ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ; ಜೋರಾದ ಜಿಗಿದಾಟ

‘ಆಪರೇಷನ್‌’ಗೆ ಆಮಿಷ, ಅನುಕೂಲ ಮಾಡಿಕೊಡುವ ಭರವಸೆ
Published 5 ಏಪ್ರಿಲ್ 2024, 7:03 IST
Last Updated 5 ಏಪ್ರಿಲ್ 2024, 7:03 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಗುರುವಾರ ಅಂತಿಮ ದಿನ. ಒಂದೆಡೆ ನಾಮಪತ್ರ ಸಲ್ಲಿಕೆ ಭರಾಟೆ ನಡೆದಿರುವಂತೆ ಮತ್ತೊಂದು ಕಡೆ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ರಾಜಕೀಯ ಪಕ್ಷಗಳು ಮತ್ತು ಮುಖಂಡರು ತಮ್ಮ ಬಲ ಹೆಚ್ಚಳಕ್ಕೆ ‘ಆಪರೇಷನ್ ಪಕ್ಷಾಂತರ’ವನ್ನು ಸಹ ಜೋರಾಗಿ ನಡೆಸಿದ್ದಾರೆ.  

ಈ ಪಕ್ಷಾಂತರದಲ್ಲಿ ಮಾಜಿ ಶಾಸಕರಿಂದ ಹಿಡಿದು ಪ್ರಭಾವಿ ನಾಯಕ ಎನಿಸುವ ವ್ಯಕ್ತಿಗೂ ಮನ್ನಣೆ ನೀಡಲಾಗುತ್ತಿದೆ.

ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪರಸ್ಪರ ಸೆಣಸಿದ್ದಾರೆ. ಬೆಳಿಗ್ಗೆ ಕಾಂಗ್ರೆಸ್‌ನಲ್ಲಿ ಇದ್ದವರು ಮಧ್ಯಾಹ್ನ ಬಿಜೆಪಿ ಸೇರುತ್ತಿದ್ದಾರೆ. ಈ ಬೆಳವಣಿಗೆಗಳು ಕ್ಷೇತ್ರದಲ್ಲಿ ನಾನಾ ರೀತಿಯ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗುತ್ತಿದೆ. 

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾ ಅಧ್ಯಕ್ಷ ಕೆ.ಎಂ.ಮುನೇಗೌಡ, ಜಿ.ಪಂ ಮಾಜಿ ಸದಸ್ಯ ರಾಜಾಕಾಂತ್ ಮತ್ತಿತರರು ಬೆಂಬಲಿಗರ ಜೊತೆಗೆ ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.

ನಾಮಪತ್ರ ಸಲ್ಲಿಕೆ ನಂತರ ಪಕ್ಷಾಂತರ ಪರ್ವ ಜೋರಾಗಿದೆ. ಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಒಂದು ಪಕ್ಷದ ನಾಯಕರು ಮತ್ತೊಂದು ಪಕ್ಷದ ಸ್ಥಳೀಯ ನಾಯಕರನ್ನು ಸೆಳೆಯಲು  ಕಾರ್ಯಪ್ರವೃತ್ತರಾಗಿದ್ದಾರೆ.  

‘ಆಪರೇಷನ್‌’ಗೆ ಆಮಿಷಗಳು, ಅನುಕೂಲ ಮಾಡಿಕೊಡುವ ಭರವಸೆಗಳು, ಬೆದರಿಕೆಗಳು, ಸಂಬಂಧಗಳು, ಪರಸ್ಪರ ಮುನಿಸು ...ಹೀಗೆ ನಾನಾ ಅಸ್ತ್ರಗಳನ್ನು ಪ್ರಯೋಗಿಸಲಾಗುತ್ತಿದೆ.  ಈ ಪಕ್ಷದಲ್ಲಿ ಇದ್ದವರು ಆ ಪಕ್ಷಕ್ಕೆ ಅಲ್ಲಿ ಇದ್ದವರು ಮತ್ತೊಂದು ಕಡೆಗೆ ‘ಪಕ್ಷಾಂತರ’ವಾಗುವ ಪರ್ವಗಳು ಜೋರಾಗಿವೆ.  

ಆಯಾ ಪಕ್ಷಗಳ ಸ್ಥಳೀಯ ನಾಯಕರಿಗೆ ಈ ಆಪರೇಷನ್ ಕಾರ್ಯಾಚರಣೆಯ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಲಾಗಿದೆ. ‘ಇವರು ನಮ್ಮ ಪಕ್ಷ ಸೇರಿದರು’ ಎಂದು ಪಕ್ಷಗಳ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಚರ್ಚೆಗಳಾಗುತ್ತಿವೆ. ಈ ಪಕ್ಷಾಂತರ ಕಾರ್ಯಾಚರಣೆಯಿಂದ ವಿಧಾನಸಭಾ ಕ್ಷೇತ್ರ, ಬೂತ್, ಹಳ್ಳಿಯಲ್ಲಿ ತಮ್ಮ ಬಲ ಹೆಚ್ಚಿದೆ ಎನ್ನುವ ಲೆಕ್ಕಾಚಾರ ಸಹ ಸ್ಥಳೀಯವಾಗಿ ಜೋರಾಗಿದೆ. 

‌ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿನ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಎಪಿಎಂಸಿ, ನಗರ ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯರು, ಮಾಜಿ ಅಧ್ಯಕ್ಷರು ಹೀಗೆ ವಿವಿಧ ಹಂತಗಳಲ್ಲಿ ‘ಮಾಜಿ’ ಎನಿಸಿರುವ ಜನಪ್ರತಿನಿಧಿಗಳಿಗೆ ಬೇಡಿಕೆ ಸಹ ಹೆಚ್ಚಿದೆ. ‘ಮಾಜಿ’ ಜನಪ್ರತಿನಿಧಿಗಳಿಗೆ ಈ ಪಕ್ಷಾಂತರ ಒಳ್ಳೆಯ ಅವಕಾಶವನ್ನು ಒದಗಿಸಿದೆ. ಒಂದು ಸಮಯದಲ್ಲಿ ಸ್ಥಳೀಯ ಶಾಸಕರಿಗೆ ಹತ್ತಿರವಿದ್ದು ಈಗ ಮುನಿಸಿಕೊಂಡ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮಾಜಿ ಪದಾಧಿಕಾರಿಗಳಿಗೆ ಭರ್ಜರಿಯಾಗಿಯೇ ‘ಗಾಳ’ ಹಾಕಲಾಗುತ್ತಿದೆ.

ಸಾಮಾನ್ಯವಾಗಿ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಪಕ್ಷಾಂತರ ಬಿರುಸು ಪಡೆದಿರುತ್ತದೆ. ಈಗ ಲೋಕಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿ ಬಿದ್ದಿರುವ ಕಾರಣ ಪಕ್ಷಾಂತರವೂ ಸಹ ಬಿರುಸು ಪಡೆದಿದೆ. ಸ್ಥಳೀಯ ನಾಯಕರು ತಮ್ಮ ಪಕ್ಷದ ಬಲ ಹೆಚ್ಚಳಕ್ಕೆ ಆಪರೇಷನ್ ಅವಲಂಬಿಸಿದ್ದಾರೆ.

‘ಕೈ’ ಬಿಟ್ಟು ಕಮಲ ಹಿಡಿದ ಮಾಜಿ ಶಾಸಕ

ಚಿಕ್ಕಬಳ್ಳಾಪುರ: ಬುಧವಾರ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ನಡೆಸಿದ ರೋಡ್ ಷೋನಲ್ಲಿ ಪಾಲ್ಗೊಂಡಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕ ಶಿವಾನಂದ್ ರಾತ್ರೋರಾತ್ರಿ ಬಿಜೆಪಿ ಸೇರಿದ್ದಾರೆ.  ಗುರುವಾರ ನಡೆದ ರೋಡ್ ಷೋಷನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರನ್ನು ಹಾಡಿಹೊಗಳಿದ್ದಾರೆ. ಪರಿಶಿಷ್ಟ ಸಮುದಾಯದ ಮುಖಂಡರಾದ ಶಿವಾನಂದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು.  ಗುರುವಾರ ನಡೆದ ರೋಡ್ ಷೋನಲ್ಲಿ ‘ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೊ ಸುಧಾಕರ್ ಗೆಲುವು ಅಷ್ಟೇ ಸತ್ಯ’ ಎಂದರು.  ಸಂಬಂಧವಿಲ್ಲ: ಎಂ.ಶಿವಾನಂದ್ ಬಿಜೆಪಿ ಸೇರ್ಪಡೆಗೆ ವಿಷಾದ  ವ್ಯಕ್ತಪಡಿಸುವೆ. ಅವರು ತೆಗೆದುಕೊಂಡಿರುವ ತೀರ್ಮಾನಕ್ಕೂ ನನಗೂ ಸಂಬಂಧವಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆಸುತ್ತೇನೆ ಎಂದು ಶಿವಾನಂದ್ ಅವರ ಪುತ್ರ ಹಾಗೂ ಕೆಪಿಸಿಸಿ ಕಾನೂನು ಮತ್ತು ಮಾಹಿತಿ ಹಕ್ಕು ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಸಂದೀಪ್ ಚಕ್ರವರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT