆಗಳ ಮೇಲೆ ಬೀರುತ್ತಿದೆ. ಕೆಲವು ರೀಲರುಗಳು ರೈತರ ಮನೆಗಳಲ್ಲೇ ಖರೀದಿ ಮಾಡಿಕೊಳ್ಳುತ್ತಿರುವ ಕಾರಣದಿಂದಲೂ ಮಾರುಕಟ್ಟೆಗೆ ಬರುವ ಗೂಡಿನ ಆವಕ ಕಡಿಮೆಯಾಗಿದೆ. ಮಾರುಕಟ್ಟೆಗಳಲ್ಲಿ ರೈತರ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತಾರೆ. ಬ್ಯಾಂಕಿನ ಅಧಿಕಾರಿಗಳು ರೈತರ ಸಾಲಕ್ಕೆ ಮುರಿದುಕೊಳ್ಳುವ ಕಾರಣದಿಂದ ಕೆಲವು ಮಂದಿ ಮಾರುಕಟ್ಟೆಗೆ ಬರುತ್ತಿಲ್ಲ’ ಎನ್ನಲಾಗುತ್ತಿದೆ.

‘ಶ್ರೀಮಂತ ರೀಲರುಗಳು ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿರುವ ರೈತರ ಬಳಿಗೆ ತೆರಳುತ್ತಾರೆ. 4ನೇ ಜ್ವರ ಚೆನ್ನಾಗಿ ಯಶಸ್ವಿಯಾಗಿದ್ದರೆ ಸ್ವಲ್ಪ ಮುಂಗಡ ಹಣವನ್ನು ನೀಡಿ, ಗೂಡು ಬೆಳೆದ ನಂತರ ನಮಗೆ ಮಾರಾಟ ಮಾಡಬೇಕು ಎಂದು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುತ್ತಾರೆ. ರೈತರು ಚಂದ್ರಿಕೆಗಳಿಂದ ಗೂಡು ಬಿಡಿಸುತ್ತಿದ್ದಂತೆ ತಕ್ಕಡಿ ಸಮೇತವಾಗಿ ತೆರಳಿ ತೂಕ ಹಾಕಿಕೊಂಡು ಹಣವನ್ನು ನೀಡಿ ಬರುತ್ತಿದ್ದಾರೆ. ಮನೆಯಲ್ಲೇ ಮಾರಾಟ ಮಾಡಿ ಹಣವನ್ನು ಪಡೆಯುವುದರಿಂದ ರೈತರಿಗೂ ಸಾಗಾಟದ ತೊಂದರೆ ಇಲ್ಲ’ ಎಂದು ಕೆಲ ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT