ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ: ಮತದಾನ ಹೆಚ್ಚಳಕ್ಕೆ ಕಸರತ್ತು ಜೋರು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ 2019ರ ಚುನಾವಣೆಯಲ್ಲಿ ಗರಿಷ್ಠ ಮತದಾನ
Published 20 ಮಾರ್ಚ್ 2024, 9:22 IST
Last Updated 20 ಮಾರ್ಚ್ 2024, 9:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ 2019ರ ಚುನಾವಣೆಯಲ್ಲಿ ಅತಿ ಹೆಚ್ಚು 76.04ರಷ್ಟು ಮತದಾನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಹಿಂದಿನ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಲು ಜಿಲ್ಲಾಡಳಿತ ಮುಂದಾಗಿದೆ. 

ಮತದಾನ ಹೆಚ್ಚಳಕ್ಕಾಗಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ನಿಟ್ಟಾಲಿ ಹಾಗೂ ಅಧಿಕಾರಿಗಳು ಈಗಾಗಲೇ ನಾನಾ ಕ್ರಮಗಳನ್ನು ವಹಿಸಿದ್ದಾರೆ. ಇದಕ್ಕಾಗಿ ಮತದಾರರ ಜಾಗೃತಿ ಕಾರ್ಯಕ್ರಮಗಳು, ಸ್ವೀಪ್ ಚಟುವಟಿಕೆಗಳು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿವೆ. 

ಮತದಾನ ಹೆಚ್ಚಳವು ಆಯಾ ಕ್ಷೇತ್ರದ ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿಗೆ ಗರಿಮೆಯನ್ನು ತಂದುಕೊಡಲಿದೆ. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು 1977ರಲ್ಲಿ ಅಸ್ತಿತ್ವಕ್ಕೆ ಬಂದಿತು. ಮೊದಲ ಚುನಾವಣೆಯಲ್ಲಿ ಶೇ 65.2ರಷ್ಟು ಮತದಾನವಾಗಿತ್ತು.ಕಳೆದ ಎರಡು ಲೋಕಸಭಾ ಚುನಾವಣೆಯ ಮತದಾನದ ಪ್ರಮಾಣವನ್ನು ಗಮನಿಸಿದರೆ ಸಣ್ಣಮಟ್ಟದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಈ ಹಿಂದಿನ ದಾಖಲೆಗಳನ್ನು ಮುರಿದು ಮತದಾನ ಹೆಚ್ಚಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ಕಳೆದ ಎರಡು ಚುನಾವಣೆಗಳಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರವೇ ಮತದಾನದಲ್ಲಿ ಮೊದಲ ಸ್ಥಾನದಲ್ಲಿ ಇದೆ. 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್.ಬಚ್ಚೇಗೌಡ ಅವರ ಸ್ವಕ್ಷೇತ್ರ ಹೊಸಕೋಟೆಯಲ್ಲಿ ಅತಿ ಹೆಚ್ಚಿನ (ಶೇ 85.9) ಮತದಾನವಾಗಿತ್ತು. 2019ರಲ್ಲಿಯೂ ಬಚ್ಚೇಗೌಡರೇ ಬಿಜೆಪಿ ಅಭ್ಯರ್ಥಿ ಆಗಿದ್ದರು. ಆ ಚುನಾವಣೆಯಲ್ಲಿಯೂ ಹೊಸಕೋಟೆಯೇ ಮತದಾನದ ಪ್ರಮಾಣವು ಮೊದಲ (ಶೇ 88) ಸ್ಥಾನದಲ್ಲಿತ್ತು.  

2019ರ ಚುನಾವಣೆಯಲ್ಲಿ ಹೊಸಕೋಟೆ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ (ಅಂದು ಕಾಂಗ್ರೆಸ್ ಶಾಸಕರು ಪ್ರತಿನಿಧಿಸಿದ್ದ ಕ್ಷೇತ್ರಗಳು), ದೇವನಹಳ್ಳಿ (ಜೆಡಿಎಸ್ ಶಾಸಕ) ಕ್ಷೇತ್ರದಲ್ಲಿ ಶೇ 80ಕ್ಕೂ ಅಧಿಕ ಮತದಾನವಾಗಿತ್ತು. ಅತಿ ಹೆಚ್ಚು (3,87,300) ಮತದಾರರನ್ನು ಹೊಂದಿದ್ದ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಯಲಹಂಕ ಕ್ಷೇತ್ರದಲ್ಲಿ ಅತಿ ಕಡಿಮೆ (ಶೇ 61.74) ಮತದಾನವಾಗಿತ್ತು. ಯಲಹಂಕದಲ್ಲಿ ಬಿಜೆಪಿ ಶಾಸಕರು ಇದ್ದರು.  

ಅಭ್ಯರ್ಥಿಗಳ ಪ್ರಚಾರಕ್ಕಿಂತ ಚುನಾವಣಾ ಆಯೋಗ ಮತದಾನದ ಮಹತ್ವದ ಕುರಿತು ನಡೆಸಿದ ಪ್ರಚಾರ ಮತದಾನದ ಪ್ರಮಾಣ ಹೆಚ್ಚಲು ಸಹಕಾರಿಯಾಗಿದೆ. ಶೇಕಡವಾರು ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ಹತ್ತಾರು ಬಗೆಯ ವೈವಿಧ್ಯಮಯ ಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. 

ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನೆ, ಜಾಗೃತಿ ಜಾಥಾ, ಬೀದಿ ನಾಟಕ, ಬಸ್‌ಗಳಿಗೆ ಫಲಕ, ಕಲಾ ತಂಡಗಳ ಮೆರವಣಿಗೆ, ಕರಪತ್ರ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಮತದಾರರ ಮನಮುಟ್ಟುವ ಪ್ರಯತ್ನ ಮಾಡಲಾಗುತ್ತಿದೆ. ಈ ಕಾರ್ಯಕ್ರಮಗಳ ಸಾಫಲ್ಯ ಏ.26ರ ಮತದಾನವು ತಿಳಿಸಲಿದೆ. 

****

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

‘ಮತದಾನ ಹೆಚ್ಚಳಕ್ಕೆ ಶ್ರಮ’

ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 76ರಷ್ಟು ಮತದಾನವಾಗಿತ್ತು. ಈ ಬಾರಿ ಈ ಪ್ರಮಾಣ ಮತ್ತಷ್ಟು ಹೆಚ್ಚಬೇಕಾಗಿದೆ. ಇದಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಸ್ವೀಪ್ ಸಮಿತಿ ಚಟುವಟಿಕೆಗಳು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯುತ್ತಿವೆ. ಮತದಾನ ಕೇಂದ್ರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ 85 ವರ್ಷ ದಾಟಿದ ಮತದಾರರ ಮನೆಗೆ ತೆರಳಿ ಅಲ್ಲಿಯೇ ಮತದಾನ ಮಾಡಿಸಿಕೊಳ್ಳಲು ಸಹ ಅವಕಾಶವಿದೆ. ಚುನಾವಣಾ ಕಾರ್ಯಗಳಲ್ಲಿ ತೊಡಗಿದ್ದವರಿಗೆ ಅಂಚೆ ಮತದಾನದ ವ್ಯವಸ್ಥೆ ಇದೆ. ಹೀಗೆ ಯಾರೂ ಮತದಾನದಿಂದ ಹೊರಗೆ ಉಳಿಯಬಾರದು ಎನ್ನುವ ಆಶಯ ನಮ್ಮದು ಎಂದರು.  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಗಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವಂತೆ ಶ್ರಮಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT