ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ಪತ್ರೆಗೆ ಮುಖ್ಯ ಜಾಗೃತಾಧಿಕಾರಿ ಭೇಟಿ: ವೈದ್ಯರ ಕಾರ್ಯವೈಖರಿಗೆ ಸಿಡಿಮಿಡಿ

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮುಖ್ಯ ಜಾಗೃತಾಧಿಕಾರಿ ದಿಢೀರ್‌ ಭೇಟಿ
Published 29 ಆಗಸ್ಟ್ 2024, 14:18 IST
Last Updated 29 ಆಗಸ್ಟ್ 2024, 14:18 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿದ ಆರೋಗ್ಯ ಇಲಾಖೆ ಮುಖ್ಯ ಜಾಗೃತಾಧಿಕಾರಿ ಶ್ರೀನಿವಾಸ್, ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಆಸ್ಪತ್ರೆ ಒಳಗೆ ಪ್ರವೇಶಿಸುತ್ತಿದ್ದಂತೆ ಬೆಳಗ್ಗೆ 9ಕ್ಕೆ ಬರಬೇಕಿದ್ದ ವೈದ್ಯರು 10ಗಂಟೆಯಾದರೂ ಬಂದಿರಲಿಲ್ಲ. ಅವರಿಗೆ ಖುದ್ದು ಅಧಿಕಾರಿಯೇ ಕರೆ ಮಾಡಿ ಕಾರಣ ಕೇಳಿದರು. ಎಲ್ಲರು ಒಂದೊಂದು ಸಾಬೂಬು ನೀಡಿದರು.  ಪ್ರತಿಯೊಂದು ಆಸ್ಪತ್ರೆ ವಾರ್ಡ್‌ಗೂ ಭೇಟಿ ನೀಡಿ, ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ವಿವರಣೆ ಪಡೆದರು.

ಕಣ್ಣು ಮತ್ತು ಕಿವಿಗೆ ಚಿಕಿತ್ಸೆ ಪಡೆಯಲು ಬಂದಿದ್ದ ಹಲವು ರೋಗಿಗಳು, ಒಂದೂವರೆ ಗಂಟೆಗೂ ಹೆಚ್ಚು ಕಾಲ ವೈದ್ಯರಿಗಾಗಿ ಕಾಯುತ್ತಿದ್ದರು. ಈ ಬಗ್ಗೆ ವೈದ್ಯಾಧಿಕಾರಿಗೆ ಮತ್ತೊಮ್ಮೆ ಈ ರೀತಿಯ ಕೆಲಸಕ್ಕೆ ಬರುವುದನ್ನು ವಿಳಂಬ ಮಾಡುವ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಆರೋಪ: ಡೆಂಗಿ ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ ಸಾರ್ವತ್ರಿಕ ರಜೆ ದಿನಗಳಲ್ಲಿ ಕಡ್ಡಾಯವಾಗಿ ವೈದ್ಯರು ಹಾಜರಾಗಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿ ಆದೇಶಿಸಿತ್ತು. ಆದರೆ, ಅಂದು ಯಾವ ವಾರ್ಡ್‌ನಲ್ಲೂ ವೈದ್ಯರು ಇರಲಿಲ್ಲ. ಇದನ್ನು ಸಾಕ್ಷಿ ಸಮೇತ ಸಾರ್ವಜನಿಕರು ತೋರಿಸಿದರು.ಆದರೆ, ಹಾಜರಾತಿ ಪುಸ್ತಕದಲ್ಲಿ ಎಲ್ಲರ ಹಾಜರಾತಿ ಇದ್ದದ್ದನ್ನು ಕಂಡು ಸಿಡಿಮಿಡಿಗೊಂಡರು.

ಗೌರಿಬಿದನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮುಖ್ಯ ಜಾಗೃತಾಧಿಕಾರಿ ಶ್ರೀನಿವಾಸ್ ಗುರುವಾರ ಭೇಟಿ ನೀಡಿದರು
ಗೌರಿಬಿದನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮುಖ್ಯ ಜಾಗೃತಾಧಿಕಾರಿ ಶ್ರೀನಿವಾಸ್ ಗುರುವಾರ ಭೇಟಿ ನೀಡಿದರು

ಕೆಲ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿನ ಕೆಲಸಕ್ಕಿಂತ ಖಾಸಗಿ ಕ್ಲಿನಿಕ್ ವ್ಯಾಮೋಹ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು. ಆಸ್ಪತ್ರೆಯಲ್ಲಿ ಕುಡಿಯಲು ಕನಿಷ್ಠ ನೀರಿನ ವ್ಯವಸ್ಥೆಯಿಲ್ಲ. ಗರ್ಭಿಣಿಯರು ಮತ್ತು ಬಾಣಂತಿಯರು ಹೊರಗಡೆಯಿಂದ ಬಿಸಿ ನೀರು ಖರೀದಿಸಬೇಕು. ಕುಳಿತುಕೊಳ್ಳಲು ಬೆರಳೆಣಿಕೆಯಷ್ಟು ಆಸನಗಳು ಇವೆ. ಆರೋಗಿಗಳು ಸದಾ ನಿಂತೇ ಇರಬೇಕು ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ದೂರುಗಳ ಮಳೆಗೈದರು.

‌ಆಡಳಿತ ವೈದ್ಯಾಧಿಕಾರಿ ಲಕ್ಷ್ಮಿಕಾಂತ್, ತಾಲ್ಲೂಕು ವೈದ್ಯಾಧಿಕಾರಿ ಚಂದ್ರಮೋಹನ್ ರೆಡ್ಡಿ ಮತ್ತು ನೋಡಲ್ ಅಧಿಕಾರಿ, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಇದ್ದರು.

ಗೌರಿಬಿದನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮುಖ್ಯ ಜಾಗೃತಾಧಿಕಾರಿ ಶ್ರೀನಿವಾಸ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು
ಗೌರಿಬಿದನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮುಖ್ಯ ಜಾಗೃತಾಧಿಕಾರಿ ಶ್ರೀನಿವಾಸ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿರುವುದು
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿರುವುದು

ವೈದ್ಯರ ವಿಳಂಬ ಸರಿಪಡಿಸಲಾಗುವುದು:

ಆರೋಗ್ಯ ಇಲಾಖೆ ಮುಖ್ಯ ಜಾಗೃತಾಧಿಕಾರಿ ಶ್ರೀನಿವಾಸ್ ವೈದ್ಯರು ತಡವಾಗಿ ಬರುವುದನ್ನು ಸರಿಪಡಿಸಲಾಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಉಚಿತವಾಗಿ ಔಷಧ ಸಹ ನೀಡಲಾಗುವುದು.ಯಾವುದೇ ಕಾರಣಕ್ಕೂ ಹೊರಗಡೆ ಖರೀದಿಸಲು ಸೂಚಿಸುವಂತಿಲ್ಲ. ಯಾವುದೇ ಕಾರಣಕ್ಕೂ ರೋಗಿಗಳು ಒಂದು ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲದೆ ಚಿಕಿತ್ಸೆ ಪಡೆಯಬೇಕು. ಅಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿರುವ ರೋಗಿಗಳು ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಸಹ ಒಳ ರೋಗಿಯಾಗಿ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಬಹುದು. ಒಂದು ವೇಳೆ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಿದ್ದಲ್ಲಿ ಅಲ್ಲಿಯೂ ಸಹ ಉಚಿತ ಚಿಕಿತ್ಸೆ ಪಡೆಯಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT