ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ನೀರಿನಲ್ಲಿ ಮಾಲಿನ್ಯಕಾರಕ ಅಂಶಗಳಿವೆ. ಅಂತರ್ಜಲ ಮಲಿನ ಆಗುತ್ತಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗೂ ನೀರಾವರಿ ಹೋರಾಟಗಾರರು ಪ್ರತಿಪಾದಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಅಧ್ಯಯನವೊಂದು ಇವರ ಪ್ರತಿಪಾದನೆಗೆ ಪುಷ್ಠಿ ಎನ್ನುವಂತಿದೆ. ಅಂತರ್ಜಲ ಮಾಲಿನ್ಯ ಉಂಟು ಮಾಡುವ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪ್ರಮಾಣದಲ್ಲಿ ನೀರಿನಲ್ಲಿ ಪ್ಲೋರೈಡ್ ಮತ್ತು ನೈಟ್ರೇಟ್ ಅಂಶಗಳು ಪತ್ತೆಯಾಗಿವೆ. ಇದರಿಂದ ಪ್ರಮುಖವಾಗಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಕಾರ ಒಂದು ಲೀಟರ್ ಕುಡಿಯುವ ನೀರಿನಲ್ಲಿ ನೈಟ್ರೇಟ್ ಸಾಂದ್ರತೆ 45 ಎಂ.ಜಿ ಮತ್ತು ಫ್ಲೋರೈಡ್ ಸಾಂದ್ರತೆಯ 1 ಎಂ.ಜಿ ಇರಬೇಕು. ಆದರೆ ಅಧ್ಯಯನಕ್ಕೆ ಸಂಗ್ರಹಿಸಿದ್ದ ಚಿಕ್ಕಬಳ್ಳಾಪುರದ ನೀರಿನ ಮಾದರಿಯಲ್ಲಿ ಈ ನಿಗದಿತ ಮಿತಿಗಿಂತಲೂ ಚಿಕ್ಕಬಳ್ಳಾಪುರದ ಗ್ರಾಮೀಣ ಭಾಗದಲ್ಲಿ ಶೇ 17ರಷ್ಟು ನೈಟ್ರೇಟ್ ಅಂಶ ಹೆಚ್ಚಿದೆ.
ನಗರ ಪ್ರದೇಶದಲ್ಲಿ ಸಂಗ್ರಹಿಸಿದ ನೀರಿನಲ್ಲಿ 41ರಷ್ಟು ಮತ್ತು ಗ್ರಾಮಾಂತರ ಪ್ರದೇಶದ ನೀರಿನಲ್ಲಿ 40ರಷ್ಟು ಫ್ಲೋರೈಡ್ ಪ್ರಮಾಣ ಹೆಚ್ಚಿದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮಗಳು ಬೀರುತ್ತವೆ.
ಚಿಕ್ಕಬಳ್ಳಾಪುರ ನಗರ ಮತ್ತು ಗ್ರಾಮಾಂತರ ಭಾಗದ ಅಂತರ್ಜಲದ ಗುಣಮಟ್ಟ ಪರಿಶೀಲಿಸುವ ದೃಷ್ಟಿಯಿಂದ 2021ರಲ್ಲಿ ಮುಂಗಾರು ನಂತರದ ಅವಧಿಯಲ್ಲಿ (ನವೆಂಬರ್-ಡಿಸೆಂಬರ್) ಅಧ್ಯಯನ ನಡೆಸ ಲಾಗಿದೆ. ಅಧ್ಯಯನಕ್ಕೆ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 112 ನೀರಿನ ಮಾದರಿಗಳು ಮತ್ತು ನಗರ ಪ್ರದೇಶದಿಂದ 41 ನೀರಿನ ಮಾದರಿ ಸಂಗ್ರಹಿಸಲಾಗಿತ್ತು.
ಕೊಳವೆ ಬಾವಿಗಳು, ಕೈಪಂಪ್‌ಗಳು, ತೆರೆದ ಬಾವಿಗಳಿಂದ ನೀರು ಸಂಗ್ರಹಿಸಲಾಗಿದೆ. ಪ್ರತಿ ಮಾದರಿಯ ಸಂಗ್ರಹದ ವೇಳೆ ವ್ಯಕ್ತಿಯ ಹೆಸರು, ಸ್ಥಳ, ಸಂಗ್ರಹಣೆ ದಿನಾಂಕ ದಾಖಲಿಸಲಾಗಿದೆ. ನೀರಿನ ಮಾದರಿ ಸಂಗ್ರಹಣೆ ನಂತರ ಬಾಟಲಿಗಳನ್ನು ಬಿಗಿಯಾಗಿ ಮುಚ್ಚಲಾಯಿತು. ಗುಣಲಕ್ಷಣಗಳಲ್ಲಿ ಯಾವುದೇ ಬದಲಾವಣೆಗಳನ್ನು ತಡೆಯಲು ತಕ್ಷಣ ಪ್ರಯೋಗಾಲಯಕ್ಕೆ ಸಾಗಿಸಲಾಗಿದೆ.
