ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿ ಬಹಿಷ್ಕರಿಸಿ ಶಿಕ್ಷಕರ ಪ್ರತಿಭಟನೆ

ಪದವೀಧರ ಶಿಕ್ಷಕರು 1ರಿಂದ 5ನೇ ತರಗತಿಗಳಿಗೆ ಮಾತ್ರ ಬೋಧಿಸಬೇಕು ಎಂಬ ಆದೇಶ ಹಿಂಪಡೆಯುವಂತೆ ಆಗ್ರಹ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
Last Updated 9 ಜುಲೈ 2019, 10:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮಂಗಳವಾರ ತರಗತಿಗಳನ್ನು ಬಹಿಷ್ಕರಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬಿ.ಬಿ.ರಸ್ತೆಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಎದುರು ಶಾಮಿಯಾನ ಹಾಕಿ, ಭಾರಿ ಸಂಖ್ಯೆಯಲ್ಲಿ ನೆರೆದು ಪ್ರತಿಭಟಿಸಿದ ಶಿಕ್ಷಕರು, ಸರ್ಕಾರ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಿಂದಾಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಬಂದ್‌ ಆಗಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡವು.

ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ನಾರಾಯಣಸ್ವಾಮಿ, ‘ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು 1ರಿಂದ 5ನೇ ತರಗತಿಗಳಿಗೆ ಮಾತ್ರ ಬೋಧಿಸಬೇಕು ಎಂದು ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರ ಹೊಸದಾಗಿ ಇಂಗ್ಲಿಷ್ ಮಾಧ್ಯಮ ಆರಂಭಿಸಿರುವುದರಿಂದ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಿದೆ. ಆದ ಕಾರಣ ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು. ಪದವೀಧರ ಪ್ರಾಥಮಿಕ ಶಾಲಾ ಶೀಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು’ ಎಂದು ಹೇಳಿದರು.

‘ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು. ಹಾಗೂ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮುಂದುವರೆಸಬೇಕು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ, ಕಾಲಕಾಲಕ್ಕೆ ವರ್ಗಾವಣೆ ನಡೆಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಷಫೀವುಲ್ಲಾ ಸಾಬಿ ಮಾತನಾಡಿ, ‘ಪದವೀಧರ ಶಿಕ್ಷಕರಿಗೆ 6 ರಿಂದ 8ನೇ ತರಗತಿಗೆ ಬಡ್ತಿ ನೀಡಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ 50:1ಕ್ಕೆ ನಿಗದಿ ಮಾಡಬೇಕು. ಕೃಪಾಂಕ ಶಿಕ್ಷಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು’ ಎಂದು ತಿಳಿಸಿದರು.

‘ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಗಳಲ್ಲಿನ ನ್ಯೂನತೆ ಸರಿಪಡಿಸಿ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. ಆರನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸಿನ ಪ್ರಕಾರ ಶಿಕ್ಷಕರಿಗೆ 10, 15, 20, 25, 30 ವರ್ಷದ ಬಡ್ತಿಗಳನ್ನು ನೀಡಬೇಕು’ ಎಂದು ಆಗ್ರಹಿಸಿದರು.

‘ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪ ನಿರ್ದೇಶಕರ ಹುದ್ದೆಯವರೆಗೂ ಬಡ್ತಿಯನ್ನು ನೀಡಬೇಕು. ಶಿಕ್ಷಕ ವಿದ್ಯಾರ್ಥಿ ಅನುಪಾತ ರೂಪಿಸುವಾಗ ಮುಖ್ಯ ಶಿಕ್ಷಕರು ದೈಹಿಕ ಶಿಕ್ಷಕರನ್ನು ಹೊರತು ಪಡಿಸಿ ಹಾಗೂ ಮಾಧ್ಯಮವಾರು, ಪ್ರಾದೇಶಿಕವಾರು ವಿಶೇಷ ನಿಯಮಗಳನ್ನು ರೂಪಿಸಿ ಹೆಚ್ಚುವರಿ ಮಾಡಬೇಕು’ ಎಂದು ಹೇಳಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ರಮಣಪ್ಪ, ಸಹ ಕಾರ್ಯದರ್ಶಿ ಸಿ.ವೆಂಕಟರಾಯಪ್ಪ, ಸಂಘಟನಾ ಕಾರ್ಯದರ್ಶಿ ಶೈಲಾಜಾ, ಸಂಘದ ಗೌರಿಬಿದನೂರು ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದರಾಮಯ್ಯ, ಬಾಗೇಪಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ವಿ.ವೆಂಕಟರಮಣಪ್ಪ, ಗುಡಿಬಂಡೆ ತಾಲ್ಲೂಕು ಘಟಕದ ಅಧ್ಯಕ್ಷ ಬಾಲಾಜಿ, ಚಿಂತಾಮಣಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ್ ಕುಮಾರ್, ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಬಿ.ಪ್ರಕಾಶ್, ಉಪಾಧ್ಯಕ್ಷ ಎ.ಸನತ್‌ ಕುಮಾರ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT