ಗುರುವಾರ , ಮಾರ್ಚ್ 4, 2021
30 °C
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಳೆ ನೀರು ಸಂಗ್ರಹ ಅಭಿಯಾನ ಆರಂಭ, ಮಳೆ ನೀರು ಸಂಗ್ರಹಣಾ ಪದ್ಧತಿ ಅಳವಡಿಸಿಕೊಂಡವರ ಖಾತೆ ಹಣ ಜಮೆ

ಮಳೆ ನೀರು ಸಂಗ್ರಹಕ್ಕೆ ₹5 ಸಾವಿರ ಪ್ರೋತ್ಸಾಹಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ‘ನಗರ, ಪಟ್ಟಣಗಳಲ್ಲಿ ಮಳೆ ನೀರು ಸಂಗ್ರಹಣಾ ವ್ಯವಸ್ಥೆ ಅಳವಡಿಸಿಕೊಳ್ಳುವ ಪ್ರತಿ ಮನೆಗೆ ಸ್ಥಳೀಯ ಸಂಸ್ಥೆಗಳಿಂದ ತಲಾ ₹5,000 ಪ್ರೋತ್ಸಾಹಧನ ನೀಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ಥಳೀಯ ಸಂಸ್ಥೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅನುಷ್ಟಾನಗೊಳಿಸಲು ಅಧಿಕಾರಿಗಳು ಹಾಗೂ ನಾಗರಿಕರನ್ನೊಳಗೊಂಡ ಜಿಲ್ಲಾ ಮಟ್ಟದ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

‘ಚಿಲುಮೆ ನೀರಿಗಾಗಿ ಒಂದಾಗಿ’ ಎಂಬ ಘೋಷ ವಾಕ್ಯದಡಿಯಲ್ಲಿ ಜಿಲ್ಲೆಯ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಳೆ ನೀರು ಸಂಗ್ರಹ ಪದ್ಧತಿ ಅನುಷ್ಟಾನಗೊಳಿಸಲು ಹಸಿರು ನಿಧಿಯನ್ನು ಸ್ಥಾಪಿಸಿದ್ದು, ಅದರ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ತಲಾ ₹5 ಲಕ್ಷ ಬಿಡುಗಡೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ಜಿಲ್ಲೆ ತೀವ್ರ ಅಂತರ್ಜಲದ ಕೊರತೆ ಎದುರಿಸುತ್ತಿರುವುದರಿಂದ ಎಲ್ಲ ಮನೆ, ಕಟ್ಟಡಗಳಲ್ಲಿ ಮಳೆ ನೀರನ್ನು ಸಂಗ್ರಹಿಸುವುದು ಇಂದಿನ ಅಗತ್ಯವಾಗಿದೆ. ಆದ್ದರಿಂದ ನಗರಸಭೆ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಗಳಲ್ಲಿ ಮಳೆ ನೀರು ಸಂಗ್ರಹಿಸುವ ಕೆಲಸ ಮಾಡಬೇಕಿದೆ. ಈ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ವಾರ್ಡ್ ಸಭೆ, ಕರಪತ್ರಗಳ ಮೂಲಕ ಅರಿವು ಮೂಡಿಸಬೇಕು’ ಎಂದರು.

‘ಪ್ರತಿಯೊಂದು ನಗರಸಭೆ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ನಾಲ್ಕು ವಾರ್ಡುಗಳನ್ನು ಆರಿಸಿಕೊಳ್ಳಬೇಕು. ಪ್ರತಿ ವಾರ್ಡ್‌ನಲ್ಲಿ ತರಬೇತಿ ನೀಡಿದ ವಿದ್ಯಾರ್ಥಿಗಳು ಅಥವಾ ಸ್ವಯಂಸೇವಕರಿಂದ ಸಮೀಕ್ಷೆ ಕೈಗೊಂಡು ಎಷ್ಟು ಪ್ರಮಾಣದ ಮಳೆ ನೀರು ಸಂಗ್ರಹಿಸಬಹುದೆಂದು ಅಂಕಿ ಅಂಶಗಳನ್ನು ತಯಾರಿಸಬೇಕು’ ಎಂದು ತಿಳಿಸಿದರು.

‘ಈ ಯೋಜನೆ ಅನುಷ್ಠಾನಕ್ಕಾಗಿ ಸ್ಥಳೀಯ ಸಂಸ್ಥೆಗಳಿಂದ ಆಯ್ದ ಪ್ಲಂಬರ್ ಮತ್ತು ಮೇಸ್ತ್ರಿಗಳಿಗೆ ತರಬೇತಿ ನೀಡಲಾಗುತ್ತದೆ. ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳುವ ಮನೆ ಮಾಲೀಕನ ಆಧಾರ್ ಸಂಖ್ಯೆಗೆ ಲಿಂಕ್ ಆದ ಬ್ಯಾಂಕ್ ಖಾತೆಗೆ ₹5,000 ಪ್ರೋತ್ಸಾಹ ಧನ ಜಮೆ ಮಾಡಲಾಗುತ್ತದೆ. ಸರ್ಕಾರಿ ಉದ್ಯಾನ, ಸಾರ್ವಜನಿಕ ಸ್ಥಳಗಳಲ್ಲಿ ಸಹ ನೀರು ಸಂಗ್ರಹಿಸುವ ಕೆಲಸವಾಗಬೇಕಿದೆ’ ಎಂದು ಹೇಳಿದರು.

ಮಾರುಕಟ್ಟೆ ಕಟ್ಟಡಗಳು, ಸರ್ಕಾರಿ ಆಸ್ಪತ್ರೆಗಳು, ಬಸ್‌ ನಿಲ್ದಾಣಗಳಲ್ಲಿ ಮಳೆ ನೀರು ಸಂಗ್ರಹಿಸುವ ಪದ್ಧತಿ ಅಳವಡಿಸಿದರೆ, ಆಯಾ ಕಟ್ಟಡದಲ್ಲಿ ಸಾರ್ವಜನಿಕರ ನೀರಿನ ಅಗತ್ಯವನ್ನಾದರೂ ಪೂರೈಸಲು ಅದರಿಂದ ಸಾಧ್ಯವಾಗುತ್ತದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಗರಿಕ ಪ್ರತಿನಿಧಿಗಳು ಸಲಹೆ ನೀಡಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಕಾರ್ಯಪಾಲಕ ಎಂಜಿನಿಯರ್, ವಿವಿಧ ನಗರಸಭೆ ಹಾಗೂ ಪುರಸಭೆಗಳ ಪೌರಾಯುಕ್ತರು ಹಾಗೂ ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.