ನೀರಿನಲ್ಲಿ ಫ್ಲೋರೈಡ್ ಅಧಿಕ ಆಗಿರುವುದರಿಂದ ಸಂಭಾವ್ಯ ನ್ಯೂರೋಟಾಕ್ಸಿಕ್ ಪರಿಣಾಮಗಳ ಜೊತೆಗೆ ದಂತ, ಅಸ್ಥಿಪಂಜರದ ಫ್ಲೋರೋಸಿಸ್‌ಗೆ ಕಾರಣ ಆಗಬಹುದು. ನೈಟ್ರೇಟ್ ಮಾಲಿನ್ಯವು ಮಕ್ಕಳಲ್ಲಿ ಮೆಥೆಮೊಗ್ಲೋಬಿನೆಮಿಯಾಕ್ಕೆ ಕಾರಣವಾಗುತ್ತದೆ. ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಅಧ್ಯಯನ ಪ್ರದೇಶದಲ್ಲಿ ಪುರುಷರು ಮತ್ತು ಮಹಿಳೆಯರಿಗಿಂತ ಮಕ್ಕಳು ಹೆಚ್ಚಿನ ಆರೋಗ್ಯದ ಅಪಾಯಗಳನ್ನು ಹೊಂದಿರುತ್ತಾರೆ ಎಂದು ಅಧ್ಯಯನ ತಿಳಿಸಿದೆ.
‘ಹೆಚ್ಚಿನ ಮಟ್ಟದ ಫ್ಲೋರೈಡ್ ಸೇವನೆಯು ಕ್ಯಾಲ್ಸಿಯಂ ಕೊರತೆ ಮತ್ತು ಮೂಳೆಗಳನ್ನು ದುರ್ಬಲಗೊಳಿಸುವ ಅಸ್ಥಿಪಂಜರದ ಫ್ಲೋರೋಸಿಸ್‌ಗೆ ಕಾರಣವಾಗಬಹುದು’ ಎಂದು ಐಐಎಚ್‌ಎಸ್‌ನಲ್ಲಿ ಅಸೋಸಿಯೇಟ್-ಪ್ರಾಕ್ಟೀಸ್ ಆಗಿರುವ ಕಿರಣ್ ಡಿ.ಎ ತಿಳಿಸಿದ್ದಾರೆ.
‘ನೀರಿನಲ್ಲಿ ನೈಟ್ರೇಟ್ ಹೆಚ್ಚಳವಾಗಿರುವುದು ಮತ್ತು ಆ ನೀರಿನ ಸೇವನೆಯು ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಯಸ್ಕರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ ಎಂದಿದ್ದಾರೆ.
ಶಾಶ್ವತ ನೀರಾವರಿ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯು ಅಧ್ಯಯನ ಸಂಸ್ಥೆಗಳಿಗೆ ಆಕರ ಎನ್ನುವಂತೆ ಇದೆ. ಹಿಂದಿನಿಂದಲೂ ಜಿಲ್ಲೆಯಲ್ಲಿ ನೀರಿನ ವಿಚಾರವಾಗಿ ಅಧ್ಯಯನಗಳು ನಡೆಯುತ್ತಲೇ ಇವೆ. ಮತ್ತೊಂದು ಕಡೆ ನೀರಿಗಾಗಿ ಮೂರು ದಶಕಗಳ ಹಿಂದೆ ಆರಂಭವಾದ ಹೋರಾಟಗಳು ಇಂದಿಗೂ ಮುಂದುವರಿದಿವೆ.
ಫ್ಲೋರೈಡ್ ಹೆಚ್ಚಿರುವ ಹಳ್ಳಿಗಳು
ಚಿಕ್ಕಬಳ್ಳಾಪುರದ ವಾರ್ಡ್ ವಾರ್ಡ್ 8 10 18 27 19 20 22 23 25 28 29 30 31ನೇ ವಾರ್ಡ್‌ಗಳಲ್ಲಿ ಗ್ರಾಮೀಣ ಭಾಗದ ಅಗಲಗುರ್ಕಿ ಜಡಲತಿಮ್ಮನಹಳ್ಳಿ ಯಲುವಳ್ಳಿ ಕುಪ್ಪಹಳ್ಳಿ ತಿರ್ನಹಳ್ಳಿ ಅರಸನಹಳ್ಳಿ ದೊಡ್ಡಗಾನಹಳ್ಳಿ ಬಂಡಮ್ಮನಹಳ್ಳಿ ಮುಸ್ಟೂರು ಲಿಂಗಶೆಟ್ಟಿಪುರ ರಾಮಚಂದ್ರ ಹೊಸೂರು ಮರೇಗಾನಹಳ್ಳಿ ಹೊನ್ನಪ್ಪನಹಳ್ಳಿ ಲಕ್ಕಿನಾಯಕನಹಳ್ಳಿ ದೊಡ್ಡತಮ್ಮನಹಳ್ಳಿ ಮಂಚನಬಲೆ ಗುಂತಪ್ಪನಹಳ್ಳಿ ಜಡಿಗೇನಹಳ್ಳಿ ಚಿಕ್ಕಪ್ಯಾಲಗುರ್ಕಿ ಕೋಡೂರು ಬೊಮ್ಮನಹಳ್ಳಿ ಕಮ್ಮಗುಟ್ಟಹಳ್ಳಿ ಮರವೇನಹಳ್ಳಿ ರೆಡ್ಡಿಹಳ್ಳಿ ದಾಸೇನಹಳ್ಳಿ ಪಾತೂರು ಕೆರೆನಹಳ್ಳಿ ಕಾಚಕಡತ ಗುಂಡ್ಲ ಮಂಡಿಕಲ್ ಜೀಗನಹಳ್ಳಿ ನವಿಲುಗುರ್ಕಿ ಉದಯಗಿರಿ ನಲ್ಲಪ್ಪನಹಳ್ಳಿ ಸಿದ್ದಗಾನಹಳ್ಳಿ ದಿನ್ನಹಳ್ಳಿ ಆರೂರು ಗ್ರಾಮಗಳ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಿದೆ.
ಅಧ್ಯಯನ ನಡೆಸಿದ ಸಂಸ್ಥೆಗಳು
ಚಾಮರಾಜನಗರದದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗ ಬೆಂಗಳೂರಿನ ಡಾ.ಶ್ರೀ.ಶ್ರೀ.ಶ್ರೀ ಶಿವಕುಮಾರ ಸ್ವಾಮೀಜಿ ಎಂಜಿನಿಯರಿಂಗ್ ಕಾಲೇಜು ಬೀದರ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟ್ಲ್‌ಮೆಂಟ್ (ಐಐಎಚ್‌ಎಸ್) ಸಂಸ್ಥೆ ಸಹಯೋಗದಲ್ಲಿ ಈ ಅಧ್ಯಯನ ನಡೆದಿದೆ. 2024ರ ಆಗಸ್ಟ್‌ನಲ್ಲಿ ಅಧ್ಯಯನ ವರದಿಯನ್ನು ಅಂಗೀಕರಿಸಲಾಗಿದೆ. ಸಂಗ್ರಹಿಸಿದ ನೀರಿನ ಮಾದರಿಗಳಲ್ಲಿರುವ ನೈಟ್ರೇಟ್ ಮತ್ತು ಪ್ಲೋರೈಡ್ ಪ್ರಮಾಣ ಅದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಸಮಗ್ರವಾಗಿ ಅಧ್ಯಯನದ ವರದಿಯಲ್ಲಿ ವಿವರಿಸಲಾಗಿದೆ. ಅಧ್ಯಯನಕ್ಕೆ ಒಳಪಡಿಸಿರುವ ಭಾಗಗಳಲ್ಲಿನ ಮುಂದಿನ ತಲೆಮಾರು ಆರೋಗ್ಯ ಸಮಸ್ಯೆಗಳಿಗೆ ಸಿಲುಕಲಿದೆ ಎಂದೂ ತಿಳಿಸಲಾಗಿದೆ.
ಯುರೇನಿಯಂ ಸಹ ಪತ್ತೆ
2019 ಮತ್ತು 2020ರ ನಡುವೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಾಯುಗುಣ ಬದಲಾವಣೆ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ತಂಡಗಳು ನಡೆಸಿದ ಅಧ್ಯಯನದಲ್ಲಿ ರಾಜ್ಯದ 13 ಜಿಲ್ಲೆಗಳ 73 ಹಳ್ಳಿಗಳ ಅಂತರ್ಜಲದಲ್ಲಿ ಯುರೇನಿಯಂ ಇರುವುದನ್ನು ಪತ್ತೆ ಹಚ್ಚಿದ್ದವು. ಬಯಲುಸೀಮೆಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಈ ಅಧ್ಯಯನ ವರದಿ ಹೇಳಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ 27 ಹಳ್ಳಿಗಳು ಅಧ್ಯಯನಕ್ಕೆ ಒಳಪಟ್ಟಿದ್ದವು. ಈ ಎಲ್ಲ ಕಡೆಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಣುಶಕ್ತಿ ನಿಯಂತ್ರಣ ಮಂಡಳಿಯು ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ನೀರಿನಲ್ಲಿ ಯುರೇನಿಯಂ ಪತ್ತೆ ಆಗಿತ್ತು. ಹೀಗೆ ಚಿಕ್ಕಬಳ್ಳಾಪುರ ಹಾಗೂ ಜಿಲ್ಲೆಯ ಉಳಿದ ತಾಲ್ಲೂಕಿಗಳ ಜೀವಜಲ ವಿಷವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.