ಚಿಂತಾಮಣಿ: ರಾಜ್ಯದ ಕೆಲವು ಕಡೆ ಅತ್ಯಧಿಕ ಮಳೆ ಸುರಿಯುತ್ತಿದೆ. ಜಲಾಶಯಗಳು ಭರ್ತಿಗೊಂಡಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯಾಗದೆ ಕೃಷಿಗೆ ಮತ್ತು ಕುಡಿಯುವ ನೀರಿಗೂ ತಾತ್ವರ ಎದುರಾಗಿದೆ.
ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಮತ್ತೊಮ್ಮೆ ಬರದ ಛಾಯೆಗೆ ಸಿಲುಕಿರುವ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಅಗಸದಲ್ಲಿ ಪ್ರತಿನಿತ್ಯ ಮೋಡಗಳು ದಟ್ಟೈಸಿದರೂ ಮಳೆ ಮಾತ್ರ ಸುರಿಸುತ್ತಿಲ್ಲ. ಬೆಳಿಗ್ಗೆಯಿಂದ ಆಶಾಭಾವನೆ ಮೂಡಿಸುವ ಮೋಡಗಳು ಸಂಜೆ ವೇಳೆಗೆ ಚದುರಿ ಹೋಗುತ್ತವೆ.
ರೈತರ ಭರವಸೆ ಆಶಾಕಿರಣ ಬತ್ತಿದೆ. ತಾಲ್ಲೂಕಿನಲ್ಲಿ ಬಹುತೇಕ ರೈತರು ಅಲ್ಪ-ಸ್ವಲ್ಪ ಮಳೆಗೆ ತಮ್ಮ ಹೊಲ ಉತ್ತು, ಹದಮಾಡಿಕೊಂಡು ಬಿತ್ತನೆಗೆ ಕಾಯುತ್ತಿದ್ದಾರೆ. ಕೆಲವು ಹೊಲಗಳಲ್ಲಿ ಗೊಬ್ಬರದ ಗುಡ್ಡೆಗಳು ಕಾಣುತ್ತವೆ. ಕಣ್ಣಿಗೆ ಕಾಣುವಷ್ಟು ದೂರವೂ ಒಣ ಭೂಮಿ ದರ್ಶನವಾಗುತ್ತದೆ. ಮಧ್ಯಾಹ್ನದ ವೇಳೆಗೆ ಮಳೆ ಬರಬಹುದು ಎಂಬಂತೆ ಭಾಸವಾಗುವ ಮೋಡಗಳು ಸಂಜೆ ವೇಳೆಗೆ ಕರಗಿ ಹೋಗುತ್ತವೆ. ಇದು ಪ್ರತಿನಿತ್ಯದ ಚಿತ್ರಣ.
ಮತ್ತೊಂದು ವರ್ಷ ಬರಗಾಲದ ಆತಂಕ ಅನ್ನದಾತನ ಮೊಗದಲ್ಲಿ ಕಾಣುತ್ತಿದೆ. ಜುಲೈ ಮಾಹೆಯಲ್ಲಿ 82ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು 36 ಮಿ.ಮೀ, ಆಗಸ್ಟ್ 7ವರೆಗೆ 20.34 ಮಿ.ಮೀ ಆಗಬೇಕಿದ್ದು 15.77ಮಿ ಮೀ ಮಳೆಯಾಗಿದೆ. ಇದರಿಂದ ಜನರು ಮತ್ತೊಂದು ಬರಗಾಲದ ಹೊಡೆತಕ್ಕೆ ಸಿಲಕುವ ಆತಂಕದಲ್ಲಿದ್ದಾರೆ.
ತಾಲ್ಲೂಕಿನಲ್ಲಿ ನೀರಾವರಿ ಆಶ್ರಿತ ಭೂಮಿ ಇಲ್ಲ. ಕೇವಲ ಮಳೆಯಾಧಾರಿತ ಕೃಷಿ ಮಾತ್ರ ಇದೆ. ತಾಲ್ಲೂಕಿನಲ್ಲಿ 27089 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇದುವರೆಗೆ 13324 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು ಶೇ49ರಷ್ಟು ಮಾತ್ರ ಸಾಧನೆಯಾಗಿದೆ.
ತಾಲ್ಲೂಕಿನಲ್ಲಿ ರಾಗಿ, ನೆಲಗಡಲೆ, ತೊಗರಿ ಪ್ರಮುಖ ಬೆಳೆಗಳಾಗಿವೆ. ರಾಗಿ 14810 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು 6665 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ನೆಲಗಡಲೆ 4250 ಹೆಕ್ಟೇರ್, 3152 ಹೆಕ್ಟೇರ್ ಬಿತ್ತನೆಯಾಗಿದೆ. ಮುಸುಕಿನ ಜೋಳ 4780 ಹೆಕ್ಟೇರ್, 2455 ಹೆಕ್ಟೇರ್ ಬಿತ್ತನೆಯಾಗಿದೆ. ತೊಗರಿ 575 ಹೆಕ್ಟೇರ್ ಗುರಿಗೆ 492 ಹೆಕ್ಟೇರ್ ಬಿತ್ತನೆಯಾಗಿದೆ. ಅವರೆ 880 ಹೆಕ್ಟೇರ್ ಗುರಿ ಹೊಂದಿದ್ದು 250 ಹೆಕ್ಟೇರ್ ಬಿತ್ತನೆ ಆಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರುಗಾಗಿ ದಾಸ್ತಾನು ಮಾಡಿದ್ದ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಬೇಡಿಕೆಯೇ ಇಲ್ಲ. ತಾಲ್ಲೂಕಿನಲ್ಲಿ ನೆಲಗಡಲೆ ಮತ್ತು ತೊಗರಿಗೆ ಬಿತ್ತನೆ ಕಾಲಾವಧಿ ಮುಗಿದಿದೆ. ರಾಗಿ, ಅವರೆ, ಹುರುಳಿ ಮಾತ್ರ ಬಿತ್ತನೆ ಮಾಡಬಹುದು. ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಮಾಡಿಕೊಂಡು ಬಿತ್ತನೆಗಾಗಿ ಕಾಯುತ್ತಿದ್ದ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಗಳಿಗಾಗಿ ವ್ಯಯ ಮಾಡಿದ್ದ ಬಂಡವಾಳ ನಷ್ಟವಾಗಿದೆ ಎಂದು ರೈತರು ಅವಲತ್ತುಕೊಂಡಿದ್ದಾರೆ.
ತಾಲ್ಲೂಕಿನಲ್ಲಿ ಜುಲೈ ಮಾಹೆಯಲ್ಲಿ ಅಲ್ಲಲ್ಲಿ ಚದುರಿದಂತೆ ತುಂತರು ಮಳೆಯಾಗುತ್ತಿದ್ದರೂ ಪ್ರಯೋಜನವಾಗಿಲ್ಲ. ರೈತರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣವಾಗುತ್ತಿದೆ. ಚಿಂತಾಮಣಿ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಕನಂಪಲ್ಲಿ ಕೆರೆ ಸಂಪೂರ್ಣವಾಗಿ ಬತ್ತಿಹೋಗಿದೆ. ಗ್ರಾಮೀಣ ಭಾಗಗಳಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ತಾಲ್ಲೂಕಿನಲ್ಲಿ ಮಳೆ ಕೊರತೆಯಾಗಿದೆ. ಬಿತ್ತನೆಯಾಗಿರುವ ನೆಲಗಡಲೆ ಮತ್ತು ತೊಗರಿ ಬೆಳೆಯು ಸಹ ಮಳೆ ಇಲ್ಲದೆ ಒಣಗುತ್ತಿದೆ. ಅಲ್ಪಾವಳಿ ತಳಿಗಳಾದ ರಾಗಿ ಜೋಳ ಹುರಳಿ ಅಲಸಂದೆಯನ್ನು ಆಗಸ್ಟ್ ಕೊನೆವರೆಗೂ ಬಿತ್ತನೆ ಮಾಡಬಹುದು.ಅಮರನಾಥರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ. ಚಿಂತಾಮಣಿ
ಕಳೆದ ವರ್ಷವೂ ಬರಗಾಲದಿಂದ ಬೆಳೆಗಳು ನಾಶವಾಗಿದ್ದವು. ಈ ವರ್ಷವೂ ಅದೇ ಪರಿಸ್ಥಿತಿ ಎದುರಾಗಿದೆ. ಮಳೆ ಕೊರತೆ ಕೃಷಿಗೆ ನೀರಿನ ಕೊರತೆ ಇದೆ. ಬೆಲೆ ಕುಸಿತದಿಂದ ರೈತರು ಜರ್ಜರಿತರಾಗುತ್ತಿದ್ದಾರೆಸುರೇಶ್ ರೈತ ಅಕ್ಕಿಮಂಗಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.