ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಯಾವ ಕ್ಷೇತ್ರದಲ್ಲಿ ಯಾರಿಗೆ ಲೀಡ್‌?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗರಿಗೆದರಿಗೆ ಲೆಕ್ಕಾಚಾರ
Published 1 ಮೇ 2024, 4:16 IST
Last Updated 1 ಮೇ 2024, 4:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಲೀಡ್ ದೊರೆಯುತ್ತದೆ ಎನ್ನುವ ಚರ್ಚೆ ಬಿಸಿಲಿನಷ್ಟೇ ಕಾವು ಹೆಚ್ಚಿಸಿದೆ.

ಮೊದಲ ಬಾರಿ ಲೋಕಸಭಾ ಚುನಾವಣಾ ಕಣಕ್ಕಿಳಿದಿರುವ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಹಾಗೂ ಬಿಜೆಪಿ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಬೆಂಬಲಿಗರಲ್ಲಿ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಚುನಾವಣೆಯ ನಂತರ ಇಲ್ಲಿಯವರೆಗೂ ಯಾವುದೇ ನಾಯಕರು ನಾವು ಇಷ್ಟು ಲೀಡ್‌ಗಳಿಂದ ಗೆಲ್ಲುತ್ತೇವೆ ಎಂದು ಬಹಿರಂಗವಾಗಿ ಹೇಳಿಲ್ಲ. 

ಯಾವ ಕ್ಷೇತ್ರದಲ್ಲಿ ಯಾರಿಗೆ ಲೀಡ್‌ ಬರಬಹುದು, ಯಾವ ಕ್ಷೇತ್ರದಲ್ಲಿ ಹಿನ್ನಡೆ ಆಗಬಹುದು, ಯಾರಿಗೆ ವಿಜಯಮಾಲೆ ಒಲಿಯಲಿದೆ ಎಂಬ ಚರ್ಚೆ ಕೇಳಿ ಬರುತ್ತಿದೆ. ಊರ ಮುಂದಿನ ಅರಳಿ ಮರ, ದೇಗುಲ ಕಟ್ಟೆ, ದರ್ಶಿನಿಗಳು, ಸಲೂನ್‌, ಕಾಫಿ–ಟೀ ಗೂಡಂಗಡಿ, ಬಸ್‌ ನಿಲ್ದಾಣ, ಹೊಲ, ತೋಟ, ಸಭೆ, ಸಮಾರಂಭಗಳಲ್ಲೂ ಅದೇ ಚರ್ಚೆ. ಯುವಕರು, ವಯೋವೃದ್ಧರು, ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳು ಕೂಡ ಅದೇ ಗುಂಗಿನಲ್ಲಿದ್ದಾರೆ.

ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ರೀತಿಯ ಚಿತ್ರಣ ಮತದಾನದ ನಂತರವೂ ಎದ್ದು ಕಾಣುತ್ತಿದೆ. ಯಲಹಂಕ, ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಲೀಡ್ ಖಚಿತ ಎಂದು ಬಿಜೆಪಿ ಮುಖಂಡರು ಅತಿ ಉತ್ಸಾಹದಲ್ಲಿ ಇದ್ದಾರೆ. ಲೀಡ್ ಲೆಕ್ಕಾಚಾರ ಹಾಕುವಾಗಲೂ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಅಂಕಿ ಸಂಖ್ಯೆಗಳನ್ನು ಮುಂದಿಡುತ್ತಾರೆ. ನೆಲಮಂಗಲ ಮತ್ತು ಹೊಸಕೋಟೆಯಲ್ಲಿ ನೇರಾ ನೇರಾ ಹಣಾಹಣಿ ಇದೆ ಎನ್ನುತ್ತಿದ್ದಾರೆ.

ಬಾಗೇಪಲ್ಲಿ, ಗೌರಿಬಿದನೂರು, ಹೊಸಕೋಟೆ ಮತ್ತು ನೆಲಮಂಗಲದಲ್ಲಿ ರಕ್ಷಾ ರಾಮಯ್ಯ ಮುನ್ನಡೆ ಪಡೆಯುವರು ಎಂದು ಕೈ ಮುಖಂಡರು ವಿಶ್ವಾಸ ಹೊಂದಿದ್ದಾರೆ. ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರವೂ ಅವರ ಲೀಡ್ ಪಟ್ಟಿಯಲ್ಲಿದೆ. ಕಾಂಗ್ರೆಸ್ ನಾಯಕರೂ ಅಷ್ಟೇ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ರೀತಿಯ ಲೀಡ್‌ ಲೆಕ್ಕಾಚಾರವನ್ನು ಮಾಡುತ್ತಿದ್ದಾರೆ.  

ಎರಡೂ ಪಕ್ಷಗಳ ನಾಯಕರ ಪಟ್ಟಿ ನೋಡಿದರೆ ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಕಾಂಗ್ರೆಸ್ ಲೀಡ್. ದೊಡ್ಡಬಳ್ಳಾಪುರ, ಯಲಹಂಕದಲ್ಲಿ ಬಿಜೆಪಿ ಲೀಡ್ ಎನ್ನುವುದು ವೇದ್ಯವಾಗುತ್ತದೆ. ಉಳಿದ ಕ್ಷೇತ್ರಗಳ ಬಗ್ಗೆ ಎರಡೂ ಪಕ್ಷದ ಮುಖಂಡರು ತಮ್ಮದೇ ಆದ ಲೆಕ್ಕಾಚಾರ ಮುಂದಿಡುತ್ತಿದ್ದಾರೆ.

ಜೆಡಿಎಸ್‌ ಬಿಜೆಪಿಗೆ ಬೆಂಬಲ ನೀಡಿರುವ ಕಾರಣ ದೇವನಹಳ್ಳಿಯಲ್ಲಿ ಬಿಜೆಪಿ ಉತ್ತಮ ಮತಪಡೆಯುವ ವಿಶ್ವಾಸ ವ್ಯಕ್ತಪಡಿಸುವರು. ಜೆಡಿಎಸ್ ನಾಯಕರು ಸಹ ತಮ್ಮ ನೆಲೆ ಗಟ್ಟಿಯಾಗಿರುವ ದೇವನಹಳ್ಳಿ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರದಲ್ಲಿ ಮೈತ್ರಿ ಅಭ್ಯರ್ಥಿಗೆ ನಮ್ಮಿಂದ ಲೀಡ್ ಬರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ. 

ನಿಮ್ಮ ಕ್ಷೇತ್ರದಲ್ಲಿ ಯಾರಿಗೆ ಲೀಡ್‌? ನಿಮ್ಮ ಸಮುದಾಯದವರು ಯಾರಿಗೆ ವೋಟ್‌ ಹಾಕಿದ್ದಾರೆ? ಈ ಬಾರಿ ಮಹಿಳೆಯರ ಒಲವು ಹೆಚ್ಚು ಯಾರ ಕಡೆ ಇರಬಹುದು? ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ಕೈಹಿಡಿಯಬಲ್ಲವೇ? ಮೋದಿ ಫ್ಯಾಕ್ಟರ್‌ ಕೆಲಸ ಮಾಡಲಿದೆಯೇ ಎಂಬಂಥ ಪ್ರಶ್ನೆಗಳು ಪದೇಪದೇ ಎದುರಾಗುತ್ತಿವೆ.

ಆ ಸಮುದಾಯದವರೆಲ್ಲಾ ಜೆಡಿಎಸ್‌ಗೆ ಮತ ನೀಡಿದ್ದಾರಂತೆ. ವ್ಯಕ್ತಿಗತವಾಗಿ ಅಷ್ಟು ಟೀಕೆ ಮಾಡಿದ್ದರಿಂದ ಆ ಸಮುದಾಯದವರು ಹೆಚ್ಚಿನದಾಗಿ ಬೆಂಬಲ ನೀಡಿದ್ದಾರಂತೆ. ತಿಂಗಳಿಗೆ ₹ 2 ಸಾವಿರ ಪಡೆಯುವ ಮಹಿಳೆಯರು ಸಾರಸಗಟಾಗಿ ಕಾಂಗ್ರೆಸ್‌ಗೆ ಹಾಕುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ–ಹೀಗೆ ನಾನಾ ಮಾತುಗಳು, ಚರ್ಚೆಗಳು ಅಲ್ಲಲ್ಲಿ ಕೇಳಿಬರುತ್ತಿವೆ.

ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ ಜೆಡಿಎಸ್‌ ಹೈಕಮಾಂಡ್‌ ತಮ್ಮ ಪಕ್ಷದ ಶಾಸಕರಿಗೆ, ಮಾಜಿ ಶಾಸಕರಿಗೆ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಅಭ್ಯರ್ಥಿಗಳಿಗೆ ಲೀಡ್‌ ಕೊಡಿಸುವ ಜವಾಬ್ದಾರಿ ಕೊಟ್ಟಿತ್ತು. ಬಿಜೆಪಿಗೆ ಜೆಡಿಎಸ್ ಬೆಂಬಲ ಬೇರೆ ಇತ್ತು. ಹೀಗಾಗಿ, ಅವರಿಗೆಲ್ಲಾ ದೊಡ್ಡ ಸವಾಲು ಇತ್ತು.

ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್, ದೇವನಹಳ್ಳಿಯಲ್ಲಿ ಶಾಸಕ ಕೆ.ಎಚ್.ಮುನಿಯಪ್ಪ, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ, ನೆಲಮಂಗಲದಲ್ಲಿ ಶ್ರೀನಿವಾಸ್, ಗೌರಿಬಿದನೂರಿನಲ್ಲಿ ಕೆ.ಎಚ್.ಪುಟ್ಟಸ್ವಾಮಿಗೌಡ, ಎನ್.ಎಚ್.ಶಿವಶಂಕರ ರೆಡ್ಡಿ, ಬಾಗೇಪಲ್ಲಿಯಲ್ಲಿ ಎಸ್‌.ಎನ್.ಸುಬ್ಬಾರೆಡ್ಡಿ, ಯಲಹಂಕದಲ್ಲಿ ಕೇಶವರಾಜಣ್ಣ, ದೊಡ್ಡಬಳ್ಳಾಪುರದಲ್ಲಿ ವೆಂಕಟರಮಣಯ್ಯ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಕಾಂಗ್ರೆಸ್‌ ಪಕ್ಷದ ಪರವಾಗಿ ಅಬ್ಬರದ ಪ್ರಚಾರ ನಡೆಸಿದರು. ಇವರೇ ಲೋಕಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಕಟ್ಟಾಳುಗಳು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಚಾರ ನಡೆಸಿದರು.

ಯಲಹಂಕದಲ್ಲಿ ಶಾಸಕ ಎಸ್‌.ಆರ್.ವಿಶ್ವನಾಥ್, ದೊಡ್ಡಬಳ್ಳಾಪುರದಲ್ಲಿ ಧೀರಜ್ ಮುನಿರಾಜು, ಜೆಡಿಎಸ್‌ನ ಮುನೇಗೌಡ, ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿ.ಮುನಿರಾಜು, ಕೋನಪ್ಪ ರೆಡ್ಡಿ, ರಾಮಲಿಂಗಪ್ಪ, ಗೌರಿಬಿದನೂರಿನಲ್ಲಿ ರವಿನಾರಾಯಣರೆಡ್ಡಿ, ಕೆಂಪರಾಜು, ಶಶಿಧರ್, ನರಸಿಂಹಮೂರ್ತಿ, ದೇವನಹಳ್ಳಿಯಲ್ಲಿ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಪಿಳ್ಳ ಮುನಿಶಾಮಪ್ಪ, ಚಂದ್ರಣ್ಣ, ಹೊಸಕೋಟೆಯಲ್ಲಿ ಎಂ.ಟಿ.ಬಿ ನಾಗರಾಜ್, ನೆಲಮಂಗಲದಲ್ಲಿ ಮಾಜಿ ಶಾಸಕ ಶ್ರೀನಿವಾಸಮೂರ್ತಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಅವರೇ ಪ್ರಚಾರದ ನೇತೃತ್ವವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT