ಗುರುವಾರ , ಡಿಸೆಂಬರ್ 8, 2022
18 °C
ನಂದಿಗಿರಿಧಾಮದಲ್ಲಿ ಮಹಿಳೆಯರಿಗೆ 45 ದಿನ ತರಬೇತಿ

ಲಂಟಾನಕ್ಕೆ ಪೀಠೋಪಕರಣ ರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಲಂಟಾನ ಕಾಡನ್ನು ನಾಶ ಮಾಡುತ್ತಿರುವ ಪ್ರಬೇಧ. ಬೇಲಿಯಂತೆ ಬೆಳೆಯುತ್ತಿರುವ ಇದರ ಹಾವಳಿ ನಂದಿಬೆಟ್ಟದ ಸುತ್ತಮುತ್ತ ಹೆಚ್ಚಿದೆ. ಇಂತಿಪ್ಪ ಲಂಟಾನ ಕಳೆಯನ್ನು ನಾಶ ಮಾಡಲು ಜಿಲ್ಲಾ ಅರಣ್ಯ ಇಲಾಖೆ ವಿಶಿಷ್ಟ ಹೆಜ್ಜೆ ಇಟ್ಟಿದೆ. 

ನಂದಿಬೆಟ್ಟ ಸಮೀಪದ ಸಿಂಗಾಟ ಕದಿರೇನಹಳ್ಳಿ ಗ್ರಾಮದ ಸ್ತ್ರೀ ಶಕ್ತಿ ಸಂಘಗಳ 15 ಮಹಿಳೆಯರಿಗೆ ‘ಕರಕುಶಲ ಕಲೆ–ಸ್ವಯಂ ಉದ್ಯೋಗ’ ಯೋಜನೆಯಡಿ ನಂದಿಗಿರಿಧಾಮದಲ್ಲಿ ತರಬೇತಿ ನೀಡಲಾಗುತ್ತಿದೆ.

ಲಂಟಾನದಿಂದ  ಬುಟ್ಟಿ, ಮಂಕರಿ, ಹೂದಾನಿ, ಕುರ್ಚಿ, ಟೀಪಾಯಿ, ಹೂವಿನ ಬುಟ್ಟಿ, ಮಂಚ, ಪೆನ್ ಮತ್ತು ಪುಸ್ತಕಗಳನ್ನಿಡಕು ಕಪಾಟು ಸೇರಿದಂತೆ ವಿವಿಧ ಪೀಠೋಪಕರಣಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತಿದೆ. 

ಈ ತರಬೇತಿಗೆ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯರಿಗೆ ನಿತ್ಯ ₹ 400 ಗೌರವ ಧನ ನೀಡಲಾಗುತ್ತಿದೆ. ಪರಿಣತರಿಂದ ಪೀಠೋಪಕರಣಗಳ ತಯಾರಿಕೆಯ ಬಗ್ಗೆ ತರಬೇತಿ ಕೊಡಿಸಲಾಗುತ್ತಿದೆ. ಮಹಿಳೆಯರು ಕಾಡಿನಲ್ಲಿರುವ ಲಂಟಾನವನ್ನು ತಂದು ಇಲ್ಲಿ ಅವುಗಳಿಗೆ ಹೊಸ ರೂಪು ನೀಡುತ್ತಿದ್ದಾರೆ. ಈ ಯೋಜನೆಯಡಿ ಮಹಿಳೆಯರಿ ಪೀಠೋಪಕರಣಗಳ ತಯಾರಿಕೆಗೆ ಅಗತ್ಯವಿರುವ ಕಿಟ್ ಹಾಗೂ ಬಾಯ್ಲರ್ ಸಹ ನೀಡಲಾಗಿದೆ. 45 ದಿನಗಳ ತರಬೇತಿಯ ನಂತರ ಮಹಿಳೆಯರು ಸ್ವ ಉದ್ಯೋಗದಲ್ಲಿ
ತೊಡಗಬಹುದು.  

ಅಲಂಕಾರಿಕ ಮತ್ತು ಪೀಠೋಪಕರಣಗಳ ತಯಾರಿಕೆ ತರಬೇತಿಯಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಹುದು ಎನ್ನುವ ಆಶಯ ಯೋಜನೆಯಲ್ಲಿದೆ. ಕಸದಿಂದ ರಸ ಎನ್ನುವಂತೆ ಕಾಡಿನ ಕಳೆ ವಸ್ತುಗಳ ರೂಪು ಪಡೆಯುತ್ತಿದೆ. 

ನಂದಿಬೆಟ್ಟದ ಸುತ್ತಮುತ್ತ ಹೇರಳವಾಗಿ ಲಂಟಾನ ದೊರೆಯುತ್ತದೆ. ಇದನ್ನು ಬಳಸಿಕೊಂಡು ವಸ್ತುಗಳನ್ನು ತಯಾರಿಸುವುದರಿಂದ ಲಂಟಾನ ಕಳೆ ಸಹ ನಾಶವಾಗುತ್ತದೆ. ಮಹಿಳೆಯರಿಗೆ ಉದ್ಯೋಗ ದೊರೆಯುತ್ತದೆ. ಆ ಮೂಲಕ ಆರ್ಥಿಕ ಅನುಕೂಲವಾಗುತ್ತದೆ.

ಗಿರಿಧಾಮಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳ ಜನರು ಭೇಟಿ ನೀಡುತ್ತಾರೆ.  ಪ್ರವಾಸಿಗರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲು ಸಹ ಅಧಿಕಾರಿಗಳು
ಆಲೋಚಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು