ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಅಚ್ಚರಿಯ ಬೆಳವಣಿಗೆಗಳು ಘಟಿಸುತ್ತಿವೆ. ಬಲಿಜ ಸಮುದಾಯದ ಮುಖಂಡ ಪ್ರದೀಪ್ ಈಶ್ವರ್ ಹೆಸರು ಈಗ ಮುನ್ನಲೆಗೆ ಬಂದಿದೆ.
ಟಿಕೆಟ್ ವಿಚಾರವಾಗಿ ಬುಧವಾರ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಶಾಸಕರಾದ ಎನ್.ಎಚ್.ಶಿವಶಂಕರರೆಡ್ಡಿ, ಕೆ.ಆರ್.ರಮೇಶ್ ಕುಮಾರ್, ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಹಾಗೂ ಜಿಲ್ಲೆಯ ಕಾಂಗ್ರೆಸ್‌ನ ಪ್ರಮುಖ ನಾಯಕರು ಪ್ರದೀಪ್ ಈಶ್ವರ್ ಜತೆ ಸುಮಾರು 1 ತಾಸು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡ ಬಹಳಷ್ಟು ಮುಖಂಡರು ಪ‍್ರದೀಪ್‌ಗೆ ಟಿಕೆಟ್ ನೀಡುವ ವಿಚಾರದಲ್ಲಿ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವ ಕೆಪಿಸಿಸಿ ಸದಸ್ಯ ವಿನಯ್ ಎನ್.ಶ್ಯಾಮ್, ಮುಖಂಡರಾದ ಯಲುವಳ್ಳಿ ರಮೇಶ್, ಗಂಗರೇಕಾಲುವೆ ನಾರಾಯಣಸ್ವಾಮಿ, ಲಾಯರ್ ನಾರಾಯಣಸ್ವಾಮಿ, ಕೆ.ಎನ್.ರಘು ಈ ಸಭೆಯಲ್ಲಿ ಹಾಜರಿರಲಿಲ್ಲ. ಟಿಕೆಟ್ ವಿಚಾರವಾಗಿ ಸದ್ಯ ವಿನಯ್ ಎನ್.ಶ್ಯಾಮ್ ಹೆಸರು ಮುಂಚೂಣಿಯಲ್ಲಿ ಇದೆ. ಈ ನಡುವೆಯೇ ಪ್ರದೀಪ್ ಹೆಸರು ಪಕ್ಷದ ವೇದಿಕೆಯಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂದಿದೆ.
ಚಿಕ್ಕಬಳ್ಳಾಪುರ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಪ್ರದೀಪ್ ಈಶ್ವರ್ ಹೆಸರು ಚರ್ಚೆಯಲ್ಲಿದೆ ಎನ್ನುವ ವಿಷಯ ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’ ತಿಳಿದಾಗ ಕಾಂಗ್ರೆಸ್‌ನ ಹಿರಿಯ ಶಾಸಕರಾದ ಎನ್.ಎಚ್.ಶಿವಶಂಕರರೆಡ್ಡಿ ಅವರನ್ನು ಸಂಪರ್ಕಿಸಲಾಗಿತ್ತು. ಆಗ ಅವರು ‘ಹೆಸರು ಚರ್ಚೆಯಲ್ಲಿದೆ’ ಎಂದಿದ್ದರು.
ಈ ನಡುವೆಯೇ ಮಾಜಿ ಸಚಿವ ಹಾಗೂ ಬಲಿಜ ಸಮುದಾಯದ ಮುಖಂಡ ಎಂ.ಆರ್.ಸೀತಾರಾಂ ಮತ್ತು ಅವರ ಪುತ್ರ ಯುವಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸಹಕಾರ ನೀಡುವಂತೆ ಪ್ರದೀಪ್ ಈಶ್ವರ್ ಜತೆ ಮಾತುಕತೆ ಸಹ ನಡೆಸಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಂ.ಆರ್.ಸೀತಾರಾಂ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಸಹ ಹೊಂದಿದ್ದಾರೆ.
ಜಾತಿ ಲೆಕ್ಕಾಚಾರದ ಸಮೀಕರಣ: ಈ ಎಲ್ಲ ಬೆಳವಣಿಗೆಗಳು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜಾತಿ ಸಮೀಕರಣ ಆಧರಿಸಿ ಟಿಕೆಟ್ ನೀಡಲು ಕಾಂಗ್ರೆಸ್ ಮುಖಂಡರು ಲೆಕ್ಕಾಚಾರ ನಡೆಸಿದಂತಿದೆ. ಜಿಲ್ಲೆಯಲ್ಲಿ ಬಲಿಜ ಸಮುದಾಯದ ಮತದಾರರು ಸಹ ಪ್ರಮುಖವಾಗಿ ಇದ್ದಾರೆ.
ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಮತದಾರರು ಅಂದಾಜು 45 ಸಾವಿರ, ಒಕ್ಕಲಿಗರು 41 ಸಾವಿರ, ಬಲಿಜಿಗರು 30 ಸಾವಿರ, ಕುರುಬರು 14 ಸಾವಿರ, ಮುಸ್ಲಿಮರು 17 ಸಾವಿರ, ಪರಿಶಿಷ್ಟ ಪಂಗಡ 17 ಸಾವಿರ ಅಂದಾಜು ಮತದಾರರು ಇದ್ದಾರೆ. ಈ ಲೆಕ್ಕಾಚಾರವನ್ನು ನೋಡಿದರೆ ಚಿಕ್ಕಬಳ್ಳಾಪುರದಲ್ಲಿ ‘ಅಹಿಂದ’ ಮತದಾರರ ಪ್ರಾಬಲ್ಯವಿದೆ. ಯಾವ ಅಭ್ಯರ್ಥಿಯೇ ಆದರೂ ಗೆಲುವಿಗೆ ಈ ಸಮುದಾಯಗಳ ವಿಶ್ವಾಸಗಳಿಸಿಕೊಳ್ಳಬೇಕು. ಕ್ಷೇತ್ರದಲ್ಲಿ ಜಾತಿಯ ಬಲವೂ ಚುನಾವಣೆಗೆ ಮಾನದಂಡವಾಗುತ್ತಿದೆ.
‘ಪ್ರದೀಪ್ ಈಶ್ವರ್ ಬಲಿಜಿಗ ಸಮುದಾಯದವರು. ಮುಸ್ಲಿಮರು, ಕ್ರೈಸ್ತರು ಕುರುಬರ ಮತಗಳು ಕಾಂಗ್ರೆಸ್ ಪರವಾಗಿ ಒಗ್ಗೂಡಲಿವೆ. ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರೇ ಕಾಂಗ್ರೆಸ್‌ನ ಪ್ರಮುಖ ಬಲ. ಈ ಲೆಕ್ಕಾಚಾರದಲ್ಲಿ ಪಕ್ಷದ ವರಿಷ್ಠರು ಅಭ್ಯರ್ಥಿ ಆಯ್ಕೆಗೆ ಮುಂದಾಗಿದ್ದಾರೆ’ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.
2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರದೀಪ್ ಪ್ರಚಾರ ಹೆಚ್ಚು ಸದ್ದು ಮಾಡಿತ್ತು. ಶಾಸಕ ಡಾ.ಕೆ.ಸುಧಾಕರ್ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಎತ್ತಿದ್ದ ಪ್ರಶ್ನೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದವು. ಬಿಡು ಬೀಸಾಗಿ ಸುಧಾಕರ್ ವಿರುದ್ಧ ಟೀಕೆಗಳ ಮಳೆಗರೆಯುತ್ತಿದ್ದರು.
ಇಂದು ಮೊಯಿಲಿ ಮನೆಯಲ್ಲಿ ಸಭೆ
ಪ್ರದೀಪ್ ಈಶ್ವರ್ ಅಭ್ಯರ್ಥಿಯಾಗುವ ವಿಚಾರ ಮತ್ತು ಕಾಂಗ್ರೆಸ್ ಟಿಕೆಟ್ ಕುರಿತು ಚರ್ಚಿಸಲು ಚಿಕ್ಕಬಳ್ಳಾಪುರ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಅವರ ನಿವಾಸದಲ್ಲಿ ಗುರುವಾರ (ಮಾ.23) ಸಭೆ ನಿಗದಿ ಆಗಿತ್ತು. ಆದರೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಅಂಜನಮೂರ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಸಭೆಯನ್ನು ಶುಕ್ರವಾರ (ಮಾ.24) ನಿಗದಿಗೊಳಿಸಲಾಗಿದೆ. ‘ಶುಕ್ರವಾರ ಸಂಜೆ ಸಭೆ ನಡೆಯಲಿದೆ. ವೀರಪ್ಪ ಮೊಯಿಲಿ ಅವರ ಮನೆಯಲ್ಲಿ ನಡೆಯುವ ಸಭೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವ ಮುಖಂಡರು ಸಹ ಭಾಗಿಯಾಗುವರು’ ಎಂದು ಬುಧವಾರ ಬೆಂಗಳೂರಿನ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸುಧಾಕರ್ ಜತೆ ಸಂಬಂಧವಿಲ್ಲ’
2018ರ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಪಕ್ಷೇತರ ಅಭ್ಯರ್ಥಿ ನವೀನ್ ಕಿರಣ್ ಪರವಾಗಿ ಪ್ರಚಾರ ನಡೆಸಿದ್ದರು. ಆ ಸಮಯದಲ್ಲಿ ‘ಸ್ಟಾರ್ ಪ‍್ರಚಾರಕ’ ಎನಿಸಿದ್ದರು. ಚುನಾವಣೆ ಮುಗಿಯುವ ವೇಳೆಗೆ ಹಲವು ಪ್ರಕರಣಗಳು ಇವರ ಮೇಲೆ ದಾಖಲಾಗಿದ್ದವು. ಆದರೆ ನಂತರದ ದಿನಗಳಲ್ಲಿ ಪ್ರದೀಪ್, ಸಚಿವ ಡಾ.ಕೆ.ಸುಧಾಕರ್ ಜತೆ ಉತ್ತಮ ಸಂಬಂಧ ಹೊಂದಿದ್ದರು ಎನ್ನುವ ಚರ್ಚೆಗಳು ಆರಂಭವಾಗಿದ್ದವು. ಹಲವು ಕಾರ್ಯಕ್ರಮಗಳಲ್ಲಿ ಈ ಇಬ್ಬರು ವೇದಿಕೆ ಹಂಚಿಕೊಂಡಿದ್ದರು. ಡಾ.ಸುಧಾಕರ್, ಪ್ರದೀಪ್ ಅವರನ್ನು ಹೊಗಳುತ್ತಿದ್ದರು.
ಬುಧವಾರದ ಸಭೆಯಲ್ಲಿ ‘ನಾನು ಸಚಿವ ಸುಧಾಕರ್ ಪರವಲ್ಲ. ಯಾವುದೇ ಸಂಬಂಧಗಳು ಇಲ್ಲ’ ಎಂದು ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಪ್ರದೀಪ್ ಕಾಂಗ್ರೆಸ್ ಮುಖಂಡರ ಮುಂದೆ ತನ್ನ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನೂ ಪ್ರದರ್ಶಿಸಿದ್ದಾರೆ ಎನ್ನಲಾಗುತ್ತಿದೆ. ‘ಪಕ್ಷದ ವರಿಷ್ಠರು ಪ್ರದೀಪ್ ಮತ್ತು ಅವರ ವಹಿವಾಟು, ಕೆಲಸಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆಯೂ ಚರ್ಚೆ ನಡೆಯಿತು’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಮಾಹಿತಿ ನೀಡಿದರು.
ಎರಡನೇ ಪಟ್ಟಿಯಲ್ಲಿ ಘೋಷಣೆ?
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮೊದಲ ಪಟ್ಟಿಯಲ್ಲಿ ಘೋಷಣೆಯಾಗುವ ಸಾಧ್ಯತೆ ಕಡಿಮೆ ಇದೆ. ಇನ್ನೂ ಟಿಕೆಟ್ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿರುವ ಕಾರಣ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.