ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಳೆಯಿಂದ ಮುರುಗಮಲೆ ಉರುಸ್

ಹಿಂದೂ-ಮುಸ್ಲಿಂ ಭಾವೈಕ್ಯದ ಸಂದೇಶ
ಎಂ.ರಾಮಕೃಷ್ಣಪ್ಪ
Published : 15 ಸೆಪ್ಟೆಂಬರ್ 2024, 5:23 IST
Last Updated : 15 ಸೆಪ್ಟೆಂಬರ್ 2024, 5:23 IST
ಫಾಲೋ ಮಾಡಿ
Comments

ಚಿಂತಾಮಣಿ: ಹಿಂದೂ ಮುಸ್ಲಿಮರ ಭಾವೈಕ್ಯದ ಕೇಂದ್ರವಾಗಿರುವ ಮುರುಗಮಲೆಯಲ್ಲಿ ಸೆಪ್ಟೆಂಬರ್ 16 ಮತ್ತು 17 ರಂದು ಹಜರತ್ ಅಮ್ಮಾಜಾನ್ ಮತ್ತು ಬಾವಾಜಾನ್ ದರ್ಗಾ ಗಂಧೋತ್ಸವ ಹಾಗೂ ಉರುಸ್ ನಡೆಯಲಿದೆ.

ಮುರುಗಮಲೆ ಚಿಂತಾಮಣಿಯಿಂದ ಕೇವಲ 12 ಕಿ.ಮೀ ದೂರದಲ್ಲಿದೆ. ಮುಸ್ಲಿಮರ ಪ್ರಮುಖ ಯಾತ್ರಾಸ್ಥಳವಾದ ಈ ಗ್ರಾಮ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ. ಗ್ರಾಮದಲ್ಲಿರುವ ಹಜರತ್ ಫಕೀರ್‌ಷಾ ದರ್ಗಾದ ಉರುಸ್‌ನಲ್ಲಿ ದೇಶದ ವಿವಿಧ ಭಾಗಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವರು. ಇಲ್ಲಿನ ದರ್ಗಾಗೆ ನೂರಾರು ವರ್ಷಗಳ ಇತಿಹಾಸ ಇದೆ. ಧರ್ಮಗುರು ಅಮ್ಮಾಜಾನ್ ಮತ್ತು ಬಾವಾಜಾನ್ ಅವರ ಸಮಾಧಿ ಸ್ಥಳವೇ ಇಂದು ಲಕ್ಷಾಂತರ ಮಂದಿಯ ನಮನ ಕ್ಷೇತ್ರವಾಗಿದೆ.

ಗ್ರಾಮದಲ್ಲಿ ಹಿಂದೂಗಳ ಮುಕ್ತೀಶ್ವರ ದೇವಾಲಯವಿದೆ. ಈ ದೇವಾಲಯಕ್ಕೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹಿಂದುಗಳು ದರ್ಗಾಗೂ ಭೇಟಿ ನೀಡುತ್ತಾರೆ. ಮುಸ್ಲಿಮರು ಮುಕ್ತೀಶ್ವರ ದರ್ಶನ ಪಡೆಯುತ್ತಾರೆ. ಹೀಗಾಗಿ ಇದು ಹಿಂದೂ-ಮುಸ್ಲಿಮರ ಭಾವೈಕ್ಯದ ಸ್ಥಳ ಎನ್ನುವ ಹಿರಿಮೆಗೆ ಪಾತ್ರವಾಗಿದೆ.

ಪ್ರವಾದಿ ವಂಶಸ್ಥರಾದ ಹಜರತ್ ಸೈಯ್ಯದ್ ಬೀಬಿ ಅಮ್ಮಾಜಾನ್ ಮತ್ತು ಬಾವಾಜಾನ್ ಬೀದರ್‌ನಿಂದ ಧರ್ಮ ಪ್ರಚಾರಕರಾಗಿ 52 ಜನರ ತಂಡದೊಂದಿಗೆ ಬಂದು ನಂತರ ಜನರಿಗೆ ಸೇವೆ ಸಲ್ಲಿಸುತ್ತಾ ಇಲ್ಲಿ ನೆಲೆಸಿದರು. ಅವರ ಸಮಾಧಿ ಸ್ಥಳವೇ ದರ್ಗಾ ಎಂದು ಸ್ಥಳ ಪುರಾಣದಿಂದ ತಿಳಿದುಬರುತ್ತದೆ.

16ರಂದು ಸೋಮವಾರ ಮಸೀದಿಯಿಂದ ಗಂಧೋತ್ಸವದ ಮೆರವಣಿಗೆ ಆರಂಭವಾಗುತ್ತದೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಂತರ ಗಂಧದ ಅಭಿಷೇಕ ನಡೆಯುತ್ತದೆ. ನಂತರ ನಡೆಯುವುದು ಜನಪ್ರಿಯ ಕವ್ವಾಲಿ ಕಾರ್ಯಕ್ರಮ. ಮುಂಬೈ ತಂಡ ನಡೆಸಿಕೊಡುವ ಕವ್ವಾಲಿ ಉರುಸ್‌ನ ಪ್ರಮುಖ ಆಕರ್ಷಣೆಯಾಗಿರುತ್ತದೆ. 17 ರಂದು ಮಂಗಳವಾರ ವಕ್ಫ್ ಬೋರ್ಡ್‌ನಿಂದ ಗಂಧೋತ್ಸವ ನಡೆಯುತ್ತದೆ.

ಹಿಂದೂ-ಮುಸ್ಲಿಮರು ಸೋದರ ಭಾವನೆಯಿಂದ ಪವಿತ್ರ ಗಂಧ ಸ್ವೀಕರಿಸುತ್ತಾರೆ. ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಗಂಧೋತ್ಸವ ನಡೆಯುತ್ತಿತ್ತು. ಸುಮಾರು 50 ವರ್ಷಗಳ ಹಿಂದೆ ಗ್ರಾಮದ ಮುಖಂಡ ಪಟೇಲ್ ಅಶ್ವತ್ಥನಾರಾಯಣರೆಡ್ಡಿ, ವಹಾಬ್, ಮುಜಾವರ್, ಸಾಬ್‌ಜಾನ್ ಸೇರಿ ಗ್ರಾಮಸ್ಥರ ಸಹಕಾರದಿಂದ ವಿಜೃಂಭಣೆಯಿಂದ ಉರುಸ್ ಆಚರಿಸಲು ಪ್ರಾರಂಭಿಸಿದರು ಎಂದು ಗ್ರಾಮದ ಹಿರಿಯ ಮುಖಂಡರು ನೆನಪಿಸುತ್ತಾರೆ.

ಹಿಂದು-ಮುಸ್ಲಿಂ ಮುಖಂಡರು ಒಟ್ಟಿಗೆ ಸೇರಿ ಉರುಸ್ ಮತ್ತು ಪ್ರಮುಖ ಹಬ್ಬಗಳನ್ನು ಆಚರಣೆ ಮಾಡುತ್ತೇವೆ ಎನ್ನುತ್ತಾರೆ ಗ್ರಾಮದ ಮುಖಂಡ ಲಕ್ಷ್ಮಿನಾರಾಯಣರೆಡ್ಡಿ.

‘ಸಮಾಧಿಯಾಗಿರುವ ಗುರುಗಳ ಮೂಲಕ ತಮ್ಮ ಬೇಡಿಕೆಗಳು ಅಲ್ಲಾಹುವಿಗೆ ಮುಟ್ಟುತ್ತವೆ ಎಂಬುದು ಭಕ್ತರ ನಂಬಿಕೆ. ದೆವ್ವ, ಭೂತ, ಮಾಟ, ಮಂತ್ರ, ಮಾನಸಿಕ ಕಾಯಿಲೆ ಇಲ್ಲಿ ವಾಸಿಯಾಗುತ್ತದೆ ಎಂಬುದು ಜನರ ಪ್ರತೀತಿ. ಕಾಯಿಲೆ ಉಳ್ಳವರು ಇಲ್ಲಿಗೆ ಬಂದು ಹಲವಾರು ದಿನಗಳು ಇಲ್ಲೇ ನೆಲೆಸುವ ಪರಿಪಾಟವೂ ಇದೆ. ಪ್ರತಿ ಅಮವಾಸ್ಯೆಯ ದಿನ ನೂರಾರು ಜನ ಮಾನಸಿಕ ಅಸ್ವಸ್ಥರು, ವಿವಿಧ ಆಯಿಲೆಗಳಿಂದ ಬಳಲುತ್ತಿರುವವರು ಇಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಕಾಯಿಲೆ ವಾಸಿಯಾದವರು, ಬೇರೆ ಬೇರೆ ಕಾರಣಗಳಿಂದ ಹರಕೆ ಮಾಡಿಕೊಂಡಿದ್ದವರು ಹೊಸ ಬಟ್ಟೆ ತಂದು ಸಮಾಧಿಗೆ ಹೊದಿಸುತ್ತಾರೆ. ಮಲ್ಲಿಗೆ ಹಾಗೂ ಗುಲಾಬಿ ಹೂ ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ’ ಎಂದು ದರ್ಗಾದ ಮೌಲ್ವಿಗಳು ಹೇಳುತ್ತಾರೆ.

ಉರುಸ್‌ಗೆ ಸಿದ್ಧತೆ ಭರದಿಂದ ಸಾಗುತ್ತಿವೆ. ವಸತಿ ವ್ಯವಸ್ಥೆ, ಕುಡಿಯುವ ನೀರು, ಆರೋಗ್ಯ ಶಿಬಿರ, ಅಂಬುಲೆನ್ಸ್, ಅಗ್ನಿಶಾಮಕದಳದ ವಾಹನ ಸ್ಥಳದಲ್ಲಿರುತ್ತವೆ. ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್‌ ವ್ಯವಸ್ಥೆ ಮಾಡಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಜಿ ಅನ್ಸರ್ ಖಾನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT