ಭಾನುವಾರ, ಏಪ್ರಿಲ್ 2, 2023
31 °C
ಪುಟ್ಟತಿಮ್ಮನಹಳ್ಳಿಯ ಸಂಸ್ಕರಣಾ ಘಟಕದಲ್ಲಿ ಹೆಚ್ಚಿದ ದಾಸ್ತಾನು

ಚಿಕ್ಕಬಳ್ಳಾಪುರ: ಕಾಂಪೋಸ್ಟ್ ಗೊಬ್ಬರ ಖರೀದಿಗೆ ಬಾರದ ರೈತರು

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯು ಮನೆಗಳಿಂದ, ಹೋಟೆಲ್‌ಗಳಿಂದ ಹೀಗೆ ವಿವಿಧ ಕಡೆಗಳಿಂದ ಸಂಗ್ರಹಿಸಿದ ಹಸಿ ಮತ್ತು ಒಣ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಿ ಗೊಬ್ಬರ ರೂಪಕ್ಕೆ ತರುತ್ತಿದೆ.

ಇದಕ್ಕಾಗಿಯೇ ತಾಲ್ಲೂಕಿನ ಪುಟ್ಟತಿಮ್ಮನಹಳ್ಳಿಯ 15 ಎಕರೆಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವೈಜ್ಞಾನಿಕವಾಗಿ ಪ್ಲಾಸ್ಟಿಕ್ ವಸ್ತುಗಳು ಹಾಗೂ ಗೊಬ್ಬರವನ್ನು ಬೇರ್ಪಡಿಸುವ ಯಂತ್ರಗಳನ್ನು ಅಳವಡಿಸಲಾಗಿದೆ. ಯಂತ್ರಗಳ ಸಹಾಯದಿಂದ ಕಸವನ್ನು ವಿವಿಧ ಹಂತಗಳಲ್ಲಿ ಸಂಸ್ಕರಿಸಿ ಗೊಬ್ಬರ ರೂಪಕ್ಕೆ ತರಲಾಗುತ್ತಿದೆ. ‌

ರೈತರಿಗೆ ಕಡಿಮೆ ದರದಲ್ಲಿ ಗೊಬ್ಬರ ದೊರೆಯಬೇಕು ಎನ್ನುವು ಆಶಯದ ಜತೆಗೆ ನಗರಸಭೆಗೂ ಆದಾಯವಾಗುತ್ತದೆ ಎನ್ನುವುದೇ ತ್ಯಾಜ್ಯ ಸಂಸ್ಕರಣೆಯ ಮೂಲ ಉದ್ದೇಶ.

ಘಟಕದಲ್ಲಿ ಉತ್ಪಾದನೆ ಆಗುತ್ತಿರುವ ಎರೆಹುಳು ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ಫೆಬ್ರುವರಿಯಿಂದ ಆರಂಭವಾಗಿರುವ ಎರೆಹುಳು ಘಟಕದಲ್ಲಿ ದಾಸ್ತಾನಿಗೆ ಅವಕಾಶವಿಲ್ಲದಂತೆ ಗೊಬ್ಬರ ಮಾರಾಟವಾಗುತ್ತಿದೆ. ಆದರೆ ಕಾಂಪೋಸ್ಟ್ ಗೊಬ್ಬರ ಮಾತ್ರ ಬೇಡಿಕೆ ಕಳೆದುಕೊಂಡಿದೆ. ಒಂದು ಕೆ.ಜಿ ಎರೆಹುಳು ಗೊಬ್ಬರ ಬೆಲೆ ₹ 5 ಇದ್ದರೆ ಕಾಂಪೋಸ್ಟ್ ಗೊಬ್ಬರದ ಬೆಲೆ ₹ 1 ಇದೆ.

ಕಾಂಪೋಸ್ಟ್ ಗೊಬ್ಬರ ಖರೀದಿಗೆ ರೈತರು  ಆಸಕ್ತಿ ತೋರುತ್ತಿಲ್ಲ. ಈಗ ಸಂಸ್ಕರಣೆಯಾಗಿರುವ 10ರಿಂದ 15 ಟನ್ ಕಾಂಪೋಸ್ಟ್ ಗೊಬ್ಬರ ಬೃಹತ್ ಗುಡ್ಡೆಯಂತೆ ನಿಂತಿದೆ. ವೈಜ್ಞಾನಿಕವಾಗಿ ಸಂಸ್ಕರಣೆಗೆ ಒಳಪಟ್ಟಿರುವ ಕಾಂಪೋಸ್ಟ್ ಗೊಬ್ಬರಕ್ಕೆ ರಿಯಾಯಿತಿ ನೀಡಿದ್ದರೂ ರೈತರು ಖರೀದಿಗೆ ಬರುತ್ತಿಲ್ಲ. 

ಎರೆಹುಳು ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರ ಘಟಕದಲ್ಲಿ ತಯಾರಾಗುವುದರಿಂದ ತಾಲ್ಲೂಕಿನ ರೈತರಿಗೂ ಅನುಕೂಲವಾಗುತ್ತದೆ ಎನ್ನುವ ಆಶಾಭಾವ ಗೊಬ್ಬರ ತಯಾರಿಕೆಯ ಆರಂಭದಲ್ಲಿ ಇತ್ತು. ಆದರೆ ಕಾಂಪೋಸ್ಟ್ ಗೊಬ್ಬರವನ್ನು ಕೇಳುವವರೇ ಇಲ್ಲ. ನಗರದಲ್ಲಿ ನಿತ್ಯ 26 ಟನ್‌ನಷ್ಟು ಒಣ ಮತ್ತು ಹಸಿ ಕಸ ಉತ್ಪಾದನೆ ಆಗುತ್ತದೆ. ಇದರಲ್ಲಿ ಹಸಿ ಕಸವನ್ನು ಬಯೋಗ್ಯಾಸ್ ತಯಾರಿಕೆಗೂ ಬಳಸಲಾಗುತ್ತಿದೆ. ಬಯೊಗ್ಯಾಸ್‌ನಿಂದ ತ್ಯಾಜ್ಯ ಸಂಸ್ಕರಣೆ ಘಟಕದ 12 ವಿದ್ಯುತ್ ಬಲ್ಪ್‌ಗಳ ಬೆಳಗುತ್ತಿವೆ.

ನಗರಸಭೆಗೆ ಆದಾಯ: ‘ಇಲ್ಲಿಯವರೆಗೆ ಎರೆಹುಳು ಮತ್ತು ಕಾಂಪೋಸ್ಟ್ ಗೊಬ್ಬರ ಮಾರಾಟದಿಂದ ನಗರಸಭೆಯು ₹ 2 ಲಕ್ಷ ಆದಾಯ ಸಹ ಗಳಿಸಿದೆ. ಉತ್ಪಾದನೆಯಾದ ಕಾಂಪೋಸ್ಟ್ ಗೊಬ್ಬರ ಮಾರಾಟವಾದರೆ ಮತ್ತಷ್ಟು ಆದಾಯವನ್ನು ಪಡೆಯಬಹುದು. ಕಾಂಪೋಸ್ಟ್ ಗೊಬ್ಬರವನ್ನು ನಿತ್ಯ 5 ಟನ್ ಉತ್ಪಾದನೆ ಮಾಡಬಹುದು. ಕಾಂಪೋಸ್ಟ್ ತಯಾರಿಕೆಗೆ ಸಾಕಷ್ಟು ತ್ಯಾಜ್ಯವೂ ಇದೆ. ಆದರೆ ಮಾರಾಟ ಆಗಬೇಕು’ ಎಂದು ನಗರಸಭೆ ಪೌರಾಯುಕ್ತ ಡಿ.ಲೋಹಿತ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು