ಚಿಕ್ಕಬಳ್ಳಾಪುರ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಶಾಸಕ ಪ್ರದೀಪ್ ಈಶ್ವರ್ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಸದಸ್ಯರ ಸಭೆ ನಡೆದಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಳೆದ ಅವಧಿಯಲ್ಲಿ ಅಧಿಕಾರ ಪಡೆಯಲು ಅವಕಾಶವಿದ್ದರೂ ಕೈ ಚೆಲ್ಲಿದ ಕಾಂಗ್ರೆಸ್ ಪಾಳಯದಲ್ಲಿ ಈ ಬಾರಿ ಅಧಿಕಾರ ಹಿಡಿಯಲೇ ಬೇಕು ಎನ್ನುವ ಸಿದ್ಧತೆ ಆರಂಭವಾಗಿದೆ. ಜೆಡಿಎಸ್ ಸದಸ್ಯರೊಬ್ಬರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ದೃಷ್ಟಿ ಹರಿಸಿದೆ.
ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿದ್ದರೂ ಕಾಂಗ್ರೆಸ್ ಕಳೆದ ಬಾರಿ ಅಧಿಕಾರ ವಂಚಿತವಾಯಿತು. ಆದರೆ ಈಗ ಶಾಸಕರು, ವಿಧಾನ ಪರಿಷತ್ ಸದಸ್ಯರ ಬಲವೂ ಕಾಂಗ್ರೆಸ್‌ಗೆ ಇದೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದನ್ನು ಶಾಸಕ ಪ್ರದೀಪ್ ಈಶ್ವರ್ ಪ್ರತಿಷ್ಠೆಯಾಗಿಯೂ ಪರಿಗಣಿಸಿದ್ದಾರೆ.
ಪಕ್ಷದ ಉನ್ನತ ಮೂಲಗಳ ಪ್ರಕಾರ 14ನೇ ವಾರ್ಡ್‌ನ ಸದಸ್ಯ ಕೆ.ಆರ್.ದೀಪಕ್, 15ನೇ ವಾರ್ಡ್‌ನ ಟಿ.ಜೆ.ಅಂಬರೀಷ್, 20ನೇ ವಾರ್ಡ್‌ನ ನರಸಿಂಹಮೂರ್ತಿ ಅವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿವೆ. ಕಳೆದ ಅವಧಿಯಲ್ಲಿ ವಿಪ್ ಉಲ್ಲಂಘಿಸಿದ್ದ ಸದಸ್ಯರ ವಿರುದ್ಧ ದೀಪಕ್ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದರು. ಪಕ್ಷ ನಿಷ್ಠರಾಗಿ ಗುರುತಿಸಿಕೊಂಡಿದ್ದಾರೆ. ದೀಪಕ್ ಪರವಾಗಿ ಕಾಂಗ್ರೆಸ್‌ನ ಕೆಲವು ‘ಪ್ರಮುಖ’ ನಾಯಕರು ಸಹ ಒಲವು ಹೊಂದಿದ್ದಾರೆ ಎನ್ನುತ್ತವೆ ಮೂಲಗಳು.
ಮೊದಲ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ವೇಳೆ ಕಾಂಗ್ರೆಸ್‌ನ ಏಳು ಸದಸ್ಯರು ವಿಪ್ ಉಲ್ಲಂಘಿಸಿದ್ದರು. ನಂತರ ಇವರಲ್ಲಿ ಐದು ಮಂದಿ ಕಾಂಗ್ರೆಸ್‌ಗೆ ವಾಪಸ್ಸಾಗಿದ್ದರು. ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಕೆಲವು ಸದಸ್ಯರು ಬಿಜೆಪಿ ಸೇರಿದ್ದರು. ಆಗ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ನಂತರ ಅವರೂ ಕಾಂಗ್ರೆಸ್ ತೆಕ್ಕೆ ಸೇರಿದರು. ಕಾಂಗ್ರೆಸ್ ಚಿಹ್ನೆಯಲ್ಲಿ ಗೆದ್ದಿರುವ ಮೂರ್ನಾಲ್ಕು ಮಂದಿ ಮಾತ್ರ ಪಕ್ಷದಿಂದ ದೂರವಿದ್ದಾರೆ.
ಚುನಾವಣೆಯ ಸಮಯದಲ್ಲಿ ಪಕ್ಷವು ವಿಪ್ ಜಾರಿಗೊಳಿಸುವುದು ಖಚಿತ. ಈ ವಿಪ್ ತೂಗುಗತ್ತಿಯ ಕೆಳಗೆ ಸದಸ್ಯರು ಇರುವ ಕಾರಣ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ಕಳೆದ ಬಾರಿಯಂತೆ ಹೆಚ್ಚಿನ ಸದಸ್ಯರು ವಿಪ್ ಉಲ್ಲಂಘಿಸುವ ಸಾಧ್ಯತೆಯೂ ಕಡಿಮೆ ಇದೆ.
ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಎಂದು ಬಿಜೆಪಿಗೂ ಕಾಲಿಟ್ಟು ಕಾಂಗ್ರೆಸ್‌ಗೆ ವಾಪಸ್ಸಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆಯಲ್ಲಿ ಈ ವಿಚಾರವೂ ‘ಕೈ’ ಪಾಳಯದಲ್ಲಿ ಪ್ರಮುಖವಾಗುತ್ತದೆ ಎನ್ನುತ್ತಾರೆ ಮುಖಂಡರೊಬ್ಬರು.
ಶಾಸಕರ ಮನೆಯಲ್ಲಿ ಅಭಿಪ್ರಾಯ ಸಂಗ್ರಹ
ಶಾಸಕ ಪ್ರದೀಪ್ ಈಶ್ವರ್ ಅವರ ಮನೆಯಲ್ಲಿ ನಡೆದ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ತೀವ್ರ ಚರ್ಚೆಗಳು ನಡೆದಿವೆ. ಶಾಸಕರು ಪ್ರತಿಯೊಬ್ಬ ಸದಸ್ಯರ ಅಭಿಪ್ರಾಯ ಕೇಳಿದ್ದಾರೆ. ಆಗ ಬಹಳಷ್ಟು ಸದಸ್ಯರು ನಾವೂ ಆಕಾಂಕ್ಷಿಗಳು ಎಂದಿದ್ದಾರೆ. ಗೆದ್ದು ಬರುವ ವಿಶ್ವಾಸವಿದೆಯೇ ಎಂದಾಗ ಕೆಲವರು ಮೌನಕ್ಕೆ ಜಾರಿದ್ದಾರೆ. ಕೆಲವರು ಎಲ್ಲರೂ ಸಹಕಾರ ನೀಡಿದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇವೆ ಎಂದಿದ್ದಾರೆ.
ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಮೂರ್ನಾಲ್ಕು ಮಂದಿ ಸದಸ್ಯರು ಸಭೆಗೆ ಗೈರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮುಖಂಡರಾದ ನಂದಿ ಆಂಜನಪ್ಪ ಯಲುವಳ್ಳಿ ರಮೇಶ್ ಮತ್ತಿತರ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಸಿ ಅಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಬಗ್ಗೆ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
‘ಈ ಬಾರಿ ಪಕ್ಷವು ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಅಧಿಕಾರ ಹಿಡಿಯಬೇಕು. ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರಬೇಕು’ ಎಂದು ಶಾಸಕ ಪ್ರದೀಪ್ ಈಶ್ವರ್ ಸಭೆಯಲ್ಲಿ ತಿಳಿಸಿದ್ದಾರೆ.
‘ಹಿರಿಯ ಮುಖಂಡರ ಜೊತೆ ಸಭೆ ನಡೆಸೋಣ. ಎಲ್ಲರೂ ಕುಳಿತು ಚರ್ಚಿಸೋಣ. ನಂತರ ಒಮ್ಮತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡೋಣ’ ಎಂದಿದ್ದಾರೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೇಶವ ರೆಡ್ಡಿ ಸಹ ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.