ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಬರ, ರಾಜಕೀಯ ಪಲ್ಲಟಗಳಿಗೆ ಸಾಕ್ಷಿಯಾದ ವರ್ಷ 2023

Published 31 ಡಿಸೆಂಬರ್ 2023, 7:36 IST
Last Updated 31 ಡಿಸೆಂಬರ್ 2023, 7:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: 2023ನೇ ಸಾಲು ತನ್ನ ಅವಧಿ ಪೂರ್ಣಗೊಳಿಸುತ್ತಿದೆ. 2024ನೇ ಸಾಲನ್ನು ಸ್ವಾಗತಿಸಲು ಜಿಲ್ಲೆಯ ಜನರು ಸಜ್ಜಾಗಿದ್ದಾರೆ. 2023ರಲ್ಲಿ ಜಿಲ್ಲೆಯಲ್ಲಿ ಘಟಿಸಿದ ಪ್ರಮುಖ ಘಟನಾವಳಿಗಳೇನೂ ಎನ್ನುವುದನ್ನು ಮೆಲುಕು ಹಾಕಿದರೆ ಈ ವರ್ಷ ಜಿಲ್ಲೆಯಲ್ಲಿ ಹಲವು ಪಲ್ಲಟಗಳು, ಬರ, ಈಶ ಯೋಗ ಕೇಂದ್ರ ಆರಂಭ, ವೈದ್ಯಕೀಯ ಶಿಕ್ಷಣ ಕಾಲೇಜು ಉದ್ಘಾಟನೆ, ಭೀಕರ ಅಪಘಾತದಿಂದ 13 ಜನರ ಸಾವು, ರಾಜಕೀಯ ಬದಲಾವಣೆಗಳು...ಹೀಗೆ ನಾನಾ ಘಟನೆಗಳೊಂದಿಗೆ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತಿದೆ. 

ಹೀಗೆ 2023ರಲ್ಲಿ ಜಿಲ್ಲೆಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳನ್ನು ‘ಪ್ರಜಾವಾಣಿ’ಯ ‘ವರ್ಷದ ಹಿನ್ನೋಟ’ ಮೆಲುಕು ಹಾಕಿದೆ.

2023ರ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿಯೇ ಚಿಂತಾಮಣಿಯಲ್ಲಿ ಹತ್ಯೆ ನಡೆಯಿತು. ನಂತರ 2023ರ ತನ್ನ ಒಡಲಿನಲ್ಲಿ ನಾನಾ ಸಂಭ್ರಮ, ಸೂತಕಗಳನ್ನು ತುಂಬಿಕೊಂಡಿದೆ.  

ವರ್ಷದ ಮೊದಲ ಹಬ್ಬ ಎನಿಸಿರುವ ಸಂಕ್ರಾಂತಿಗೆ ಚರ್ಮಗಂಟು ರೋಗದ ಬರೆ ಬಿದ್ದಿತು.  ಸಂಕ್ರಾಂತಿ ರಾಸುಗಳ ಹಬ್ಬ. ಜನರಿಗಿಂತ ದನಗಳಿಗೆ ಹೆಚ್ಚು ಸಿಂಗರಿಸಲಾಗುತ್ತದೆ.  ರೈತರ ಮನೆಗಳಲ್ಲಿ ರಾಸುಗಳ ಸಿಂಗಾರವೇ ಹಬ್ಬದ ಸಂಭ್ರಮ ಎನ್ನುವ ಮಟ್ಟಿಗೆ ಇರುತ್ತದೆ. ಆದರೆ ಹಬ್ಬದ ಸಂಕ್ರಮಣದ ಮೇಲೆ ಚರ್ಮಗಂಟಿನ ಕರಿನೆರಳು ಬಿದ್ದಿತ್ತು. ರೈತರು ರೋಗಕ್ಕೆ ತುತ್ತಾಗಿರುವ ಜಾನುವಾರುಗಳ ಆರೈಕೆಯಲ್ಲಿ ತೊಡಗಿದ್ದರೆ ಮತ್ತಷ್ಟು ಮಂದಿ ರಾಸುಗಳನ್ನು ರೋಗಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳಲು ಪ್ರಯಾಸಪಟ್ಟರು. ಚರ್ಮಗಂಟು ರೋಗ ಜಿಲ್ಲೆಯ ರೈತರನ್ನು ಹಲವು ತಿಂಗಳ ಕಾಲ ಬಾಧಿಸಿತು. 

ವರ್ಷದ ಆರಂಭದಲ್ಲಿಯೇ ನಡೆದ ‘ಚಿಕ್ಕಬಳ್ಳಾಪುರ ಉತ್ಸವ’ ರಾಜ್ಯದಲ್ಲಿಯೇ ಸದ್ದು ಮಾಡಿತು. ಮೂರು ದಿನಗಳ ಕಾಲ ವರ್ಣರಂಜಿತವಾಗಿ ನಡೆದ ಸಮಾರಂಭದಲ್ಲಿ ಸಿನಿಮಾ ದಿಗ್ಗಜರು ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ಭಾಗಿಯಾಗಿದ್ದರು. ಆದರೆ ಅಚ್ಚರಿಯ ಬೆಳವಣಿಗೆ ಎನ್ನುವಂತೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಉತ್ಸವದಲ್ಲಿ ಭಾಗಿಯಾಗಲಿಲ್ಲ. ಇದು ಡಾ.ಕೆ.ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಅವರ ನಡುವಿನ ಮುಸುಕಿನ ಗುದ್ದಾಟವನ್ನು ಸಹ ತೋರಿತ್ತು.

ರಾಜಕೀಯ ಬದಲಾವಣೆ: 2023ನೇ ಸಾಲಿನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಿತು. ಈ ಚುನಾವಣೆಯು ಜಿಲ್ಲೆಯಲ್ಲಿ ನಾನಾ ರಾಜಕೀಯ ಸ್ಥಿತ್ಯಂತರಕ್ಕೆ ಸಾಕ್ಷಿಯಾಯಿತು. ಅಚ್ಚರಿಯ ಬೆಳವಣಿಗೆಯಲ್ಲಿ ಪರಿಶ್ರಮ ನೀಟ್ ಅಕಾಡೆಮಿ ಮುಖ್ಯಸ್ಥ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದರು. ಅಂದಿನ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಸೋಲಿಸಿದರು. 

ರಾಜ್ಯ ಕಾಂಗ್ರೆಸ್‌ನಲ್ಲಿಯೇ ಹಿರಿಯ ಶಾಸಕ ಮತ್ತು ನಾಯಕ ಎನಿಸಿದ್ದ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಸಕ್ರಿಯ ರಾಜಕಾರಣಕ್ಕೆ ವಿರಾಮ ನೀಡಿದ್ದು ಈ ವರ್ಷವೇ. 7 ಬಾರಿ ಶಾಸಕರಾಗಿದ್ದ ಅವರು 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. ಆ ಮೂಲಕ ಹಿರಿಯ ರಾಜಕಾರಣಿಯೊಬ್ಬರು ಜಿಲ್ಲೆಯಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಸರಿದರು. ಐದು ಬಾರಿ ಶಾಸಕ ಎನಿಸಿದ್ದ ಶಿವಶಂಕರರೆಡ್ಡಿ ಪಕ್ಷೇತರ ಅಭ್ಯರ್ಥಿ ಕೆ.ಎಚ್‌.ಪುಟ್ಟಸ್ವಾಮಿಗೌಡ ಅವರ ವಿರುದ್ಧ ಸೋಲು ಅನುಭವಿಸಿದರು. ಹೊಸ ಮುಖಗಳು ಜಿಲ್ಲೆಯ ರಾಜಕಾರಣದಲ್ಲಿ ಮುನ್ನೆಲೆಗೆ ಬಂದವು.

ಕಾಂಗ್ರೆಸ್‌ನಿಂದ ದೂರವಾಗಿದ್ದ ಡಾ.ಎಂ.ಸಿ.ಸುಧಾಕರ್ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂದರು. ಚುನಾವಣೆಯಲ್ಲಿ ಗೆದ್ದು ಜಿಲ್ಲಾ ಉಸ್ತುವಾರಿ ಸಚಿವರೂ ಆದರು. 

ಪದ್ಮಶ್ರೀ ಗರಿಮೆ: ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ತಮಟೆ ಕಲಾವಿದ ಮುನಿವೆಂಕಟಪ್ಪ  ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆಯಿತು. ಈ ಮೂಲಕ ರಾಜ್ಯ ಹಾಗೂ ಜಿಲ್ಲೆಗೆ ದೊಡ್ಡ ಗೌರವವನ್ನು ಅವರು ತಂದರು. 

ಚಿಕ್ಕಬಳ್ಳಾಪುರ ತಾಲ್ಲೂಕಿನ ಐತಿಹಾಸಿಕ ನಂದಿ ಗ್ರಾಮದ ಭೋಗ ನಂದೀಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಶಿವರಾತ್ರಿ ಮರುದಿನ ನಡೆದ ಜೋಡಿ ರಥೋತ್ಸವದಲ್ಲಿ ಒಂದು ರಥದ ಗಾಲಿಯ ಅಚ್ಚು ಮರಿಯಿತು. ಇದು ಭಕ್ತರಲ್ಲಿ ತೀವ್ರ  ಆತಂಕಕ್ಕೆ ಕಾರಣವಾದ ಸಂದರ್ಭ.

2023 ಇಡೀ ಜಿಲ್ಲೆಯನ್ನೇ ಬರದ ದವಡೆಗೆ ಸಿಲುಕಿಸಿದ ಕಾಲ. ಮಳೆ ಇಲ್ಲದ ಕಾರಣ ಬಿತ್ತಿದ ಬೆಳೆಗಳು ಸಹ ಒಣಗಿದವು. ಚಿಕ್ಕಬಳ್ಳಾಪುರ ಜಿಲ್ಲೆಯು ಪೂರ್ಣವಾಗಿ ಬರವನ್ನೇ ಹೊದ್ದು ಮಲಗಿತು.

ಪ್ರವಾಸೋದ್ಯಮ ಬೆಳವಣಿಗೆ: ಈಶ ಫೌಂಡೇಶನ್‌ನ ಜಗ್ಗಿ ವಾಸುದೇವ್ ಅಗಲಗುರ್ಕಿ ಬಳಿ ಸ್ಥಾಪಿಸಿರುವ ಈಶಾ ಯೋಗ ಕೇಂದ್ರದಲ್ಲಿ ಆದಿಯೋಗಿ ಮೂರ್ತಿ ಉದ್ಘಾಟನೆ ಜರುಗಿತು. ಇಲ್ಲಿನ ಆದಿಯೋಗಿ ಮೂರ್ತಿ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮದ ಗರಿಮೆಯಾಗಿ ಈ ಕ್ಷೇತ್ರ ಬೆಳೆಯುತ್ತಿದೆ. ಇದಿಷ್ಟೇ ಅಲ್ಲ ಜಿಲ್ಲೆಯಲ್ಲಿ ನಂದಿ ವೈದ್ಯಕೀಯ ಶಿಕ್ಷಣ ಮಹಾ ವಿದ್ಯಾಲಯದ ಕಟ್ಟಡ ಸಹ ಆರಂಭವಾಗಿದ್ದು ಇದೇ ವರ್ಷ. 

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಖ್ಯಾತ ನಾಮರು ಜಿಲ್ಲೆಗೆ ಭೇಟಿ ನೀಡಿದ ವರ್ಷವಿದು. ಹೀಗೆ ಜಿಲ್ಲೆಯಲ್ಲಿ ಹಲವು ಪ್ರಮುಖ ಘಟನೆಗಳಿಗೆ, ಭೇಟಿಗಳಿಗೆ 2023 ಸಾಕ್ಷಿಯಾಗಿದೆ.

ನಿದ್ದೆ ಗೆಡಿಸಿದ ಭೀಕರ ಅಪಘಾತ

ಚಿಕ್ಕಬಳ್ಳಾಪುರ ನಗರ ಹೊರವಲಯದ ಚಿತ್ರಾವತಿ ಬಳಿ ಅಕ್ಟೋಬರ್ 26ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ 13 ಮಂದಿ ಮೃತರಾದರು. ಮೂವರು ಕರ್ನಾಟಕದವರಾದರೆ 10 ಮಂದಿ ಆಂಧ್ರಪ್ರದೇಶದವರು. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಗೊರಂಟ್ಲದಿಂದ ಹೊರಟ ಟಾಟಾ ಸುಮೊ ಚಿತ್ರಾವತಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆಯಿತು. 

ಬಿಗ್‌ಬಾಸ್‌ನಲ್ಲಿ ಶಾಸಕ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್

‘ಕಲರ್ಸ್ ಕನ್ನಡ’ ಖಾಸಗಿ ವಾಹಿನಿಯಲ್ಲಿ ಆರಂಭವಾಗಿರುವ  ‘ಬಿಗ್‌ಬಾಸ್’ ರಿಯಾಲಿಟಿ ಶೋನಲ್ಲಿ ಭಾಗಿಯಾಗುವ ಮೂಲಕ  ತೀವ್ರ ಚರ್ಚೆಗೆ ಕಾರಣವಾದರು. ಶಾಸಕರೊಬ್ಬರು ಬಿಗ್‌ಬಾಸ್‌ನಲ್ಲಿ ಭಾಗಿಯಾಗಿರುವುದು ರಿಯಾಲಿಟಿ ಶೋ ಇತಿಹಾಸದಲ್ಲಿ ಇದೇ ಮೊದಲು.   

ಜಿಲ್ಲೆಯಲ್ಲಿ ತೀವ್ರ ಬರ

2023ರಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳು ಸಹ ತೀವ್ರ ಬರದ ದವಡೆಗೆ ಸಿಲುಕಿದವು. ಅಕ್ಟೋಬರ್‌ನಲ್ಲಿ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡಿತು. ಈ ವೇಳೆ ₹ 463 ಕೋಟಿ ಮೊತ್ತದ ಬೆಳೆ ಹಾನಿ ಬಗ್ಗೆ ಜಿಲ್ಲಾಡಳಿತ ಮಾಹಿತಿ ಒದಗಿಸಿತು. ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿತು.

ಝೀಕಾ ವೈರಸ್ ಪತ್ತೆ

ನವೆಂಬರ್‌ ತಿಂಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಹಾಗೂ ಸುತ್ತಲಿನ ಗ್ರಾಮಗಳು ಭಾರಿ ಸದ್ದು ಮಾಡಿದವು. ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆ ಆಗಿತ್ತು. ಈ ಹಿನ್ನೆಲೆಯಲ್ಲಿ ಈ ಸುತ್ತಲಿನ ಆರು ಗ್ರಾಮಗಳಲ್ಲಿ ಗರ್ಭಿಣಿಯರು ಜ್ವರಪೀಡಿತರ ತಪಾಸಣೆ ನಡೆಯಿತು.

ಮುದ್ದೇನಹಳ್ಳಿಗೆ ಪ್ರಧಾನಿ

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮವು ಉಚಿತ ಆರೋಗ್ಯ ಸೇವೆಯ ಮೂಲಕ ದೇಶದ ಗಮನ ಸೆಳೆದಿದೆ. ಇಲ್ಲಿ ನಿರ್ಮಿಸಿರುವ ಉಚಿತ ಆರೋಗ್ಯ ಸೇವೆಯ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಜಿಲ್ಲೆಯಲ್ಲಿ ನಡೆದ ಪ್ರಮುಖ ವಿದ್ಯಮಾಗಳು

ಜ.1–ಚಿಂತಾಮಣಿ ತಾಲ್ಲೂಕಿನ ಐಮರೆಡ್ಡಿ ಹಳ್ಳಿ ಬಳಿಯ ಡಾಬಾದಲ್ಲಿ ಹೊಸವರ್ಷದ ಸಂಭ್ರಮಾಚರಣೆ ವೇಳೆ ಕ್ಷುಲ್ಲಕ ಕಾರಣದಿಂದ ಗಲಾಟೆ. ದೊಡ್ಡಗಂಜೂರಿನ ನವೀನ್ ರೆಡ್ಡಿ ಕೊಲೆ.

ಜ.7–‘ಚಿಕ್ಕಬಳ್ಳಾಪುರ ಉತ್ಸವ’ಕ್ಕೆ ಚಾಲನೆ. ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಉತ್ಸವದಲ್ಲಿ ಸಿನಿಮಾ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿ. ಹೊರ ರಾಜ್ಯದ ಪ್ರಖ್ಯಾತ ಕಲಾವಿದರು ಸಹ ಪಾಲ್ಗೊಂಡು ಕಾರ್ಯಕ್ರಮ ನೀಡಿದರು.  

ಜ.7–ಚಿಕ್ಕಬಳ್ಳಾಪುರ ಮಹಿಳಾ ಸರ್ಕಾರಿ ಪದವಿ ಕಾಲೇಜಿಗೆ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ. ಕಾಲೇಜಿನ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಬರೆದ ಪತ್ರಕ್ಕೆ ನ್ಯಾಯಮೂರ್ತಿಗಳ ಸ್ಪಂದನೆ. ಸ್ಥಳಕ್ಕೆ ಬಂದ ಅವರು ಅವ್ಯವಸ್ಥೆ ಕಂಡು ಕೆಂಡಾಮಂಡಲ.  

ಜ.9– ಗೌರಿಬಿದನೂರು ತಾಲ್ಲೂಕಿನ ‌ತೊಂಡೇಬಾವಿ ರೈಲ್ವೆ ನಿಲ್ದಾಣದ ಸಮೀಪ ಚಲಿಸುವ ರೈಲಿಗೆ ಸಿಲುಕಿ ಮೈಲಾರಪ್ಪ ಆತನ‌ ಪತ್ನಿ ಪುಷ್ಪಲತಾ ಹಾಗೂ ಹಿರಿಯ ಮಗಳು ಮಮತಾ ಆತ್ಮಹತ್ಯೆ.

ಜ.15–ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಸಮೀಪದ ಜಾಲಾರಿ ನರಸಿಂಹಸ್ವಾಮಿ ಬೆಟ್ಟದ ಸಮೀಪ ಈಶ ಯೋಗ ಕೇಂದ್ರ ನಿರ್ಮಿಸಿರುವ 112 ಅಡಿ ಎತ್ತರದ ಆದಿಯೋಗಿ ಮೂರ್ತಿ ಪ್ರತಿಮೆ ಉದ್ಘಾಟನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದ್ಗುರು ಜಗ್ಗಿ ವಾಸುದೇವ್ ಭಾಗಿ.

ಜ.17–ಗೌರಿಬಿದನೂರಿನಲ್ಲಿ ತಾಲ್ಲೂಕು ಮಟ್ಟದ 9ನೇ ಸಾಹಿತ್ಯ ಸಮ್ಮೇಳನ. ಜ.19–ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿಗೆ ಕ್ಯೂಬಾ ಕ್ರಾಂತಿಕಾರಿ ಚೆ ಗುವಾರ ಅವರ ಪುತ್ರಿ ವೈದ್ಯೆ ಡಾ. ಅಲಿಡಾ ಗೆವಾರ ಮತ್ತು ಮೊಮ್ಮಗಳು ಅರ್ಥಶಾಸ್ತ್ರಜ್ಞೆ ಎಸ್ತಿ ಫಾನಿಯ ಭೇಟಿ. 

ಜ.20–ಚಿಂತಾಮಣಿ ಹೊರವಲಯದ ಮನೆ ಮೇಲೆ ದಾಳಿ. ಕೋಟಾ ನೋಟು ಜಾಲ ಬೇಧಿಸಿದ ಪೊಲೀಸರು. ₹ 2 ಕೋಟಿಯಷ್ಟು ಕೋಟಾ ನೋಟು ಪತ್ತೆ. 

ಜ.23–ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ನಿಂದ ‘ಪ್ರಜಾಧ್ವನಿ’ ಯಾತ್ರೆ. ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ರಣಕಹಳೆ.

ಜ.25–ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ತಮಟೆ ಕಲಾವಿದರಾದ ಮುನಿವೆಂಕಟಪ್ಪ ಅವರಿಗೆ ಜಾನಪದ ಸಂಗೀತ ವಿಭಾಗದಲ್ಲಿ ‘ಪದ್ಮಶ್ರೀ’ ಪುರಸ್ಕಾರ. 

ಫೆ.5–ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಮಳ್ಳೂರು ನಾಗಪ್ಪ (100) ನಿಧನ.

ಫೆ.10–ಚಿಕ್ಕಬಳ್ಳಾಪುರ ನಗರದ ಗಂಗಮ್ಮನ ಗುಡಿ ರಸ್ತೆಯ ಗಣೇಶ ಚಿನ್ನಾಭರಣ ಮಾರಾಟ ಅಂಗಡಿಯಲ್ಲಿ ₹ 20 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ. 

ಫೆ.17–ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಬಳಿಯ ಈಶಾ ಯೋಗ ಕೇಂದ್ರಕ್ಕೆ ಬಹುಭಾಷ ನಟ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ.

ಫೆ.18–ಶಿವರಾತ್ರಿ ಅಂಗವಾಗಿ ಐತಿಹಾಸಿಕ ನಂದಿ ಗ್ರಾಮದ ಭೋಗ ನಂದೀಶ್ವರ ದೇಗುಲದ ಆವರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಶಿವೋತ್ಸವಕ್ಕೆ ಚಾಲನೆ.  

ಫೆ.19–ಚಿಕ್ಕಬಳ್ಳಾಪುರ ತಾಲ್ಲೂಕಿನ ಐತಿಹಾಸಿಕ ನಂದಿ ಗ್ರಾಮದ ಭೋಗ ನಂದೀಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಜೋಡಿ ರಥೋತ್ಸವದ ವೇಳೆ ಒಂದು ರಥದ ಗಾಲಿಯ ಅಚ್ಚು ಮರಿಯಿತು.

ಫೆ.22–ಶಿಡ್ಲಘಟ್ಟ ತಾಲೂಕಿನ ಹೆಣ್ಣೂರು ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಸೊಣ್ಣೇಗೌಡ ತನ್ನ ಪತ್ನಿ ನೇತ್ರಾವತಿ (37) ಪುತ್ರಿಯರಾದ ಸ್ನೇಹಾ (11) ಮತ್ತು ವರ್ಷ (9)ಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಮೂವರ ಸಾವು. ಫೆ.24–ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮಂಗಮ್ಮ (35) ಸಾವು. 

ಫೆ.24– ಗೌರಿಬಿದನೂರಿನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ದ್ರಾಕ್ಷಿ ಮತ್ತು ವೈನ್ ಬೋರ್ಡ್‌ನಿಂದ ರಾಜ್ಯ ಮಟ್ಟದ ಪಿನಾಕಿನಿ ದ್ರಾಕ್ಷಾರಸ ಉತ್ಸವ.

ಫೆ.26–ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಉಪೇಂದ್ರ ನಟನೆಯ ‘ಕಬ್ಜ’ ಚಲನಚಿತ್ರದ ಆಡಿಯೊ ಬಿಡುಗಡೆ.

ಫೆ.27–ಗೌರಿಬಿದನೂರಿನಲ್ಲಿ ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ನಗರದಲ್ಲಿ ವಾಕಥಾನ್‌.

ಮಾ.3–ಶಾಶ್ವತ ನೀರಾವರಿಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಸಲುವಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಿಂದ ಜಲಜಾಗೃತಿ ಪಾದಯಾತ್ರೆ. 

ಮಾ.4–ಚಿಕ್ಕಬಳ್ಳಾಪುರ ಜಿಲ್ಲಾ9ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ. ಲೇಖಕ ಎಸ್.ಷಡಕ್ಷರಿ ಸಮ್ಮೇಳನಾಧ್ಯಕ್ಷ.

ಮಾ.15–ಚಿಕ್ಕಬಳ್ಳಾಪುರದ ಒಕ್ಕಲಿಗ ಕಲ್ಯಾಣ ಮಂಟಪದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ.

ಮಾ.19–ಚಿಕ್ಕಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ. ಅಧ್ಯಕ್ಷರಾಗಿ ಸಾಹಿತಿ ಎ.ಸರಸಮ್ಮ.

ಮಾ. 25–ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ₹ 400 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ.

ಏ.1–ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸಸಾಗರ ಜಲಾಶಯದಲ್ಲಿ ಮುಳುಗಿ ಬೆಂಗಳೂರಿನ ಮೂವರು ವಿದ್ಯಾರ್ಥಿಗಳ ಸಾವು.

ಏ.7–ಬಾಗೇಪಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ₹ 2.66 ಕೋಟಿ ಮೌಲ್ಯದ 5.585 ಕೆ.ಜಿ ಚಿನ್ನ ವಶ.

ಏ.30–ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ಇಲಾಖೆ ಕಾಯಕಲ್ಪ. ಬೆಂಗಳೂರು ವಿಭಾಗದ ಆಡಳಿತ ವಿಭಾಗದ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‍ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿ ಪೂಜೆ.

ಮೇ.27–ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಸಚಿವರಾಗಿ ಪದಗ್ರಹಣ.

ಜೂನ್‌  ಜೂ.26– ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಯ ನಿರ್ಧಾರ ವಾಪಸ್ ಪಡೆದ ರಾಜ್ಯ ಸರ್ಕಾರ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ರಚನೆಗೆ ತಡೆ.  

ಜುಲೈ  ಜು.3–ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ.

ಜು.6–ಚಿಂತಾಮಣಿಯಲ್ಲಿ ಅಸ್ಸಾಂ ಮೂಲದ ದಂಪತಿ ‌ಚೀಟಿ ಹೆಸರಿನಲ್ಲಿ ₹ 3.27 ಕೋಟಿ ಲಪಟಾಯಿಸಿಕೊಂಡು ಪರಾರಿ.

ಜು.14–ಗುಡಿಬಂಡೆ ತಾಲ್ಲೂಕಿನ ಗುರ್ರಪ್ಪ ಮತ್ತು ಗೌರಿಬಿದನೂರು ತಾಲ್ಲೂಕಿನ ಆರ್.ಶ್ರೀನಾಥ್ ‘ಚಂದ್ರಯಾನ–3’ ಯೋಜನೆಯಲ್ಲಿ ಕೆಲಸ.

ಜು.19–ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡು ನಿರ್ಮಾಣಕ್ಕೆ ಸರ್ಕಾರದ ಆದೇಶ. ₹ 75 ಕೋಟಿ ಬಿಡುಗಡೆ.  

ಆ.16–ಚಿಂತಾಮಣಿ ತಾಲ್ಲೂಕಿನ ಕೆ.ರಾಗುಟ್ಟಹಳ್ಳಿಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ 26 ವಿದ್ಯಾರ್ಥಿಗಳು ಉಪಹಾರ ಸೇವಿಸಿ ಅಸ್ವಸ್ಥ.

ಆ.22–ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಸಂಸದ ಬಿ.ಎನ್.ಬಚ್ಚೇಗೌಡ. 

ಆ.25–ಶಿಡ್ಲಘಟ್ಟ ತಾಲ್ಲೂಕಿನ ಬೈರಗಾನಹಳ್ಳಿಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದಸಂಸ ಮುಖಂಡ ನಾರಾಯಣಸ್ವಾಮಿ ಬರ್ಬರ ಹತ್ಯೆ.

ಆ.31–ಗೌರಿಬಿದನೂರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಆಕಸ್ಮಿಕವಾಗಿ ಹೆರಿಗೆ ನೋವು ಕಾಣಿಸಿಕೊಂಡು ಅವಳಿ ಗಂಡು ಮಕ್ಕಳಿಗೆ ಜನ್ಮ.

ಅಕ್ಟೋಬರ್ ಅ.13–ಚಿಂತಾಮಣಿ ವಾಲ್ಮೀಕಿ ಸಂಘದ ಅಧ್ಯಕ್ಷ ಹಾಗೂ ಜೆಡಿಎಸ್ ನಗರಸಭೆ ಸದಸ್ಯ ಅಗ್ರಹಾರ ಮುರಳಿ ಮೇಲೆ ಮಾರಣಾಂತಿಕ ಹಲ್ಲೆ.

ಅ.20–2023ನೇ ಸಾಲಿನ ಕಾಯಕಲ್ಪ ಪ್ರಶಸ್ತಿಗೆ ಜಿಲ್ಲೆಯ 9 ಆಸ್ಪತ್ರೆಗಳು ಆಯ್ಕೆ.

ಅ.31–ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ.  

ನವೆಂಬರ್ ನ.1–ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ.   

ನ.5–ಸಿ.ಟಿ.ರವಿ ನೇತೃತ್ವದ ಬಿಜೆಪಿ ತಂಡದಿಂದ ಬರ ಅಧ್ಯಯನ. ನ.8– ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅಧ್ಯಕ್ಷತೆಯಲ್ಲಿ ಜೆಡಿಎಸ್ ಪಕ್ಷದಿಂದ ಬರ ಅಧ್ಯಯನ.  

ನ.17–ಉಪನ್ಯಾಸಕರೊಬ್ಬರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಆರೋಪಿಸಿ ವಿಡಿಯೊ ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಹಳ್ಳಿಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ. 

ಡಿ.7–ಚೇಳೂರು ತಾಲ್ಲೂಕು ಪಾತಪಾಳ್ಯ ಹೋಬಳಿಯ ರೇಚನಾಯ್ಕನಹಳ್ಳಿ ಸಮೀಪದ ಬಸ್ ಪಲ್ಟಿಯಾಗಿ 21 ಜನರಿಗೆ ಗಾಯ. ‌‌

ಡಿ.26– ಕೆಲಸ ಕಾಯಂಗೆ ಆಗ್ರಹಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರಿಂದ ಸಗಣಿ ನೀರನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟನೆ. 

ಡಿ.27–ಗುಡಿಬಂಡೆ ಪಟ್ಟಣ ಪಂಚಾಯಿತಿ ಎರಡನೇ ವಾರ್ಡ್ ಚಿಂತಾಮಣಿ ನಗರದ 18ನೇ ವಾರ್ಡ್‌ಗೆ ಉಪಚುನಾವಣೆ. 

ಬಿಗ್‌ಬಾಸ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್
ಬಿಗ್‌ಬಾಸ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್
ಚಿಂತಾಮಣಿಯಲ್ಲಿ ಕೋಟಾ ನೋಟು ವಶ
ಚಿಂತಾಮಣಿಯಲ್ಲಿ ಕೋಟಾ ನೋಟು ವಶ
ಈಶಾ ಯೋಗ ಕೇಂದ್ರದಲ್ಲಿ ಆದಿಯೋಗಿ ಮೂರ್ತಿ ಉದ್ಘಾಟನೆ
ಈಶಾ ಯೋಗ ಕೇಂದ್ರದಲ್ಲಿ ಆದಿಯೋಗಿ ಮೂರ್ತಿ ಉದ್ಘಾಟನೆ
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣ ಸ್ವಚ್ಛಗೊಳಿಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ವೀರಪ್ಪ
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣ ಸ್ವಚ್ಛಗೊಳಿಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ವೀರಪ್ಪ
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಸೆಗಣಿ ನೀರು ಸುರಿದುಕೊಂಡು ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಸೆಗಣಿ ನೀರು ಸುರಿದುಕೊಂಡು ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಾಗಾರದ ಮುಂದೆ ಮೃತರ ಕುಟುಂಬ ಸದಸ್ಯರ ರೋದನ
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಾಗಾರದ ಮುಂದೆ ಮೃತರ ಕುಟುಂಬ ಸದಸ್ಯರ ರೋದನ
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದ ಕ್ಷಣ
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದ ಕ್ಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT