ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಕಸ ಕಡ್ಡಿಗಳಿಂದ ಮುಚ್ಚಿಹೋಗುತ್ತಿರುವ ರಾಜಕಾಲುವೆ

Published 27 ಮೇ 2024, 5:41 IST
Last Updated 27 ಮೇ 2024, 5:41 IST
ಅಕ್ಷರ ಗಾತ್ರ

ಚಿಂತಾಮಣಿ: ಪ್ರತಿವರ್ಷ ಮುಂಗಾರು ಮಳೆ ಆರಂಭವಾಗಿ ಜೋರು ಮಳೆ ಸುರಿದಾಗ ಮಾತ್ರ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ರಾಜಕಾಲುವೆ, ಪೋಷಕ ಕಾಲುವೆಗಳ ಒತ್ತುವರಿ ನೆನಪಾಗುತ್ತದೆ. ರಾಜಕಾಲುವೆಗಳ ಒತ್ತುವರಿ, ಕಸಕಡ್ಡಿಗಳಿಂದ ಮುಚ್ಚಿಹೋಗಿ ಜನರು ಪರಿಪಾಟಲು ಪಡುವುದು ಬಲವಾಗಿ ಸದ್ದು ಮಾಡುತ್ತದೆ.

ಮಳೆ ನೀರು ಸರಾಗವಾಗಿ ಹರಿದುಹೋಗದೆ ತಗ್ಗುಪ್ರದೇಶ ಹಾಗೂ ಮನೆಗಳಿಗೆ ನುಗ್ಗಿದಾಗ ಜನರ ಆಕ್ರೋಶದ ಕಟ್ಟೆ ಒಡೆಯುತ್ತದೆ. ಹೋರಾಟ, ಪ್ರತಿಭಟನೆಯ ಮಾತುಗಳನ್ನು ಆಡುತ್ತಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ಯಥಾಪ್ರಕಾರ ಸ್ಥಳಕ್ಕೆ ಭೇಟಿ ನೀಡುವುದು, ಶೀಘ್ರಕ್ರಮ ಕೈಗೊಳ್ಳುವ ಭರವಸೆ. ಅಲ್ಲಿಗೆ ಕಥೆ ಮುಗಿಯುತ್ತದೆ, ಮತ್ತೊಂದು ಮಳೆಗಾಲ ಬರುವವರೆಗೂ ಅದು ಮರೆತು ಹೋಗುತ್ತದೆ.

ಇದು ನಗರದ ರಾಜಕಾಲುವೆ, ಪೋಷಕ ಕಾಲುವೆಗಳ ಒತ್ತುವರಿ ಕಥೆಯಾಗಿದೆ. ಅಂಬಾಜಿದುರ್ಗ ಮತ್ತು ಕಾಡುಮಲ್ಲೇಶ್ವರ ಬೆಟ್ಟಗಳು ನಗರಕ್ಕೆ ಹೊಂದಿಕೊಂಡಂತಿವೆ. ಜತೆಗೆ ನಗರದ ಮಧ್ಯಭಾಗದಲ್ಲೇ ವರದಾದ್ರಿಬೆಟ್ಟವಿದೆ. ಪೂರ್ವಿಕರು ಇಲ್ಲಿಂದ ಹರಿದು ಬರುವ ಮಳೆ ನೀರಿಗೆ ಅನುಗುಣವಾಗಿ ರಾಜಕಾಲುವೆ ವ್ಯವಸ್ಥೆ ಮಾಡಿದ್ದರು. ಈಗ ರಾಜಕಾಲುವೆಗಳ ಸ್ವರೂಪವೇ ಬದಲಾಗಿದೆ. 20-30 ಅಡಿ ಇದ್ದ ರಾಜ ಕಾಲುವೆಗಳು 3-4 ಅಡಿಗೆ ಇಳಿದಿವೆ. ಕೆಲವು ಕಡೆಗಂತೂ ರಾಜಕಾಲುವೆ ಕುರುಹು ಸಿಗದಂತೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಡಿದ್ದಾರೆ.

ಕಾಡುಮಲ್ಲೇಶ್ವರ ಬೆಟ್ಟದ ತಪ್ಪಲಿನಿಂದ ಹರಿದುಬರುತ್ತಿದ್ದ ನೀರು ಮುಖ್ಯವಾಗಿ ಎರಡು ಭಾಗವಾಗಿ ಹರಿದು ಒಂದು ನೆಕ್ಕುಂದಿಕೆರೆ ಮತ್ತೊಂದು ಮಾಳಪ್ಪಲ್ಲಿ ಕೆರೆಗೆ ಸೇರುತ್ತಿತ್ತು. ರಾಜಕಾಲುವೆಗಳು ಸಮರ್ಪಕವಾಗಿದ್ದ ಕಾಲದಲ್ಲಿ ತುಂಬಿ ಹರಿಯುತ್ತಿದ್ದವು. ಕೆರೆಗಳು ತುಂಬಿತುಳುಕುತ್ತಿದ್ದವು. ಕಾಲಕ್ರಮೇಣ ಮಳೆ ಕಡಿಮೆಯಾಗಿ ನೀರಿನ ಹರಿವು ಕಡಿಮೆಯಾದಾಗ ಸಾರ್ವಜನಿಕರ ವಕ್ರಕಣ್ಣುಗಳು ರಾಜಕಾಲುವೆಗಳ ಮೇಲೆ ಬಿತ್ತು. ಬಲಾಢ್ಯರು, ಅಧಿಕಾರಿಗಳ ಕೃಪಾಕಟಾಕ್ಷ ಇರುವವರು ಒತ್ತುವರಿಗೆ ಇಳಿದರು.

ರಾಜಕಾಲುಗಳ ಆಸು-ಪಾಸಿನವರೇ ಒತ್ತುವರಿ ಮಾಡಿಕೊಳ್ಳುತ್ತಿದ್ದುದರಿಂದ ಅಷ್ಟಾಗಿ ಗಮನಕ್ಕೆ ಬರುತ್ತಿರಲಿಲ್ಲ. ಮಳೆ ಹೆಚ್ಚಾಗಿ ಮನೆ, ರಸ್ತೆ, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರ ದೈನಂದಿನ ಬದುಕಿಗೆ ಅಡ್ಡಿಯಾದಾಗ ಒತ್ತುವರಿ ಸಮಸ್ಯೆ ಮುನ್ನೆಲೆಗೆ ಬರುತ್ತದೆ. ನಾಗರಿಕರ ಗೊಣಗಾಟ, ಅಧಿಕಾರಿಗಳ ಕ್ರಮಕೈಗೊಳ್ಳುವ ಭರವಸೆಯೊಂದಿಗೆ ಮುಕ್ತಾಯವಾಗುತ್ತದೆ.

ಕಾಡುಮಲ್ಲೇಶ್ವರ ಬೆಟ್ಟದಿಂದ ರಾಜಕಾಲುವೆಯ ಉಪಕಾರಾಗೃಹ ನೂತನ ಪ್ರೌಢಶಾಲೆ, ಫಿಲ್ಟರ್ ಬೆಡ್, ಅಂಜನಿ ಬಡಾವಣೆ, ಕಿಶೋರ ಶಾಲೆ ಮೂಲಕ ಮಾಳಪ್ಪಲ್ಲಿ ಕೆರೆಗೆ ಹರಿಯುತ್ತದೆ. ಕಾಲುವೆ ಒತ್ತುವರಿ ಆಗಿರುವುದರಿಂದ ಪ್ರತಿವರ್ಷ ಮಳೆಗಾಲದಲ್ಲಿ ತಗ್ಗುಪ್ರದೇಶದ ಮನೆಗಳಿಗೆ ನುಗ್ಗುತ್ತದೆ. ಸಾಕಷ್ಟು ಬಾರಿ ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸುವ ಭರವಸೆ ನೀಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ನೊಂದವರು ಅಳಲು ತೋಡಿಕೊಳ್ಳುತ್ತಾರೆ.

ಮತ್ತೊಂದು ಕಡೆ ಆಶ್ರಯ ಬಡಾವಣೆ, ವೆಂಕಟಗಿರಿಕೋಟೆ, ಬಾಗೇಪಲ್ಲಿ ವೃತ್ತ, ನಗರಸಭೆ ಪಂಪ್‌ಹೌಸ್ ಕಡೆಯಿಂದ ನೆಕ್ಕುಂದಿಕೆರೆಗೆ ಹರಿದುಹೋಗುತ್ತದೆ. ಅಲ್ಲೂ ಒತ್ತುವರಿ ಆಗಿರುವುದರಿಂದ ಕೆರೆಗೆ ನೀರು ಹರಿಯುತ್ತಿಲ್ಲ. ಅಲ್ಲಲ್ಲಿ ಕಾಲುವೆಯ ನೀರು ರಸ್ತೆಗಳಿಗೆ ಹರಿದು, ತಗ್ಗು ಪ್ರದೇಶ ಮತ್ತು ತಗ್ಗು ಪ್ರದೇಶದಲ್ಲಿರುವ ಮನೆಗಳು ಜಲಾವೃತಗೊಳ್ಳುತ್ತವೆ. ಅತ್ತ ಕೆರೆಗೆ ನೀರು ಹರಿಯುವುದಿಲ್ಲ ಎಂದು ಆ ಭಾಗದ ಜನರ ದೂರು ಅರಣ್ಯರೋದನವಾಗಿದೆ.

ಅಂಬಾಜಿದುರ್ಗ ಬೆಟ್ಟದ ನೀರು ಎರಡು ಭಾಗವಾಗಿ ನಗರದ ಮೂಲಕವೇ ಹರಿದು ಮಾಳಪ್ಪಲ್ಲಿ ಕೆರೆ ಸೇರುತ್ತದೆ. ಅಶ್ವಿನಿ ಬಡಾವಣೆ, ರಾಜೀವ ನಗರದ ಪ್ರಭಾಕರ್ ಬಡಾವಣೆಯ ಮೂಲಕ ಹಾದು ಹೋಗುತ್ತಿದ್ದ ರಾಜಕಾಲುವೆ ಬಹುತೇಕ ಮಂಗಮಾಯವಾಗಿದೆ. ಬಡಾವಣೆಗಳನ್ನು ನಿರ್ಮಾಣ ಮಾಡಿದವರೇ ರಾಜಕಾಲುಗೆಳನ್ನು ಸೇರಿಸಿಕೊಡು ನಿವೇಶನಗಳನ್ನು ಮಾಡಿದ್ದಾರೆ. ಬಡಾವಣೆಯ ಮುಖ್ಯ ರಸ್ತೆ ಮತ್ತು ಚರಂಡಿಗಳ ಮೂಲಕವೇ ಮಳೆ ನೀರು ಹರಿದು ರಸ್ತೆಗಳು ಮತ್ತು ಚರಂಡಿಗಳು ಹಾಳಾಗುತ್ತಿವೆ.

ಮತ್ತೊಂದು ಭಾಗ ಕನಂಪಲ್ಲಿ ಉತ್ತರ ಭಾಗದಿಂದ ಗುಂಡಪ್ಪ ಬಡಾವಣೆ ಹಾಗೂ ಹಿಂದಿನ ಭಾಗಗಳ ಮೂಲಕ ಹಾದು ಹೋಗುತ್ತಿದ್ದ ರಾಜಕಾಲುವೆಯೂ ಒತ್ತುವರಿಯಾಗಿ ಕಿರಿದಾಗಿದೆ. ಪೂರ್ವಿಕರು ಕೆರೆಗಳಿಗೆ ನೀರು ಹರಿಸುವ ಸಲುವಾಗಿಯೇ ರಾಜಕಾಲುವೆಗಳ ನಿರ್ಮಾಣ ಆಗಿದೆ. ಸಾರ್ವಜನಿಕರು ಅ ಜಾಗವನ್ನು ಸಹ ಒತ್ತುವರಿ ಮಾಡಿಕೊಂಡು, ಮನೆಗಳಿಗೆ ನೀರು ನುಗ್ಗುತ್ತಿದೆ, ಕೆರೆಗಳಿಗೆ ನೀರು ಹರಿಯುತ್ತಿಲ್ಲ ಎಂದರೇ ಹೇಗೆ ಎನ್ನುವುದು ಪರಿಸರಪ್ರೇಮಿಗಳ ಪ್ರಶ್ನೆ.

ನೀರು ಹರಿಯುವ ಅಂದಾಜಿನ ಪ್ರಮಾಣದಂತೆ ಕಾಲುವೆ ಅಗಲ ಇರುತ್ತಿತ್ತು. ಕೆರೆಗಳಿಗೆ ಹರಿಯುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತಿತ್ತು. ಕುಡಿಯಲು ಹಾಗೂ ಕೃಷಿ ಚಟುವಟಿಕೆಗಳ ಬಳಕೆಗೂ ಆಗುತ್ತಿತ್ತು. ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರಾಜಕಾಲುವೆಗಳು ಕಿರಿದಾಗಿ 3-4 ಅಡಿಗೆ ಸೀಮಿತವಾಗಿದೆ. ಪೋಷಕ ಕಾಲುವೆಗಳು ಮಾಯವಾಗಿವೆ ಎನ್ನುವುದು ಸ್ಥಳೀಯರ ಆರೋಪ.

ಕೆಲವು ಕಡೆ ಪ್ರಭಾವಿಗಳು ಮನೆ, ನಿವೇಶನ ನಿರ್ಮಿಸಿಕೊಂಡಿದ್ದಾರೆ. ಕಾಲುವೆಗಳ ಅಕ್ಕ-ಪಕ್ಕದ ನಿವಾಸಿಗಳ ಕಲುಷಿತ ನೀರು, ಕಸ, ಪ್ಲಾಸ್ಟಿಕ್, ಒಳಚರಂಡಿ ಕೊಳಚೆ, ಕಟ್ಟಡಗಳ ಅವಶೇಷ ಸುರಿಯುತ್ತಿದ್ದಾರೆ. ಅಂಜನಿ ಬಡಾವಣೆಯ ರಾಜಕಾಲುವೆ ಒತ್ತುವರಿ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಒತ್ತುವರಿಯನ್ನು ತೆರವುಗೊಳಿಸಬೇಕು, ಚರಂಡಿ ನೀರು ಸ್ವಚ್ಛಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಫಲಿತಾಂಶ ಮಾತ್ರ ಶೂನ್ಯ ಎನ್ನುತ್ತಾರೆ ತಗ್ಗುಪ್ರದೇಶದ ನಿವಾಸಿಗಳು.

ಚಿಂತಾಮಣಿಯ ಆಶ್ರಯ ಬಡಾವಣೆಯಲ್ಲಿ ರಾಜಕಾಲುವೆಗೆ ಕಟ್ಟಡಗಳ ಅವಶೇಷ ತುಂಬಿಸಿ ಮುಚ್ಚಿಹಾಕಿರುವುದು
ಚಿಂತಾಮಣಿಯ ಆಶ್ರಯ ಬಡಾವಣೆಯಲ್ಲಿ ರಾಜಕಾಲುವೆಗೆ ಕಟ್ಟಡಗಳ ಅವಶೇಷ ತುಂಬಿಸಿ ಮುಚ್ಚಿಹಾಕಿರುವುದು
ಸರ್ಕಾರ ರಾಜಕಾಲುವೆ ಮತ್ತು ಪೋಷಕ ಕಾಲುವೆಗಳ ಕುರಿತು ಸಮಗ್ರವಾಗಿ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಮತ್ತೆ ಒತ್ತುವರಿ ಆಗದಂತೆ ಶಾಶ್ವತ ಕ್ರಮಕೈಗೊಳ್ಳಬೇಕು
ರಾಘವೇಂದ್ರ ಹಿರಿಯ ನಾಗರಿಕ
ಚುನಾವಣೆಯ ನಿಮಿತ್ತ ತಾತ್ಕಾಲಿಕವಾಗಿ ಪ್ರಭಾರ ವಹಿಸಿಕೊಂಡಿದ್ದೇನೆ. ರಾಜಕಾಲುವೆ ಒತ್ತುವರಿ ಸ್ವಚ್ಛತೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು
ಮಾಧವಿ ಪೌರಾಯುಕ್ತೆ

ಶಾಶ್ವತ ಪರಿಹಾರ ರೂಪಿಸಿ

ಪ್ರತಿವರ್ಷ ಅಧಿಕ ಮಳೆ ಸುರಿದಾಗ ಪೋಷಕ ಕಾಲುವೆಯ ನೀರು ತಗ್ಗುಪ್ರದೇಶದ ಮನೆಗಳಿಗೆ ನುಗ್ಗುತ್ತದೆ. ಕೊಚ್ಚೆ ಚರಂಡಿ ನೀರು ಸೇರಿರುವುದರಿಂದ ಮನೆಯು ವಾಸಕ್ಕೆ ಯೋಗ್ಯವಿಲ್ಲದಂತೆ ಆಗುತ್ತದೆ. ದುರ್ವಾಸನೆಯಿಂದ ಮನೆಯಲ್ಲಿ ಮುಗುಮುಚ್ಚಿಕೊಂಡಿರಬೇಕಾಗುತ್ತದೆ.

ಕೆಲವು ಬಾರಿ ಇಡೀ ರಾತ್ರಿ ಮನೆಯಿಂದ ನೀರು ಹಾಕುವುದರಲ್ಲೇ ಜಾಗರಣೆ ಮಾಡಬೇಕಾಗುತ್ತದೆ. ಈ ಅವಾಂತರಗಳಿಗೆ ಶಾಶ್ವತ ಪರಿಹಾರ ರೂಪಿಸಬೇಕು. ಮನೋಹರ್ ಎಂ.ಜಿ.ರಸ್ತೆ ನಿವಾಸಿ ರೋಗ ಹರಡುವ ಭೀತಿ ಮಳೆಗಾಲದಲ್ಲಿ ರಾಜಕಾಲುವೆ ಸುತ್ತಮುತ್ತಲಿನ ರಸ್ತೆ ಚರಂಡಿ ಮನೆಗಳಿಗೆ ಕಲುಷಿತ ನೀರು ಹರಿಯುತ್ತದೆ. ನಗರಸಭೆಯ ಅಧಿಕಾರಿಗಳು ಕಾಲುವೆಯ ಹೂಳನ್ನು ತೆಗೆದು ತಾತ್ಕಾಲಿಕ ಪರಿಹಾರ ನೀಡುತ್ತದೆ. ದುರ್ನಾತದಿಂದ ದಾರಿಹೋಕರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎರುರಾಗುತ್ತದೆ. ರಾಜಕಾಲುವೆ ಪೋಷಕ ಕಾಲುವೆಗಳ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸದಿದ್ದರೆ ಹೋರಾಟ ರೂಪಿಸಲಾಗುವುದು. ಎಂ.ಆರ್.ಲೋಕೇಶ್ ಕರವೇ ಜಿಲ್ಲಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT