ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರಿನಲ್ಲಿ ಹುಸಿಯಾದ ‘ಕೈ’ ನಿರೀಕ್ಷೆ

ಶಾಸಕ, ಮಾಜಿ ಸಚಿವರಿದ್ದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹುಸಿಯಾದ ನಿರೀಕ್ಷೆ
Published 8 ಜೂನ್ 2024, 7:39 IST
Last Updated 8 ಜೂನ್ 2024, 7:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್ ದೊರೆಯುತ್ತದೆ ಎನ್ನುವ ಅಚಲ ವಿಶ್ವಾಸ ಕಾಂಗ್ರೆಸ್‌ ನಾಯಕರಲ್ಲಿ ಇತ್ತು. ಅಷ್ಟೇಕೆ ಬಿಜೆಪಿ ಪಾಳಯದಲ್ಲಿಯೂ ಸಹ ನಾವು ಉತ್ತಮ ಮತಗಳನ್ನು ಪಡೆಯುತ್ತೇವೆ. ಆದರೆ ಕಾಂಗ್ರೆಸ್‌ಗೆ ಮುನ್ನಡೆ ದೊರೆಯುತ್ತದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. 

ಎಲ್ಲರೂ ನಾಯಕರೇ ಆದ ಕಾರಣ ಪ್ರಚಾರದ ಸಮಯದಲ್ಲಿ ಎನ್‌ಡಿಎ ಮೈತ್ರಿಕೂಟದ ಮುಖಂಡರ ನಡುವೆ ತಿಕ್ಕಾಟಗಳು ಸಹ ನಡೆದಿದ್ದವು. ನಂತರ ಸುದ್ದಿಗೋಷ್ಠಿ ನಡೆಸಿ ಇದಕ್ಕೆ ತೇಪೆ ಹಾಕುವ ಪ್ರಯತ್ನಗಳು ನಡೆದಿದ್ದವು.

ಆದರೆ ಈ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದ ಗೌರಿಬಿದನೂರು ಕ್ಷೇತ್ರದ ಮತದಾರರು 483 ಮತಗಳ ಮುನ್ನಡೆಯನ್ನು ಬಿಜೆಪಿಗೆ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರಿಗೆ 80,523 ಮತಗಳು ದೊರೆತರೆ, ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ 80,040 ಮತಗಳು ದೊರೆತಿವೆ. 

ಜಾತಿ, ಮತದ ಎಲ್ಲಾ ಲೆಕ್ಕಾಚಾರಗಳು ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿಲ್ಲ. ಸಂಪನ್ಮೂಲ, ಪ್ರಭಾವದಲ್ಲಿ ಕಾಂಗ್ರೆಸ್ ನಾಯಕರು ಪ್ರಭಾವಿ ಎನಿಸಿದ್ದರೂ ಅವರ ‘ಆಟ’ಗಳು ಮತದಾರರ ಎದುರು ಗೌಣವಾಗಿವೆ.  

ಲೋಕಸಭಾ ಚುನಾವಣೆಯ ಆರಂಭದಿಂದಲೂ ಗೌರಿಬಿದನೂರು ಕ್ಷೇತ್ರ ಗಮನ ಸೆಳೆದಿತ್ತು. ಮಾಜಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ, ತಮಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು. ಒಕ್ಕಲಿಗರಿಗೆ ಟಿಕೆಟ್ ನೀಡಿದರೆ ಗೆಲುವಿಗೆ ಅನುಕೂಲ ಎನ್ನುವ ಲೆಕ್ಕಾಚಾರವನ್ನು ಮುಂದಿಟ್ಟಿದ್ದರು. ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡಿದ ನಂತರ ಅಸಮಾಧಾನಗೊಂಡಿದ್ದ ಶಿವಶಂಕರ ರೆಡ್ಡಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಸಮಾಧಾನಗೊಳಿಸಿತು. ಅವರು ಸಹ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿದರು. 

ಮತ್ತೊಂದು ಕಡೆ ಕಾಂಗ್ರೆಸ್ ಬೆಂಬಲಿಸಿರುವ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಸಹ ರಕ್ಷಾ ರಾಮಯ್ಯ ಅವರ ಪರ ಪ್ರಚಾರ ನಡೆಸಿದರು. ಪುಟ್ಟಸ್ವಾಮಿಗೌಡ ಮತ್ತು ಶಿವಶಂಕರ ರೆಡ್ಡಿ, ರಕ್ಷಾ ರಾಮಯ್ಯ ಅವರ ಎಡ ಮತ್ತು ಬಲದಲ್ಲಿ ನಿಂತು ಕಾಂಗ್ರೆಸ್‌ಗೆ ಮತ ಕೋರಿದ್ದರು. 

ಅಲ್ಲದೆ  ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಗೆಲ್ಲುವ ಉದ್ದೇಶದಿಂದ ಪಕ್ಷದಿಂದ ಉಚ್ಛಾಟನೆಯಾಗಿದ್ದ ಮುಖಂಡರನ್ನು ಮತ್ತೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿತ್ತು. 

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್, ಕೋಲಾರ– ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಜೆ.ಕಾಂತರಾಜು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ವಿ.ರಾಘವೇಂದ್ರ ಹನುಮಾನ್, ನಗರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್ಲಾ ಮತ್ತು ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಚಿಕ್ಕಣ್ಣ ಅವರ ಉಚ್ಛಾಟನೆ ಆದೇಶವನ್ನು ವಾಪಸ್ ಪಡೆದ ಕಾರಣ ಅವರು ಸಂಘಟನೆಯಲ್ಲಿ ತೊಡಗಿದ್ದರು. 

ಹೀಗೆ ಕಾಂಗ್ರೆಸ್ ಪಾಳಯದಲ್ಲಿ ಶಾಸಕರು, ಮಾಜಿ ಶಾಸಕರು ಹಾಗೂ ಸ್ಥಳೀಯವಾಗಿ ಪ್ರಭಾವಿಯಾಗಿರುವ ಮುಖಂಡರು ನೇತೃತ್ವವಹಿಸಿದ್ದರು. ರಾಜಕೀಯದ ಆಳ ಅಗಲ ಬಲ್ಲ ಯಾರನ್ನೇ ಕೇಳಿದರೂ ಗೌರಿಬಿದನೂರಿನಲ್ಲಿ ಕಾಂಗ್ರೆಸ್ ಮುನ್ನಡೆ ಪಡೆಯುತ್ತದೆ ಎನ್ನುತ್ತಿದ್ದರು. 

ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೌರಿಬಿದನೂರು ಕ್ಷೇತ್ರದಲ್ಲಿ ವಿಜೇತರಾದ ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿಗೌಡ 83,837, ಕಾಂಗ್ರೆಸ್ ಅಭ್ಯರ್ಥಿ ಶಿವಶಂಕರ ರೆಡ್ಡಿ 46,551, ಬಿಜೆಪಿ ಅಭ್ಯರ್ಥಿ ಶಶಿಧರ್ 8,132, ಜೆಡಿಎಸ್ ಅಭ್ಯರ್ಥಿ ನರಸಿಂಹಮೂರ್ತಿ 11,125, ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಕೆಂಪರಾಜು 24,202 ಮತಗಳನ್ನು ಪಡೆದಿದ್ದರು. 

ಲೋಕಸಭೆ ಚುನಾವಣೆಯಲ್ಲಿ ಈ ಎಲ್ಲಾ ಮತಗಣಿತದ ಲೆಕ್ಕಾಚಾರಗಳು ಬುಡಮೇಲಾಗಿವೆ. ಕಾಂಗ್ರೆಸ್ ಮತಗಳು 80 ಸಾವಿರಕ್ಕೆ ನಿಂತಿದ್ದರೆ, ಬಿಜೆಪಿಯು ಸಹ 80 ಸಾವಿರ ಮತಗಳನ್ನು ಪಡೆದಿದೆ. 

ಒಗ್ಗಟ್ಟಿನ ಬಲ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆಂಪರಾಜು, ಶಶಿಧರ್, ಸಿ.ಆರ್.ನರಸಿಂಹಮೂರ್ತಿ ಗೌರಿಬಿದನೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರದ ನೇತೃತ್ವವಹಿಸಿದ್ದರು. ಗೌರಿಬಿದನೂರು ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಬಿಜೆಪಿಗೆ ತನ್ನದೇ ಆದ ಮತ ಬ್ಯಾಂಕ್ ಇದೆ. ವಿದುರಾಶ್ವತ್ಥವನ್ನು ಕೇಂದ್ರವಾಗಿಸಿಕೊಂಡು ಜಿಲ್ಲೆಯಲ್ಲಿ ಹಿಂದುತ್ವದ ಪ್ರಯೋಗಗಳು ನಡೆಯುತ್ತಿದ್ದ ಕ್ಷೇತ್ರವೂ ಇದಾಗಿದೆ. ‌ಇಲ್ಲಿ ಬಿಜೆಪಿಗೆ ಗ್ರಾಮೀಣ ಮಟ್ಟದಲ್ಲಿ ಕಾರ್ಯಕರ್ತರು ಇದ್ದಾರೆ.

ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾತೀತವಾಗಿ ಮತದಾರರು ಬೆಂಬಲಿಸಿದರು. ಇವರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೂಲದವರೇ ಬಹುಸಂಖ್ಯೆಯಲ್ಲಿ ಇದ್ದರು. ಆದರೆ ಪುಟ್ಟಸ್ವಾಮಿಗೌಡ ಅವರನ್ನು ಬೆಂಬಲಿಸಿದ ಬಹುಸಂಖ್ಯಾತ ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಮನ್ನಣೆ ನೀಡಿದರು. 

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೌರಿಬಿದನೂರು ಕ್ಷೇತ್ರದಲ್ಲಿ 78,056 ಮತ್ತು ಕಾಂಗ್ರೆಸ್ 73,894 ಮತಗಳನ್ನು ಪಡೆದಿತ್ತು.

ಶಿವಶಂಕರ ರೆಡ್ಡಿ
ಶಿವಶಂಕರ ರೆಡ್ಡಿ

ಪುಟ್ಟಸ್ವಾಮಿಗೌಡ, ಶಿವಶಂಕರ ರೆಡ್ಡಿ ಪ್ರಯತ್ನಕ್ಕಿಲ್ಲ ಮನ್ನಣೆ ಗೌರಿಬಿದನೂರು ಕ್ಷೇತ್ರದಲ್ಲಿ ಬಿಜೆಪಿಗೆ ತಳಮಟ್ಟದ ಕಾರ್ಯಕರ್ತರ ಪಡೆ 2019ರ ಲೋಕಸಭಾ ಚುನಾವಣೆಯಲ್ಲಿಯೂ ಮುನ್ನಡೆ ಪಡೆದಿದ್ದ ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT